ಪುಟಾಣಿ ಶಶಾಂಕ್ ಒಂದು ಗಂಟೆ ಪೊಲೀಸ್ ಇನ್ಸ್‌ಪೆಕ್ಟರ್
Team Udayavani, Jul 25, 2018, 12:03 PM IST
ಬೆಂಗಳೂರು: ಖಡಕ್ ಪೊಲೀಸ್ ಅಧಿಕಾರಿ ಬರುತ್ತಿದ್ದಾರೆ ದಾರಿ ಬಿಡಿ.. ಮಂಗಳವಾರ ಬೆಳ್ಳಂ ಬೆಳಗ್ಗೆ ವಿವಿಪುರ ಠಾಣೆಗೆ ಭೇಟಿ ನೀಡಿದ ಈ ಖಡಕ್ ಅಧಿಕಾರಿ ಕಡತಗಳನ್ನು ಪರಿಶೀಲಿಸಿ ಯಾವೆಲ್ಲ ಪ್ರಕರಣಗಳು ಬಾಕಿ ಉಳಿದಿವೆ,
ಎಷ್ಟು ಪ್ರಕರಣಗಳು ಮುಕ್ತಾಯವಾಗಿವೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಮದ್ಯಪಾನ ಮಾಡಿ ತೊಂದರೆ ನೀಡುವವರಿಗೆ ಸರಿಯಾಗಿ ಬುದ್ಧಿ ಹೇಳುವಂತೆ ತಮ್ಮ ಸಹದ್ಯೋಗಿಗಳಿಗೆ ಸೂಚಿಸಿ ನಂತರ ಪೊಲೀಸ್ ಜೀಪಿನಲ್ಲಿ ಗಸ್ತು ತಿರುಗಿದರು.
ಯಾರಿದು ಹೊಸ ಅಧಿಕಾರಿ ವಿವಿಪುರ ಠಾಣೆಗೆ ಭೇಟಿ ನೀಡಿದ್ದು ಎಂದು ಯೋಚಿಸುತ್ತಿದ್ದಿರಾ? ಅವರೇ ಕೋಲಾರದ ಚಿಂತಾಮಣಿಯ 12 ವರ್ಷದ ಬಾಲಕ ಶಶಾಂಕ್. ಒಂದು ಗಂಟೆಯ ಅವಧಿಗೆ ಪೊಲೀಸ್ ಅಧಿಕಾರಿಯಾಗಿ ವಿವಿಪುರ ಠಾಣೆಗೆ ಭೇಟಿ ನೀಡಿದ್ದರು.
5 ತಿಂಗಳ ಮಗುವಿನಿಂದ ತಲಸ್ಸೇಮಿಯಾ ಕಾಯಿಲೆ ಹಾಗೂ ಕಳೆದ 2 ವರ್ಷದಿಂದ ಮಧುಮೇಹದಿಂದ ಬಳಲುತ್ತಿರುವ ಶಶಾಂಕ್‌ಗೆ ಬಾಲ್ಯದಿಂದಲೂ ಪೊಲೀಸ್ ಅಧಿಕಾರಿಯಾಗಿ ಮದ್ಯಪಾನ ಮಾಡುವವರಿಗೆ ಶಿಕ್ಷೆ ವಿಧಿಸಬೇಕೆಂಬ ಆಸೆ ಇತ್ತು.
ಆದರೆ ಅನಾರೋಗ್ಯದಿಂದಾಗಿ ಸರಿಯಾಗಿ ಶಾಲೆಗೆ ಹೋಗಲು ಆಗುತ್ತಿಲ್ಲ. ಹೀಗಾಗಿ ಮೇಕ್ ಎ ವಿಶ್ ಪ್ರತಿಷ್ಠಾನ ಹಾಗೂ ವಾಣಿ ವಿಲಾಸ ಆಸ್ಪತ್ರೆ ಆತನ ಕನಸನ್ನು ನನಸಾಗಿಸಲು ಸಹಕರಿಸಿತ್ತು. ಸೋಮವಾರವೇ ಶಶಾಂಕ್ ಅವರಿಗೆ ಇಲಾಖಾ ಬ್ಯಾಜ್xನೊಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಸಮವಸ್ತ್ರ ನೀಡಲಾಗಿತ್ತು.
ಮಂಗಳವಾರ ಬೆಳಗ್ಗೆ ಈ ಪುಟಾಣಿ ಇನ್ಸ್‌ಪೆಕ್ಟರ್ ಅವರನ್ನು ವಾಣಿವಿಲಾಸ ಆಸ್ಪತ್ರೆಯಿಂದ ಪೊಲೀಸ್ ಜೀಪ್‌ನಲ್ಲಿ ವಿವಿಪುರ ಪೊಲೀಸ್ ಠಾಣೆಗೆ ಕರೆ ತರಲಾಯಿತು. ನಂತರ ಅಲ್ಲಿನ ಸಿಬ್ಬಂದಿ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿ ಹೂಗುತ್ಛ ನೀಡಿ ಸ್ವಾಗತಿಸಿದರು.
ಠಾಣೆಯಲ್ಲಿದ್ದ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯೂ ಹಿರಿಯ ಅಧಿಕಾರಿಗಳು ಬಂದಾಗ ಯಾವ ರೀತಿ ಶಿಸ್ತಿನಿಂದ ತಮ್ಮ ಪರಿಚಯ ಮಾಡಿಕೊಳ್ಳುತ್ತಾರೋ ಅದೇ ರೀತಿ ತಮ್ಮ ಪರಿಚಯ ಮಾಡಿಕೊಂಡರು.
ಪೊಲೀಸ್ ಇನ್ಸ್‌ಪೆಕ್ಟರ್ ಕೊಠಡಿಗೆ ತೆರಳಿ ಆಸನದಲ್ಲಿ ಕುಳಿತು ವಾಕಿಟಾಕಿಯಲ್ಲಿ “ಹಲೋ ಹಲೋ ಇನ್ಸ್‌ಪೆಕ್ಟರ್ ಸ್ಪೀಕಿಂಗ್’ ಎಂದು ಪೇದೆಯೊಬ್ಬರಿಗೆ ಕೆಲವು ಸೂಚನೆಗಳನ್ನು ನೀಡಿದರು. ವಿವಿಪುರ ಠಾಣೆಯ ಇನ್ಸ್‌ಪೆಕ್ಟರ್ ಟಿ.ಡಿ.ರಾಜು ಅವರಿಂದ ರೈಫಲ್ ಬಗ್ಗೆ ಮಾಹಿತಿ ಪಡೆದುಕೊಂಡ ಶಶಾಂಕ್ ನಂತರ ಲಾಕಪ್ ಪರಿಶೀಲಿಸಿದರು.
ಠಾಣೆಯಲ್ಲಿ ಎಲ್ಲ ಕರ್ತವ್ಯ ನಿರ್ವಹಿಸಿದ ಪುಟಾಣಿ ಇನ್ಸ್‌ಪೆಕ್ಟರ್ ನಂತರ ಪೊಲೀಸ್ ಜೀಪಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗಿದರು. ಆಮೇಲೆ ದಕ್ಷಿಣ ಉಪ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಅವರು ಡಿಸಿಪಿ ಎಸ್.ಡಿ.ಶರಣಪ್ಪ ಅವರನ್ನು ಭೇಟಿ ಮಾಡಿ ಪೊಲೀಸ್ ಆಗಿ ಯಾವ ರೀತಿ ಸೇವೆ ಒದಗಿಸಬೇಕೆಂದಿರುವೆ ಎಂಬುದನ್ನು ವಿವರಿಸಿ,
ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಒಂದು ಗಂಟೆ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು. ನಂತರ ಡಿಸಿಪಿ ಎಸ್.ಡಿ. ಶರಣಪ್ಪ ಮಾತನಾಡಿ, ಶಶಾಂಕ್ ಶೀಘ್ರ ಗುಣಮುಖರಾಗಿ ಪೊಲೀಸ್ ಅಧಿಕಾರಿಯಾಗುವ ಆಸೆ ನೆರವೇರಲಿ ಎಂದು ಹಾರೈಸಿದರು.
ತಲಸ್ಸೇಮಿಯಾ ಎಂದರೇ?: ದೇಹದಲ್ಲಿ ರಕ್ತ ಉತ್ಪತ್ತಿಯಾಗದೇ ಇರುವುದಕ್ಕೆ ತಲಸ್ಸೇಮಿಯಾ ಕಾಯಿಲೆ ಎನ್ನುತ್ತಾರೆ. ಇದು ಹುಟ್ಟಿದಾನಿಂದಲೇ ಬರುವಂತಹ ಕಾಯಿಲೆಯಾಗಿದೆ. ಎಲ್ಲರಿಗೂ ದೇಹದಲ್ಲಿ ರಕ್ತ ಉತ್ಪತ್ತಿಯಾಗುವ ಜೀವ ಕಣಗಳಿರುತ್ತವೆ. ಆದರೆ ಈ ಕಾಯಿಲೆ ಇರುವವರಿಗೆ ಆ ಜೀವ ಕಣ ಇರುವುದಿಲ್ಲ. ಪ್ರತಿ ಮೂರು ವಾರಕ್ಕೊಮ್ಮೆ ಬೇರೆಯವರಿಂದ ರಕ್ತವನ್ನು ಪಡೆದುಕೊಳ್ಳುವ ಅಗತ್ಯವಿರುತ್ತದೆ. ತಲಸ್ಸೇಮಿಯಾ ಇರುವವರಿಗೆ ಪ್ರತಿಬಾರಿ 350 ಎಂ.ಎಲ್ ರಕ್ತ ನೀಡಲಾಗುವುದು.
ಹೆಣ್ಣು ಮಕ್ಕಳಿಗೆ ತೊಂದರೆ ನೀಡುವ ಕುಡುಕರಿಗೆ ಸರಿಯಾಗಿ ಶಿಕ್ಷೆ ವಿಧಿಸಿ ಅವರನ್ನು ಸರಿ ದಾರಿಗೆ ಕರೆತರಲು ನಾನು ಪೊಲೀಸ್ ಆಗಬೇಕೆಂದು ಕೊಂಡಿರುವೆ. ಮುಂದೆ ಚೆನ್ನಾಗಿ ಓದಿ ವಿವಿಪುರ ಠಾಣೆಯಲ್ಲಿರುವ ಪೊಲೀಸ್ ಅಧಿಕಾರಿಗಳಂತೆ ನಾನು ಆಗುವೆ.
-ಶಶಾಂಕ್, ಪುಟಾಣಿ ಇನ್ಸ್‌ಪೆಕ್ಟರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.