ಬಿಬಿಎಂಪಿಯಲ್ಲಿ ಯಥಾಸ್ಥಿತಿ ಮೈತ್ರಿ?
Team Udayavani, Sep 13, 2017, 11:25 AM IST
ಬೆಂಗಳೂರು: ಬಿಬಿಎಂಪಿಯಲ್ಲಿ ಈ ಬಾರಿಯೂ ಜೆಡಿಎಸ್ ಜತೆ ಮೈತ್ರಿ ಮುಂದುವರಿಸುವ ಸಂಬಂಧ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಜತೆ ಮಾತುಕತೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಗೌಡರನ್ನು ಭೇಟಿ ಮಾಡಿದ್ದ ರಾಮಲಿಂಗಾರೆಡ್ಡಿಯವರು, ಬಿಬಿಎಂಪಿಯಲ್ಲಿ ಈ ಬಾರಿಯೂ ಮೈತ್ರಿ ಮುಂದುವರಿಸೋಣ. ಜೆಡಿಎಸ್ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಮೈತ್ರಿ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಅವರೊಂದಿಗೆ ಮಾತುಕತೆ ನಡೆಸುವಂತೆ ದೇವೇಗೌಡರು ರಾಮಲಿಂಗಾರೆಡ್ಡಿಯವರಿಗೆ ಸೂಚಿಸಿದರು. ಜತೆಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರ ನಡುವೆಯೂ ಈ ಸಂಬಂಧ ಮಾತುಕತೆ ನಡೆದರೆ ಒಳ್ಳೆಯದು ಎಂದು ಹೇಳಿದರು ಎನ್ನಲಾಗಿದೆ.
ಮಾತುಕತೆ ವೇಳೆಯಲ್ಲಿ ದೇವೇಗೌಡರಿಂದ ಪೂರಕ ಸ್ಪಂದನೆ ದೊರೆತಿದೆ ಎಂದು ಹೇಳಲಾಗಿದ್ದು, ಬಹುತೇಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯುವ ಸಾಧ್ಯತೆಯೇ ಹೆಚ್ಚಾಗಿದೆ. ಜೆಡಿಎಸ್ ಮೇಯರ್ ಸ್ಥಾನಕ್ಕೆ ಪಟ್ಟುಹಿಡಿದಿದ್ದರೂ ಅಂತಿಮವಾಗಿ ಯಥಾಸ್ಥಿತಿಯಂತೆ ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಸ್ಥಾನ, ಉಪ ಮೇಯರ್ ಸ್ಥಾನ ಜೆಡಿಎಸ್‌ಗೆ ಸಿಗಲಿದೆ.
ದೇವೇಗೌಡರ ಭೇಟಿ ನಂತರ ರಾಮಲಿಂಗಾರೆಡ್ಡಿ ಹಾಗೂ ಕುಪೇಂದ್ರರೆಡ್ಡಿ ಮಾತುಕತೆ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷರು ಹಾಗೂ ಎಚ್.ಡಿ.ಕುಮಾರಸ್ವಾಮಿಯವರ ನಡುವೆಯೂ ಮತ್ತೂಂದು ಸುತ್ತಿನ ಮಾತುಕತೆ ನಡೆಯಲಿದೆ. ಆ ನಂತರ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಗೌಡರ ಜತೆ ಸಿದ್ದು ಫೋನ್‌ಇನ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಮೈತ್ರಿ ವಿಚಾರವಾಗಿ ದೇವೇಗೌಡರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಬಿಬಿಎಂಪಿಯಲ್ಲಿ ಯಥಾಸ್ಥಿತಿ ಮುಂದುವರಿಸೋಣ, ಏನಾದರೂ ವ್ಯತ್ಯಾಸ ಇದ್ದರೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಆ ನಂತರವೇ ರಾಮಲಿಂಗಾರೆಡ್ಡಿಯವರಿಗೆ ಮಾತುಕತೆಗೆ ಸೂಚಿಸಿದರು ಎಂದು ಹೇಳಲಾಗಿದೆ.
ಉಪಮೇಯರ್ ಸ್ಥಾನಕ್ಕೆ ಟೆಂಡರ್! ಜಮೀರ್
ಜೆಡಿಎಸ್‌ನಲ್ಲಿ ಉಪಮೇಯರ್ ಸ್ಥಾನಕ್ಕಾಗಿ ಟೆಂಡರ್ ಕರೆಯಲಾಗಿದೆ ಎಂದು ಪಕ್ಷದ ಬಂಡಾಯ ಶಾಸಕ ಜಮೀರ್ ಅಹ್ಮದ್ ಲೇವಡಿ ಮಾಡಿದ್ದಾರೆ.ಜತೆಗೆ ಜೆಡಿಎಸ್ ಜಾತ್ಯತೀತ ಪಕ್ಷ ಎಂಬುದಾದರೆ ಕಾಂಗ್ರೆಸ್ ಜತೆ ಹೋಗಲಿ. ಆದರೆ, ಹದಿನಾಲ್ಕು ಸದಸ್ಯರನ್ನು ಇಟ್ಟುಕೊಂಡು ಮೇಯರ್ ಸ್ಥಾನ ಕೇಳುವುದು ಧರ್ಮವಲ್ಲ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ. ಎರಡನೇ ಅವಧಿಗೆ ಮುಸ್ಲಿಂ ಅಭ್ಯರ್ಥಿಗೆ ಕೊಡಲಾಗುವುದು ಎಂದು ಹೇಳಿದ್ದರು, ಆದರೆ, ಕೊಡಲಿಲ್ಲ. ಇದೀಗ ಯಾರಿಗೆ ಕೊಡ್ತಾರೋ ನೋಡಬೇಕು ಎಂದೂ ಹೇಳಿದ್ದಾರೆ.
ಸೀಟ್‌ಗಾಗಿ ಪೈಪೋಟಿಯೂ ಜೋರು
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಕಾ ಆಗುವ ಸಾಧ್ಯತೆ ಕಂಡುಬರುತ್ತಿದ್ದಂತೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ದೇವರ ಜೀವನಹಳ್ಳಿ ವಾರ್ಡ್‌ನ ಸಂಪತ್‌ರಾಜ್ ಹಾಗೂ ಸುಭಾಷ್‌ನಗರ ವಾರ್ಡ್‌ನ ಗೋವಿಂದರಾಜ್, ಉಪ ಮೇಯರ್ ಸ್ಥಾನಕ್ಕೆ ಕಾವಲ್‌ಬೈರಸಂದ್ರ ವಾರ್ಡ್‌ನ ನೇತ್ರಾ ನಾರಾಯಣ್ ಹಾಗೂ ಕಾವೇರಿಪುರ ವಾರ್ಡ್‌ನ ರಮಿಳಾ ಉಮಾಶಂಕರ್‌ನಡುವೆ ಪೈಪೋಟಿ ಆರಂಭಗೊಂಡಿದೆ.
ಬಿಬಿಎಂಪಿ ಮೈತ್ರಿ ವಿಚಾರ ರಾಮಲಿಂಗಾರೆಡ್ಡಿಯವರು ಮನೆಗೆ ಬಂದು ಮಾತನಾಡಿದರು. ಕುಮಾರಸ್ವಾಮಿ ಜತೆ ಮಾತನಾಡಲು ಸೂಚಿಸಿದ್ದೇನೆ. ಮೈತ್ರಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಎಚ್.ಡಿ.ಕುಮಾರಸ್ವಾಮಿಗೆ ವಹಿಸಲಾಗಿದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಬಿಬಿಎಂಪಿ ವಿಚಾರದಲ್ಲಿ ಮುಖ್ಯಮಂತ್ರಿ ಸೂಚನೆ ಮೇರೆಗೆ ರೆಡ್ಡಿ ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ. ಅವರೇನು ಚರ್ಚಿಸಿದ್ದಾರೆ ಗೊತ್ತಿಲ್ಲ. ನಮ್ಮ ಸದಸ್ಯರು ಮೇಯರ್ ಸ್ಥಾನ ಬೇಕು ಎಂದು ಹೇಳಿದ್ದಾರೆ. ದೇವೇಗೌಡರ ಜತೆ ಏನು ಮಾತನಾಡಿದ್ದಾರೆ ಎಂಬುದನ್ನು ತಿಳಿದುಕೊಂಡು ಕುಪೇಂದ್ರರೆಡ್ಡಿ ಸೇರಿ ಎಲ್ಲರ ಜತೆ ಚರ್ಚಿಸುತ್ತೇನೆ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜತೆ ಜೆಡಿಎಸ್ ಮೈತ್ರಿ ಮುಂದುವರಿಸುವ ವಿಶ್ವಾಸವಿದೆ. ದೇವೇಗೌಡರು ಜಾತ್ಯತೀತ ನಿಲುವು ಹಾಗೂ ನಂಬಿಕೆ ಹೊಂದಿದ್ದಾರೆ. ಹೀಗಾಗಿ, ಮೈತ್ರಿ ಕುರಿತು ಗೊಂದಲ ಉಂಟಾಗದು. ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿಯೇ ಆಡಳಿತ ನಡೆಸಲಿದೆ.
-ರಾಮಲಿಂಗಾರೆಡ್ಡಿ, ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.