ಸ್ಥಾಯಿ ಸಮಿತಿ ಕೈತಪ್ಪುವ ಭೀತಿ
Team Udayavani, Dec 29, 2018, 6:26 AM IST
ಬೆಂಗಳೂರು: ಪಾಲಿಕೆಯ ಜೆಡಿಎಸ್ ಬಂಡಾಯ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿರುವ ಪರಿಣಾಮ, ಅಧ್ಯಕ್ಷ ಚುನಾವಣೆ ವೇಳೆ ಎರಡರಿಂದ ಮೂರು ಸ್ಥಾಯಿ ಸಮಿತಿಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಕೈಬಿಟ್ಟು ಹೋಗಲಿವೆ.
ಉಪಮೇಯರ್ ಚುನಾವಣೆಯಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎಂಬ ಕಾರಣದಿಂದ ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್, ಮೇಯರ್ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು. ಬಳಿಕ ಪಕ್ಷದ ವರಿಷ್ಠರ ಬಳಿ ಕ್ಷಮೆಯಾಚಿಸಿದ ಸದಸ್ಯರಿಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನವನ್ನು ನೀಡಲಾಗಿತ್ತು.
ಆದರೆ, ಡಿ.5ರಂದು ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ವೇಳೆ ಮತ್ತೆ ಬಂಡೆದ್ದ ಈ ಇಬ್ಬರೂ ಸದಸ್ಯರು, ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಂದಾಗುವ ಮೂಲಕ ಮೈತ್ರಿ ಆಡಳಿತಕ್ಕೆ ಶಾಕ್ ನೀಡಿದ್ದರು. ಬಿಜೆಪಿ ಸದಸ್ಯರು ಅವರಿಗೆ ಬೆಂಬಲ ನೀಡಿದರಿಂದ ಎರಡು ಸಮಿತಿಗಳು ಕೈತಪ್ಪುವ ಭಯದಿಂದ, ಪ್ರತಿಭಟನೆ ಕಾರಣ ನೀಡಿ ಮೇಯರ್ ಗಂಗಾಂಬಿಕೆ ಅವರು ಚುನಾವಣೆಯನ್ನು ಮುಂದೂಡಿದ್ದರು.
ಇದಾಗಿ 20 ದಿನಗಳು ಕಳೆದರೂ ಜೆಡಿಎಸ್ ಮುಖಂಡರು ಬಂಡಾಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇನ್ನು ಚುನಾವಣೆ ನಡೆಸಿದರೆ ಸಾಮಾಜಿಕ ನ್ಯಾಯ ಸಮಿತಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿಗಳು ಕಾಂಗ್ರೆಸ್-ಜೆಡಿಎಸ್ ಕೈತಪ್ಪಲಿವೆ. ನಗರ ಯೋಜನೆ ಸಮಿತಿಯಲ್ಲೂ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೈರಸಂದ್ರ ವಾರ್ಡ್ ಸದಸ್ಯ ಎಂ.ನಾಗರಾಜು ಕಾಂಗ್ರೆಸ್‌ಗೆ ಬೆಂಬಲಿಸದಿದ್ದರೆ ಆ ಸಮಿತಿಯನ್ನೂ ಕಳೆದುಕೊಳ್ಳಬೆಕಾಗುತ್ತದೆ.
ಅಧ್ಯಕ್ಷರಿಲ್ಲದೆ ಆಡಳಿತ ಯಂತ್ರ ಸ್ಥಗಿತ: ಕೆಎಂಸಿ ಕಾಯ್ದೆಯಂತೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯೊಂದಿಗೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಸಬೇಕು. ಆದರೆ, ಮೇಯರ್ ಆಯ್ಕೆಯಾದ ಒಂದೂವರೆ ತಿಂಗಳ ಬಳಿಕ ಸದಸ್ಯರ ಆಯ್ಕೆ ಚುನಾವಣೆ ನಡೆದಿದ್ದು, ಮೂರು ತಿಂಗಳಾದರೂ ಅಧ್ಯಕ್ಷರ ಆಯ್ಕೆಯಾಗದ ಹಿನ್ನೆಲೆಯಲ್ಲಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಎಲ್ಲ ನಿರ್ಧಾರಗಳನ್ನು ಅಧಿಕಾರಿಗಳು ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷ ಆರೋಪಿಸಿದೆ.
ಬಜೆಟ್ ಮೇಲೆ ಪರಿಣಾಮ: ಜೆಡಿಎಸ್ ಬಂಡಾಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸದಿದ್ದರೆ 2019-2020ನೇ ಸಾಲಿನ ಬಿಬಿಎಂಪಿ ಬಜೆಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಾರಣ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಜೆಟ್ ಮಂಡನೆಯಾಗಲಿವೆ. ಅದನ್ನು ಆಧರಿಸಿ ಪಾಲಿಕೆ ಬಜೆಟ್ ಮಂಡಿಸಬೇಕು. ಆ ಹಿನ್ನೆಲೆಯಲ್ಲಿ ಈಗಾಗಲೇ ಬಜೆಟ್ ಸಿದ್ಧತೆ ಆರಂಭವಾಗಬೇಕಿತ್ತು. ಆದರೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಆಯ್ಕೆಯಾಗದ ಹಿನ್ನೆಲೆಯಲ್ಲಿ ಯಾವುದೇ ಸಿದ್ಧತೆಗಳು ಆರಂಭವಾಗಿಲ್ಲ.
ಸಮಿತಿ ಕಳೆದುಕೊಳ್ಳಲು ಕಾರಣವೇನು?: ಮೇಯರ್ ಚುನಾವಣೆ ವೇಳೆ ಬಿಜೆಪಿ ಬೆಂಬಲಿಸಿದ ನಂತರವೂ ಜೆಡಿಎಸ್ ನಾಯಕರು ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್‌ರನ್ನು ಎರಡು ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನಾಗಿ ಮಾಡಿದ್ದರು. ಆದರೆ, ಅಧ್ಯಕ್ಷರ ಆಯ್ಕೆ ಚುನಾವಣೆ ದಿನ ಅವರಿಬ್ಬರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಮುಜುಗರ ಉಂಟುಮಾಡಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆಯಬೇಕಾದರೆ ಸಮಿತಿಯಲ್ಲಿನ 11 ಸದಸ್ಯರ ಪೈಕಿ ಆರು ಮಂದಿ ಬೆಂಬಲವಿರಬೇಕು.
ಅದರಂತೆ ಸಾಮಾಜಿಕ ನ್ಯಾಯ ಹಾಗೂ ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಗಳಲ್ಲಿ ಬಿಜೆಪಿಯ ತಲಾ ಐದು ಸದಸ್ಯರಿದ್ದು, ಜೆಡಿಎಸ್-ಕಾಂಗ್ರೆಸ್‌ನ ಆರು ಸದಸ್ಯರಿದ್ದಾರೆ. ಇದೀಗ ಬಂಡಾಯ ಸದಸ್ಯರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ, ಬಿಜೆಪಿಯ ಐವರು ಸದಸ್ಯರು ಬೆಂಬಲ ನೀಡಿದರೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಆಗ ಕಾಂಗ್ರೆಸ್, ಜೆಡಿಎಸ್ ತಮ್ಮ ಪಾಲಿನ ತಲಾ ಒಂದು ಸಮಿತಿ ಕಳೆದುಕೊಳ್ಳಲಿವೆ.
ಸಂಧಾನಕ್ಕೆ ರಾಮಲಿಂಗಾರೆಡ್ಡಿ ನಿರಾಸಕ್ತಿ: ಬಿಬಿಎಂಪಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮೈತ್ರಿ ಆಡಳಿತ ಸುಸೂತ್ರವಾಗಿ ಮುಂದುವರಿಯುವಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಮುಖ ಪಾತ್ರವಹಿಸಿದ್ದರು. ಆದರೆ, ಸಮ್ಮಿಶ್ರ ಸರ್ಕಾರದ ಸಂಪುಟ ಪುನಾರಚನೆಯಲ್ಲಿ ಮಂತ್ರಿ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಅವರು ಬೇಸರಗೊಂಡಿದ್ದಾರೆ. ಹೀಗಾಗಿ, ಈ ಬಾರಿ ಅವರು ಜೆಡಿಎಸ್ ಬಂಡಾಯ ಸದಸ್ಯರು ಹಾಗೂ ವರಿಷ್ಟರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದು ಅನುಮಾನ ಎನ್ನಲಾಗಿದೆ.
ಬಿಜೆಪಿ ಸದಸ್ಯರು ಚುನಾವಣೆ ಪ್ರಕ್ರಿಯೆ ನಡೆಸಲು ಅವಕಾಶ ನೀಡದೆ ಪ್ರತಿಭಟಿಸಿದ ಕಾರಣ, ಚುನಾವಣೆ ಮುಂದೂಡಲಾಗಿತ್ತು. ಚುನಾವಣೆ ದಿನಾಂಕ ನಿಗದಿಪಡಿಸುವ ಕುರಿತು ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು.
-ಗಂಗಾಂಬಿಕೆ, ಮೇಯರ್
ಸ್ಥಾಯಿ ಸಮಿತಿಗಳನ್ನು ಕಳೆದುಕೊಳ್ಳುವ ಭಯದಿಂದ ಕಾಂಗ್ರೆಸ್, ಜೆಡಿಎಸ್ ಚುನಾವಣೆ ಮುಂದೂಡಿದೆ. ಜ.2ರೊಳಗೆ ಚುನಾವಣೆ ನಡೆಸದಿದ್ದರೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ನಡೆ ಬಗ್ಗೆ ನಿರ್ಧರಿಸುತ್ತೇವೆ.
-ಪದ್ಮನಾಭರೆಡ್ಡಿ, ಪ್ರತಿಪಕ್ಷ ನಾಯಕ
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.