ಇವಿಎಂ ಬಗ್ಗೆ ಗೊತ್ತಿಲ್ಲದವರು ಏನೇನೋ ಹೇಳುತ್ತಾರೆ’
Team Udayavani, Jan 5, 2018, 6:00 AM IST
ಚುನಾವಣೆ ಹತ್ತಿರ ಬಂದಾಗ ಪಕ್ಷಗಳ ಚುನಾವಣಾ ರಣತಂತ್ರ ಹಾಗೂ ಪ್ರಚಾರಕ್ಕಿಂತ ಅತಿ ಹೆಚ್ಚು ಚರ್ಚೆಯಾಗುತ್ತಿರುವುದು ವಿದ್ಯುನ್ಮಾನ ಮತಯಂಂತ್ರ (ಇವಿಎಂ)ಗಳ ಬಗ್ಗೆ. ಹಾಗೇ ಫಲಿತಾಂಶ ಪ್ರಕಟವಾದ ಬಳಿಕವೂ ಮತ್ತದೇ ಇವಿಎಂಗಳು ಚರ್ಚೆ ಕಾರಣವಾಗುತ್ತವೆ. ಕಳೆದ ಐದು ವರ್ಷಗಳಿಂದ ಕಾಂಗ್ರೆಸ್‌ಗೆ ಇದು ಬಿಜೆಪಿ ವಿರುದ್ಧದ ಚುನಾವಣಾ ಅಸ್ತ್ರವೂ ಆಗಿದೆ. ಇದೀಗ ರಾಜ್ಯದಲ್ಲೂ ಇವಿಎಂಗಳ ದೋಷ ಮತ್ತು ದುರ್ಬಳಕೆ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಹಲವು ಅನುಮಾನಗಳೂ ವ್ಯಕ್ತವಾಗುತ್ತಿವೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ರಾಜಾಧ್ಯಕ್ಷ ಡಾ. ಜಿ. ಪರಮೇಶ್ವರ್ ನಮಗೆ ಇವಿಎಂ ಬೇಡ, ಬ್ಯಾಲೆಟ್ ಬೇಕು ಎಂದಿದ್ದಾರೆ. ಮುಖ್ಯಮಂತ್ರಿಗಳು ಸಹ ಇವಿಎಂ ಬಳಕೆಗೆ ಅಪಸ್ವರ ಎತ್ತಿದ್ದಾರೆ. ರಾಜ್ಯದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಹ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
“ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್’ ಗಳ (ಇವಿಎಂ) ದೋಷ, ದುರ್ಬಳಕೆಯ ಕೂಗು ರಾಜ್ಯದಲ್ಲಿ ದಿನೆ ದಿನೇ ಹೆಚ್ಚಾಗುತ್ತಿದ್ದು, ಹಿಂದಿನ ಪೇಪರ್ ಬ್ಯಾಲೆಟ್ ವ್ಯವಸ್ಥೆಯನ್ನೇ ತರಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆಯಲ್ಲ?
ತಿಳವಳಿಕೆ ಇಲ್ಲದೇ ಇವಿಎಂಗಳ ದೋಷ, ದುರ್ಬಳಕೆ ಬಗ್ಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ಯಾವ ದೋಷವೂ ಇಲ್ಲ, ದುರ್ಬಳಕೆಯ ಪ್ರಶ್ನೆಯೂ ಇಲ್ಲ. ಬಹಳ ಮುಖ್ಯವಾಗಿ ಈಗಿನ ಇವಿಎಂಗಳು ಕೇವಲ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಆಗಿ ಉಳಿದಿಲ್ಲ. ಅವು ಈಗ ಹಿಂದಿನ ಪೇಪರ್ ಬ್ಯಾಲೆಟ್‌ಗಳೂ ಆಗಿವೆ.
ಹಾಗಾದರೆ, ಇಷ್ಟೊಂದು ಅಪನಂಬಿಕೆ, ಅನುಮಾನಗಳು ಯಾಕೆ?
ನಾನು ಮೊದಲೇ ಹೇಳಿದ್ದೇನೆ. ಇದಕ್ಕೆ ತಿಳವಳಿಕೆಯ ಕೊರತೆಯೇ ಮುಖ್ಯ ಕಾರಣ. ನಿಜವಾಗಿ ಇವಿಎಂ ಅಂದರೇನು ಅನ್ನುವ ಬಗ್ಗೆ ರಾಜಕೀಯ ಪಕ್ಷಗಳು, ಸಾರ್ವಜನಿಕರಲ್ಲಿ ತಿಳವಳಿಕೆ ಬರಬೇಕಿದೆ. ಇವಿಎಂಗಳ ಬಗ್ಗೆ ಅಪನಂಬಿಕೆ, ಅನುಮಾನ ಬೇಡ. ಎಲ್ಲರಿಗೂ ಗೊತ್ತಿದೆ ಹಿಂದೆ ಇವಿಎಂಗಳ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಾಗ, ಅದನ್ನು ಸಾಬೀತುಪಡಿಸುವಂತೆ ಕೇಂದ್ರ ಚುನಾವಣಾ ಆಯೋಗ ಬಹಿರಂಗ ಸವಾಲು ಇಟ್ಟಿತ್ತು. ಯಾರು ಆರೋಪಗಳನ್ನು ಮಾಡಿದ್ದರು, ಆ ದಿನ ಅವರ್ಯಾರು ಅಲ್ಲಿಗೆ ಬರಲಿಲ್ಲ. ಬಂದಿದ್ದ ಕೆಲವರು ಇವಿಎಂಗಳು ಹೇಗೆ ಕೆಲಸ ಮಾಡುತ್ತವೆ ಅನ್ನುವ ಪ್ರಾತ್ಯಕ್ಷಿಕೆ ನೋಡಿಕೊಂಡು ಹೋದರು. ಇವಿಎಂ ಬೇಡ ಎಂದು ಯಾರೂ ಸಹ ಯಾವ ನ್ಯಾಯಾಲಯಕ್ಕೂ ಹೋಗಿಲ್ಲ.
ಅನುಮಾನ ಬೇಡ ಎಂದು ನೀವು ಹೇಳಿದ್ದನ್ನು ನಂಬುವುದು ಹೇಗೆ?
ನಾನು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿಲ್ಲ. ನಿಖರ ಪುರಾವೆಯೊಂದಿಗೆ ಮಾತನಾಡುತ್ತಿದ್ದೇನೆ. ನೋಡಿ, ಮೊದಲು ಕೇವಲ ಇವಿಎಂ ಮಾತ್ರ ಇತ್ತು. ಆದರೆ, ಈಗ ಅದರ ಜೊತೆಗೆ ವಿವಿಪ್ಯಾಟ್ (ಓಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರಾಯಲ್) ವ್ಯವಸ್ಥೆ ಬಂದಿದೆ. ಅದಕ್ಕೆ ಸರಳವಾಗಿ ಮತದಾರ ದೃಢೀಕರಣ ಚೀಟಿ ಎಂದು ಹೇಳಬಹುದು.
ಏನಿದು ಮತದಾರ ದೃಢೀಕರಣ ಚೀಟಿ (ವಿವಿಪ್ಯಾಟ್)?
ಇವಿಎಂಗಳ ಜೊತೆಗೆ ಈಗ ವಿವಿಪ್ಯಾಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಂದರೆ, ಯಾರೇ ಇವಿಎಂನಲ್ಲಿ ಮತಚಲಾಯಿಸಿದರೆ, ಅದಕ್ಕೆ ಹೊಂದಿಕೊಂಡಂತೆ ಒಂದು ವಿವಿಪ್ಯಾಟ್ ಸಹ ಇರುತ್ತದೆ. ಯಾರಿಗೆ ಮತ ಹೋಗಿದೆ ಅನ್ನುವ ಚೀಟಿ ಅದರಲ್ಲಿ ಬರುತ್ತದೆ. ಆರು ಸೆಕೆಂಡ್ ಆ ಚೀಟಿ ಮತದಾರನಿಗೆ ಕಾಣಲಿದೆ. ಅದರಲ್ಲಿ ತನ್ನ ಮತವನ್ನು ಆತ ದೃಢೀಕರಿಸಿಕೊಳ್ಳಬಹುದು. ಆ ಮತದಾರ ದೃಢೀಕರಣ ಚೀಟಿ ಐದು ವರ್ಷದವರೆಗೆ ಭದ್ರವಾಗಿಡಲಾಗುತ್ತದೆ. ಮತ ಎಣಿಕೆ ಸಂದರ್ಭದಲ್ಲಿ ಇವಿಎಂಗಳ ಜೊತೆಗೆ ವಿವಿಪ್ಯಾಟ್‌ಗಳಲ್ಲಿನ ಚೀಟಿಗಳ ಎಣಿಕೆ ಸಹ ಮಾಡಲಾಗುತ್ತದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳಲ್ಲಿ ಇದರ ಪ್ರಯೋಗ ಮಾಡಲಾಗಿದ್ದು, ಶೇ.100ರಷ್ಟು ಅದು ಯಶಸ್ವಿಯಾಗಿದೆ.
ವಿವಿಪ್ಯಾಟ್‌ಗಳನ್ನು ಮತ ಎಣಿಕೆ ಸಂದರ್ಭದಲ್ಲಿ ಹೇಗೆ ಬಳಸಿಕೊಳ್ಳಲಾಗುತ್ತದೆ?
ಮತ ಎಣಿಕೆ ಸಂದರ್ಭದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಅಥವಾ ಪ್ರತಿನಿಧಿಗಳ ಸಮಕ್ಷಮದಲ್ಲಿ ಅವರು ಬಯಸಿದ ಅಥವಾ ಆಯ್ಕೆ ಮಾಡಿಕೊಂಡ ಮತಗಟ್ಟೆಯ “ಮತದಾರ ದೃಢೀಕರಣ ಚೀಟಿ’ಗಳನ್ನು ಸಂಬಂಧಪಟ್ಟ ಮತ ಎಣಿಕೆ ಅಧಿಕಾರಿ ತೆಗೆದು ಎಣಿಕೆ ಮಾಡುವರು. ಇವಿಎಂ ಎಣಿಕೆಗೂ ಮತ್ತು ವಿವಿಪ್ಯಾಟ್ ಎಣಿಕೆಗೂ ತಾಳೆ ಹಾಕಲಾಗುತ್ತದೆ. ಆಗ ಎಲ್ಲವೂ ಸ್ಪಷ್ಟವಾಗುತ್ತದೆ. ಅಪರೂಪದ ಪ್ರಕರಣಗಳಲ್ಲಿ ಎಲ್ಲ ಮತಗಟ್ಟೆಗಳ ಮತದಾರ ದೃಢೀಕರಣ ಚೀಟಿಗಳನ್ನೂ ಎಣಿಕೆ ಮಾಡುವ ಅವಕಾಶವಿರುತ್ತದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿವಿಪಿಎಟಿಗಳ ಬಗ್ಗೆ ಒಂದೇ ಒಂದು ಅಪಸ್ವರ ಅಥವಾ ಆಕ್ಷೇಪ ಕೇಳಿ ಬಂದಿಲ್ಲ.
ಇವಿಎಂಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು, ಟ್ಯಾಂಪರಿಂಗ್‌ಗೆ ಅವಕಾಶವಿದೆ ಎಂದೆಲ್ಲಾ ಹೇಳುತ್ತಾರಲ್ಲಾ?
ಇದು ಸಾಧ್ಯವೇ ಇಲ್ಲ. ಇಲ್ಲಿ ಬ್ಲೂಟೂಥ್ ಅಥವಾ ವೈಫೈ ಇರುವುದಿಲ್ಲ. ಅಷ್ಟೇ ಅಲ್ಲ, ಇವಿಎಂಗಳ ದತ್ತಾಂಶವನ್ನು (ಡೇಟಾ) ವಿವಿಪ್ಯಾಟ್ ಪೇಪರ್ ಬ್ಯಾಲೆಟ್‌ಗಳ ಜೊತೆಗೆ ತಾಳೆ ಹಾಕಲಾಗುತ್ತದೆ. ಹ್ಯಾಕಾಥಾನ್ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಬಹಿರಂಗ ಸವಾಲು ಹಾಕಿತ್ತು. ಅಲ್ಲಿ ಯಾರೂ, ಏನೂ ಮಾಡಲಿಕ್ಕಾಗಿಲ್ಲ. ಎಷ್ಟೊಂದು ಸಂಖ್ಯೆಯಲ್ಲಿ ಐಟಿ ದಿಗ್ಗಜರು, ಪರಿಣಿತರು ನಮ್ಮ ದೇಶದಲ್ಲಿ ಇದ್ದಾರೆ, ಅವರಲ್ಲಿ ಯಾರಾದರೊಬ್ಬರು ಹ್ಯಾಕ್ ಆಗುವುದನ್ನು ಸಾಬೀತು ಮಾಡಬಹುದಿತ್ತಲ್ಲ. ಮಾತನಾಡುವವರು ಗೊತ್ತಿಲ್ಲದೇ ಏನೇನೂ ಹೇಳುತ್ತಾರೆ.
ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಸ್ವತಃ ರಾಜ್ಯದ ಐಟಿ-ಬಿಟಿ ಸಚಿವರೇ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರಲ್ಲ?
ಯಾರಿಗೆ ಸಮಸ್ಯೆ ಇದೆಯೋ ಅವರು ದೂರು, ಮನವಿ ಮಾಡಿಕೊಳ್ಳಬಹುದು. ನಮ್ಮದು ಪ್ರಜಾಪ್ರಭುತ್ವ ದೇಶ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಇದ್ದೇ ಇದೆ. ಆದರೆ, ನಾನಂತೂ ಬಹಳ ಸ್ಪಷ್ಟವಾಗಿ ಮತ್ತು ಖಚಿತವಾಗಿ ಹೇಳುತ್ತೇನೆ ಇವಿಎಂಗಳ ಬಗ್ಗೆ ಅನುಮಾನ, ಅಪನಂಬಿಕೆ ಬೇಡ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಬೇಡ ಪೇಪರ್ ಬ್ಯಾಲೆಟ್ ಬಳಸಿ ಎಂದು ಯಾರಾದರೂ ಅಧಿಕೃತ ಮನವಿ ಸಲ್ಲಿಸಿದ್ದಾರಾ?
ಈವರೆಗೆ ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ, ಸಂಘ-ಸಂಸ್ಥೆಗಳು ಅಥವಾ ವ್ಯಕ್ತಿಗಳು ಈ ಬಗ್ಗೆ ಅಧಿಕೃತವಾಗಿ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿಲ್ಲ. ಮಾಧ್ಯಮಗಳ ಮೂಲಕ ಅಂತಹ ಸುದ್ದಿಗಳು ಗಮನಕ್ಕೆ ಬಂದಿವೆ. ಅಷ್ಟಕ್ಕೂ ಬ್ಯಾಲೆಟ್ ಪೇಪರ್ ವ್ಯವಸ್ಥೆ ತನ್ನಿ ಅನ್ನುವುದರಲ್ಲಿ ಅರ್ಥವಿಲ್ಲ. ಏಕೆಂದರೆ, ವಿವಿಪ್ಯಾಟ್ ಬಂದ ಮೇಲೆ ಇವಿಎಂಗಳು ಹೈಬ್ರಿಡ್ ಆಗಿವೆ. ಅಂದರೆ ಅವು ಎಲೆಕ್ಟ್ರಾನಿಕ್ ಓಟಿಂಗ್ ಮಷಿನ್ ಜೊತೆಗೆ ಪೇಪರ್ ಬ್ಯಾಲೆಟ್ ಸಹ ಹೌದು. ಅಷ್ಟೇ ಅಲ್ಲ, ಈಗಿನ ಪೇಪರ್ ಬ್ಯಾಲೆಟ್ ವ್ಯವಸ್ಥೆ ಹಿಂದಿನ ವ್ಯವಸ್ಥೆಗಿಂತ ಹೆಚ್ಚು ಸುಧಾರಿತ ಹಾಗೂ ಮತದಾರ ಸ್ನೇಹಿಯಾಗಿದೆ.
ನೀವು ಏನೇ ಹೇಳಿ. ಅನುಮಾನಗಳು ಇದ್ದೇ ಇದೆ. ಅದಕ್ಕೇನು ಮಾಡುತ್ತೀರಾ?
ಪ್ರಾತ್ಯಕ್ಷಿಕೆ ಮೂಲಕ ತಿಳವಳಿಕೆ ಮೂಡಿಸಿ ಅನುಮಾನಗಳನ್ನು ದೂರ ಮಾಡುತ್ತೇವೆ. ರಾಜ್ಯದಲ್ಲಿ ಪ್ರಾತ್ಯಕ್ಷಿಕೆಗೆ ಎಂಟು ಸಾವಿರ ಇವಿಎಂಗಳನ್ನು ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಅಲ್ಲಿಂದ ಇವಿಎಂಗಳು ಬಂದ ತಕ್ಷಣ ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ ನೇತಾರರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರೂ ಸೇರಿದಂತೆ ಪ್ರತಿಯೊಬ್ಬರಿಗೂ ಪ್ರಾತ್ಯಕ್ಷಿಕೆ ನೀಡಲಾಗುವುದು. ಇದಕ್ಕಾಗಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಅಲ್ಲದೇ ನಗರ ಪ್ರದೇಶಗಳಲ್ಲಿ ದೊಡ್ಡ ಮಾಲ್‌ಗಳಲ್ಲಿ, ವಿವಿಗಳ ಆವರಣದಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಇದಕ್ಕಾಗಿ ನಾವು ತುಂಬಾ ಮುಕ್ತವಾಗಿದ್ದೇವೆ. ಅನುಮಾನಗಳನ್ನು ದೂರ ಮಾಡುವುದೇ ನಮ್ಮ ಕೆಲಸ.
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Bellary; ಪ್ರಿಯಾಂಕ್ ಖರ್ಗೆ ರಾಜೀನಾಮೆ ಖಂಡಿಸಿ ಬಿಜೆಪಿ ಪ್ರತಿಭಟನೆ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.