ಶೀಘ್ರವೇ ಇಳಿಯಲಿದೆ ಶಾಲಾ ಮಕ್ಕಳ ಬ್ಯಾಗ್ ಭಾರ
Team Udayavani, Nov 25, 2018, 6:00 AM IST
ಬೆಂಗಳೂರು: ಶಾಲಾ ಮಕ್ಕಳ ಬೆನ್ನಿನ ಮೇಲಿನ ಹೊರ ಇಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ನಿರ್ದೇಶನ ನೀಡಿದೆ.
ಶಾಲಾ ಮಕ್ಕಳ ಬ್ಯಾಗ್‌ನ ಹೊರೆ ಕಡಿಮೆ ಮಾಡಬೇಕು ಎಂಬ ಆಗ್ರಹ ಅನೇಕ ವರ್ಷಗಳಿಂದ ಕೇಳಿ ಬರುತ್ತಿದ್ದರೂ, ಈ ಸಂಬಂಧ ಯಾವುದೇ ನಿರ್ಧಾರ ಆಗಿರಲಿಲ್ಲ. ಈಗ ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ(ಎಂಎಚ್‌ಆರ್‌ಡಿ)ವು ಒಂದರಿಂದ ಹತ್ತನೇ ತರಗತಿ ಮಕ್ಕಳ ಬ್ಯಾಗ್ ಭಾರ ಎಷ್ಟಿರಬೇಕು ಎಂಬ ಬಗ್ಗೆ ನಿರ್ದೇಶನ ನೀಡಿದೆ.
ಅದರಂತೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲಾಡಳಿತ ಮಂಡಳಿಗಳು ಕೇಂದ್ರ ಸರ್ಕಾರದ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್‌ನ ಭಾರ ಎಷ್ಟಿರಬೇಕು ಎಂಬುದನ್ನು ಎಂಎಚ್‌ಆರ್‌ಡಿ ಸ್ಪಷ್ಟಪಡಿಸಿದೆ. 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ 1.5 ಕೆ.ಜಿ; 3ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 2 ರಿಂದ 3 ಕೆ.ಜಿ.; 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ 4 ಕೆ.ಜಿ.; 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ 4.5 ಕೆ.ಜಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬ್ಯಾಗ್ ತೂಕ 5ಕೆ.ಜಿ ನಿಗದಿ ಮಾಡಬಹುದು ಎಂಬುದನ್ನು ಎಂಚ್‌ಆರ್‌ಡಿಸಿ ಸೂಚಿಸಿದೆ.
ರಾಜ್ಯ ಸರ್ಕಾರ ಸಜ್ಜಾಗಿದೆ: ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಬ್ಯಾಗ್ ಭಾರ ಇಳಿಸುವ ಕ್ರಮ ತೆಗೆದುಕೊಳ್ಳುವ ಮೊದಲೇ ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ವಿಭಾಗದ ಮೂಲಕ ಸಮೀಕ್ಷೆ ನಡೆಸಿದೆ. ಖಾಸಗಿ ಆಡಳಿತ ಮಂಡಳಿ, ಶಿಕ್ಷಣ ತಜ್ಞರು ಹಾಗೂ ಪಾಲಕರಿಂದಲೂ ಅಗತ್ಯ ಮಾಹಿತಿ ಕಲೆ ಹಾಕಿದೆ. ಬ್ಯಾಗ್ ಭಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದ್ದು, ಅತಿ ಶೀಘ್ರದಲ್ಲಿ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.
ಸಮಿತಿ ವರದಿ ಕೊಟ್ಟಿತ್ತು :
ಶಾಲಾ ಮಕ್ಕಳ ಬ್ಯಾಗ್ ಭಾರ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎರಡು ವರ್ಷದ ಹಿಂದೆ ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಸಮಿತಿ ಎಲ್ಲ ರೀತಿಯ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಖಾಸಗಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳ ಬ್ಯಾಗ್ ಭಾರ 5 ರಿಂದ 6 ಕೆ.ಜಿ ಹಾಗೂ ಸರ್ಕಾರಿ ಶಾಲಾ ಮಕ್ಕಳ ಬ್ಯಾಗ್ 3 ರಿಂದ 4 ಕೆ.ಜಿ ಇದೆ ಇದೆ. ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆ ಪ್ರವೇಶಿಸುತ್ತಿದ್ದಂತೆ ಬ್ಯಾಗ್‌ನ ಭಾರವೂ ಹೆಚ್ಚಾಗುತ್ತದೆ. ರಾಜ್ಯ ಪಠ್ಯಕ್ರಮದ ಮಕ್ಕಳ ಬ್ಯಾಗ್‌ಕ್ಕಿಂತ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ಪಠ್ಯಕ್ರಮದ ಶಾಲಾ ಮಕ್ಕಳ ಬ್ಯಾಗ್ ಹೆಚ್ಚು ಭಾರ ಎಂಬುದನ್ನು ಸಮಿತಿ ವರದಿಯಲ್ಲಿ ಉಲ್ಲೇಖೀಸಿತ್ತು. ಇಲಾಖೆ ಹೊರಡಿಸಲಿರುವ ಮಾರ್ಗಸೂಚಿಯಲ್ಲಿ ಸಮಿತಿಯ ಶಿಫಾರಸುಗಳನ್ನು ಅಳವಡಿಸಲು ಸಾಧ್ಯತೆ ಇದೆ.
ಯಾರಿಗೆ ಎಷ್ಟು ತೂಕ?
ತರಗತಿ ತೂಕ(ಕೆಜಿ)
1 ಮತ್ತು 2 ನೇ ತರಗತಿ 1.5
3ರಿಂದ 5ನೇ ತರಗತಿ 2-3
6 ಮತ್ತು 7ನೇ ತರಗತಿ 4
8 ಮತ್ತು 9ನೇ ತರಗತಿ 4.5
10ನೇ ತರಗತಿ 5
ಶಾಲಾ ಮಕ್ಕಳ ಬ್ಯಾಗ್ ಭಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ. ಖಾಸಗಿ ಆಡಳಿತ ಮಂಡಳಿಗಳ ಜತೆಯೂ ಮಾತುಕತೆ ಮಾಡಿದ್ದೇವೆ. ಪಠ್ಯಪುಸ್ತಕವನ್ನು ಎರಡು ಭಾಗವಾಗಿ ವಿಭಾಗಿಸಿದ್ದೇವೆ. ಮಾರ್ಗಸೂಚಿ ಸಿದ್ಧವಾಗಿದ್ದು, 2019-20ನೇ ಸಾಲಿನ ಆರಂಭದಿಂದಲೇ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಲಿದ್ದೇವೆ.
– ಡಾ.ಪಿ.ಸಿ.ಜಾಫರ್, ಆಯುಕ್ತ ಕಾಲೇಜು ಶಿಕ್ಷಣ ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.