ಅನಂತಕುಮಾರ್‌ಗೆ ಭಾವಪೂರ್ಣ ನುಡಿನಮನ
Team Udayavani, Nov 25, 2018, 12:34 PM IST
ಬೆಂಗಳೂರು: ರಾಷ್ಟ್ರ, ರಾಜ್ಯದ ಅಭಿವೃದ್ಧಿ ಬಗ್ಗೆ ಅಪಾರ ಕನಸು ಕಂಡಿದ್ದ ಕ್ರಿಯಾಶೀಲ ಮನಸ್ಸು. ರಾಷ್ಟ್ರ ಹಾಗೂ ರಾಜ್ಯದ ನಡುವೆ ಸಂಪರ್ಕ ಕೊಂಡಿಯಾಗಿದ್ದುಕೊಂಡು ನಾಡಿನ ಅಭಿವೃದ್ಧಿಗೆ ನೆರವಾದ ನೇತಾರ. ದಕ್ಷ ಆಡಳಿತಗಾರ ಮಾತ್ರವಲ್ಲದೆ ಸಂಘಟನಾ ಚತುರ. ಸ್ನೇಹಶೀಲ ವ್ಯಕ್ತಿತ್ವದೊಂದಿಗೆ ಪಕ್ಷಾತೀತವಾಗಿ ವರ್ತಿಸುತ್ತಿದ್ದ ಅಜಾತಶತ್ರು. ಜನಮನ ಗೆದ್ದ ಸಂಸದ. ಸಮಾಜ, ಜನರನ್ನು ಪ್ರೀತಿಸುತ್ತಿದ್ದ ನಿಜವಾದ ಸ್ವಯಂ ಸೇವಕ…
ಇತ್ತೀಚೆಗೆ ವಿಧಿವಶರಾದ ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್ ಅವರ ಬಗ್ಗೆ ಕೇಂದ್ರದ ಸಂಪುಟ ಸಹೋದ್ಯೋಗಿಗಳು, ಗಣ್ಯರು, ಬಿಜೆಪಿ ನಾಯಕರು, ಸಾಹಿತಿಗಳು, ಆರ್‌ಎಸ್‌ಎಸ್ ಮುಖಂಡರು, ಕಾರ್ಯಕರ್ತರು ಸಲ್ಲಿಸಿದ ನುಡಿನಮನದ ಕೆಲ ಸಾಲುಗಳಿವು.
ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿರುವ ಉತ್ತರಾಧಿಮಠದ ಆವರಣದಲ್ಲಿ ಶನಿವಾರ ಆಯೋಜನೆಯಾಗಿದ್ದ ಅನಂತ ಕುಮಾರ್ ವೈಕುಂಠ ಸಮಾರಾಧನೆ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆಪ್ತರು, ಹಿತೈಷಿಗಳು, ಸಾಹಿತಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ರಾಜ್ಯದಲ್ಲಿ ಪಕ್ಷ ಸಂಘಟನೆ, ಬಿಜೆಪಿ ಬಲವಾಗಿ ನೆಲೆಯೂರುವಂತೆ ಮಾಡಲು ಪಟ್ಟ ಪರಿಶ್ರಮ, ತಮಗೆ ವಹಿಸಿದ ಖಾತೆಗಳ ಮೂಲಕ ಸಾಮಾನ್ಯ ಜನರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸುವ ಮಹತ್ತರ ಕಾರ್ಯ ನಿರ್ವಹಿಸಿದ್ದನ್ನು ಸ್ಮರಿಸಲಾಯಿತು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, 13 ವರ್ಷದ ಹಿಂದೆ ಸಂಸದನಾಗಿ ದೆಹಲಿಯಲ್ಲಿದ್ದಾಗ ಒಂದು ದಿನ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ಸುದ್ದಿ ತಿಳಿದ ಅನಂತ ಕುಮಾರ್ ಅವರು ತಕ್ಷಣವೇ “ಏಮ್ಸ್’ ಸಂಸ್ಥೆಗೆ ತೆರಳಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ಇಡೀ ರಾತ್ರಿ ನನ್ನ ಬಳಿ ಇದ್ದುಕೊಂಡು ಚಿಕಿತ್ಸೆ ಕೊಡಿಸಿದ್ದರು.
ಆಗ ವೈದ್ಯರು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದು ಹೇಳಿದ್ದರು. ಆದರೆ, ನನಗಿಂತ ಮೊದಲೇ ಯಾರಿಗೂ ಹೇಳದೆ ಅವರು ಹೊರಟು ಹೋದರು. ನನ್ನ ಪ್ರಾಣ ಉಳಿಸಿದ ದೇವರು ಅನಂತ ಕುಮಾರ್. ಅವರ ಕುರ್ಚಿಯಲ್ಲಿ ಕುಳಿತು ಅವರು ನಿಭಾಯಿಸುತ್ತಿದ್ದ ಖಾತೆಗಳನ್ನು ನಿರ್ವಹಿಸುವಾಗ ಭಾವನೆಗಳು ಉಕ್ಕಿ ಬರುತ್ತವೆ ಎಂದು ಭಾವುಕರಾದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಇಂದು ಹೆಮ್ಮರವಾಗಿ ಬೆಳೆಯಲು ಅನಂತ ಕುಮಾರ್ ಅವರ ಕೊಡುಗೆ ಅಪಾರವಾಗಿದೆ. ದೆಹಲಿಗೆ ತೆರಳಿದ ಯಾರೊಬ್ಬರ ಕುಲಗೋತ್ರ, ಜಾತಿ, ಧರ್ಮ ನೋಡದೆ ತಕ್ಷಣ ಅವರಿಗೆ ಸ್ಪಂದಿಸುತ್ತಿದ್ದರು. ಸಂಬಂಧಪಟ್ಟ ಸಚಿವರ ಬಳಿಗೆ ಕರೆದೊಯ್ದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದರು. ಅವರಿಲ್ಲದ ಸ್ಥಿತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
35 ವರ್ಷಗಳ ಸುದೀರ್ಘ ಕಾಲ ಆತ್ಮೀಯತೆಯಿಂದ ಹೆಗಲಿಗೆ ಹೆಗಲಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆವು. ಇಬ್ಬರು ಶಾಸಕರಿದ್ದ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಅವರ ಪರಿಶ್ರಮ ದೊಡ್ಡದು. ವಕೀಲಿಕೆಗೆಂದು ಬೆಂಗಳೂರಿಗೆ ಬಂದವರನ್ನು ಪಕ್ಷ ಸಂಘಟನೆಗೆ ಕರೆತಂದೆ. ಅಜಾತಶತ್ರು ಅನಂತ ಕುಮಾರ್ ಅವರನ್ನು ಕಳೆದುಕೊಂಡು ಪಕ್ಷ ಹಾಗೂ ನಾಡು ಬಡವಾಗಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಶಿವ ಪ್ರತಾಪ್ ಶುಕ್ಲಾ, ಉತ್ತಮ ಸಂಸದೀಯ ಪಟುವಾಗಿದ್ದ ಅನಂತ ಕುಮಾರ್ ಅವರು ಪಕ್ಷ ಸಂಘಟನೆಯಲ್ಲೂ ಸಕ್ರಿಯರಾಗಿದ್ದರು. ಸಂಸತ್ ಕಲಾಪ ಸುಗಮವಾಗಿ ನಡೆಯಲು ಅವರ ಕೈಗೊಂಡ ಕ್ರಮಗಳು ಅನುಕರಣೀಯ ಎಂದು ಸ್ಮರಿಸಿದರು.
ಕೇಂದ್ರ ಸಚಿವ ಗಿರಿರಾಜ್ ಸಿಂಗ್, ರಸ ಗೊಬ್ಬರ ಪೂರೈಕೆಯಲ್ಲಿ ತಂದ ಸುಧಾರಣೆಗಳಿಂದಾಗಿ ಉತ್ತರ ಭಾರತದ ರೈತರು ಅನಂತ ಕುಮಾರ್ ಅವರನ್ನು ಸದಾ ಸ್ಮರಿಸುತ್ತಾರೆ. ಅವರು ಕೇವಲ ಸದನ ಹಾಗೂ ಸರ್ಕಾರ ಮಾತ್ರವಲ್ಲದೆ, ಜನಮಾನಸದ ನಾಯಕರಾಗಿದ್ದರು ಎಂದು ಬಣ್ಣಿಸಿದರು.
ಕೇಂದ್ರ ಸಚಿವರ ಜೆ.ಪಿ.ನಡ್ಡಾ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ರಾಮಲಿಂಗಾರೆಡ್ಡಿ, ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಪ್ರೊ.ಕೃಷ್ಣೇಗೌಡ, ಅನಂತ ಕುಮಾರ್ ಅವರ ಸೋದರ ಸಂಬಂ ಗಾಯತ್ರಿ ವಾಸುದೇವ್, ಪಿ.ವಿ.ಕೃಷ್ಣ ಭಟ್ ಸೇರಿದಂತೆ ಹಲವರು ನುಡಿನಮನ ಸಲ್ಲಿಸಿದರು.
ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಎಸ್.ಎ.ರಾಮದಾಸ್, ಸಿ.ಟಿ.ರವಿ, ಉದಯ್ ಗರುಡಾಚಾರ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಇತರೆ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಧಾನಿ ಮೋದಿ ಶ್ರದ್ಧಾಂಜಲಿ ಪತ್ರ: ಅನಂತ ಕುಮಾರ್ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ರಾಷ್ಟ್ರಪತಿ ಹಾಗೂ ಪ್ರಧಾನಿಯವರು ಸಂದೇಶ ಪತ್ರ ರವಾನಿಸಿದ್ದಾರೆ. ಅನಂತ ಕುಮಾರ್ ಅವರ ನಿಧನ ಸುದ್ದಿ ದಿಗ್ಭ್ರಮೆ ಉಂಟು ಮಾಡಿದೆ.
ಸಾರ್ವಜನಿಕರ ಕಲ್ಯಾಣಕ್ಕಾಗಿ ಅವರು ತಮ್ಮ ಜೀವನವನ್ನು ಮುಡು ಪಾಗಿಟ್ಟಿದ್ದರು. ದೇಶದ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಸಂದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಬಿಜೆಪಿ ಬೆಳೆಯಲು ಅನಂತ ಕುಮಾರ್ ಪ್ರಮುಖ ಶಕ್ತಿಯಾಗಿದ್ದರು. ಬಿಜೆಪಿ ಒಬ್ಬ ಚತುರ ಹಾಗೂ ಅರ್ಪಣಾ ಮನೋಭಾವದ ಕಾರ್ಯಕರ್ತನನ್ನು ಕಳೆದುಕೊಂಡಿದೆ. ಅನಂತ ಕುಮಾರ್ ಅವರು ಅತ್ಯಂತ ದಕ್ಷ ಆಡಳಿತಗಾರರಾಗಿದ್ದರು. ಸಂಕೀರ್ಣ ಪರಿಸ್ಥಿತಿಗಳನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಹಿಸುತ್ತಿದ್ದ ಅವರನ್ನು ಭಾರತ ಮಾತೆ ಕಳೆದುಕೊಂಡಿದ್ದಾಳೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
50 ವರ್ಷಗಳ ರಾಜಕೀಯದಲ್ಲಿ ಅನಂತಕುಮಾರ್ ಅವರಂತಹ ಧೀಮಂತ ವ್ಯಕ್ತಿತ್ವದವರನ್ನು ಕಂಡಿಲ್ಲ. ಅವರ ರಾಜಕೀಯ ಚುನಾವಣೆಗಷ್ಟೇ ಸೀಮಿತವಾಗಿತ್ತು. ಎನ್‌ಡಿಎ ಸರ್ಕಾರದಲ್ಲಿ ಅವರು ನಮ್ಮ ರಾಯಭಾರಿಯಾಗಿದ್ದರು. ಸದಾ ಹಸನ್ಮುಖೀ, ಸಹಾಯ ಮನೋಭಾವದ ನಾಯಕನ ಅಗಲಿಯಿಂದ ದೇಶಕ್ಕೆ ನಷ್ಟವಾಗಿದೆ.
-ಆರ್.ವಿ.ದೇಶಪಾಂಡೆ, ಕಂದಾಯ ಸಚಿವ
1987-88ರಲ್ಲಿ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ, ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಂತ ಕುಮಾರ್ ಜೋಡಿ ರಾಜ್ಯಾದ್ಯಂತ ನಡೆಸಿದ ಸಂಘಟನೆ ಫಲವಾಗಿ ಇಂದು ಬಿಜೆಪಿ ಭದ್ರವಾಗಿ ನೆಲೆಯೂರಿದೆ. ನನ್ನನ್ನು ಚುನಾವಣಾ ರಾಜಕೀಯಕ್ಕೆ ತಂದವರೇ ಅನಂತ ಕುಮಾರ್. ಕುಟುಂಬ ಸದಸ್ಯರಂತಿದ್ದವರು ನಾಡು, ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
-ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಹುಬ್ಬಳ್ಳಿಯಲ್ಲಿ ನಾನು ಹಾಗೂ ಅನಂತ ಕುಮಾರ್ ಅವರು ಒಟ್ಟಿಗೆ ಆಡಿ ಬೆಳೆದವರು. ದೆಹಲಿಯಲ್ಲಿ ಅವರ ಕಚೇರಿ ನಮ್ಮಂತವರಿಗೆ ಅಡ್ಡದಂತ್ತಿತ್ತು. ಅವರು ಅಗಾಧ ಚಿಂತನೆ, ಓದು, ಘಟನಾವಳಿಗಳನ್ನು ರಸವತ್ತಾಗಿ ಹೇಳಿ ಸುತ್ತಮುತ್ತ ಇದ್ದವರ ಜ್ಞಾನ ವೃದ್ಧಿಸುತ್ತಿದ್ದರು.
-ಪ್ರಹ್ಲಾದ್ ಜೋಷಿ, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.