ಸಚಿವರ ನಡುವೆ ಮಾತಿನ ಚಕಮಕಿ
Team Udayavani, Mar 20, 2018, 6:30 AM IST
ಬೆಂಗಳೂರು: ವೀರಶೈವ ಲಿಂಗಾಯತಕ್ಕೆ ಅಲ್ಪ ಸಂಖ್ಯಾತರ ಮಾನ್ಯತೆ ನೀಡುವ ಕುರಿತು ನಡೆದ ಸಂಪುಟ ಸಭೆಯಲ್ಲಿ ವೀರಶೈವ ಪರವಾಗಿರುವ ತೋಟಗಾರಿಕಾ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಲಿಂಗಾಯತರ ಪರವಾಗಿರುವ ಗಣಿ ಸಚಿವ ವಿನಯ್ ಕುಲಕರ್ಣಿ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.
ಸಭೆಯ ಆರಂಭದಲ್ಲಿ ಕೇವಲ ಲಿಂಗಾಯತ ಪದವನ್ನು ಮಾತ್ರ ಸೇರಿಸಿ ಅಲ್ಪಸಂಖ್ಯಾತರ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಕುರಿತು ತೀರ್ಮಾನಕ್ಕೆ ಬರಲು ಸರ್ಕಾರ ಮುಂದಾಗಿತ್ತು ಎಂದು ತಿಳಿದು ಬಂದಿದೆ.
ಸರ್ಕಾರದ ಈ ತೀರ್ಮಾನದಿಂದ ವೀರಶೈವರು ಹೋರಾಟ ನಡೆಸಿದರೆ, ಸರ್ಕಾರ ಜವಾಬ್ದಾರಿಯಾಗ ಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ್ ಎಚ್ಚರಿಸಿದರು ಎನ್ನಲಾಗಿದೆ.
ಅಲ್ಲದೇ ತಮ್ಮ ಬಗ್ಗೆ ಏಕ ವಚನದಲ್ಲಿ ಮಾತನಾಡಿದ್ದ ಸಚಿವ ವಿನಯ್ ಕುಲಕರ್ಣಿ ವಿರುದಟಛಿ ಏಕ ವಚನದಲ್ಲಿಯೇ
ಮಾತನಾಡಿರುವ ಅವರು, ನನ್ನ ರಾಜೀನಾಮೆ ಕೇಳಲು ನೀನ್ಯಾರು, ನಿನ್ನ ಕೆಲಸ ನೀನು ನೋಡಿಕೊ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ವಿನಯ್ ಕುಲಕರ್ಣಿ ಹಾಗೂ ಮಲ್ಲಿಕಾರ್ಜುನ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ ವಿನಯ್ ಕುಲಕರ್ಣಿಗೆ ವೈಯಕ್ತಿಕವಾಗಿ ಹೇಳಿಕೆ ನೀಡಬಾರದು ಎಂದು ಸಲಹೆ ನೀಡಿದರು. ಆಗ ಸಚಿವ ವಿನಯ್ ಸಭೆಯಿಂದ ಹೊರ ನಡೆದರು ಎನ್ನಲಾಗಿದೆ.
ಕೇಂದ್ರ ಸರ್ಕಾರ ವೀರಶೈವ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ತಿರಸ್ಕರಿಸಿರುವ ಬಗ್ಗೆ ದಾಖಲೆ ಕೊಡಿ ಎಂದು ಸಂಪುಟದಲ್ಲಿಯೇ ಮಲ್ಲಿಕಾರ್ಜುನ್ ಕೇಳಿದ್ದಾರೆ.
ಅದಕ್ಕೆ ಲಿಂಗಾಯತ ಪರ ಸಚಿವರು ದಾಖಲೆ ನೀಡಿಲ್ಲ ಎನ್ನಲಾಗಿದ್ದು, ಲಿಂಗಾಯತದ ಜೊತೆಗೆ ವೀರಶೈವ ಸೇರಿಸುವಂತೆ ಮಲ್ಲಿಕಾರ್ಜುನ್ ಪಟ್ಟು ಹಿಡಿದಿದ್ದರಿಂದ ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿಗಳು ವೀರಶೈವ ಪದವನ್ನೂ ಸೇರಿಸುವ ತೀರ್ಮಾನ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಇದರ ಜತೆ ಯಲ್ಲೇ ಈಶ್ವರ್ ಖಂಡ್ರೆ ಅವರು, ನೀವು ಲಿಂಗಾಯತರ ಪರವಾಗಿ ಏಕಮುಖವಾಗಿ ತೀರ್ಮಾನ ಕೈಗೊಂಡರೆ ವೀರಶೈವರ ವಿರೋಧ ಮತ್ತು ಪ್ರತಿಭಟನೆ ಎದುರಿ ಸಬೇಕಾಗುತ್ತದೆ.ರಾಜಕೀಯವಾಗಿ ಕನಿಷ್ಠ 20ಸ್ಥಾನಗಳನ್ನು ಕಳೆದುಕೊಳ್ಳುತ್ತೀರಾ ಎಂಬ ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ.
ಈಡಿಗರಿಗೂ ಧರ್ಮ ಕೊಡ್ತೀರಾ ?: ಲಿಂಗಾಯತರಿಗೆ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಲು ಹೊರಟಿದ್ದೀರಾ, ನಾಳೆ ಈಡಿಗರು, ಕಾವಾಡಿಗರು ಪ್ರತ್ಯೇಕ ಧರ್ಮ ನೀಡಿ ಅಂತ ಕೇಳಿದರೆ ಅವರಿಗೂ ಧರ್ಮದ ಮಾನ್ಯತೆ ನೀಡುತ್ತೀರಾ ಎಂದು ಹಿರಿಯ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದರು. ಅವರ ಪ್ರಶ್ನೆಗೆ ಸಚಿವ ಎಂ.ಬಿ.ಪಾಟೀಲ್ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಸಿಗಬೇಕಾದರೆ, ಇರಬೇಕಾದ ಐತಿಹಾಸಿಕ ದಾಖಲೆಗಳ ಬಗ್ಗೆ ವಿವರಣೆ ನೀಡಿದ್ದಾರೆಂದು ತಿಳಿದು ಬಂದಿದೆ.
ಅಲ್ಪ ಸಂಖ್ಯಾತ ಸಚಿವರ ಆತಂಕ: ಲಿಂಗಾಯತರನ್ನು ಅಲ್ಪ ಸಂಖ್ಯಾತರೆಂದು ಪರಿಗಣಿಸಿದರೆ, ಈಗ ಅಲ್ಪ ಸಂಖ್ಯಾತರಿಗಿರುವ ಮೀಸಲಾತಿಗೆ ಧಕ್ಕೆಯಾಗುವ ಬಗ್ಗೆ ಅಲ್ಪ ಸಂಖ್ಯಾತ ಸಚಿವರಾದ ರೋಷನ್ ಬೇಗ್ ಹಾಗೂ ತನ್ವೀರ್ ಸೇಠ್ ಆತಂಕ ವ್ಯಕ್ತಪಡಿಸಿದರು.
ವೀರಶೈವ ಮುಖಂಡನ ಮೇಲೆ ಹಲ್ಲೆ
ಕಲಬುರಗಿ: ಪ್ರತ್ಯೇಕ ಧರ್ಮ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಣಯ ಕೈಗೊಂಡಿದ್ದಕ್ಕೆ
ಲಿಂಗಾಯತರು ವಿಜಯೋತ್ಸವ ಆಚರಿಸಿದರೆ, ಇದನ್ನು ವಿರೋಧಿಸಿ ವೀರಶೈವ ಮುಖಂಡರು ಪ್ರತಿಭಟಿಸಿದ ಘಟನೆಗಳು
ನಗರದಲ್ಲಿ ಏಕಕಾಲಕ್ಕೆ ನಡೆದದ್ದಲ್ಲದೆ, ಒಬ್ಬರಿಗೊಬ್ಬರು ಹೊಡೆದಾಡಿದ ಪ್ರಸಂಗ ಸಹ ನಡೆಯಿತು.
ಜಾಗತಿಕ ಲಿಂಗಾಯತ್ ಮಹಾಸಭಾದವರು ನಗರದ ಜಗತ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ತದನಂತರ ಬೈಕ್ ಮೂಲಕ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮನ್ವಯ ಸಮಿತಿ ಮುಖಂಡ ಎಂ.ಎಸ್. ಪಾಟೀಲ ನೇತೃತ್ವದಲ್ಲಿ ಸರ್ಕಾರದ ನಿರ್ಣಯ ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಪ್ರತಿಭಟನಾಕಾರರು ಸಚಿವರಾದ ಎಂ.ಬಿ. ಪಾಟೀಲ ಹಾಗೂ ಇತರರ ಭಾವಚಿತ್ರಕ್ಕೆ ಅವಮಾನ ಮಾಡುತ್ತಿದ್ದರು. ಇದು ಲಿಂಗಾಯತರನ್ನು ಕೆರಳಿಸಿತು. ತಕ್ಷಣ ಲಿಂಗಾಯತ ಮುಖಂಡರು ಹಾಗೂ ಕಾರ್ಯಕರ್ತರು ಎಂ.ಎಸ್. ಪಾಟೀಲ ಅವರನ್ನು ಥಳಿಸಲಾರಂಭಿಸಿದರು. ತಕ್ಷಣ ಪೊಲೀಸರು ಹೊಡೆದಾಟ ತಪ್ಪಿಸಿದರು. ಹೊಡೆದಾಟಕ್ಕೆ ಸಂಬಂಧಿಸಿದಂತೆ ಲಿಂಗಾಯತ ಹಾಗೂ ವೀರಶೈವ ಸಮಾಜದ ತಲಾ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.