“ಸಂಕ್ರಾಂತಿ ಹಬ್ಬ’ದ ಸಡಗರಕ್ಕೆ ಬೆಲೆ ಏರಿಕೆ ಬಿಸಿ
Team Udayavani, Jan 14, 2017, 12:05 PM IST
ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಹಬ್ಬದ ಸಾಮಗ್ರಿಗಳ ಬೆಲೆ ಗಗನ ಮುಖೀಯಾಗಿವೆ. ಜತೆಗೆ ನೋಟು ನಿಷೇಧದ ಹಿನ್ನೆಲೆಯಲ್ಲಿ ಎಟಿಎಂಗಳು ಖಾಲಿ ಖಾಲಿಯಾಗಿದ್ದು, ಹಬ್ಬದ ಸಡಗರಕ್ಕೆ ಸ್ವಲ್ಪ ಹಿನ್ನೆಡೆಯಾಗಿದೆ.
ಆದರೂ ನಗರದ ಕೆಲವೆಡೆ ಮಹಿಳೆಯರು ಹಬ್ಬಕ್ಕಾಗಿ ಸರ್ವ ಸಿದ್ಧತೆಯಲ್ಲಿ ತೊಡಗಿದ್ದು, ಎಳ್ಳು, ಬೆಲ್ಲ, ಕಬ್ಬು, ಅವರೆಕಾಯಿ, ಕಡಲೆಕಾಯಿ ಖರೀದಿಯಲ್ಲಿ ತೊಡಗಿದ್ದಾರೆ. ಹಬ್ಬದ ದಿನದಂದು ಹೂವುಗಳ ಬೆಲೆ ಕೈಗೆಟುಕುವುದಿಲ್ಲ ಎಂಬ ಮುಂದಾಲೋಚನೆಯಲ್ಲಿ ಕಳೆದ ಎರಡು ದಿನಗಳಿಂದಲೂ ಹೂವು ಸೇರಿದಂತೆ ಹಬ್ಬದ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದರು.
ಪ್ರತಿ ಹಬ್ಬದ ಸಂದರ್ಭದಲ್ಲೂ ಹಬ್ಬದ ವಸ್ತುಗಳ ಬೆಲೆ ಗಗನಕ್ಕೇರುವುದು ಸಾಮಾನ್ಯ ಸಂಗತಿ. ಆದರೂ ಸಂಪ್ರದಾಯ ಬಿಡುವಂತಿಲ್ಲ. ಅದರಲ್ಲೂ ವರ್ಷದ ಮೊದಲ ಹಬ್ಬ ಇದಾಗಿದ್ದು, ಗ್ರಾಮೀಣ ಸೊಗಡಿನಲ್ಲಿಯೇ ಹಬ್ಬ ಆಚರಿಸಲು ಅನೇಕರು ಮುಂದಾಗಿರುವುದು ವಿಶೇಷ. ಈ ನಡುವೆ ನೋಟು ನಿಷೇಧದಿಂದ ಖರ್ಚು ವೆಚ್ಚದ ವಿಚಾರದಲ್ಲಿ ಸ್ವಲ್ಪ ಹಿಂದು ಮುಂದು ನೋಡುವಂತ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಕಬ್ಬು ಖರೀದಿಗೆಂದು ಬಂದಿದ್ದ ಖಾಸಗಿ ಕಂಪನಿಯೊಂದರ ಇಂಜಿನಿಯರ್ ಗೋಪಾಲ ಕೃಷ್ಣನ್.
ಅವರೆ, ಕಡಲೆ ದುಬಾರಿ: ಸಂಕ್ರಾಂತಿ ಹಬ್ಬದ ದಿನ ಎಳ್ಳು, ಅವರೆಕಾಯಿ, ಕಡಲೆಕಾಯಿ ಹಾಗೂ ಗೆಣಸಿನ ಬಳಕೆ ಹೆಚ್ಚು. ಡಿಸೆಂಬರ್ ತಿಂಗಳಲ್ಲಿಯೇ ಅವರೆಕಾಯಿ ಮಾರುಕಟ್ಟೆ ಪ್ರವೇಶ ಮಾಡಿದ್ದರೂ, ಈ ಬಾರಿ ಅವರೆ ಸೊಗಡು ಸಾಕಷ್ಟಿಲ್ಲ. ಕಡಲೆಕಾಯಿ ಉತ್ಪಾದನೆ ಕೂಡ ಕುಸಿದಿದ್ದು, ಬೆಲೆ ದುಬಾರಿಯಾಗಿದೆ. ಇನ್ನು ಗೆಣಸು 30ರಿಂದ 40ರೂ.ಬೆಲೆ ಇದೆ. ಕೆಲವೆಡೆ ಒಂದು ಜತೆ ಕಬ್ಬಿಗೆ 100 ರೂ.ಇದ್ದರೆ, ಹಲವೆಡೆ ತಲಾ ಒಂದು ಕಬ್ಬಿಗೆ 80 ರೂ.ಇದೆ.
ಸಾಮಾನ್ಯವಾಗಿ ಹಬ್ಬದ ಕೆಲವು ದಿನಗಳ ಹಿಂದೆ ಕೆ.ಜಿ. ಅವರೆಕಾಯಿಗೆ 40ರಿಂದ 50 ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕಳೆದೆರಡು ದಿನಗಳಿಂದ ಕೆಜಿಗೆ 50ರಿಂದ 60 ರೂ.ನಂತೆ ಮಾರಲಾಗುತ್ತಿದೆ. ಕೆಲವೇ ದಿನಗಳ ಹಿಂದ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಪ್ರತಿ ಕೆಜಿಗೆ 20ರಿಂದ 40 ರೂ.ಗಳ ವರೆಗೆ ವಿವಿಧ ಗುಣಮಟ್ಟದ ಕಡಲೆಕಾಯಿಯನ್ನು ಮಾರಾಟ ಮಾಡಿದ್ದರು. ಇದೀಗ 70ರಿಂದ 80 ರೂ.ನಂತೆ ಕಡಲೆಕಾಯಿ ಮಾರಾಟ ಮಾಡಲಾಗುತ್ತಿದೆ. ಅಂಗಡಿಗಳಲ್ಲಿ ಮಿಶ್ರಣ ಮಾಡಿದ ಎಳ್ಳು, ಬೆಲ್ಲವನ್ನು ಪ್ರತಿ ಕೆಜಿಗೆ 250 ರಿಂದ 300 ರೂ.ಗಳ ವರೆಗೆ ಮಾರಾಟ ಮಾಡಲಾಗುತ್ತಿದೆ. ಸಕ್ಕರೆ ಅಚ್ಚಿಗೆ ಕೆಜಿಗೆ 150ರೂ. ಇದ್ದು, ಗ್ರಾಹಕರಿಂದ ಖರೀದಿ ಭರಾಟೆ ಜೋರಾಗಿದೆ.
ಹೂವು ದುಬಾರಿ: ಪ್ರತಿ ಹಬ್ಬದಂತೆ ಈ ಸಂಕ್ರಾಂತಿಯಲ್ಲೂ ಹೂವಿನ ಬೆಲೆ ದುಬಾರಿಯಾಗಿದೆ. ಮಾರುಕಟ್ಟೆಯಲ್ಲಿ ಕಾಕಡ ಕೆ.ಜಿಗೆ 400 ರೂ.ನಿಂದ 500 ರೂ.ಇದೆ. ಸೇವಂತಿಗೆ ಕೆ.ಜಿಗೆ 80ರಿಂದ 100 ರೂ., ಬಟನ್ಸ್ ಹೂವು ಮಾರಿಗೆ ಕೆಲವೆಡೆ 30 ರೂ.ಇದ್ದರೆ ಮತ್ತೆ ಕೆಲವೆಡೆ 60 ರೂ. ಇತ್ತು. ಮಲ್ಲಿಗೆ ಕೆ.ಜಿಗೆ 1300 ರೂ.ಇದ್ದರೆ, ಮಾರಿಗೆ 60 ರಿಂದ 70ರೂ.ನಂತೆ ಚಿಲ್ಲರೆ ಮಾರಾಟಗಾರರು ಮಾರುತ್ತಿದ್ದಾರೆ. ಕನಕಾಂಬರ 100 ಗ್ರಾಂಗೆ 100 ರೂ.ಇದ್ದು, ಕೆಜಿಗೆ 1000ದಿಂದ 1200 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಬಿಡಿ ಗುಲಾಬಿ ಕೆಜಿಗೆ 140ರಿಂದ 150 ರೂ.ನಂತೆ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ ಎಂದು ಕಳೆದ 35 ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿರುವ ಶಾಂತಮ್ಮ ಮಲ್ಲಣ್ಣ ಹೇಳಿದ್ದಾರೆ.
ಬಾಳೆ ಮಂಡಿಯಲ್ಲಿ ಚಂದ್ರಬಾಳೆ ಕೆಜಿಗೆ 37ರಿಂದ 40 ರೂ., ನೇಂದ್ರ ಬಾಳೆ 55ರಿಂದ 60 ರೂ. ಪಚ್ಚ ಬಾಳೆ 20ರಿಂದ 22 ರೂ. ಕೆಜಿಗೆ ಮಾರಾಟ ಮಾಡಲಾಗುತ್ತಿದೆ. ಏಲಕ್ಕಿ ಬಾಳೆ ಕೆಜಿಗೆ 35ರಿಂದ 40 ರೂ. ಇದೆ. ಕಳೆದ ಮೂರು ತಿಂಗಳ ಹಿಂದೆ ಏಲಕ್ಕಿ ಬಾಳೆ ಕೆಜಿಗೆ 80 ರೂ. ಇತ್ತು. ಚಿಲ್ಲರೆ ಮಾರಾಟಗಾರರು ಪ್ರತಿ ಕೆಜಿ ಬಾಳೆ ಹಣ್ಣಿನ ಮೇಲೆ 5ರಿಂದ 10 ರೂ.ಗಳಷ್ಟು ಏರಿಕೆ ಮಾಡಿ, ಮಾರಾಟ ಮಾಡುತ್ತಿದ್ದಾರೆ.
ಹಳ್ಳಿಮನೆಯಲ್ಲಿ ಸಂಕ್ರಾಂತಿ ಹಬ್ಬದೂಟ
ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬಕ್ಕೆ ನಗರದ ಮಲ್ಲೇಶ್ವರದ ಹಳ್ಳಿಮನೆ ಹಬ್ಬದೂಟ ಬಡಿಸಲು ಸಜ್ಜಾಗಿದೆ. ಸಂಕ್ರಾಂತಿಯ ಸುಗ್ಗಿಯ ವೈವಿಧ್ಯಮಯ ಭೋಜನದಲ್ಲಿ ಈ ಬಾರಿ ಗ್ರಾಹಕರಿಗೆ ಕೆಲವು ಸಿರಿಧಾನ್ಯಗಳ ಮತ್ತು ಋತುಗನುಗುಣವಾದ ಆಹಾರ ಪದಾರ್ಥಗಳ ಸಂಗಮದೊಂದಿಗೆ ಹಬ್ಬದೂಟ ಉಣಬಡಿಸಲಾಗುತ್ತಿದೆ ಎಂದು ಹಳ್ಳಿಮನೆಯ ವ್ಯವಸ್ಥಾಪಕ ನಿರ್ದೇಶಕ ನೀಲಾವರ ಸಂಜೀವರಾವ್ ತಿಳಿಸಿದ್ದಾರೆ.
ಇಂದಿರ ಪರಿಸರ, ಪರಿಸ್ಥಿತಿ ಮತ್ತು ಒತ್ತಡದ ಜೀವನದ ಶೈಲಿಯಿಂದ ಜನತೆ ತಮ್ಮ ರಜೆಯನ್ನು ಹಬ್ಬಗಳಲ್ಲಿ ಹಾಯಾಗಿ ಕಳೆಯಲು ಬಯಸುತ್ತಾರೆ. ಹೀಗಾಗಿಯೇ ಹಳ್ಳಿಮನೆಯಲ್ಲಿ ಅವರಿಗಾಗಿ ಹಬ್ಬಗಳ ವೈಶಿಷ್ಟ ಪರಿಚಯಿಸಲು ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ. ಹಬ್ಬಗಳ ವೈಶಿಷ್ಟ ತಿಳಿದುಕೊಳ್ಳಲಿ ಎಂಬ ಉದ್ದೇಶವು ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರತಿ ಹಬ್ಬಗಳನ್ನು ವಿಶಿಷ್ಟವಾಗಿ ಹಳ್ಳಿಮನೆ ಆಚರಿಸಿಕೊಂಡು ಬರುತ್ತಿದೆ. ಈ ಬಾರಿಯ ಹಬ್ಬದಲ್ಲಿ ಅತ್ಯಂತ ಸೊಗಸಾದ ತಳಿರು ತೋರಣ, ರಂಗೋಲಿ, ಹೂವುಗಳಿಂದ ಅಲಂಕೃತಗೊಂಡ ಹಳ್ಳಿಮನೆ ಕಣ್ಣಿಗೆ ಹಬ್ಬವನ್ನು ನೀಡುವುದಲ್ಲದೇ, ಸಾಂಪ್ರದಾಯಿಕ ಗೋಪೂಜೆ ನಡೆಸಿ ಬರುವ ಎಲ್ಲಾ ಗ್ರಾಹಕರಿಗೆ ಎಳ್ಳು-ಬೆಲ್ಲವನ್ನು ನೀಡಿ ಬರಮಾಡಿಕೊಳ್ಳಲಾಗುವುದು ಎಂದಿದ್ದಾರೆ.
ಸುಮಾರು 25 ರಿಂದ 30 ಬಗೆಯ ಆಹಾರದಲ್ಲಿ ಆರೋಗ್ಯಕ್ಕೆ ಪೂರಕವಾದ ನವಣೆ ಪಾಯಸ, ಸಾಮೆ ಪೊಂಗಲ್, ಅವರೆಕಾಳಿನ ಆಹಾರ ವೈವಿಧ್ಯ, ಉಸ್ಲಿ, ಅಮಟೆಕಾಯಿ ಗೊಜ್ಜು, ತೊಗರಿಬೇಳೆ ಹೋಳಿಗೆ, ರಸಾಯನಗಳು ಹೀಗೆ ರಸಮಯ ಊಟವನ್ನು ಸವಿಯಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ. ಜ.14 ಮತ್ತು 15ರಂದು ಮಧ್ಯಾಹ್ನ 15ರಿಂದ 3 ಗಂಟೆ ಮತ್ತು ಸಂಜೆ 7.30ರಿಂದ ರಾತ್ರಿ 9.30ರವರೆಗೆ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಂಕ್ರಾಂತಿ ಗೋ ಉತ್ಸವ
ಬೆಂಗಳೂರು: ನವರಾತ್ರಿ ಉತ್ಸವ ಸಮಿತಿ ವತಿಯಿಂದ ನಂದಿನಿ ಲೇಔಟ್‌ನಲ್ಲಿ ಜ.14 ರಂದು ಸಂಜೆ 5ಕ್ಕೆ ಸಂಕ್ರಾಂತಿ ಗೋ-ಉತ್ಸವ ಅಂಗವಾಗಿ ಹಳ್ಳಿ ಸೊಗಡಿನ ಆಟಗಳನ್ನು ಆಯೋಜಿಸಲಾಗಿದೆ. 4 ವರ್ಷಗಳಿಂದ ಹಳ್ಳಿ ಸೊಗಡಿನ ಸಂಕ್ರಾಂತಿ ಉತ್ಸವವನ್ನು ನಂದಿನಿ ಲೇಔಟ್‌ನಲ್ಲಿ ಆಚರಿಸಲಾಗುತ್ತಿದೆ. ಈ ಬಾರಿ ಜ.14ರಂದು ಹಳ್ಳಿ ಸೊಗಡಿನ ಆಟಗಳು ಮತ್ತು ಸ್ಪರ್ಧೆಗಳು ನಡೆಯಲಿವೆ. ಜ.15 ರಂದು ಸಂಜೆ 5ಕ್ಕೆ ಗೋವುಗಳನ್ನು ಕಿಚ್ಚಾಯಿಸುವ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಶಾಸಕ ಕೆ. ಗೋಪಾಲಯ್ಯ ಭಾಗವಹಿಸಲಿ ದ್ದಾರೆ ಬಿಬಿಎಂಪಿ ಸದಸ್ಯ ಕೆ.ವಿ. ರಾಜೇಂದ್ರಕುಮಾರ್ ಎಂದರು.
ಯಾವುದೇ ಹಬ್ಬ ಬಂದರೂ ಪ್ರತಿ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗುತ್ತದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಅಷ್ಟೇನು ಸಗಡರ ಕಾಣುತ್ತಿಲ್ಲ. ವ್ಯಾಪಾರವು ಕೂಡ ಇಳಿಮುಖವಾಗಿದೆ. ಬಹುಶಃ ನೋಟ್ ಬಂದ್ ಮಾಡಿದ್ದರ ಪ್ರಭಾವ ಇರಬಹುದು. ಸಾಕಷ್ಟು ಜನರು ಚಿಲ್ಲರೆ ಹಣ ತಂದು ವ್ಯಾಪಾರ ಮಾಡುತ್ತಿದ್ದಾರೆ. ಕೆಲವರು 2000 ರೂ.ನೋಟು ತರುತ್ತಿದ್ದಾರಷ್ಟೇ.
-ಕೆ.ಎಚ್.ಮಂಜಣ್ಣ, ಹೂವಿನ ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.