ಸಬ್ ಅರ್ಬನ್ ಷರತ್ತು ಸಡಿಲಿಸಿದ ಸರ್ಕಾರ
Team Udayavani, Feb 23, 2019, 6:24 AM IST
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ನಿಟ್ಟಿನಲ್ಲಿ ರೂಪಿಸಲಾಗಿರುವ ಸಬ್ ಅರ್ಬನ್ (ಉಪನಗರ) ರೈಲು ಯೋಜನೆಗಿದ್ದ ಅಡಚಣೆ ನಿವಾರಣೆಯಾದಂತಾಗಿದ್ದು, ರಾಜ್ಯ ಸರ್ಕಾರ 19 ಷರತ್ತುಗಳನ್ನು ಸಡಿಲಿಸಿದೆ. ಕೇಂದ್ರ ಕಲ್ಲಿದ್ದಲು ಹಾಗೂ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರ ಜತೆ ಶುಕ್ರವಾರ ನಡೆಸಿದ ಮಾತುಕತೆ ವೇಳೆ 19 ಷರತ್ತುಗಳನ್ನು ರದ್ದುಪಡಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮತಿ ಸೂಚಿಸಿದ್ದಾರೆ.
ಅಷ್ಟೇ ಅಲ್ಲದೆ ಫೆ.25ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅಂಗೀಕಾರ ನೀಡಿ ಕೇಂದ್ರಕ್ಕೆ ಸಮಗ್ರ ವರದಿ ಸಮೇತ ಪ್ರಸ್ತಾವನೆ ಕಳಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಚರ್ಚಿಸಿ ದಿನಾಂಕ ನಿಗದಿಗೊಳಿಸಿ ಅವರಿಂದಲೇ ಶಂಕುಸ್ಥಾಪನೆ ನೆರವೇರಿಸಲು ಕೋರಿದ್ದಾರೆ.
ಮುಖ್ಯಮಂತ್ರಿ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ರೈಲ್ವೆ ಸಚಿವ ಪಿಯೂಶ್ ಗೋಯಲ್, ರಾಜ್ಯ ಸರ್ಕಾರ, ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಸಕ್ತಿ ವಹಿಸಿ ಷರತ್ತು ರದ್ದುಪಡಿಸಲು ಒಪ್ಪಿದ್ದಾರೆ. ರೈಲ್ವೆ ಜಮೀನನ್ನು ಪ್ರತಿ ಎಕರೆಗೆ ಕೇವಲ ಒಂದು ರೂ.ನಂತೆ ಗುತ್ತಿಗೆಗೆ ನೀಡಲಾಗುತ್ತಿದೆ.
ಇದರಿಂದ ಯೋಜನೆಯ ವೆಚ್ಚ 6,700 ಕೋಟಿ ರೂ. ಕಡಿಮೆಯಾಗಲಿದೆ. ಕೇಂದ್ರ ಸರ್ಕಾರದ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಪ್ರಧಾನಿ ಜತೆ ಚರ್ಚಿಸಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಮುನ್ನ ಶಂಕುಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಉಪನಗರ ರೈಲು ಯೋಜನೆಗಾಗಿ ಬೆಂಗಳೂರು ನಗರದೊಳಗೆ ಭೂಸ್ವಾಧೀನ ಕಷ್ಟ. ಹೀಗಾಗಿ, 70 ಕಿ.ಮೀ. ಎತ್ತರಿಸಿದ ಮಾರ್ಗ, 90 ಕಿ.ಮೀ. ಸಾಧಾರಣ ಮಾರ್ಗ ರೂಪಿಸಲು ರೈಲ್ವೆ ಇಲಾಖೆ ಉದ್ದೇಶಿಸಿದೆ. ಒಪ್ಪಿಗೆ ದೊರೆತ ಆರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ರೈಲ್ವೆ ಇತಿಹಾಸದಲ್ಲಿ ಇಷ್ಟೊಂದು ವೇಗವಾಗಿ ಯಾವ ಕೆಲಸವೂ ಆಗಿಲ್ಲ. ನಾನು ಕರೆ ಮಾಡಿದ ತಕ್ಷಣ ಮುಖ್ಯಮಂತ್ರಿಯವರು ತಮ್ಮ ಎಲ್ಲ ಕಾರ್ಯಕ್ರಮ ರದ್ದು ಮಾಡಿ ಸಭೆ ನಡೆಸಿದ್ದಾರೆ. 23 ಸಾವಿರ ಕೋಟಿ ರೂ. ಯೋಜನೆಯ 160 ಕಿ.ಮೀ. ಮಾರ್ಗದ ಸಬ್ ಅರ್ಬನ್ ರೈಲು ಯೋಜನೆಯಿಂದ ಮೆಟ್ರೋ, ರೈಲು ನಿಲ್ದಾಣ, ವಿಮಾನ ನಿಲ್ದಾಣ ಸೇರಿ 80 ನಿಲ್ದಾಣಗಳಿಗೆ ಸಂಪರ್ಕ ಸಿಗಲಿದೆ ಎಂದು ತಿಳಿಸಿದರು.
ಯೋಜನೆಯನ್ನು ಮೊದಲು 80:20 ಆಧಾರದಲ್ಲಿ ಕಾರ್ಯಗತ ಮಾಡಲು ಉದ್ದೇಶಿಸಲಾಗಿತ್ತು. ಇದೀಗ 50:50 ಆಧಾರದಲ್ಲಿ ವೆಚ್ಚ ಭರಿಸಲಾಗುವುದು ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದರು.
ಕಮಿಟ್‌ಮೆಂಟ್ ಇದೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಉಪನಗರ ಯೋಜನೆ ಕುರಿತು ಸಮಗ್ರವಾಗಿ ಚರ್ಚಿಸಿದ್ದೇವೆ. ಈ ವಿಷಯದಲ್ಲಿ ಪಿಯೂಶ್ ಗೋಯಲ್ ಅವರಿಗೆ ವೈಯಕ್ತಿಕ ಕಮಿಟ್‌ಮೆಂಟ್ ಇದೆ. ರಾಜ್ಯ ಸರ್ಕಾರದಿಂದ ನಾವು ಕೆಲವು ಷರತ್ತುಗಳನ್ನು ಹಾಕಿದ್ದೆವು. ಇದೀಗ ವುಗಳನ್ನು ಸಡಿಲಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಸಬ್ ಅರ್ಬನ್ ರೈಲು ಯೋಜನೆ ಬಗ್ಗೆ 1995ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಪ್ರಸ್ತಾಪವಾಗಿತ್ತು. ನಂತರ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಅವರು ಯೋಜನೆಗಾಗಿ ಸಾಕಷ್ಟು ಶ್ರಮಿಸಿದ್ದರು. ಈಗ ಸ್ವತಃ ರೈಲ್ವೆ ಸಚಿವರು ಆಸಕ್ತಿ ವಹಿಸಿದ್ದಾರೆ.
ಯೋಜನೆಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 400 ಕೋಟಿ ರೂ. ಮೀಸಲಿರಿಸಿದೆ ಎಂದು ಹೇಳಿದರು. ಸಂಸದ ಪಿ.ಸಿ.ಮೋಹನ್, ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕ ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು.
ನಾಲ್ಕು ಕಾರಿಡಾರ್, 161 ಕಿ.ಮೀ.: ಕೆಂಗೇರಿ-ವೈಟ್‌ಫೀಲ್ಡ್, ಬೆಂಗಳೂರು-ರಾಜಾನುಕುಂಟೆ, ನೆಲಮಂಗಲ-ಬೈಯಪ್ಪನಹಳ್ಳಿ, ಸೇರಿ ನಾಲ್ಕು ಕಾರಿಡಾರ್‌ಗಳ 160 ಕಿ.ಮೀ ಉದ್ದದ ಯೋಜನೆಯಲ್ಲಿ 83 ನಿಲ್ದಾಣಗಳಿರಲಿದ್ದು 12 ಕಡೆ ಮೆಟ್ರೋ ಮಾರ್ಗಕ್ಕೆ ಅಡ್ಡಲಾಗಿ ಹಾದು ಹೋಗಲಿದೆ. ಉಪ ನಗರ ರೈಲು ದಿನಕ್ಕೆ 30 ಲಕ್ಷ ಪ್ರಯಾಣಿಕರು ಸಂಚರಿಸುವಷ್ಟು ಸಾಮರ್ಥ್ಯ ಹೊಂದಿರಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಸಾರಿಗೆ ವ್ಯವಸ್ಥೆಯನ್ನೇ ಇದು ಬದಲಿಸಲಿದೆ.
ಅನಂತಕುಮಾರ್ ನೆನೆದು ಭಾವುಕರಾದ ಗೋಯಲ್: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಅವರನ್ನು ನೆನೆದು ಪಿಯೂಶ್ ಗೋಯಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾವುಕರಾದರು. ಬೆಂಗಳೂರು ಉಪನಗರ ರೈಲು ಯೋಜನೆ ಅನಂತ್ ಅವರ ಕನಸಾಗಿತ್ತು.
ಆ ಕನಸು ನನಸು ಮಾಡುವುದು ಅವರ ಸಹೋದರನಾಗಿ ನನ್ನ ಕರ್ತವ್ಯ. ಈ ಯೋಜನೆ 2016, ಸೆಪ್ಟಂಬರ್‌ನಲ್ಲಿ ಅವರು ಈ ಯೋಜನೆ ಪ್ರಸ್ತಾಪಿಸಿದ್ದರು. ಆಗಲೇ ಯೋಜನೆ ಆರಂಭವಾಗಿರುವುದರಿಂದ ಈಗ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದರು.
ಉಪನಗರ ರೈಲು ಯೋಜನೆ ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ. ಯೋಜನೆ ಕಾರ್ಯಗತವಾಗಲು ಇದ್ದ ಅಡ್ಡಿ ನಿವಾರಿಸಿದ್ದಕ್ಕೆ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು.
-ಪಿ.ಸಿ.ಮೋಹನ್, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.