ಸ್ಮಾರ್ಟ್ ಸಿಟಿ ಯೋಜನೆ ಕೆಂಪೇಗೌಡರ ಕಲ್ಪನೆ
Team Udayavani, Jun 23, 2019, 3:09 AM IST
ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಬೆಂಗಳೂರು ಕಟ್ಟುವ ಮೂಲಕ 500 ವರ್ಷಗಳ ಹಿಂದೆ ಕೊಟ್ಟ ಕಲ್ಪನೆಯೇ ಈಗಿನ “ಸ್ಮಾರ್ಟ್ ಸಿಟಿ’ ಯೋಜನೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಹಾಗೂ ಕೃಷಿಕ ಸಾಹಿತ್ಯ ಪರಿಷತ್ತು ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿದ್ದ “ನಾಡಪ್ರಭು ಕೆಂಪೇಗೌಡರ ಜಯಂತಿ’ ಹಾಗೂ “ಕೆಂಪೇಗೌಡರ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಬಗ್ಗೆ ವಿಚಾರ ಸಂಕಿರಣ’ ಮತ್ತು “ಸನ್ಮಾನ ಸಮಾರಂಭ’ ಉದ್ಘಾಟಿಸಿ ಮಾತನಾಡಿದರು.
ಸ್ಮಾರ್ಟ್ ಸಿಟಿ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲಿಂದ ಇದು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ನಾಗರಿಕರಿಗೆ ಆಗಿನ ಸಂದರ್ಭ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಒದಗಿಸುವುದೇ “ಸ್ಮಾರ್ಟ್ ಸಿಟಿ’ ಕಲ್ಪನೆ. ಇದೇ ಮಾದರಿಯಲ್ಲಿ 500 ವರ್ಷಗಳ ಹಿಂದೆ ಕೆಂಪೇಗೌಡರು ಬೆಂಗಳೂರು ಕಟ್ಟಿದರು. ಹಾಗಾಗಿ, ಕೆಂಪೇಗೌಡರು 500 ವರ್ಷಗಳ ಹಿಂದೆ ಕೊಟ್ಟ ಕಲ್ಪನೆಯೇ ಈಗಿನ “ಸ್ಮಾರ್ಟ್ ಸಿಟಿ’ ಯೋಜನೆ ಎಂದರು.
ಬೆಂಗಳೂರು ಮತ್ತು ಕರ್ನಾಟಕಕ್ಕೆ ಅತ್ಯಂತ ದೊಡ್ಡ ಕೊಡುಗೆ ಕೊಟ್ಟ ಒಕ್ಕಲಿಗ ಸಮುದಾಯ ನಮ್ಮದು. ಈ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು. ಅದನ್ನು ಅಭಿಮಾನದಿಂದ ಹೇಳಿಕೊಳ್ಳಬೇಕು. ಒಕ್ಕಲಿಗ ಸಮುದಾಯ ಯಾವುದೇ ಸಮುದಾಯದ ಜೊತೆಗೆ ಪೈಪೋಟಿ ನಡೆಸುವ ಅಥವಾ ಇನ್ನೊಂದು ಸಮುದಾಯಕ್ಕೆ ಅನ್ಯಾಯ ಮಾಡುವ ಸಮುದಾಯವಲ್ಲ. ಬದಲಿಗೆ ಮಾರ್ಗದರ್ಶಕ ಸ್ಥಾನದಲ್ಲಿ ನಿಂತು ಎಲ್ಲ ಸಮುದಾಯಗಳನ್ನು ತನ್ನ ಜತೆಗೆ ಕರೆದುಕೊಂಡು ಹೋಗುತ್ತದೆ. ತ್ಯಾಗ ಮತ್ತು ಅರ್ಪಣೆಗೆ ನಿಜವಾದ ಅರ್ಥ ಕೊಟ್ಟವರೇ ಕೆಂಪೇಗೌಡರು ಎಂದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಲಾಗಿದೆ. ಪ್ರತಿ ದಿನ ಇಲ್ಲಿಗೆ ಬಂದು ಹೋಗುವ ಸುಮಾರು 1.20 ಲಕ್ಷ ಮಂದಿ ಕೆಂಪೇಗೌಡರ ಹೆಸರು ಕೇಳುತ್ತಾರೆ. ಅದೇ ರೀತಿ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಖಾಲಿ ಜಾಗ ಇದ್ದು, ಅಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದರೆ ಹೆಸರು ಕೇಳಿಸಿಕೊಳ್ಳುವುದರ ಜತೆಗೆ ಅಲ್ಲಿಗೆ ಬಂದು ಹೋಗುವವರು ಕೆಂಪೇಗೌಡರನ್ನು ನೋಡಿದಂತೆಯೂ ಆಗುತ್ತದೆ ಎಂದು ಸ್ವಾಮೀಜಿ ಆಪೇಕ್ಷೆ ಪಟ್ಟಿದ್ದಾರೆ. ಈ ಕುರಿತು ಪ್ರಯತ್ನಿಸಲಾಗುವುದು ಎಂದು ಸದಾನನಂದಗೌಡರು ಭರವಸೆ ನೀಡಿದರು.
ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗ ಸಮುದಾಯ ಹತ್ತಾರು ಸಮುದಾಯಗಳಿಗೆ ಆಶ್ರಯ ನೀಡಿದೆ. ಆ ಎಲ್ಲ ಸಮಯದಾಯಗಳು ಬೆಳೆದರೆ ಒಕ್ಕಲಿಗ ಸಮುದಾಯ ಬೆಳದಂತೆ. ಎಲ್ಲ ಸಮುದಾಯಗಳನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗಬೇಕು. ಸಮುದಾಯದ ಕೀರ್ತಿ ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸಿದರು.
ಸಾಧಕರಿಗೆ ಸನ್ಮಾನ: ಈ ವೇಳೆ ಇತಿಹಾಸಕಾರರು, ಸಂಶೋಧಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರೊ. ಎಂ.ವಿ. ಶ್ರೀನಿವಾಸ್, ಪ್ರೊ. ಪಿ.ವಿ. ನಂಜರಾಜೆ ಅರಸ್, ಡಾ. ನಂದಿ ವೆಂಕಟೇಶ್‌ಮೂರ್ತಿ, ಪ್ರೊ. ಚಿನ್ನಸ್ವಾಮಿ ಸೋಸಲೆ, ಸುರೇಶ್ ಮೂನ, ಡಿ. ದೇವರಾಜ್, ಮರಿಮಲ್ಲಯ್ಯ, ಮಹದೇವಮ್ಮ, ಸಿ. ವೆಂಕಟೇಶ್, ಎಸ್. ಸಂತೋಷ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ತಲಕಾಡು ಚಿಕ್ಕರಂಗೇಗೌಡರು ರಚಿಸಿದ “ಕೆಂಪೇಗೌಡ ರಾಜ ಚರಿತೆ’ ಹಾಗೂ ಡಾ. ಬೂದನೂರು ಪುಟ್ಟಸ್ವಾಮಿ ರಚಿಸಿದ “ಬೆಂಗಳೂರು ಕೆಂಪೇಗೌಡ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶ್‌ಗೌಡ, ಆದಾಯ ತೆರಿಗೆ ಆಯುಕ್ತ ಜಯರಾಂ ರಾಯಪುರ ಮತ್ತಿತರರು ಇದ್ದರು.
“ಗೌಡ’ ಸೇರಿಸಿಕೊಂಡಿದ್ದಕ್ಕೆ ಬೆಳೆದೆ – ಡಿವಿಎಸ್: “ಉದಯವಾಣಿ’ ದಿನಪತ್ರಿಕೆ 1974ರಲ್ಲಿ ಗುರುತಿಸಿದ್ದ ರಾಜ್ಯದ ಕುಗ್ರಾಮಗಳ ಪೈಕಿ ಸುಳ್ಯ ತಾಲೂಕಿನ ಮಂಡೆಕೋಲು ಕುಗ್ರಾಮದಿಂದ ಬಂದವನು ನಾನು. 1837ರಲ್ಲಿ ಸ್ವಾತಂತ್ರ್ಯ ಹೋರಾಟದ ಕರೆ ಕೊಟ್ಟ ಗುಡ್ಡೆಮನೆ ಅಪ್ಪಾಜಯ್ಯನವರ ಅರೆಭಾಷೆ ಗೌಡ ಸಮುದಾಯಕ್ಕೆ ಸೇರಿದವನು ನಾನು. ಕಡತಲದಡಿಯಿಂದ ಪ್ರಾರಂಭವಾದ ನನ್ನ ಪಯಣದಲ್ಲಿ ಬೆಂಗಳೂರು ದಾರಿಯಲ್ಲಿ ಸಿಕ್ಕ ಬೆಂಬಲದ ಕೇಂದ್ರ. ಡಿ.ವಿ. ಸದಾನಂದ ಹೆಸರಲ್ಲಿ ಮೊದಲ ಬಾರಿಗೆ ಪುತ್ತೂರಿನಲ್ಲಿ ಚುನಾವಣೆಗೆ ನಿಂತು ಸಾವಿರ ಮತಗಳಲ್ಲಿ ಸೋತೆ.
ನನ್ನ ಸಮುದಾಯದ ಹಿತೈಷಿಯೊಬ್ಬರು ಹೆಸರಿನ ಮುಂದೆ “ಗೌಡ’ ಸೇರಿಸಿಕೊಳ್ಳುವಂತೆ ಸಲಹೆ ನೀಡಿದರು. ಇದು ವಾಸ್ತವ ಸಂಗತಿ. ಹೆಸರಿನ ಮುಂದೆ ಗೌಡ ಸೇರಿಸಿಕೊಂಡ ಬಳಿಕ ಈ ರಾಜ್ಯದ ಮುಖ್ಯಮಂತ್ರಿಯಾದೆ, ಈಗ ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ. ಗೌಡ ಸೇರಿಸಿಕೊಂಡಿದ್ದಕ್ಕೆ ನನ್ನಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಬದಲಿಗೆ ಹೆಮ್ಮೆ ಮತ್ತು ಅಭಿಮಾನಪಟ್ಟುಕೊಳ್ಳುತ್ತೇನೆ ಎಂದು ಇದೇ ವೇಳೆ ಸದಾನಂದಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.