ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಗುಜರಿ ವ್ಯಾಪಾರಿ ಬಂಧನ
Team Udayavani, Jun 27, 2017, 11:23 AM IST
ಬೆಂಗಳೂರು: ಜ್ವರದಿಂದ ಬಳಲುತ್ತಿದ್ದ ಅಪ್ರಾಪ್ತೆಗೆ ಬ್ರೆಡ್ ಕೊಡುವ ನೆಪದಲ್ಲಿ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಗುಜರಿ ವ್ಯಾಪಾರಿಯನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಂದ್ರಲೇಔಟ್ನಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಿ ವ್ಯಾಪಾರಿ ಮೊಹಮ್ಮದ್ ಘನಿ(54) ಎಂಬಾತನನ್ನು ಸೋಮವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೊಹಮ್ಮದ್ ಘನಿ ಗುಜರಿ ವ್ಯಾಪಾರ ಮಾಡಿಕೊಂಡು ಚಂದ್ರಲೇಔಟ್ನಲ್ಲಿ ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದು, ಪಕ್ಕದ ಮನೆಯಲ್ಲಿ ಅಪ್ರಾಪ್ತೆ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ಭಾನುವಾರ ಮಧ್ಯಾಹ್ನ ಆರೋಪಿಯ ಪತ್ನಿ ಮತ್ತು ಮಕ್ಕಳು ರಂಜಾನ್ ಹಬ್ಬದ ಪ್ರಯುಕ್ತ ಸಂಬಂಧಿಕರ ಮನೆಗೆ ತೆರಳಿದ್ದರು.
ಇತ್ತ ಸಂತ್ರಸ್ತೆಯ ಪೋಷಕರು ಮಾರುಕಟ್ಟೆಗೆ ಹೋಗಿದ್ದರು. ಇದೇ ಸಮಯದಲ್ಲಿ ಮನೆಗೆ ಬಂದ ಆರೋಪಿ ಸಂತ್ರಸ್ತೆಗೆ ಬ್ರೆಡ್ ಕೊಡುತ್ತೇನೆಂದು ತನ್ನ ಮನೆಗೆ ಕರೆದೊಯ್ದಿದ್ದ. ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪೋಷಕರು ಮನೆಗೆ ಬಂದಾಗ ಸಂತ್ರಸ್ತೆ ಹೊಟ್ಟೆ ನೋವು ಎಂದು ನರಳುತ್ತಿದ್ದರು.
ಕೂಡಲೇ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಸಂತ್ರಸ್ತೆಯನ್ನು ವಿಚಾರಿಸಿದಾಗ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಈ ಸಂಬಂಧ ಭಾನುವಾರ ರಾತ್ರಿ ಆಕೆಯ ಪೋಷಕರು ದೂರು ನೀಡಿದ್ದರು. ಸೋಮವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಚಂದ್ರಲೇಔಟ್ ಠಾಣೆ ಪೊಲೀಸರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.