ಉಕ್ಕಿನ ಮೇಲ್ಸೇತುವೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ
Team Udayavani, Aug 14, 2022, 1:47 PM IST
ಬೆಂಗಳೂರು: ರಾಜಧಾನಿ 75ನೇ ಸ್ವಾತಂತ್ರೋತ್ಸದ ಸಂಭ್ರಮಕ್ಕೆ ನಗರ ಅಣಿಗೊಳ್ಳುತ್ತಿದೆ. ಆದರೆ ಈ ಸಂಭ್ರಮದ ವೇಳೆ ಅನಾವರಣಗೊಳ್ಳಬೇಕಾಗಿದ್ದ ಶಿವಾನಂದ ವೃತ್ತದ ಬಳಿ ನಿರ್ಮಿಸಲಾಗಿರುವ ಉಕ್ಕಿನ ಸೇತುವೆಗೂ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ!
ಬಿಬಿಎಂಪಿ 2011ರಲ್ಲಿ ನಗರದ ಸಂಚಾರ ದಟ್ಟಣೆ ನಿವಾರಿಸಲು ಶಿವಾನಂದ ವೃತ್ತದ ಬಳಿ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿ 18 ತಿಂಗಳಲ್ಲಿ ಪೂರ್ಣವಾಗಬೇಕಾಗಿತ್ತು. ಆದರೆ ನಿಗದಿತ ಗಡುವು ಪೂರ್ಣಗೊಂಡರೂ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಹಿಂದೆ ಆ.15ರಂದು ಸ್ವಾತಂತ್ರೋತ್ಸವದ ದಿನಾಚರಣೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಕ್ಕಿನ ಸೇತುವೆ ಲೋಕಾರ್ಪಣೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ವಾಗ್ಧಾನ ಮಾಡಿದ್ದರು.
ಆದರೆ, ಆ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೆಲ ದಿನಗಳ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಸೇತುವೆ ಕಾಮಗಾರಿಗೆ ಅಡೆ ತಡೆ ಉಂಟುಮಾಡಿದೆ. ಹೀಗಾಗಿ ಸೇತುವೆ ಬಾಕಿ ಉಳಿದಿರುವ ಕೆಲಸ ಗಳು ಪೂರ್ಣಗೊಳ್ಳಲು ಇನ್ನೂ ಕೆಲ ದಿನಗಳು ಹಿಡಿಯಲಿದೆ.
ವಾಹನಗಳ ಸಂಚಾರ: ಶಿವಾನಂದ ವೃತ್ತದ ಮೂಲಕ ಗಂಟೆಗೆ 3-5 ಸಾವಿರ ವಾಹನಗಳು ಹಾಗೂ ಪೀಕ್ ಅವರ್‌ನಲ್ಲಿ ಸುಮಾರು 10-15 ಸಾವಿರ ವಾಹನಗಳು ಸಂಚರಿಸು ತ್ತವೆ. ಆ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿವಾರಣೆ ಮಾಡುವ ಸಂಬಂಧ ಸರ್ಕಾರ ಸೇತುವೆ ನಿರ್ಮಾಣಕ್ಕೆ ಮುಂದಾಗಿತ್ತು. ಭೂ ಬಳಕೆ ಸೇರಿದಂತೆ ವಿವಿಧ ಕಾರಣಗಳು ಸೇತುವೆ ನಿರ್ಮಾಣ ಕಾರ್ಯ ಅಡ್ಡಿಯಾಗಿದ್ದವು.
40 ಕೋಟಿ ರೂ.ಯೋಜನಾ ವೆಚ್ಚ : ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ಯೋಜನೆಗೆ 2011ರಲ್ಲಿ ರಾಜ್ಯ ಸಚಿವ ಸಂಪುಟ ಸುಮಾರು 20 ಕೋಟಿ ರೂ. ಅನುಮೋದನೆ ನೀಡಿತು. ಆರಂಭದಲ್ಲಿ 395 ಮೀ. ಉದ್ದದ ಮೇಲ್ಸೇತುವೆ ನಿರ್ಮಿಸುವ ಆಲೋಚನೆ ಹೊಂದಲಾಗಿತ್ತು. ಆದರೆ, ಅದನ್ನು ಈಗ 495 ಮೀಟರ್‌ಗೆ ವಿಸ್ತರಿಸಲಾಗಿದೆ. ಇದರ ಜತೆಗೆ ಯೋಜನಾ ವೆಚ್ಚವೂ ಸುಮಾರು 40 ಕೋಟಿ ರೂ. ತಗಲಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಸೇತುವೆ ನಿರ್ಮಾಣದ ಕೆಲವು ಕಾಮಗಾರಿಗಳು ಪೂರ್ಣಗೊಂಡಿದೆ. ಆದರೆ, ಡಾಂಬರೀಕರಣ, ಮಾರ್ಗಸೂಚಿ ಫಲಕಗಳ ಅಳವಡಿಕೆ ಹಾಗೂ ಬಣ್ಣ ಹಚ್ಚುವುದು ಬಾಕಿ ಇದೆ. ಈ ಕೆಲಸಗಳು ಸಂಪೂರ್ಣಗೊಳ್ಳಲು ಇನ್ನೂ ಒಂದು ವಾರ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಕಾಮಗಾರಿಕೆ ಅಡ್ಡಿ ಉಂಟುಮಾಡಿದೆ. ಆ ಹಿನ್ನೆಲೆಯಲ್ಲಿ ಇನ್ನು ಒಂದು ವಾರದ ಕಾಮಗಾರಿ ನಡೆಯಲಿದೆ. ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. –ತುಷಾರ್ ಗಿರಿನಾಥ್, ಬಿಬಿಎಂಪಿ ಆಯುಕ್ತ
-ಭಾರತಿ ಸಜ್ಜನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.