ರಾಜ್ಯದ ಜಲಮಾರ್ಗಕ್ಕೆ ಕೇಂದ್ರ ಅಸ್ತು
Team Udayavani, Dec 30, 2017, 6:00 AM IST
ಬೆಂಗಳೂರು: ರಾಜ್ಯದಲ್ಲಿ ಜಲಮಾರ್ಗಗಳ ಮೂಲಕ ಜನ ಸಂಚಾರ ಮತ್ತು ಸರಕು ಸಾಗಾಟ ಮಾಡುವ ಕಾಲ ಸನ್ನಿಹಿತವಾಗಿದೆ. ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಜನತೆಗೆ ಹೊಸ ವರ್ಷಕ್ಕೆ “ಸಿಹಿ ಸುದ್ದಿ’ ಏನೆಂದರೆ, ಕರ್ನಾಟಕದಲ್ಲಿ ರಾಷ್ಟ್ರೀಯ ಜಲಮಾರ್ಗಗಳನ್ನು ಅಭಿವೃದ್ದಿಪಡಿಸುವ “ವಿಸ್ತೃತ ಯೋಜನಾ ವರದಿ’ಗೆ (ಡಿಪಿಆರ್) ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಹೌದು! ರಾಷ್ಟ್ರೀಯ ಜಲಮಾರ್ಗ ವಿಧೇಯಕ-2016ರಲ್ಲಿ ಗುರುತಿಸಲಾಗಿದ್ದ ರಾಜ್ಯದ 11 ನದಿಗಳ ಪೈಕಿ ವಿಧೇಯಕದ ಕ್ಲಸ್ಟರ್ 6ರಲ್ಲಿರುವ ಗುರುಪುರ, ಕಬಿನಿ, ಕಾಳಿ, ನೇತ್ರಾವತಿ, ಮತ್ತು ಶರಾವತಿಗಳ ಜೊತೆಗೆ ಇತರ ರಾಜ್ಯಗಳ ನದಿಗಳಲ್ಲಿ ನೌಕಾ ಚಟುವಟಿಕೆಗಳು ಹಾಗೂ ಒಳನಾಡು ಜಲಸಾರಿಗೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಗುರುಗಾಂವ್‌ನ “ಟ್ರ್ಯಾಕ್ಟೇಬಲ್ ಇಂಜಿನಿಯರಿಂಗ್ ಪ್ರೈ.ಲಿ. ಸಂಸ್ಥೆಯು ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರಕ್ಕೆ ಸಲ್ಲಿಸಿದ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕಿದೆ.
ವರದಿ ಅನುಮೋದನೆ ನಂತರದ ಉಳಿದ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ ಟೆಂಡರ್ ಕರೆದು ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿಗೆ ಅಧಿಕೃತವಾಗಿ ಚಾಲನೆ ನೀಡಲಿದೆ. ಎಲ್ಲ ಪ್ರಕ್ರಿಯೆಗಳು ಕಾಲಮಿತಿಯೊಳಗೆ ಮುಗಿದರೆ, ಹೊಸ ವರ್ಷ ಮುಗಿಯುವುದರೊಳಗೆ ರಾಜ್ಯದಲ್ಲಿ ಜಲಮಾರ್ಗಗಳು ಕಾರ್ಯಾರಂಭ ಮಾಡಲಿವೆ. ಆ ರೀತಿ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜಲಮಾರ್ಗಗಳು ಅಸ್ತಿತ್ವಕ್ಕೆ ಬಂದಂತಾಗುತ್ತದೆ.
ಯೋಜನೆಯಂತೆ ಗುರುಪುರ, ಕಬಿನಿ, ಕಾಳಿ, ನೇತ್ರಾವತಿ, ಶರಾವತಿ ನದಿಗಳಲ್ಲಿ ರಾಷ್ಟ್ರೀಯ ಜಲಮಾರ್ಗಗಳು ಅಭಿವೃದ್ಧಿಗೊಂಡರೆ ಆ ನದಿಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನಾವೆಗಳ ಮೂಲಕ ಪ್ರಯಾಣಿಕರ ಸಾಗಾಟ ಮತ್ತು ನೌಕಾ ಚಟುವಟಿಕೆಗಳ ಮೂಲಕ ಸರಕು ಸಾಗಾಟಕ್ಕೆ ಅವಕಾಶ ಸಿಗಲಿದೆ. ಜೊತೆಗೆ, ಡಿಪಿಆರ್‌ನಲ್ಲಿ ಅನುಮೋದಿಸಿರುವ ನದಿಗಳ ಜಲಮಾರ್ಗಗಳು ಅಸ್ತಿತ್ವಕ್ಕೆ ಬಂದರೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಸಂಚಾರ ಮತ್ತು ಸರಕು ಸಾಗಾಣಿಕೆ ಸಾಧ್ಯವಾಗಲಿದೆ. ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ “ಸಾಗರಮಾಲ’ ಯೋಜನೆಯಡಿ ಈ ಜಲಮಾರ್ಗಗಳು ಅಭಿವೃದ್ಧಿಗೊಳ್ಳಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಗ್ಗದ ಸೇವೆ: ರಸ್ತೆ ಸಂಚಾರಕ್ಕೆ ಹೋಲಿಕೆ ಮಾಡಿದರೆ ಜಲಮಾರ್ಗದ ಸಂಚಾರ ತುಂಬ ಅಗ್ಗವಾಗಿರಲಿದೆ. ಸಮುದ್ರದ ಜಲಮಾರ್ಗಗಳಿಗೆ ಹೋಲಿಸಿದರೆ ನದಿಗಳ ಜಲಮಾರ್ಗಗಳಲ್ಲಿ ಅಪಾಯದ ಸಾಧ್ಯತೆಗಳೂ ಕಡಿಮೆ ಎನ್ನಬಹುದು. ಈವರೆಗೆ ನಮ್ಮ ರಾಜ್ಯದಲ್ಲಿ ನದಿಯ ಒಂದು ದಡದಿಂದ ಮತ್ತೂಂದು ದಂಡೆಗೆ ಹೋಗಲು ಕೆಲವು ಕಡೆಗಳಲ್ಲಿ “ಕಡವು ಸೇವೆ’ ಮಾತ್ರ ಇತ್ತು. ಆದರೆ, ಜಲಮಾರ್ಗದ ವ್ಯವಸ್ಥೆ ಇರಲಿಲ್ಲ. ಈಗ ರಾಷ್ಟ್ರೀಯ ಜಲಮಾರ್ಗಗಳು ಅಭಿವೃದ್ಧಿಗೊಂಡರೆ, ಮೊದಲ ಬಾರಿಗೆ ಇಂತಹ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೆ ಬಂದಂತಾಗುತ್ತದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿ ಟಿ.ಎಸ್. ರಾಠೊಡ್ ಹೇಳುತ್ತಾರೆ.
ರಾಜ್ಯದ ಜಲಮಾರ್ಗಗಳ ವಿಸ್ತೀರ್ಣ
ರಾಜ್ಯದ ಭೀಮಾ, ಘಟಪ್ರಭಾ, ಕಬಿನಿ, ಮಲಪ್ರಭಾ, ನೇತ್ರಾವತಿ, ಶರಾವತಿ ನದಿಗಳು ಒಟ್ಟು 11 ನದಿಗಳನ್ನು ರಾಷ್ಟ್ರೀಯ ಜಲಮಾರ್ಗ ವಿಧೇಯಕದಲ್ಲಿ ಸೇರಿಸಲಾಗಿದೆ. ಅದರ ಒಟ್ಟು ವಿಸ್ತೀರ್ಣ ಅಂದಾಜು 3 ಸಾವಿರ ಕಿ.ಮೀ ಆಗಬಹುದು. ರಾಷ್ಟ್ರೀಯ ಜಲಮಾರ್ಗ 4, 21 ಹಾಗೂ 104 ನೆರೆಯ ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರಕ್ಕೆ ಸಂಪರ್ಕ ಹೊಂದಿವೆ. ಉಳಿದಂತೆ, ಅನುಮೋದನೆ ಸಿಕ್ಕಿರುವ ಗುರುಪುರ, ಕಬಿನಿ, ಕಾಳಿ, ನೇತ್ರಾವತಿ, ಮತ್ತು ಶರಾವತಿ ನದಿಗಳು ರಾಜ್ಯದ ವ್ಯಾಪ್ತಿ ಮಾತ್ರ ಹೊಂದಿದ್ದು, ಇದರ ಒಟ್ಟು ವಿಸ್ತೀರ್ಣ ಅಂದಾಜು 200 ಕಿ.ಮೀ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ರಾಷ್ಟ್ರೀಯ ಜಲಮಾರ್ಗಗಳು
*ರಾಷ್ಟ್ರೀಯ ಜಲಮಾರ್ಗ 4-ಗೋದಾವರಿ, ಕೃಷ್ಣಾನದಿ-2,890 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 21-ಭೀಮಾ ನದಿ-139 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 41-ಘಟಪ್ರಭಾ ನದಿ- 112 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 43-ಗುರುಪುರ ನದಿ-10 ಕಿಮೀ
*ರಾಷ್ಟ್ರೀಯ ಜಲಮಾರ್ಗ 51-ಕಬಿನಿ ನದಿ-23 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 52-ಕಾಳಿ ನದಿ-54 ಕಿ.ಮೀ
*ರಾಷ್ಟ್ರೀಯ ಜಲಮಾರ್ಗಮ 67-ಮಲಪ್ರಭಾ ನದಿ-94 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 74-ನೇತ್ರಾವತಿ ನದಿ-78 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 76-ಪಂಚಗಂಗೋಳಿ ನದಿ-23 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 90-ಶರಾವತಿ ನದಿ-29 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 104-ತುಂಗಾಭದ್ರನದಿ-230 ಕಿ.ಮೀ
ಏನಿದು ರಾಷ್ಟ್ರೀಯ ಜಲಮಾರ್ಗ
ಒಳನಾಡು ಜಲಸಾರಿಗೆ ಮೂಲಕ ನದಿಗಳಲ್ಲಿ ನೌಕಾ ಸೇವೆ ಮೂಲಕ ಸಂಚಾರ ಮತ್ತು ಸಾಗಾಟ ಉತ್ತೇಜಿಸಲು ರಾಷ್ಟ್ರೀಯ ಜಲಮಾರ್ಗ ಕಲ್ಪನೆ ಹುಟ್ಟಿಕೊಂಡಿದ್ದು. ಈವರೆಗೆ ನಮ್ಮ ದೇಶದಲ್ಲಿ ಇದ್ದದ್ದು ಕೇವಲ 5 ರಾಷ್ಟ್ರೀಯ ಜಲಮಾರ್ಗಗಳು. ಮೊಟ್ಟ ಮೊದಲ ರಾಷ್ಟ್ರೀಯ ಜಲಮಾರ್ಗ ಎಂದು ಘೋಷಿಸಿದ್ದು 1986ರಲ್ಲಿ ಗಂಗಾ-ಭಗೀರಥಿ-ಹೊಗ್ಲಿ ನದಿ ಮೂಲಕ ಅಹ್ಮದಾಬಾದನಿಂದ ಹಾಲ್ದಿಯಾಗೆ ಸಂಪರ್ಕ ಕಲ್ಪಿಸುವ 1,620 ಕಿ.ಮೀ ವಿಸ್ತೀರ್ಣ ಹೊಂದಿದೆ. ನಂತರ 1988, 93 ಹಾಗೂ 2008ರಲ್ಲಿ ಉಳಿದ ನಾಲ್ಕು ರಾಷ್ಟ್ರೀಯ ಜಲಮಾರ್ಗಗಳ ಘೋಷಣೆ ಆಯಿತು. ಆದರೆ, ಮೊದಲ ಎರಡು ಜಲಮಾರ್ಗಗಳು ಒಂದಿಷ್ಟು ಅಭಿವೃದ್ದಿಗೊಂಡಿದ್ದು ಬಿಟ್ಟರೆ, ಉಳಿದ ಮೂರರಲ್ಲಿ ಯಾವ ಪ್ರಗತಿಯೂ ಈವರೆಗೆ ಆಗಿಲ್ಲ. 2016ರಲ್ಲಿ ರಾಷ್ಟ್ರೀಯ ಜಲಮಾರ್ಗ ವಿಧೇಯಕದಲ್ಲಿ 106 ನದಿಗಳನ್ನು ಕೇಂದ್ರ ಸರ್ಕಾರ ಸೇರಿಸಿತು. ಆಗ ದೇಶದ ಒಟ್ಟು ರಾಷ್ಟ್ರೀಯ ಜಲಮಾರ್ಗಗಳ ಸಂಖ್ಯೆ 111 ಆಯಿತು. ಅದರಲ್ಲಿ ಕರ್ನಾಟಕದ 11 ರಾಷ್ಟ್ರೀಯ ಜಲಮಾರ್ಗಗಳಿವೆ. ಆ ಪೈಕಿ ಏಳು ಜಲಮಾರ್ಗಗಳ ಡಿಪಿಆರ್‌ಗೆ ಕೇಂದ್ರದ ಅನುಮೋದನೆ ಸಿಕ್ಕಿದೆ.
ರಾಜ್ಯದಲ್ಲಿ ರಾಷ್ಟ್ರೀಯ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ ಟೆಂಡರ್ ಕರೆಯಬೇಕಿದ್ದು, ಅದಾದ ಬಳಿಕ ಮುಂದಿನ ಪ್ರಕ್ರಿಯೆಗಳು ಪ್ರಾರಂಭಗೊಳ್ಳುತ್ತವೆ.
- ಎಂ. ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ.
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.