ಕಾರ್ಯತಂತ್ರದಲ್ಲಿ ನಿರೀಕ್ಷಿತ ಯಶ ಕಾಣದ ಬಿಜೆಪಿ
Team Udayavani, Dec 17, 2018, 8:40 AM IST
ಬೆಂಗಳೂರು: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದಿರುವ ಚಳಿಗಾಲದ ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಹೆಣೆದಿದ್ದ ಕಾರ್ಯತಂತ್ರ ಅಧಿವೇಶನದ ಮೊದಲರ್ಧದ ಐದು ದಿನದ ಕಲಾಪದಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಈ ಬಗ್ಗೆ ಬಿಜೆಪಿಯ ಹಲವು ನಾಯಕರಲ್ಲೇ ಬೇಸರವಿದೆ. ಅಧಿವೇಶನ ನಡೆಯಲಿರುವ ಮುಂದಿನ ಐದು ದಿನಗಳಲ್ಲಿ ಮೈತ್ರಿ ಸರ್ಕಾರದ ವೈಫಲ್ಯಗಳನ್ನು ಎತ್ತಿತೋರಿಸುವ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂಬುದನ್ನು ಸಾರಲು ಬಿಜೆಪಿ ಸಿದ್ಧತೆ ನಡೆಸಿದ್ದು, ಈ ಪ್ರಯತ್ನದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಸಮ್ಮಿಶ್ರ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದು ‘ಹನಿಮೂನ್ ಅವಧಿ’ ಪೂರ್ಣಗೊಂಡ ಬೆನ್ನಲ್ಲೇ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡುವುದಾಗಿ ಬಿಜೆಪಿ ಘೋಷಿಸಿತ್ತು. ಆಡಳಿತ ಪಕ್ಷಗಳು ಒಂಟಿ ಕಾಲಲ್ಲಿ ನಿಲ್ಲುವಂತೆ ಹೋರಾಟ ನಡೆಸುವುದಾಗಿ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಆದರೆ ಬೆಳಗಾವಿ ಅಧಿವೇಶನದ ಮೊದಲರ್ಧದಲ್ಲಿ ಬಿಜೆಪಿಯ ಹೋರಾಟ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬುದನ್ನು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ.
ಆರಂಭದಲ್ಲೇ ಹಿನ್ನಡೆ: ಅಧಿವೇಶನ ಆರಂಭವಾದ ಮೊದಲ ದಿನ ಡಿ.10ರಂದು ಬೆಳಗಾವಿಯಲ್ಲಿ ಒಂದು ಲಕ್ಷ ರೈತರನ್ನು ಸಂಘಟಿಸಿ ಹೋರಾಟ ನಡೆಸುವುದಾಗಿ ಬಿಜೆಪಿ ಪ್ರಕಟಿಸಿತ್ತು. ಈ ಸಂಬಂಧ ಕೋರ್ ಕಮಿಟಿಯಲ್ಲೂ ಚರ್ಚಿಸಿ ಮೊದಲ ದಿನದಿಂದಲೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಲೆಕ್ಕಾಚಾರ ನಡೆಸಿತ್ತು. ಆದರೆ ಡಿ.10ರಂದು ನಡೆಹೋರಾಟದಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ರೈತರು ಸೇರಿರಲಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಬಾಕಿ ಪಾವತಿಸದಿರುವುದು ಸೇರಿ ರೈತರ ಸಮಸ್ಯೆಗಳು ಹೋರಾಟದ ಪ್ರಮುಖ ವಿಚಾರವಾಗಿತ್ತು. ಬಿಜೆಪಿಯ ಕೆಲ ಜನಪ್ರತಿನಿಧಿಗಳು, ಮುಖಂಡರು ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವುದರಿಂದ ಹೋರಾಟಕ್ಕೆ ನಿರೀಕ್ಷಿತ ಸಹಕಾರ ಸಿಗಲಿಲ್ಲವೇನೋ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ‘ಎಫೆಕ್ಟ್’: ಮಂಗಳವಾರ ಬೆಳಗ್ಗೆ ಶಾಸಕರ ಸಭೆ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದಾದ ಗಂಭೀರ ವಿಚಾರಗಳನ್ನು ಉಭಯ ಸದನಗಳಲ್ಲಿ ಪ್ರಸ್ತಾಪಿಸಲು ಪಕ್ಷದ ನಾಯಕರು ನಿರ್ಧರಿಸಿದ್ದರು. ಆದರೆ ಅಂದು ಪಂಚ ರಾಜ್ಯಗಳ ಚುನಾವಣೆ ಮತಎಣಿಕೆ ಕಾರ್ಯ ನಡೆದಿದ್ದರಿಂದ ಎಲ್ಲರ ಗಮನ ಅತ್ತ ಕೇಂದ್ರೀಕೃತವಾಗಿತ್ತು. ರಾಜಸ್ಥಾನ, ಛತ್ತೀಸ್‌ಗಡ ಜತೆಗೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯುವಷ್ಟು ಸ್ಥಾನ ಗೆಲ್ಲುತ್ತಿರುವ ಮಾಹಿತಿ ಸಿಗುತ್ತಿದಂತೆ ಬಿಜೆಪಿ ನಾಯಕ ಉತ್ಸಾಹ ತಗ್ಗಿದಂತೆ ಕಂಡುಬಂತು. ಇದರ ಪರಿಣಾಮ ಸದನದಲ್ಲೂ ಬೀರಿತ್ತು. ಶುಕ್ರವಾರ ರಫೇಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಬಿಜೆಪಿ ನಾಯಕರಲ್ಲಿ ತುಸು ಹುಮ್ಮಸ್ಸು ಕಂಡುಬಂತು.
ಅಧಿವೇಶನದ ಮೊದಲ ವಾರದಲ್ಲಿ ರೈತರ ಸಮಸ್ಯೆ, ಸಾಲ ಮನ್ನಾ, ಕಬ್ಬು ಬೆಳೆಗಾರರ ಸಮಸ್ಯೆ, ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಉತ್ತರಕರ್ನಾಟಕ ಅಭಿವೃದ್ಧಿ ಕಡೆಗಣನೆ, ನೀರಾವರಿ ಯೋಜನೆಗಳಲ್ಲಿನ ವೈಫಲ್ಯತೆ ಬಗ್ಗೆ ಗಮನಸೆಳೆದು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿತ್ತು. ಅದರಂತೆ ರೈತರ ಸಮಸ್ಯೆ, ಬರ ನಿರ್ವಹಣೆಯಲ್ಲಿನ ವೈಫಲ್ಯವನ್ನು ಬಿಜೆಪಿ ಪ್ರಧಾನವಾಗಿ ಎತ್ತಿಹಿಡಿಯಿತು. ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಸೇರಿ ಕೆಲವರು ತೀಕ್ಷ್ಣ ವಾಗ್ಧಾಳಿ, ಕಟು ಶಬಟಛಿಗಳಿಂದ ಟೀಕಿಸಿದ್ದು ಸರ್ಕಾರದ ಗಮನ ಸೆಳೆಯಿತು. ಆದರೆ ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯ ಹಾಗೂ ನೀರಾವರಿ ಯೋಜನೆಗಳ ಕಡೆಗಣನೆ ಬಗ್ಗೆ ಅಲ್ಲಲ್ಲಿ ಪ್ರಸ್ತಾವವಾದರೂ ಗಂಭೀರ ಚರ್ಚೆ ಇನ್ನೂ ನಡೆದಿಲ್ಲ. ಹಾಗಾಗಿ ಸೋಮವಾರದಿಂದ ಹಂತ ಹಂತವಾಗಿ ಈ ವಿಚಾರಗಳನ್ನು ಪ್ರಸ್ತಾಪಿಸಲು ಬಿಜೆಪಿ ನಿರ್ಧರಿಸಿದೆ.
ವಿಧಾನ ಪರಿಷತ್‌ನಲ್ಲಿ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಿ ನಂತರ ಕಲಾಪ ಮುಂದೂಡಲಾಯಿತು. ಬುಧವಾರ ಅರ್ಧದಿನದ ಕಲಾಪ ನೂತನ ಸಭಾಪತಿ ಆಯ್ಕೆ ಪ್ರಕ್ರಿಯೆಗೆ ಸೀಮಿತವಾಗಿತ್ತು. ಉಳಿದಂತೆ ಟಿಪ್ಪು ಜಯಂತಿ ಆಚರಣೆ ಔಚಿತ್ಯದ ಬಗ್ಗೆ ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ತಕ್ಕಮಟ್ಟಿನ ಪ್ರತಿರೋಧ ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಿತ್ತು. ಮುಂದಿನ 5 ದಿನಗಳ ಕಲಾಪದಲ್ಲಿ 2016-17ನೇ ಸಾಲಿನ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖವಾಗಿರುವ 35,000 ಕೋಟಿ ರೂ. ಮೊತ್ತಕ್ಕೆ ಲೆಕ್ಕ ಸಿಗದ ವಿಚಾರ, ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಇತರೆ ವಿಚಾರಗಳ ಬಗ್ಗೆ ಪ್ರಸ್ತಾಪಿಸಲು ಮೇಲ್ಮನೆಯ ಬಿಜೆಪಿ ಸದಸ್ಯರು ಸಜ್ಜಾಗಿದ್ದಾರೆ.
ಸಿದ್ಧತೆ ಕೊರತೆ
ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಸರ್ಕಾರ ವಿಫಲವಾಗಿದೆ. ಸಾಲ ಮನ್ನಾ ಘೋಷಣೆಯಾದರೂ ರೈತರ ಆತ್ಮಹತ್ಯೆ ಮುಂದುವರಿದಿದ್ದು, ಸಾಲ ಮನ್ನಾ ಪರಿಹಾರವಾಗಿ ಕಾಣುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಿದ್ದರೂ ಅಂಕಿಸಂಖ್ಯೆಸಹಿತ, ಪೂರ್ವ ಸಿದ್ಧತೆಯೊಂದಿಗೆ ಸರ್ಕಾರದ ವೈಫಲ್ಯ ಎತ್ತಿತೋರುವ ಯೋಜಿತ ಪ್ರಯತ್ನ ನಡೆಸುವಲ್ಲಿ ತುಸು ಹಿನ್ನಡೆಯಾದಂತಾಗಿದೆ. ಸರ್ಕಾರದ ವೈಫಲ್ಯ ತೋರಿಸುವುದಕ್ಕಿಂತ ಹೇಗಾದರೂ ಸರಿ ಸರ್ಕಾರ ರಚಿಸುವುದೇ ಮುಖ್ಯ ಎಂಬ ಗುಂಗಿನಲ್ಲೇ ಕೆಲನಾಯಕರು ಇರುವುದರಿಂದ ಸಿದ್ಧತೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದರು.
ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಹೋರಾಟ ನಡೆಸಲಾಯಿತೇ ಹೊರತು ಶಕ್ತಿ ಪ್ರದರ್ಶನ ಆಯೋಜಿಸಿರಲಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ, ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಸರ್ಕಾರ ಉದಾಸೀನ ತೋರುತ್ತಿದೆ. ಕಲಾಪದ ಅಮೂಲ್ಯ ಸಮಯ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಹೆಚ್ಚು ಕಾಲವನ್ನು ಚರ್ಚೆ, ವಿಚಾರ ಮಂಡನೆಗೆ ವಿನಿಯೋಗಿಸಲಾಗುತ್ತಿದೆ.
– ಸಿ.ಟಿ.ರವಿ, ಬಿಜೆಪಿ ಶಾಸಕ
ಸದನದಲ್ಲಿ ಬಿಜೆಪಿ ಪ್ರಸ್ತಾಪಿಸಿದ ವಿಚಾರಗಳು, ಗಮನ ಸೆಳೆದ ಸಮಸ್ಯೆಗಳಿಗೆ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸಿಲ್ಲ. ಬರ ನಿರ್ವಹಣೆ, ರೈತರ ಸಮಸ್ಯೆಗೆ ಸ್ಪಂದನೆ, ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವ ಬಗ್ಗೆ ಪಕ್ಷ ಸಮರ್ಥವಾಗಿ ವಿಚಾರ ಮಂಡಿಸಿದೆ. ಮುಂದೆಯೂ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಯೋಜಿತ ರೀತಿ ಪ್ರಯತ್ನ ನಡೆಸಲಾಗುವುದು.
– ಎನ್.ರವಿಕುಮಾರ್, ಬಿಜೆಪಿ ಮೇಲ್ಮನೆ ಸದಸ್ಯ
— ಎಂ. ಕೀರ್ತಿ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.