ಎಸ್‌ಟಿಪಿ ಕಾಮಗಾರಿ ಪುನರಾರಂಭ ಶೀಘ್ರ
Team Udayavani, Oct 18, 2019, 10:16 AM IST
ಬೆಂಗಳೂರು: ಮೇಲ್ಛಾವಣಿ ಕುಸಿದು ಮೂವರು ಸಾವಿಗೀಡಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹೆಬ್ಟಾಳ ಹೊರ ವರ್ತುಲದ ಬಳಿಯ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ಡೈಜಸ್ಟರ್ ಟ್ಯಾಂಕ್‌ಗಳ ಕಾಮಗಾರಿಯನ್ನು ಮತ್ತೆ ಆರಂಭಿಸಲು ಜಲಮಂಡಳಿ ಮುಂದಾಗಿದೆ.
ಈ ಕುರಿತು ಹಿರಿಯ ಅಧಿಕಾರಿಗಳ ಹಾಗೂ ಸರ್ಕಾರ ಒಪ್ಪಿಗೆ ಪಡೆಯುತ್ತಿದ್ದು, ಮುಂದಿನ ವಾರದಿಂದ ಕಾಮಗಾರಿಯೂ ಆರಂಭವಾಗುವ ಸಾಧ್ಯತೆಗಳಿವೆ. ಈ ಘಟಕದಲ್ಲಿ ಒಟ್ಟು 4 ನೂತನ ಎಸ್‌ಟಿಪಿ ಡೈಜಸ್ಟರ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಕುಸಿದಿ ರುವ ಒಂದು ಟ್ಯಾಂಕ್ ಅನ್ನು ಬಿಟ್ಟು ಬಾಕಿ ಉಳಿದ ಟ್ಯಾಂಕ್‌ನ ಕಾಮಗಾರಿ ಮುಂದುವರೆಸಲು ಜಲಮಂಡಳಿ ಸದ್ದಿಲ್ಲದೆ ತಯಾರಿ ನಡೆಸಿದೆ.
ಮೆಗಾ ಸಿಟಿ ಆಪತ್ತು ನಿಧಿ ಹಾಗೂ ಅಮೃತ್ ಸಿಟಿ ಯೋಜನೆಯಡಿ ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಗ್ರಹವಾಗುವ ಕೊಳಚೆ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ನಾಲೆಗಳ ಮೂಲಕ ಹತ್ತಿರದ ಕೆರೆಗಳಿಗೆ ಹರಿಸಲು ನಗರದ ಒಂಭತ್ತು ಪ್ರದೇಶಗಳಲ್ಲಿ ಜಲಮಂಡಳಿಯು ತ್ಯಾಜ್ಯನೀರು ಸಂಸ್ಕರಣಾ ಘಟಕಗಳ ನಿರ್ಮಿಸುತ್ತಿದೆ. ಈ ಮೆಗಾ ಸಿಟಿ ಆಪತ್ತು ನಿಧಿ ಯೋಜನೆ ಅಡಿಯಲ್ಲಿಯೇ ಹೆಬ್ಟಾಳ ಹೊರ ವರ್ತುಲ ರಸ್ತೆ ಬಳಿ ಈ ತ್ಯಾಜ್ಯ ಸಂಸ್ಕರಣಾ ಘಟಕವು ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ಏಕಾಏಕಿ ಜು.17ರಂದು ಆ ಘಟಕದ ಒಂದು ಟ್ಯಾಂಕ್‌ನ ಮೇಲ್ಛಾವಣಿ ಕುಸಿದು ಮೂರು ಮಂದಿ ಸಾವಿಗೀಡಾಗಿ 20ಕ್ಕೂ ಹೆಚ್ಚು ಮಂದಿ ಗಾಯಾಳುಗಳಾದ್ದರು.
ಇನ್ನು ಈ ಅವಘಡಕ್ಕೆ ಕಾಮಗಾರಿ ಲೋಪದೋಷ ಕಾರಣವೇ ಎಂದು ತಿಳಿಯಲು ಜಲಮಂಡಳಿಯು ಚೆನ್ನೈನ ಸಿಎಸ್‌ಐಆರ್ (ಸ್ಟ್ರಕ್ಚರಲ್ ಎಂಜಿನಿಯರಿಂಗ್ ರಿಸರ್ಚ್ ಸೆಂಟರ್)ಗೆ ಗುಣಮಟ್ಟ ತನಿಖೆ ನಡೆಸಲು ನೀಡಿತ್ತು. ತನಿಖೆ ಪ್ರಗತಿಯಲ್ಲಿದ್ದ ಹಿನ್ನೆಲೆ ಹೆಬ್ಟಾಳದ ಎಸ್‌ಟಿಪಿ ಕಾಮಗಾರಿಗಳೆಲ್ಲ ಸ್ಥಗಿತಗೊಂಡಿದ್ದವು.
ಯೋಜನೆ ತಡವಾಗಬಾರದು ಎಂದು ಆರಂಭ: ಹೆಬ್ಟಾಳ ಹೊರ ವರ್ತುಲ ರಸ್ತೆ ಬಳಿ ನಿರ್ಮಿಸಲಾಗುತ್ತಿದ್ದ ಈ ಎಸ್‌ಟಿಪಿಯನ್ನು ಕಾಮಗಾರಿಯನ್ನು 2017 ಜುಲೈನಲ್ಲಿ ಆರಂಭಿಸಿದ್ದು, 2020 ಜನವರಿ 30ರೊಳಗೆ ಮುಗಿಸಲು ನಿರ್ಧರಿಸಲಾಗಿತ್ತು. 360 ಕೋಟಿ ರೂ. ವೆಚ್ಚದಲ್ಲಿಯೇ 100 ಎಂಎಲ್‌ಡಿ ಸಾಮರ್ಥ್ಯದ ಘಟಕ ನಿರ್ಮಿಸುತ್ತಿದ್ದು, ಒಟ್ಟು ನಾಲ್ಕು ಟ್ಯಾಂಕ್ ನಿರ್ಮಿಸಲಾಗು ತ್ತಿತ್ತು. ಈ ಪೈಕಿ ಒಂದು ಪೂರ್ಣಗೊಂಡಿದ್ದು, ಎರಡನೇಯದು ಕುಸಿದಿತ್ತು. ಈ ಅವಘಡ ನಡೆದ ಹಿನ್ನೆಲೆ ಉಳಿದ ಎರಡು ಟ್ಯಾಂಕರ್ ಕಾಮಗಾರಿಯೂ ಮೂರ್‍ನಾಲ್ಕು ತಿಂಗಳು ನಿಂತಿದೆ.
ಯೋಜನೆ ತಡವಾಗಬಾರದು ಎಂದು ಕುಸಿದು ತನಿಖೆ ನಡೆಯುತ್ತಿರುವ ಒಂದು ಟ್ಯಾಂಕ್ ಬಿಟ್ಟು ಅರ್ಧಕ್ಕೆ ನಿಂತಿರುವ ಉಳಿದ ಎರಡು ಟ್ಯಾಂಕ್‌ಗಳ ಸರ್ಕಾರ ಹಾಗೂ ಮೇಲಧಿಕಾರಿಗಳಿಂದ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಗುಣಮಟ್ಟ ಕುರಿತು ತನಿಖಾ ವರದಿ ಬರುವ ಮುಂಚೆಯೇ ಮತ್ತೆ ಕಾಮಗಾರಿ ಆರಂಭಿಸಲು ಮುಂದಾಗಿರುವ ಜಲಮಂಡಳಿಯ ನಡೆಗೆ ಕೆಲವೆಡೆ ವಿರೋಧ ವ್ಯಕ್ತವಾಗಿದೆ.
ತನಿಖಾ ವರದಿ ಬಂದಿಲ್ಲ : ಹೆಬ್ಟಾಳ ಘಟಕದ ಮೇಲ್ಚಾವಣಿ ಕುಸಿದ ಹಿನ್ನೆಲೆ ಮೂರನೇ ವ್ಯಕ್ತಿಯಿಂದ ಪ್ರಾಮಾಣಿಕವಾಗಿ ಕಾಮಗಾರಿಯ ಗುಣಮಟ್ಟ ಪರಿಶೀಲನೆಯಾಗಬೇಕು ಎಂದು ಜಲಮಂಡಳಿಯು ಘಟನೆ ನಡೆದ ವಾರದಲ್ಲಿಯೇ ಚೆನ್ನೈನ ಸಿಎಸ್‌ಐಆರ್ (ಸ್ಟ್ರಕ್ಚರಲ್ ಎಂಜಿನಿಯರಿಂಗ್ ರಿಸರ್ಚ್ ಸೆಂಟರ್)ಗೆ ತನಿಖೆಗೆಂದು ನೀಡಿತ್ತು. ಇದಕ್ಕಾಗಿ ಜಲಮಂಡಳಿಯು ಸಿಎಸ್‌ಐಆರ್‌ಗೆ 30 ಲಕ್ಷ ರೂ. ಶುಲ್ಕವನ್ನು ಪಾವತಿಸಿದೆ. ಘಟನೆ ನಡೆದ ನಾಲ್ಕು ತಿಂಗಳಾದರೂ ಯಾವುದೇ ವರದಿಯನ್ನು ಸಿಎಸ್‌ಐಆರ್ ನೀಡಿಲ್ಲ. ವರದಿ ಯಾವಾಗ ಬರುತ್ತದೆ ಎಂದು ಮಾಹಿತಿ ಇಲ್ಲ. ಇಂದಿಗೂ ತನಿಖೆ ನಡೆಯುತ್ತಿದೆ ಎಂದು ಜಲಮಂಡಳಿ ತಿಳಿಸಿದೆ
-ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.