ವಿದ್ಯಾರ್ಥಿಗಳ ಯಕ್ಷಗಾನ ರಂಗ ಪ್ರಯೋಗ
Team Udayavani, Oct 22, 2018, 12:56 PM IST
ಬೆಂಗಳೂರು: ಹೊಸ ಹೊಸ ರಂಗ ಪ್ರಯೋಗಗಳಿಗೆ ಕೈ ಹಾಕಿ ಸೈ ಎನಿಸಿಕೊಂಡಿರುವ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳು ಇದೀಗ ಮತ್ತೂಂದು ಯಶೋಗಾಥೆ ಸೃಷ್ಟಿಸಲು ಅಣಿಯಾಗಿದ್ದಾರೆ.
ಕರಾವಳಿ ಭಾಗದ ಹೆಸರಾಂತ ಯಕ್ಷಗಾನ ಭಾಗವತರಾದ ಹೊಸ್ತೋಟ ಮಂಜುನಾಥ ಭಾಗವತರ ರಚನೆಯ “ಚಿತ್ರಪಟ ರಾಮಾಯಣ’ವನ್ನು ಇದೇ ಮೊದಲ ಬಾರಿಗೆ ಯಕ್ಷಗಾನ ರಂಗ ಪ್ರಯೋಗಕ್ಕೆ ಸಿದ್ಧವಾಗುತ್ತಿದೆ. ವಿಶೇಷವೆಂದರೆ ಈ ರಂಗ ಪ್ರಯೋಗದ ಮುಖ್ಯಭೂಮಿಕೆಯಲ್ಲಿ ವಿದ್ಯಾರ್ಥಿನಿಯರು ಕಾಣಿಸಿಕೊಳ್ಳಲಿದ್ದಾರೆ.
ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು ಈಗಾಗಲೇ ಹಲವು ನಾಟಕಗಳನ್ನು ರಂಗಪ್ರಯೋಗಕ್ಕೆ ಇಳಿಸಿ ರಾಷ್ಟ್ರೀಯ ಮಟ್ಟದಲ್ಲಿ ರಂಗಸಾಧಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕಾದಂಬರಿ “ಮಲೆಗಳಲ್ಲಿ ಮದುಮಗಳು’ ಕೂಡ ಇದರಲ್ಲಿ ಸೇರಿದೆ.
ಇದರ ಜತೆಗೆ ಕುವೆಂಪು ಅವರ “ಶೂದ್ರ ತಪಸ್ವಿ’ ನಾಟಕ, ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರ ನಿರ್ದೇಶನದಲ್ಲಿ “ಸಿರಿ’ ಹಾಗೂ ಸಿ.ಬಸವಲಿಂಗಯ್ಯ ನಿರ್ದೇಶನದಲ್ಲಿ ದೇವನೂರು ಮಹಾದೇವ ಅವರ “ಕುಸುಮ ಬಾಲೆ’ ಕೃತಿಯನ್ನು ಯಶಸ್ವಿಯಾಗಿ ರಂಗ ಪ್ರಯೋಗಕ್ಕೆ ತರಲಾಗಿದೆ. ಈ ಎಲ್ಲಾ ಯಶಸ್ಸಿನ ನಡುವೆ ಈಗ ಹೊಸ್ತೋಟ ಮಂಜುನಾಥ ಭಾಗವತ ಅವರ “ಚಿತ್ರಪಟ ರಾಮಾಯಣ’ವನ್ನು ರಂಗದ ಮೇಲೆ ತರುತ್ತಿದ್ದಾರೆ.
ಹೊಸ ಅನುಭವ: ಈ ಹಿಂದೆ ಹೆಸರಾಂತ ಕಾದಂಬರಿ ಮತ್ತು ನಾಟಕಗಳನ್ನು ರಂಗಕ್ಕೆ ಒಳಪಡಿಸಲಾಗಿದೆ. ಆದರೆ ಈವರೆಗೆ ರಾಷ್ಟ್ರೀಯ ನಾಟಕ ಶಾಲೆ ವಿದ್ಯಾರ್ಥಿಗಳು ಯಕ್ಷಗಾನ ಪ್ರಸಂಗದಲ್ಲಿ ಅಭಿನಯಿಸಿರಲಿಲ್ಲ. ಹೀಗಾಗಿ ಇದೊಂದು ಹೊಸ ಅನುಭವ ಎಂದು ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥರಾದ ಬಸವಲಿಂಗಯ್ಯ ಹೇಳಿದ್ದಾರೆ.
ರಂಗಭೂಮಿಯಲ್ಲಿ ನವ್ಯ ಪ್ರಯೋಗಕ್ಕೆ ಕೈಹಾಕುವುದು ರಾಷ್ಟ್ರೀಯ ನಾಟಕ ಶಾಲೆಯ ಕಾಯಕ. ಈಗಾಗಲೇ ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ರಂಗ ಪ್ರಯೋಗ ಭಾರೀ ಯಶಸ್ಸು ಕಂಡಿದೆ. ಅದೇ ರೀತಿಯ ಪ್ರಯತ್ನ ಈಗಲೂ ನಡೆದಿದ್ದು, ಇದರಲ್ಲೂ ವಿದ್ಯಾರ್ಥಿಗಳು ಜನಮನ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಕನ್ನಡ ಕಲಿತ ಹೆಣ್ಣು ಮಕ್ಕಳು: ರಾಷ್ಟ್ರೀಯ ನಾಟಕ ಶಾಲೆಯ ಸುಮಾರು 20 ಮಂದಿ ವಿದ್ಯಾರ್ಥಿಗಳು ಯಕ್ಷ ರಂಗಪ್ರಯೋಗದಲ್ಲಿ ಕಾಣಸಿಕೊಳ್ಳಲಿದ್ದಾರೆ. ಇದರಲ್ಲಿ 8ಮಂದಿ ವಿದ್ಯಾರ್ಥಿನಿಯರು ರಾಮ, ಲಕ್ಷ್ಮಣ, ರಾವಣ ಮತ್ತು ಶೂರ್ಪನಖೀ ಸೇರಿದಂತೆ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಆಂಧ್ರಪ್ರದೇಶ, ಒಡಿಶಾ, ಕೇರಳ ಮತ್ತು ತಮಿಳುನಾಡು ಮೂಲದ ಅವರು ಈಗಾಗಲೇ ಕನ್ನಡವನ್ನು ಕಲಿತಿದ್ದು, ಕನ್ನಡದಲ್ಲೇ ಮಾತುಗಾರಿಕೆ ಇರಲಿದೆ. ಇದಕ್ಕಾಗಿಯೇ ಕಲಾಗ್ರಾಮದಲ್ಲಿ ಹಗಲು -ರಾತ್ರಿಯನ್ನದೇ ತಾಲೀಮು ನಡೆಸಿದ್ದಾರೆ.
ಮೈ ಚಲನೆ, ಯುದ್ಧ ನೃತ್ಯ ಕಲಿಕೆ: ಯಕ್ಷಗಾನದಲ್ಲಿ ನಾಟ್ಯದ ಜತೆಗೆ ಯುದ್ಧ ನೃತ್ಯಗಳೂ ಇರುತ್ತವೆ. ಅದರಲ್ಲೂ ಯುದ್ಧ ನೃತ್ಯಕ್ಕೆ ಎಲ್ಲಿಲ್ಲದ ಮಾನ್ಯತೆ. ಹೀಗಾಗಿ, ಡಾ.ಶಿರಾಮ ಕಾರಂತರ ಶಿಷ್ಯರಾದ ಬನ್ನಂಜೆ ಸಂಜೀವ ಸುವರ್ಣ ಅವರು ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕುಣಿತ ಮತ್ತು ಯುದ್ಧ ನೃತ್ಯಗಳನ್ನು ಕಲಿಸಿಕೊಟ್ಟಿದ್ದು, ಅವರ ನಿರ್ದೇಶನ ಮಾಡಿದ್ದಾರೆ.
ವಿದ್ಯಾರ್ಥಿಗಳು ಸುಮಾರು 20 ದಿನ ತಾಲೀಮು ನಡೆಸಿದ್ದಾರೆ. ತಾಲೀಮು ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕುಣಿತ, ಸಪ್ತ ತಾಳ, ಮುಖ ಅಭಿನಯ, ಮೈ ಚಲನೆ, ರಂಗ ಕ್ರಿಯೆ, ಮಾತುಗಾರಿಕೆ ಸೇರಿದಂತೆ ಹಲವು ರೀತಿಯ ಕಲಿಕೆಗಳನ್ನು ಹೇಳಿಕೊಡಲಾಗಿದೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಕಲಿತಿದ್ದಾರೆ ಎಂದು ಬನ್ನಂಜೆ ಸಂಜೀವ ಸುವರ್ಣ “ಉದಯವಾಣಿ’ಗೆ ಮಾಹಿತಿ ನೀಡಿದರು.
ವಿವಿಧ ರಾಜ್ಯಗಳಿಂದ ವಿದ್ಯಾರ್ಥಿನಿಯರು ಬಂದಿರುವುದರಿಂದ ಕುಣಿತ ಹೇಳಿಕೊಡುವುದು ಆರಂಭದಲ್ಲಿ ಕಷ್ಟವಾಯ್ತು. ನಂತರ ಮೈ ಚಲನೆಗೆ ವಿದ್ಯಾರ್ಥಿನಿಯರು ಒಗ್ಗಿಕೊಂಡರು ಎಂದು ಹೇಳಿದ್ದಾರೆ.
ಇಂದು ಕಲಾಗ್ರಾಮದಲ್ಲಿ ಪ್ರಯೋಗ: ಅ.22 ಮತ್ತು 23 ರಂದು ಸಂಜೆ 7 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಯಕ್ಷಗಾನ ರಂಗ ಪ್ರಯೋಗ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇದ್ದು , ಬಳಿಕ ಮತ್ತಷ್ಟು ರಂಗ ಪ್ರದರ್ಶನ ಆಯೋಜಿಸಲು ಚಿಂತಿಸಲಾಗುವುದು ಎಂದು ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ರಂಗ ಪ್ರಯೋಗ ಹೊಸದು. ಇದಾದ ಬಳಿಕ ವಚನ ಸಾಹಿತ್ಯದ ಕುರಿತ ರಂಗ ಪ್ರಯೋಗ ನಡೆಯಲಿದೆ.
-ಸಿ.ಬಸವಲಿಂಗಯ್ಯ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಮುಖ್ಯಸ್ಥ
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ