ವಿರಳ ಸಂಚಾರ ದಿನಕ್ಕೆ ಎಳ್ಳುನೀರು?
Team Udayavani, Aug 1, 2018, 11:28 AM IST
ಬೆಂಗಳೂರು: ವಾಯು ಮಾಲಿನ್ಯ ತಡೆಯುವ ಜತೆಗೆ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಲು ಜಾರಿಗೊಳಿಸಿದ ಹಿಂದಿನ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ “ವಿರಳ ಸಂಚಾರ ದಿನ’ಕ್ಕೆ ನೂತನ ಸರ್ಕಾರ ಎಳ್ಳುನೀರು ಬಿಟ್ಟಿತೇ?
ಪ್ರತಿ ತಿಂಗಳ ಎರಡನೇ ಭಾನುವಾರ ವಿರಳ ಸಂಚಾರ ದಿನ ಆಚರಿಸಲು ಹಿಂದಿನ ಸರ್ಕಾರ ತೀರ್ಮಾನಿಸಿತ್ತು. ಅದರಲ್ಲೂ ಈ ಕಾರ್ಯಕ್ರಮ ಹಿಂದಿನ ಸಾರಿಗೆ ಸಚಿವರ ಕನಸಿನ ಕೂಸಾಗಿತ್ತು. ಹಾಗಾಗಿ, ಅತಿ ಉತ್ಸಾಹದಿಂದ ಮಾಜಿ ಸಚಿವರು ಕಳೆದ ಫೆಬ್ರವರಿಯಲ್ಲಿ ವಿಧಾನಸೌಧದ ಮುಂದೆ ಇದಕ್ಕೆ ಚಾಲನೆ ನೀಡಿದ್ದರು. ಆದರೆ, ಮಾರ್ಚ್ ನಂತರ ಸಚಿವರು ಚುನಾವಣೆಯಲ್ಲಿ “ಬ್ಯುಸಿ’ಯಾದರು.
ತದನಂತರದಿಂದ ಕಾರ್ಯಕ್ರಮವೇ ಮೂಲೆಗುಂಪಾಗಿದೆ. ನಗರದಲ್ಲಿ 72 ಲಕ್ಷ ವಾಹನಗಳಿದ್ದು, 56 ಲಕ್ಷ ಖಾಸಗಿ ವಾಹನಗಳಿವೆ. ಒಂದು ದಿನದ ಮಟ್ಟಿಗೆ ಈ ವಾಹನಗಳು ರಸ್ತೆಗಿಳಿಯದಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ತಗ್ಗಲಿದೆ. ಡೀಸೆಲ್ ಉಳಿತಾಯವೂ ಆಗಲಿದೆ. ಈ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಇದು ಹಿಂದಿನ ಸಾರಿಗೆ ಸಚಿವರ ಸ್ವಂತ ಚಿಂತನೆಯಿಂದ ಮತ್ತು ಆಸಕ್ತಿಯಿಂದ ಕೈಗೆತ್ತಿಕೊಂಡ ಯೋಜನೆ. ಈ ಬಗ್ಗೆ ಹೊಸ ಸಾರಿಗೆ ಸಚಿವರು ವಿನೂತನ ದಿನಾಚರಣೆ ಬಗ್ಗೆ ನಿರಾಸಕ್ತಿ ಹೊಂದಿದ್ದರಿಂದ ಅಧಿಕಾರಿಗಳೂ ಈ ವಿಚಾರದಲ್ಲಿ ಮೌನತಾಳಿದ್ದಾರೆ. ಹಾಗಾಗಿ, ಆರಂಭದಲ್ಲೇ ಸ್ಥಗಿತಗೊಂಡಿದೆ.
ಕೇವಲ ಎರಡು ಬಾರಿ ಆಚರಣೆ: ಸಾರಿಗೆ ಇಲಾಖೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರ ಸಂಚಾರ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಈ ದಿನ ಆಚರಿಸಲಾಗುತ್ತಿತ್ತು. ಮೊದಲೆರಡು ತಿಂಗಳು ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಆವರಣದಲ್ಲಿ ನಡೆಯಿತು. ಜನರಲ್ಲಿ ಜಾಗೃತಿ ಮೂಡಿಸಲು ಆ ದಿನದಂದು ಅಧಿಕಾರಿಗಳು ಕೂಡ ಸಮೂಹ ಸಾರಿಗೆಗಳನ್ನು ಬಳಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಅಷ್ಟೇ ಅಲ್ಲ, ಬಿಎಂಟಿಸಿ ದೈನಂದಿನ ಪಾಸು ಮತ್ತು “ನಮ್ಮ ಮೆಟ್ರೋ’ ಸ್ಮಾರ್ಟ್ ಕಾರ್ಡ್ ಹೊಂದಿದವರಿಗೆ ಪ್ರಯಾಣ ದರದಲ್ಲಿ ರಿಯಾಯ್ತಿ ಕಲ್ಪಿಸಲಾಗಿತ್ತು. ಬಸ್‌ಗಳ ದೈನಂದಿನ ಪಾಸಿನ ದರದಲ್ಲಿ 5 ರೂ. ಕಡಿಮೆ ಹಾಗೂ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಅಂದಿನಮಟ್ಟಿಗೆ ಶೇ. 25ರಷ್ಟು ರಿಯಾಯಿತಿ ಕಲ್ಪಿಸಲಾಗಿತ್ತು. ಜನ ಕೂಡ ಪೂರಕವಾಗಿ ಸ್ಪಂದಿಸಿದ್ದರು. ಈ ಸ್ಪಂದನೆಗೆ ಹೆಚ್ಚುವರಿ ಬಸ್‌ಗಳು ಮತ್ತು ಮೆಟ್ರೋ ರೈಲುಗಳ ಕಾರ್ಯಾಚರಣೆ ಮಾಡಿದ್ದು ಸಾಕ್ಷಿಯಾಗಿತ್ತು.
ಶೀಘ್ರ ಸಮನ್ವಯ ಸಮಿತಿ ಸಭೆ: ವಿರಳ ಸಂಚಾರ ದಿನ ಕೇವಲ ಎರಡು ಬಾರಿ ಆಚರಿಸಿದ್ದರೂ, ನಗರದಲ್ಲಿ ವಾಹನದಟ್ಟಣೆ ಹಾಗೂ ವಾಯುಮಾಲಿನ್ಯವು ಗಮನಾರ್ಹ ಪ್ರಮಾಣದಲ್ಲಿ ತಗ್ಗಿರುವುದು ಕಂಡುಬಂದಿದೆ. ಉಳಿದ ಭಾನುವಾರಗಳಿಗೆ ಹೋಲಿಸಿದರೆ, ಆ ದಿನ ಶೇ.26ರಷ್ಟು ಮಾಲಿನ್ಯ ಕಡಿಮೆ ಆಗಿರುವುದು ತಿಳಿದುಬಂದಿದೆ. ಇದನ್ನು ಮನಗಂಡು ಉದ್ದೇಶಿತ ಕಾರ್ಯಕ್ರಮ ಮುಂದುವರಿಸಲು ನಿರ್ಧರಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ಸಮನ್ವಯ ಸಮಿತಿ ಸಭೆ ಕರೆಯಲಾಗುವುದು ಎಂದು ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸುತ್ತಾರೆ. ವಿರಳ ಸಂಚಾರ ದಿನಾಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಾದ ಬಿಬಿಎಂಪಿ, ಬಿಡಿಎ, ಬಿಎಂಟಿಸಿ, ನಗರ ಸಂಚಾರ ಪೊಲೀಸ್ ಇಲಾಖೆ, ಬಿಎಂಆರ್‌ಸಿ, ಸಾರಿಗೆ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳ ಸಮನ್ವಯ ಸಮಿತಿ ರಚಿಸಲಾಗಿತ್ತು. ಈಗ ಆ ಸಮಿತಿ ಸಭೆ ನಡೆಸಿ, ಮುಂದುವರಿಸಲು ಕ್ರಮ
ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದರು.
ಚುನಾವಣೆ ಬಂದಿದ್ದರಿಂದ ತಾತ್ಕಲಿಕವಾಗಿ ಸ್ಥಗಿತಗೊಂಡಿತ್ತು. ಈಗ ಹೊಸ ಸರ್ಕಾರ ಬಂದಿದ್ದು, ವಿರಳ ಸಂಚಾರ ದಿನಾಚರಣೆ ಸಂಬಂಧ ಯಾವುದೇ ಸೂಚನೆಗಳು ಬಂದಿಲ್ಲ. ಹಾಗೊಂದು ವೇಳೆ ನಿರ್ದೇಶನಗಳು ಬಂದ ತಕ್ಷಣ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲಾಗುವುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು
ಸ್ಪಷ್ಟಪಡಿಸಿದರು.
ದೇಶಾದ್ಯಂತ ವಿಸ್ತರಣೆಗೆ ಪತ್ರದಲ್ಲಿ ಮನವಿ ಹಿಂದಿನ ಸಾರಿಗೆ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, “ವಿರಳ ಸಂಚಾರ ದಿನ’ ಅಭಿಯಾನವನ್ನು ದೇಶದ ವಿವಿಧ ರಾಜ್ಯಗಳಲ್ಲೂ ಜಾರಿಗೊಳಿಸಬೇಕು ಎಂದು ಕೇಂದ್ರಕ್ಕೆ ಪತ್ರ ಕೂಡ ಬರೆದಿದ್ದರು. “ವಿರಳ ಸಂಚಾರ ದಿನಕ್ಕೆ ಸಾರ್ವಜನಿಕ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದ ದೇಶದ ಉಳಿದ ರಾಜ್ಯಗಳಲ್ಲೂ ಈ ಅಭಿಯಾನ ಜಾರಿಗೊಳಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರದಲ್ಲಿ ಮನವಿ ಮಾಡಿದ್ದರು. ಆದರೆ, ರಾಜ್ಯದಲ್ಲಿ ಎರಡೇ ತಿಂಗಳಲ್ಲಿ ಸ್ಥಗಿತಗೊಂಡಿತು!
ವಾಯುಮಾಲಿನ್ಯ ತಗ್ಗಿತ್ತು
ಸಾಮಾನ್ಯವಾಗಿ ಭಾನುವಾರ ನಗರದ ರಸ್ತೆಗಳಲ್ಲಿ ವಾಹನದಟ್ಟಣೆ ಕಡಿಮೆ ಇರುತ್ತದೆ. ವಿರಳ ಸಂಚಾರ ದಿನಾಚರಣೆ ಸಂದರ್ಭದಲ್ಲಿ ವಾಹನದಟ್ಟಣೆ ಮತ್ತಷ್ಟು ಕಡಿಮೆ ಆಗುತ್ತಿತ್ತು. ಪರಿಣಾಮ ಮೊದಲ ಆವೃತ್ತಿಯಲ್ಲೇ ಅಂದರೆ ಫೆಬ್ರವರಿ 11ರಂದು ವಾಯುಮಾಲಿನ್ಯ ಪ್ರಮಾಣ ಉಳಿದ ದಿನಗಳಿಗಿಂತ ಶೇ. 26ರಷ್ಟು ಇಳಿಮುಖವಾಗಿತ್ತು. ಅಂದು ಉಸಿರಾಟದ ವೇಳೆ ದೇಹ ಸೇರಲ್ಪಡುವ ತೇಲಾಡುವ ದೂಳಿನ ಕಣಗಳ (ಆರ್‌ಎಸ್‌ಪಿಎಂ) ಪ್ರಮಾಣ ಪ್ರತಿ ಕ್ಯುಬಿಕ್ ಮೀಟರ್ ಗಾಳಿಯಲ್ಲಿ ಸರಾಸರಿ 107ರಷ್ಟು ಇತ್ತು. ವಿರಳ ಸಂಚಾರ ದಿನಕ್ಕಿಂತ ಹಿಂದಿನ ಮೂರು ಭಾನುವಾರಗಳಂದು ವಾಯುಮಾಲಿನ್ಯ ಪ್ರಮಾಣ ಶೇ. 15ರಷ್ಟು ಕಡಿಮೆ ಇತ್ತು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವಿಜ್ಞಾನಿಗಳು ತಿಳಿಸಿದ್ದಾರೆ.
ವಾಯುಮಾಲಿನ್ಯ ತಗ್ಗಿಸುವ ಮತ್ತು ವಾಹನಗಳ ದಟ್ಟಣೆ ಕಡಿಮೆ ಮಾಡುವ ಯಾವುದೇ ಕಾರ್ಯಕ್ರಮವೂ
ಸ್ವಾಗತಾರ್ಹ. ತಿಂಗಳ ಒಂದು ದಿನ ಜನ ಸಾರ್ವಜನಿಕ ಸಾರಿಗೆ ಬಳಸಬೇಕು. ಈ ನಿಟ್ಟಿನಲ್ಲಿ ಆಂದೋಲನದ ರೀತಿಯಲ್ಲಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು.
ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.