ಕಸಾಯಿ ತ್ಯಾಜ್ಯ ವಿಲೇವಾರಿಗೆ ಘಟಕ
Team Udayavani, Oct 14, 2019, 3:09 AM IST
ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುವ ಪ್ರಾಣಿ ಮಾಂಸ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ನಗರದ ಹೊರವಲಯದಲ್ಲಿ ಮಾಂಸ ತ್ಯಾಜ್ಯ ವಿಲೇವಾರಿ ಘಟಕ (ರೆಂಡರಿಂಗ್ ಪ್ಲಾಂಟ್) ಅಳವಡಿಸಲು ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿ ಎಲ್ಲೆಂದರಲ್ಲಿ ಪ್ರಾಣಿ ಮಾಂಸ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ನಾನಾ ಸಮಸ್ಯೆಗಳು ಉದ್ಭವವಾಗುತ್ತಿವೆ. ಜತೆಗೆ, ಬೀದಿ ನಾಯಿಗಳು ಮಾಂಸ ತ್ಯಾಜ್ಯ ಸೇವಿಸಿ ಆಕ್ರಮಣಕಾರಿ ವರ್ತನೆ ತೋರುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ರೆಂಡರಿಂಗ್ ಪ್ಲಾಂಟ್ ಅಳವಡಿಕೆಗೆ ನಿರ್ಧರಿಸಲಾಗಿದೆ.
ಚೆನ್ನೈ ನಗರದಲ್ಲಿ ಪ್ರಾಣಿ ಮಾಂಸ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ವಹಣೆ ಮಾಡುತ್ತಿರುವ ಜೀವನ್ ದಾಸ್ ಎಂಬವರೊಂದಿಗೆ ಬಿಬಿಎಂಪಿಯ ಅಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿದ್ದರು. ಚೈನ್ನೈನಲ್ಲಿ ಮಾಂಸ ತ್ಯಾಜ್ಯ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುತ್ತಿದ್ದು ಅದೇ ಮಾದರಿಯಲ್ಲಿ ಇಲ್ಲಿಯೂ ಅಳವಡಿಕೆ ಮಾಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಸಹ ಮುಗಿಸಿದೆ.
ನಗರದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಾಂಸದ ಮಳಿಗೆಗಳಿದ್ದು, ಪ್ರತಿ ನಿತ್ಯ 40 ಟನ್ ಪ್ರಾಣಿತ್ಯಾಜ್ಯ ಉತ್ಪತ್ತಿ ಆಗುತ್ತಿದ್ದು, ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ 80 ರಿಂದ 90 ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದೆ. ಇದರಲ್ಲಿ ಬಹುತೇಕ ಪ್ರಾಣಿ ಮಾಂಸ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗುತ್ತಿಲ್ಲ. ರಾಜಕಾಲುವೆಗಳಲ್ಲಿ, ಕೆರೆ ಬದಿಗಳಲ್ಲಿ ಹಾಗೂ ನಿರ್ಜನ ಪ್ರದೇಶಗಳಲ್ಲಿ ಪ್ರಾಣಿ ಮಾಂಸ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ.
ನಗರದಲ್ಲಿ ಪ್ರಾಣಿ ಮಾಂಸ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಗೆ ಎಂಟೂ ವಲಯಗಳ ಹೊರವಲಯದಲ್ಲಿ ರೆಂಡರಿಂಗ್ ಪ್ಲಾಂಟ್ ಅಳವಡಿಸಲು ಪಾಲಿಕೆ ತೀರ್ಮಾನಿಸಿದೆ. ಈ ಯೋಜನೆಯ ಗುತ್ತಿಗೆ ಪಡೆಯುವವರೇ ಮಾಂಸ ತ್ಯಾಜ್ಯವನ್ನು ಅಂಗಡಿಗಳಿಂದ ತೆಗೆದುಕೊಂಡು ಹೋಗುತ್ತಾರೆ’ ಎಂದು ಪಾಲಿಕೆಯ ವಿಶೇಷ (ಘನತ್ಯಾಜ್ಯ ನಿರ್ವಹಣೆ)ಆಯುಕ್ತ ರಂದೀಪ್ ತಿಳಿಸಿದ್ದಾರೆ.
“ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿ ಮಾಂಸ ತ್ಯಾಜ್ಯ ವಿಲೇವಾರಿಗೆ ಅಂಗಡಿಯವರಿಂದ ನಿರ್ದಿಷ್ಟ ಮೊತ್ತವನ್ನು ಪಡೆದು ಇದರ ಸಾಗಾಣಿಕೆ ಮಾಡಲಾಗುತ್ತದೆ. ಇದರ ನಿರ್ವಹಣೆಗೆ ಅಥವಾ ಸಾಗಾಣಿಕೆಗೆ ಬಿಬಿಎಂಪಿಯಿಂದ ಹಣ ಖರ್ಚು ಮಾಡುವುದಿಲ್ಲ. ಆದರೆ, ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ವೈಜ್ಞಾನಿಕ ಮಾದರಿಯಲ್ಲಿ ವಿಲೇವಾರಿ ಮಾಡುವುದಕದಕ್ಕೆ ವಾಹನದಲ್ಲಿ ಜಿಪಿಎಸ್ ಕಡ್ಡಾಯವಾಗಿ ಇರಬೇಕು ಎಂಬ ಷರತ್ತು ವಿಧಿಸಲಾಗುವುದು.
ಸದ್ಯಕ್ಕೆ ರಾಮನಗರ ಮತ್ತು ನೆಲಮಂಗಲದಲ್ಲಿ ಎರಡು ಖಾಸಗಿ ರೆಂಡರಿಂಗ್ ಸಂಸ್ಕರಣಾ ಘಟಕಗಳು ಇವೆ. ಟೆಂಡರ್‌ದಾರರು ಈ ಘಟಕದೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು ಅಥವಾ ಅವರೇ ಹೊಸದಾಗಿ ಘಟಕ ನಿರ್ಮಾಣ ಮಾಡಬಹುದು. ನಗರದ ಒಳಭಾಗದಲ್ಲಿ ಘಟಕ ಸ್ಥಾಪನೆಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳುತ್ತಾರೆ.
ಪ್ರಾಣಿ ಮಾಂಸ ತ್ಯಾಜ್ಯದಿಂದ ಬಯೋ-ಡೀಸೆಲ್: ಈಗಾಗಲೇ ರೆಂಡರಿಂಗ್ ಪ್ಲಾಂಟ್ ಅಳವಡಿಸಿರುವ ಕಡೆ ಪ್ರಾಣಿ ಮಾಂಸ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ ನಂತರ,ಅದನ್ನು ಸಂಸ್ಕರಿಸಿ ಮೀನು ಮತ್ತು ಕೋಳಿಗಳ ಆಹಾರ ತಯಾರಿಸಲಾಗುತ್ತಿದೆ. ಜತೆಗೆ ಪ್ರಾಣಿ ತ್ಯಾಜ್ಯದಲ್ಲಿ ಬಿಡುಗಡೆಯಾಗುವ ಎಣ್ಣೆ ಅಂಶವನ್ನು ಬಯೋ-ಡೀಸೆಲ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ.
* ಹಿತೇಶ್ ವೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.