ಅಪಹರಣ ಆರೋಪಿ ಕಾಲಿಗೆ ಗುಂಡು
Team Udayavani, Apr 30, 2019, 3:05 AM IST
ಬೆಂಗಳೂರು: ಜೈಲಿನಲ್ಲಿ ಪರಿಚಯವಾಗಿದ್ದ ಸ್ನೇಹಿತನನ್ನು ಅಪಹರಿಸಿ ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪಿಗೆ ಉಪ್ಪಾರಪೇಟೆ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.
ಅಸ್ಸಾಂ ಮೂಲದ ಮನ್ಸೂರ್ ಖಾನ್ (23) ಗುಂಡೇಟು ತಿಂದ ಆರೋಪಿ. ಆರೋಪಿ ಹಲ್ಲೆಯಿಂದ ಪೊಲೀಸ್ ಸಿಬ್ಬಂದಿ ಜಯಚಂದ್ರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಪ್ರಕರಣದ ಮತ್ತೂಬ್ಬ ಆರೋಪಿ ಮಣಿಪುರ ಮೂಲದ ಅಬ್ದುಲ್ ಮಜೀದ್ ಅಲಿಯಾಸ್ ಜೂಲಿ (25)ಯನ್ನು ಬಂಧಿಸಲಾಗಿದೆ. ಇತರೆ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಕೆಲ ವರ್ಷಗಳಿಂದ ನಗರದ ಕಬ್ಬನ್‌ಪೇಟೆಯಲ್ಲೇ ವಾಸವಾಗಿರುವ ಮನ್ಸೂರ್ ಖಾನ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಏಳಕ್ಕೂ ಹೆಚ್ಚು ದರೋಡೆ, ಡಕಾಯಿತಿ, ಅಕ್ರಮ ಶಸ್ತ್ರಾಸ್ತ್ರ, ಕೊಲೆ ಯತ್ನ, ಅಪಹರಣ ಹಾಗೂ ಇತರೆ ಪ್ರಕರಣಗಳು ದಾಖಲಾಗಿವೆ.
ಏ.24ರಂದು ರಾಕೇಶ್ ಶರ್ಮಾ ಹಾಗೂ ಆತನ ಸ್ನೇಹಿತ ಗೋಪಾಲ್‌ಸಿಂಗ್ ಎಂಬುವವರನ್ನು ಆರೋಪಿಗಳು ಜಾಲಹಳ್ಳಿ ಸಮೀಪ ಅಪಹರಣ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಉಪ್ಪಾರಪೇಟೆ ಪೊಲೀಸರು, ಏ.25ರಂದು ರಾತ್ರಿ ಜಾಲಹಳ್ಳಿ ಸುತ್ತ-ಮುತ್ತ ಕಾರ್ಯಾಚರಣೆ ನಡೆಸುತ್ತಿದ್ದಂತೆ ಅಪಹರಣಕಾರರು ರಾಕೇಶ್ ಶರ್ಮಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಮತ್ತೂಂದೆಡೆ ಆರೋಪಿಗಳ ವಶದಲ್ಲಿದ್ದ ರಾಕೇಶ್‌ನ ಸ್ನೇಹಿತ ಗೋಪಾಲ್ ಸಿಂಗ್ ಕೂಡ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಪಶ್ಚಿಮ ವಿಭಾಗದ ಹಿರಿಯ ಅಧಿಕಾರಿಗಳು ಉಪ್ಪಾರಪೇಟೆ ಠಾಣೆ ಇನ್‌ಸ್ಪೆಕ್ಟರ್ ರಾಮಪ್ಪ ಬಿ. ಗುತ್ತೇರ್ ನೇತೃತ್ವದಲ್ಲಿ ಪಿಎಸ್‌ಐ ಜೆ.ರಾಜೇಂದ್ರ, ಸಿಬ್ಬಂದಿ ಜಯಚಂದ್ರ, ಬೀರಪ್ಪ ಕನ್ನಾಳ, ಹಬೀಬುಲ್ಲಾ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು.
ಬಲಗಾಲಿಗೆ ಗುಂಡೇಟು: ತನಿಖೆ ಕೈಗೊಂಡಿದ್ದ ವಿಶೇಷ ತಂಡಕ್ಕೆ ಏ.29ರಂದು ಮುಂಜಾನೆ 4 ಗಂಟೆ ಸುಮಾರಿಗೆ ಆರೋಪಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಿಂಭಾಗದ ರಸ್ತೆಯ ಸಮೀಪದ ಕಟ್ಟಡದಲ್ಲಿ ವಾಸವಾಗಿರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಪಿಎಸ್‌ಐ ರಾಜೇಂದ್ರ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ, ಅಬ್ದುಲ್ ಮಜೀದ್‌ನನ್ನು ವಶಕ್ಕೆ ಪಡೆದಿದೆ.
ಈ ವೇಳೇ ತನ್ನನ್ನು ಬಂಧಿಸಲು ಬಂದ ಪೊಲೀಸ್ ಸಿಬ್ಬಂದಿ ಜಯಚಂದ್ರ ಮೇಲೆ ಆರೋಪಿ ಮನ್ಸೂರ್ ಖಾನ್‌ಮ ಡ್ರಾಗರ್‌ನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ, ಜಯಚಂದ್ರ ಅವರ ಎಡಗೈಗೆ ಗಾಯವಾಗಿದೆ. ಕೂಡಲೇ ಪಿಎಸ್‌ಐ ಆರೋಪಿಗೆ ಶರಣಾಗುವಂತೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಮತ್ತೂಮ್ಮೆ ಹಲ್ಲೆಗೆ ಮಂದಾಗಿದ್ದರಿಂದ ಆರೋಪಿಯ ಬಲಗಾಲಿಗೆ ಗುಂಡು ಹೊಡೆದು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಐದು ಲಕ್ಷಕ್ಕೆ ಬೇಡಿಕೆ: ರಾಕೇಶ್ ಶರ್ಮಾ ಈ ಹಿಂದೆ ಮಹಿಳೆಯರ ಅಕ್ರಮ ಮಾರಾಟ ಪ್ರಕರಣದಲ್ಲಿ ಜೈಲು ಸೇರಿದ್ದ. ಅದೇ ವೇಳೆ ಅಪಹರಣಕಾರರು ಕೂಡ ದರೋಡೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಇಬ್ಬರೂ ಜೈಲಿನಲ್ಲಿದ್ದಾಗ ಪರಸ್ಪರ ಪರಿಚಯವಾಗಿದೆ. ಈ ವೇಳೆ ರಾಕೇಶ್ ಶರ್ಮಾ ತನ್ನ ಬಳಿ ಲಕ್ಷಾಂತರ ರೂ. ಹಣ ಇರುವ ಬಗ್ಗೆ ಹೇಳಿಕೊಂಡಿದ್ದ.
ಈ ಮಧ್ಯೆ ಏ.20ರಂದು ರಾಕೇಶ್ ಶರ್ಮಾ ಬಿಡುಗಡೆಯಾಗಿದ್ದು, ಗಾಂಧಿನಗರದ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ. ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳು, ಏ.24ರಂದು ರಾಕೇಶ್ ಶರ್ಮಾನನ್ನು ಊಟ ಮಾಡಲೆಂದು ಜಾಲಹಳ್ಳಿ ಬಳಿ ಕರೆದಿದ್ದಾರೆ. ಆಗ, ರಾಕೇಶ್ ಶರ್ಮಾ ತನ್ನ ಸ್ನೇಹಿತ ರಾಜಸ್ಥಾನದ ಗೋಪಾಲ್ ಸಿಂಗ್ ಜತೆ ಹೋಗಿದ್ದಾನೆ.
ಇಬ್ಬರನ್ನೂ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು ಕೈ, ಕಾಲು ಕಟ್ಟಿ ಅಪಹರಣ ಮಾಡಿದ್ದಾರೆ. ನಂತರ ರಾಕೇಶ್ ಶರ್ಮಾನ ಮೂಲಕ, ನೇಪಾಳದಲ್ಲಿರುವ ಆತನ ಸಹೋದರನಿಗೆ ಕರೆ ಮಾಡಿಸಿ, ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅನುಮಾನಗೊಂಡ ಸಹೋದರ, ರಾಕೇಶ್ ಶರ್ಮಾನ ಮತ್ತೂಬ್ಬ ಸ್ನೇಹಿತ ತಂಗ್ ಬಹದ್ದೂರ್ ತಾಪಾ ಗೆ ಕರೆ ಮಾಡಿ ವಿಚಾರಿಸಿದ್ದ. ಏ.25ರಂದು ತಂಗ್ ಬಹದ್ದೂರ್ ತಾಪಾ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದ.
ಜನವರಿ ಈಚೆಗಿನ “ಗುಂಡಿನ ಬೇಟೆ’
ಜ.7: ಕೆ.ಜಿ.ಹಳ್ಳಿ ಪೊಲೀಸರಿಂದ ರೌಡಿಶೀಟರ್ ತಬ್ರೇಜ್ ಅಲಿಯಾಸ್ ಬಿಲ್ವಾರ್‌ಗೆ (27) ಗುಂಡೇಟು.
ಜ.27: ಯಶವಂತಪುರ ಪೊಲೀಸರಿಂದ ಕೊಲೆ ಆರೋಪಿ ಮಾಡೆಲ್ ಕಾಲೋನಿ ನಿವಾಸಿ ಗೌತಮ್ (22) ಕಾಲಿಗೆ ಗುಂಡು.
ಫೆ.5: ಸಿಸಿಬಿ ಪೊಲೀಸರಿಂದ ರಾಜಗೋಪಾಲ ನಗರ ನಿವಾಸಿ, ರೌಡಿ ಸ್ಲಂ ಭರತ್‌ಗೆ (30) ಗುಂಡು.
ಫೆ.28: ಹೆಣ್ಣೂರು ಪೊಲೀಸರಿಂದ ರೌಡಿಶೀಟರ್ ಡಿ.ಜೆ.ಹಳ್ಳಿ ನಿವಾಸಿ ದಿನೇಶ್‌ಗೆ (30) ಗುಂಡೇಟು.
ಮಾ.9: ಮಹಾಲಕ್ಷ್ಮೀ ಲೇಔಟ್ ಪೊಲೀಸರಿಂದ ಸುಪಾರಿ ಹಂತಕ ಕ್ಯಾಟ್ ರಾಜ (31)ನಿಗೆ ಗುಂಡಿನ ರುಚಿ.
ಮಾ.12: ಸಿಸಿಬಿ ಪೊಲೀಸರಿಂದ ರೌಡಿಶೀಟರ್ ಹೇಮಂತ (34)ನ ಕಾಲಿಗೆ ಗುಂಡು.
ಮಾ.13: ಗುಂಡು ಹಾರಿಸಿ ರೌಡಿ ಆಕಾಶ್ ಅಲಿಯಾಸ್ ಮಳೆರಾಯ (24)ನ ಬಂಧಿಸಿದ ಸಿಸಿಬಿ ಪೊಲೀಸರು.
ಮಾ.27: ಸೋಲದೇವನಹಳ್ಳಿ ಪೊಲೀಸರಿಂದ ಸುಲಿಗೆಕೋರರಾದ ದೇವರಾಜು, ಚಂದ್ರಶೇಖರ್‌ಗೆ ಗುಂಡೇಟು.
ಮಾ.28: ನಂದಿನಿ ಲೇಔಟ್ ಪೊಲೀಸರಿಂದ ಮುನಿರಾಜ ಅಲಿಯಾಸ್ ಮುನ್ನಾ ಕಾಲಿಗೆ ಗುಂಡು.
ಮಾ.30: ಕುಮಾರಸ್ವಾಮಿ ಲೇಔಟ್ ಪೊಲೀಸರಿಂದ ಗುಂಡೇಟು ತಿಂದ ಸೈಕೋ ರಾಜೇಂದ್ರ ಅಲಿಯಾಸ್ ಬೆಂಕಿರಾಜ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.