ಎಚ್‌ಎಸ್‌ವಿ ರೋಗ ತಡೆಗೆ: ಕಾನೂನು ಸಲಹೆ ನೀಡಿ
Team Udayavani, Feb 6, 2019, 6:40 AM IST
ಬೆಂಗಳೂರು: ವಿಸರ್ಪ ಅಥವಾ “ಹರ್ಪೆಸ್ ಸಿಂಪ್ಲೆಕ್ಸ್ ವೈರಸ್” (ಎಚ್‌ಎಸ್‌ವಿ) ಎಂಬ ರೋಗವನ್ನು ಪತ್ನಿಗೆ ಹರಡಿಸಿದ್ದಲ್ಲದೇ ಇತರರಿಗೂ ಹರಡಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯೊಬ್ಬನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ ವಿಶೇಷ ಪ್ರಕರಣವೊಂದು ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, “ವ್ಯಕ್ತಿಯೊಬ್ಬ ತನಗಿರುವ ಎಚ್‌ಎಸ್‌ವಿ ರೋಗವನ್ನು ಮತ್ತೂಬ್ಬರಿಗೆ ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳೇನು? ಹೀಗೆ ಜೀವಕ್ಕೆ ಅಪಾಯಕಾರಿಯಾದ ರೋಗ ಹರಡುವ ವ್ಯಕ್ತಿಯೊಬ್ಬನ ಕೃತ್ಯವನ್ನು ನರಹತ್ಯೆಗೆ ಪ್ರಯತ್ನಿಸಿದ ಪ್ರಕರಣವಾಗಿ ಪರಿಗಣಿಸಲು ಸಾಧ್ಯವಿದೆಯೇ?
ಅಥವಾ ಇದನ್ನು “ಸಾಮಾಜಿಕ ಹತ್ಯೆ’ (ಸೋಶಿಯೆಲ್ ಡೆತ್) ಪರಿವ್ಯಾಪ್ತಿಗೆ ಪರಿಗಣಿಸಬಹುದೇ ಅನ್ನುವ ಕುರಿತು ಕಾನೂನು ಸಲಹೆ ನೀಡುವಂತೆ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ, ರಾಜ್ಯ ಅಡ್ವೋಕೇಟ್ ಜನರಲ್ ಉದಯ ಹೊಳ್ಳ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಸಂದೇಶ್ ಚೌಟ, ಹೈಕೋರ್ಟ್ ಪ್ಲೀಡರ್ ರಾಚಯ್ಯ ಅವರಿಗೆ ಸೂಚಿಸಿದೆ.
ಅಲ್ಲದೆ, ಗುಣಮುಖವಾಗದ ಮತ್ತು ಮಾರಣಾಂತಿಕ ರೋಗ ಹರಡಿಸುವ ಸಂಬಂಧ ದೇಶದಲ್ಲಿರುವ ವೈದ್ಯಕೀಯ ಹಾಗೂ ಕಾನೂನಾತ್ಮಕ ಅಂಶಗಳೇನು? ಎಂಬುದರ ಕುರಿತು ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಪತ್ನಿಗೆ ಎಚ್‌ಎಸ್‌ವಿ ತಗುಲಿತು: ಮದುವೆಗೆ ಮುನ್ನ ನನ್ನ ಪತಿಗೆ ಎಚ್‌ಎಸ್‌ವಿ ರೋಗ ಇತ್ತು. ಈ ವಿಷಯ ಪತಿ ಹಾಗೂ ಕುಟುಂಬದವರಿಗೆ ತಿಳಿದಿತ್ತು. ಇದನ್ನು ಮರೆಮಾಚಿ ನನ್ನನ್ನು ಮದುವೆಯಾದರು. ಅವರಿಂದ ನನಗೆ ಎಚ್‌ಎಸ್‌ವಿ ರೋಗ ತಗುಲಿತು. ಹೀಗಾಗಿ ಪತಿ ಹಾಗೂ ಆತನ ಕುಟುಂಬ ಸದಸ್ಯರು ನನಗೆ ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ, ಮಹಿಳೆಯ ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ನರಹತ್ಯೆಗೆ ಯತ್ನಿಸಿದ, ಜೀವಕ್ಕೆ ಅಪಾಯಕಾರಿಯಾದ ರೋಗ ಹರಡಿದ, ವಂಚಿಸಿದ, ಕೌಟುಂಬಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ, ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿದ ಪ್ರಕರಣಗಳನ್ನು ವಿಚಾರಣೆಗೆ ಅಂಗೀಕರಿಸಿ ಸಮನ್ಸ್ ಜಾರಿ ಮಾಡಿತ್ತು.
ಅಧೀನ ನ್ಯಾಯಾಲಯದ ಈ ಆದೇಶ ರದ್ದುಪಡಿಸುವಂತೆ ಕೋರಿ ಪತಿ ಹಾಗೂ ಆತನ ಕುಟುಂಬ ಸದಸ್ಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೊರ್ಟ್ ಈ ಮೇಲಿನಂತೆ ಸೂಚನೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.