ಬನ್ನೇರುಘಟ್ಟ ರಸ್ತೆಗೆ ಪಾರ್ಶ್ವವಾಯು!
Team Udayavani, Oct 5, 2019, 12:24 PM IST
ಬೆಂಗಳೂರು: ಅಲ್ಲಿ ಪರಸ್ಪರರಿಗೆ ಗೊತ್ತಿಲ್ಲದೆ ಬೈಕ್ ಸವಾರ ಮತ್ತು ಪಾದಚಾರಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಮೊದಲು ಪಾದಚಾರಿಯನ್ನು ಹಿಂದಿಕ್ಕಿದ ಸವಾರನು ಎದುರಿದ್ದ ಸಿಗ್ನಲ್‌ಗೆ ಬಂದು ನಿಂತ. ಕೆಲವೇ ಕ್ಷಣಗಳಲ್ಲಿ ಪಾದಚಾರಿ ಆ ಸವಾರನನ್ನು ಹಿಂದಿಕ್ಕಿ ಮುನ್ನಡೆದ. ಕೇವಲ 200 ಮೀಟರ್ ಅಂತರದಲ್ಲಿ ಹಲವು ಬಾರಿ ಈ ಹಿಂದಿಕ್ಕುವ ಮತ್ತು ಮುನ್ನುಗ್ಗುವ ಪ್ರಹಸನ ನಡೆಯಿತು. ಕೊನೆಗೆ ಪಾದಚಾರಿ ಮುಂದೆ ಸಾಗಿದ. ಬೈಕ್ ಸವಾರ ಮಾತ್ರ ವಾಹನದಟ್ಟಣೆಯಲ್ಲಿ ಕಳೆದುಹೋದ…!
ಇದು ನಡೆದದ್ದು ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಗ್ಗೆ 10ರ ಸುಮಾರಿಗೆ. ಉದ್ದೇಶಿತ ರಸ್ತೆಯಲ್ಲಿನ ವಾಹನದಟ್ಟಣೆಗೆ ಮೇಲಿನ ಪ್ರಸಂಗ ಒಂದು ಸ್ಯಾಂಪಲ್ ಅಷ್ಟೇ. ಇಂತಹ ಹಲವು ಘಟನೆಗಳು ಇಲ್ಲಿ ನಿತ್ಯ ನಿರಂತರ. ನಗರದ ಹೊರವಲಯ ಆನೇಕಲ್, ಕನಕಪುರ ರಸ್ತೆಗೆ ಸಂಪರ್ಕಿಸುವ ಬನ್ನೇರುಘಟ್ಟ ಮುಖ್ಯರಸ್ತೆಗೆ ಅಕ್ಷರಶಃ ಪಾರ್ಶ್ವವಾಯು ಹೊಡೆದಿದೆ. ಒಂದೆಡೆ ಅಲೆಯಂತೆ ನುಗ್ಗುವ ವಾಹನಗಳು, ಮತ್ತೂಂದೆಡೆ ಆ ವೇಗಕ್ಕೆ ಬ್ರೇಕ್ ಹಾಕುವ ಗುಂಡಿಗಳು. ಈ ಮಧ್ಯೆ ನಡೆಯುತ್ತಿರುವ ಕಾಮಗಾರಿ. ಇದೆಲ್ಲದರಿಂದ ಕುಂಟುತ್ತಾ ಸಾಗುತ್ತಿದ್ದ ವಾಹನಗಳು ಈಗ ತೆವಳುತ್ತಿವೆ. ಸುಮಾರು ಏಳು ಕಿ.ಮೀ ಕ್ರಮಿಸಲು ಕನಿಷ್ಠ ಒಂದೂವರೆ ಗಂಟೆ ಬೇಕಾಗುತ್ತದೆ. ಇಲ್ಲಿ ವಾಹನಗಳ ವೇಗ ಗಂಟೆಗೆ ಕೇವಲ 10 ಕಿ.ಮೀ.ಗೆ ಕುಸಿದಿದ್ದು, ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ.
ನಿರಂತರ ಕಾಮಗಾರಿ; ಅಸಹಾಯಕ ಪೊಲೀಸರು: ಪ್ರಮುಖವಾಗಿ “ಪೀಕ್ ಅವರ್’ನಲ್ಲಿ ವಾಹನ ದಟ್ಟಣೆ ನಿರ್ವಹಣೆಗೆ ಸಂಚಾರ ಪೊಲೀಸರು ಕೂಡ ಅಸಹಾಯಕರಾಗಿದ್ದು, ಸಂಚಾರ ಪೊಲೀಸರು ಹೇಳುವ ಪ್ರಕಾರ ಎರಡು-ಮೂರು ವರ್ಷಗಳ ಹಿಂದೆ ಪ್ರತಿ ನಿಮಿಷ 100ರಿಂದ 120 ವಾಹನಗಳು ಸಿಗ್ನಲ್‌ಗಳಿಂದ ಸಂಚರಿಸುತ್ತಿದ್ದವು. ಆದರೆ ಈಗ ಬಿಬಿಎಂಪಿ, ಜಲಮಂಡಳಿ ಮತ್ತು ನಮ್ಮ ಮೆಟ್ರೋ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ರಸ್ತೆ ತುಂಬಾ ಗುಂಡಿಗಳು ಬಾಯ್ತೇರೆದುದಿದ್ದು, ನಿಮಿಷಕ್ಕೆ 50 ವಾಹನಗಳು ಕೂಡ ಸಂಚರಿಸುತ್ತಿಲ್ಲ. ಇನ್ನು ಮೆಟ್ರೋ ಕಾಮಗಾರಿ ಪ್ರಗತಿ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದ್ದು, ಇದು ವಾಹನ ದಟ್ಟಣೆಗೆ ಪ್ರಮುಖ ಕಾರಣವಾಗುತ್ತಿದೆ. ಅರಕೆರೆಯಿಂದ ಫೋರ್ಟಿಸ್ ಆಸ್ಪತ್ರೆವರೆಗೆ ಪಾದಚಾರಿ ರಸ್ತೆಯ ಮೇಲೆಯೇ ದ್ವಿಚಕ್ರ ವಾಹನ ಸವಾರರು ಸಂಚಾರ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಸ್ಥಳೀಯ ಅಂಗಡಿಯವರು ಪಾದಚಾರಿ ರಸ್ತೆ ಮೇಲೆ ದ್ವಿಚಕ್ರ ವಾಹನಗಳು ಸಂಚರಿಸದಂತೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟರೂ, ಸವಾರರು ಮಾತ್ರ ಅವುಗಳನ್ನು ಪಕ್ಕಕ್ಕಿಟ್ಟು ಪಾದಚಾರಿ ಮಾರ್ಗದಲ್ಲಿಯೇ ನುಗ್ಗುತ್ತಾರೆ. ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಅರಕೆರೆವರೆಗೆ ಸಾಯಿ ಗಾರ್ಮೆಂಟ್, ಹುಳಿಮಾವು, ರಾಯಲ್ ಮೀನಾಕ್ಷಿ ಸೇರಿ 4 ಕಡೆ ಸಿಗ್ನಲ್ ಜಂಕ್ಷನ್‌ಗಳಿದ್ದು, ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಎರಡು ಸಿಗ್ನಲ್‌ಗಳು ಮಾತ್ರ ಕೆಲಸ ನಿರ್ವಹಿಸುತ್ತಿವೆ. ಇದರಿಂದ ಬೃಂದಾವನ ಬಡಾವಣೆಗೆ ಸಂಚರಿಸುವ ವಾಹನ ಸವಾರರು ಗಂಟೆಗಟ್ಟಲೆ ವಾಹನದಟ್ಟಣೆಗೆ ಸಿಕ್ಕಿಕೊಂಡು ತೊಂದರೆಗೆ ಒಳಗಾಗುತ್ತಿದ್ದಾರೆ.
ಈ ರಸ್ತೆಯಲ್ಲಿ ಪ್ರತಿ ಗಂಟೆಗೆ ಸುಮಾರು 20 ಸಾವಿರ ವಾಹನಗಳು ಸಂಚರಿಸುತ್ತಿದ್ದು, ಓಡಾಡುವ ವಾಹನಗಳ ವೇಗ ಇತರೆ ರಸ್ತೆಗಳಿಂತ ಕಡಿಮೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಪಾದಚಾರಿ ಮಾರ್ಗವನ್ನೇ ಅವಲಂಬಿಸಿದ್ದಾರೆ. ಇದರಿಂದ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. “ನಮಗಂತೂ ವಾರಾಂತ್ಯದಲ್ಲಿ ಸಂಚಾರದಟ್ಟಣೆ ನಿವಾರಿಸುವುದೇ ಸವಾಲಾಗಿ ಮಾರ್ಪಟ್ಟಿದೆ. ನಾಲ್ಕು ಸಿಗ್ನಲ್ ಜಂಕ್ಷನ್‌ಗಳಲ್ಲಿ ಒಂದು ಶಿಫ್ಟ್ಗೆ 20 ಸಿಬ್ಬಂದಿ ಕಾರ್ಯನಿರ್ವಹಿಸುತ್ತೇವೆ. ಆದರೂ ವಾಹನದಟ್ಟಣೆ ಕಡಿಮೆಯಾಗುತ್ತಿಲ್ಲ’ ಎಂದು ಸಂಚಾರಿ ಸಿಬ್ಬಂದಿಯೊಬ್ಬರು ತಿಳಿಸಿದರು.
150 ಕೋಟಿ ರೂ. ಬಿಡುಗಡೆ : ಬನ್ನೇರುಘಟ್ಟ ಮುಖ್ಯರಸ್ತೆ ಅಗಲೀಕರಣಕ್ಕೆ ನಗರೋತ್ಥಾನ ಅನುದಾನದಡಿ 150 ಕೋಟಿ ಬಿಡುಗಡೆಯಾಗಿದ್ದು, ಜೇಡಿಮರ ಜಂಕ್ಷನ್‌ನಿಂದ ಕೋಳಿಫಾರಂ ಜಂಕ್ಷನ್ ವರೆಗೆ 7 ಕಿ.ಮೀ.ವರೆಗೆ 45 ಮೀಟರ್ ಅಗಲದ ರಸ್ತೆ ನಿರ್ಮಾಣ ಮಾಡಬೇಕು. ಆದರೆ, ಕಾಮಗಾರಿ ಆಮೆಗತಿಯಲ್ಲಿದ್ದು, ಮೇಯರ್ ಭೇಟಿ ನೀಡಿದರೂ, ಇನ್ನೂ ಕಾಮಗಾರಿಗೆ ವೇಗ ದೊರೆತಿಲ್ಲ. ಹಾಗೆಯೇ ಅರಕೆರೆ ಜಂಕ್ಷನ್‌ನಿಂದ ಬಿಳಿಕಲ್ಲು ಜಂಕ್ಷನ್ ವರೆಗಿನ ಒಂದೂವರೆ ಕಿ.ಮೀ. ರಸ್ತೆಯ ಅಭಿವೃದ್ಧಿ ಮತ್ತು ನಿರ್ವಹಣೆ ಜವಾಬ್ದಾರಿ ನಮ್ಮ ಮೆಟ್ರೋ ಒಂದು ವರ್ಷದ ಹಿಂದೆಯೇ ಹೊತ್ತಿದ್ದರೂ, ಈವರಗೆ ಗುಂಡಿ ಮುಚ್ಚುವ ಕಾರ್ಯ ಆಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಬಿದ್ದವರನ್ನು ಮೇಲೆತ್ತುವ ಸಿಬ್ಬಂದಿ! : ಜಯದೇವ, ಅರಕೆರೆ, ಹುಳಿಮಾವು, ಗೊಟ್ಟಿಗೆರೆವರಗೆ ಸುಮಾರು 7 ಕಿ.ಮೀ. ಉದ್ದದ ರಸ್ತೆ ಇದ್ದು, ಈ ಮಾರ್ಗದಲ್ಲಿ ಸಾವಿರಕ್ಕೂ ಅಧಿಕ ಗುಂಡಿಗಳಿವೆ ಎಂದು ಅಂದಾಜಿಸಲಾಗಿದೆ. ಮಳೆ ಬಂದಾಗ ಟಾಟಾ ಎಸಿ, ಗೂಡ್ಸ್ ಆಟೋ, ಕಾರುಗಳು ಗುಂಡಿಗಳಲ್ಲಿ ಸಿಲುಕುವುದು ಸರ್ವೇಸಾಮಾನ್ಯ. ಚಾಲಕ ಎಷ್ಟೇ ಪ್ರಯತ್ನಿಸಿದರೂ, ಗುಂಡಿಯಿಂದ ವಾಹನ ಹೊರಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಜತೆಗೆ ನಾವೂ ವಾಹನ ಮೇಲೆತ್ತುತ್ತೇವೆ. ಇತ್ತೀಚೆಗೆ ಟಾಟಾ ಏಸ್ ವಾಹನ ಗುಂಡಿಗೆ ಬಿದ್ದಿತ್ತು. ಅದನ್ನು ಮೇಲೆತ್ತಿ ಸಂಚಾರಕ್ಕೆ ಅನುವು ಮಾಡಲಾಯಿತು. ರಸ್ತೆಗೆ ಡಾಂಬರೀಕರಣ ಮಾಡದಿದ್ದರೂ ಪರವಾಗಿಲ್ಲ, ಸದ್ಯದ ಮಟ್ಟಿಗೆ ಗುಂಡಿಗಳನ್ನು ಮುಚ್ಚಬೇಕು ಎಂದು ಸ್ಥಳೀಯ ಸಂಚಾರ ಪೊಲೀಸರೊಬ್ಬರು ಅಲವತ್ತುಕೊಂಡರು.
-ಮಂಜುನಾಥ ಗಂಗಾವತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.