ಸ್ಮಾರ್ಟ್ ಗುರುತಿನ ಚೀಟಿ ಶೀಘ್ರ
Team Udayavani, Jan 7, 2018, 12:18 PM IST
ಬೆಂಗಳೂರು: ರಾಜಧಾನಿಯಲ್ಲಿನ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಪೂರ್ಣಗೊಳಿಸಿರುವ ಬಿಬಿಎಂಪಿ, ಇದೀಗ ಅವರಿಗೆ ಸ್ಮಾರ್ಟ್ ಗುರುತಿನ ಚೀಟಿ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರದ ದೀನದಯಾಳ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರದ ಜೀವನೋಪಾಯಗಳ ಅಭಿಯಾನ (ಡಿಎವೈ – ನಲ್ಮ್) ಅಡಿಯಲ್ಲಿ ಪಾಲಿಕೆಯ ಅಧಿಕಾರಿಗಳು ಸರ್ವೆ ನಡೆಸಿ 25 ಸಾವಿರ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿದ್ದಾರೆ.
ಪಾಲಿಕೆಯಲ್ಲಿ ಸುಮಾರು ಒಂದೂವರೆ ಲಕ್ಷ ಬೀದಿಬದಿ ವ್ಯಾಪಾರಿಗಳಿದ್ದರೂ, ನಿಖರ ಮಾಹಿತಿ ರವಾನೆಯಾಗದ ಹಿನ್ನೆಲೆಯಲ್ಲಿ ಹೆಚ್ಚಿನ ವ್ಯಾಪಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ. ಸಮೀಕ್ಷೆಯನ್ನು ಪಾಲಿಕೆಯ ವಲಯ ಮಟ್ಟದ ಅಧಿಕಾರಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ಆರೋಗ್ಯ ಪರಿವೀಕ್ಷಕರು, ಪಾಲಿಕೆಯ ಟೇಲರಿಂಗ್ ಟೀಚರ್‌ಗಳು ಹಾಗೂ ಟೇಲರಿಂಗ್ ಮೇಲ್ವಿಚಾರಕರು ನಡೆಸಿದ್ದು, 25 ಸಾವಿರ ವ್ಯಾಪಾರಿಗಳಿರುವುದಾಗಿ ವರದಿ ನೀಡಿದ್ದಾರೆ.
ಸ್ಮಾರ್ಟ್ ಗುರುತಿನ ಚೀಟಿ ವಿತರಣೆ: ಪಾಲಿಕೆಯಿಂದ ಗುರುತಿಸಿರುವ ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ಮೈಕ್ರೋ ಚಿಪ್ ಒಳಗೊಂಡ ಸ್ಮಾರ್ಟ್ ಗುರುತಿನ ಚೀಟಿ ನೀಡಲು ಪಾಲಿಕೆ ನಿರ್ಧರಿಸಿದೆ. ಜ. 25ರೊಳಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುರುತಿನ ಚೀಟಿ ಅನುಕೂಲವೇನು?: ಗುರುತಿನ ಚೀಟಿ ನೀಡಿದ ನಂತರ ಬೀದಿಬದಿ ವ್ಯಾಪಾರಿಗಳಿಗೆ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಕೆಲ ಸ್ಥಳೀಯರ ಕಿರುಕುಳ ತಪ್ಪಲಿದೆ. ಗುರುತಿನ ಚೀಟಿ ಪಡೆದವರಿಗೆ ಪಾಲಿಕೆಯಿಂದ
ಕುಡಿಯುವ ನೀರು, ಶೌಚಾಲಯ, ಗೋದಾಮು, ತಕ್ಕಡಿ, ತಳ್ಳುವ ಗಾಡಿ, ಸೌರದೀಪ ವ್ಯವಸ್ಥೆಯೊಂದಿಗೆ 10 ಸಾವಿರ ರೂ. ಸಹಾಯಧನ ನೀಡಲಿದೆ.
ಬೀದಿಬದಿ ವ್ಯಾಪಾರಿಗಳಿಗೆ ಮೀಸಲಿರಿಸಲಾಗಿರುವ 10 ಕೋಟಿಯಲ್ಲಿ ವ್ಯಾಪಾರಿಗಳಿಗೆ ಕೌಶಲ್ಯ ತರಬೇತಿ, ಸಾಲಸೌಲಭ್ಯ, ಪರಿಶಿಷ್ಟರಿಗೆ ಸಾಮಾಜಿಕ ಭದ್ರತೆ ದೊರೆಯಲಿದೆ.
ಸಮೀಕ್ಷೆಗೆ ವಿರೋಧ
ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಹಾಗೂ ಅತಿ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿರುವ ಕೆ.ಆರ್.
ಮಾರುಕಟ್ಟೆ, ಗಾಂಧಿನಗರ ಹಾಗು ಮಲ್ಲೇಶ್ವರ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಗೆ ಜನಪ್ರತಿನಿಧಿಗಳು
ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಬೀದಿ ವ್ಯಾಪಾರಿಗಳಿಂದ ವಾರ್ಡ್ ಸೌಂದರ್ಯಕ್ಕೆ ಧಕ್ಕೆಯಾಗಲಿದೆ
ಎಂದು ಸಮೀಕ್ಷೆ ನಡೆಸಲು ಅವಕಾಶ ನೀಡಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.