ಎಲೆಕ್ಟ್ರಿಕ್ ಬಸ್ ಖರೀದಿಸಿದರಷ್ಟೇ ಸಬ್ಸಿಡಿ
Team Udayavani, Apr 2, 2018, 12:33 PM IST
ಬೆಂಗಳೂರು: ಎಲೆಕ್ಟ್ರಿಕ್ ಬಸ್‌ಗಳಿಗೆ ಸಬ್ಸಿಡಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ “ಯೂ-ಟರ್ನ್’ ಹೊಡೆದಿದೆ. ಖರೀದಿಸಿದರೆ ಮಾತ್ರ ಸಬ್ಸಿಡಿ ನೀಡಲಾಗುವುದು; ಗುತ್ತಿಗೆ ಪದ್ಧತಿಗೆ ಸಾಧ್ಯವಿಲ್ಲ ಎಂದು ಸೂಚಿಸಿದೆ. ಇದರಿಂದ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಮುಂದಾಗಿರುವ ಹಲವು ನಗರಗಳಿಗೆ “ಶಾಕ್’ ನೀಡಿದೆ.
ದೆಹಲಿಯಲ್ಲಿ ಈಚೆಗೆ ನಡೆದ ಕೇಂದ್ರ ಭಾರೀ ಕೈಗಾರಿಕಾ ಇಲಾಖೆ ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮಾತ್ರ ಸಬ್ಸಿಡಿ ನೀಡಲು ಸೂಚಿಸಲಾಗಿತ್ತು. ಗುತ್ತಿಗೆ ಆಧಾರದ ಮೇಲೆ ರಸ್ತೆಗಿಳಿಸುವುದಾದರೆ, ಈ ಅನುದಾನ ಅನ್ವಯ ಆಗುವುದಿಲ್ಲ. ಆ ಹಣವನ್ನು ಆಯಾ ಸಾರಿಗೆ ಸಂಸ್ಥೆಗಳೇ ಭರಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಪರಿಸರ ಸ್ನೇಹಿ ಸಮೂಹ ಸಾರಿಗೆ ವಾಹನಗಳನ್ನು ರಸ್ತೆಗಿಳಿಸುವ ಮಹದಾಸೆಗೆ ಡೋಲಾಯಮಾನವಾಗಿದೆ.
ಬಿಎಂಟಿಸಿ ಉತ್ಸಾಹಕ್ಕೆ ತಣೀರು: ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು, ಸೇವೆ ಕಲ್ಪಿಸಲು ಆಯಾ ಸಾರಿಗೆ ಸಂಸ್ಥೆಗಳು ನಿರ್ಧರಿಸಿವೆ. ಬಿಎಂಟಿಸಿ 80 ಬಸ್‌ಗಳಿಗೆ ಟೆಂಡರ್ ಕರೆದಿದ್ದು, ಈಗಾಗಲೇ ಅತ್ಯಂತ ಕಡಿಮೆ ದರದಲ್ಲಿ ಬಸ್‌ಗಳ ಪೂರೈಕೆಗೆ ಮುಂದೆಬಂದ ಗೋಲ್ಡ್‌ಸ್ಟೋನ್ ಕಂಪನಿಗೆ ಕಾರ್ಯಾದೇಶವನ್ನೂ ನೀಡಲಾಗಿದೆ. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಇದೇ ಮಾದರಿಯಲ್ಲಿ ಮತ್ತೆ 500 ಬಸ್‌ಗಳ ಟೆಂಡರ್‌ಗೆ ಸಿದ್ಧತೆ ಕೂಡ ನಡೆಸಿತ್ತು. ಹೀಗಿರುವಾಗ ಕೇಂದ್ರದ ಈ ನಿಲುವು ಗೊಂದಲ ಸೃಷ್ಟಿಸಿದೆ.
ಲಿಖೀತವಾಗಿಲ್ಲ ಹೇಳಿಲ್ಲ: ಗುತ್ತಿಗೆ ಆಧಾರದಲ್ಲಿ ಪಡೆದು, ರಸ್ತೆಗಿಳಿಸುವ ಎಲೆಕ್ಟ್ರಿಕ್ ಬಸ್‌ಗಳಿಗೆ ಅನುದಾನ ನೀಡಲಾಗದು ಎಂದು ಕೇಂದ್ರ ಭಾರೀ ಕೈಗಾರಿಕಾ ಇಲಾಖೆ ಮೌಖೀಕವಾಗಿ ಹೇಳಿದೆ. ಈ ನಿಟ್ಟಿನಲ್ಲಿ ಲಿಖೀತವಾಗಿ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಹೇಳಿಕೆಯಿಂದ ಗೊಂದಲ ಉಂಟಾಗಿದ್ದು, ಕೇಂದ್ರದ ಮನವೊಲಿಸುವ ಪ್ರಯತ್ನ ನಡೆಸುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ತಿಳಿಸಿದರು.
ಕಳೆದ ನಾಲ್ಕು ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಎಲೆಕ್ಟ್ರಿಕ್ ಬಸ್ ಗುತ್ತಿಗೆ ಪಡೆಯುವ ಬಗ್ಗೆ ಪ್ರತಿ ಹಂತದಲ್ಲೂ ಕೇಂದ್ರದ ಗಮನಕ್ಕೆ ತರಲಾಗುತ್ತಿದೆ. ಮೊದಲು 40 ಬಸ್‌ಗಳಿಗೆ ಟೆಂಡರ್ ಕರೆಯಲಾಗಿತ್ತು. ಬೆನ್ನಲ್ಲೇ ಮತ್ತೆ 40 ಬಸ್‌ಗಳಿಗೆ ಟೆಂಡರ್ ಕರೆಯಲಾಯಿತು. ಇವೆರಡಕ್ಕೂ ಕೇಂದ್ರ ಅನುಮೋದನೆ ನೀಡಿದೆ. ಹೀಗಿರುವಾಗ, ದಿಢೀರ್ ಅನುದಾನ ನೀಡಲು ನಿರಾಕರಿಸಿರುವುದು ದಿಕ್ಕುತೋಚದಂತೆ ಮಾಡಿದೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
ಗುತ್ತಿಗೆ ಆಧಾರದ ಮೇಲೆ ಪೂರೈಸಲಾಗುವ ಬಸ್‌ಗಳು ಹತ್ತು ವರ್ಷ ಮಾತ್ರ ನಿಗಮದ ಸುಪರ್ದಿಯಲ್ಲಿ ಇರುತ್ತವೆ. ನಂತರದಲ್ಲಿ ಗುತ್ತಿಗೆ ಪಡೆದ ಕಂಪೆನಿಗಳು ವಾಪಸ್ ಪಡೆಯುತ್ತವೆ. ಇದರಿಂದ ಏನು ಬಂತು? ಹಣವೂ ಹೋಯ್ತು; ಬಸ್‌ಗಳೂ ಬರುವುದಿಲ್ಲ. ಆದ್ದರಿಂದ ಈ ಪದ್ಧತಿ ಬೇಡ ಎನ್ನುವುದು ಕೇಂದ್ರದ ವಾದ.
ಗುತ್ತಿಗೆಯಿಂದ ರಿಸ್ಕ್ ಇಲ್ಲ: ಬಸ್ ಖರೀದಿಯು ಬಿಎಂಟಿಸಿಗೆ ಹೊರೆಯಾಗಿ ಪರಿಣಮಿಸಲಿದೆ. ಈಗಾಗಲೇ ಸಂಸ್ಥೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಈಗ ನೂರಾರು ಕೋಟಿ ರೂ. ಹೂಡಿಕೆ ಕಷ್ಟಸಾಧ್ಯ. ಹಾಗೊಂದು ವೇಳೆ, ಇಷ್ಟೊಂದು ಹಣ ನೀಡಿ ಖರೀದಿಸಿದರೂ, ಮುಂದಿನ ದಿನಗಳಲ್ಲಿ ಈ ಮಾದರಿ ಬಸ್‌ಗಳು ಅಪ್ರಸ್ತುತವಾಗಬಹುದು. ಗುತ್ತಿಗೆ ಪಡೆದರೆ ಈ ರಿಸ್ಕ್ ಇರುವುದಿಲ್ಲ. ನಿರ್ವಹಣಾ ವೆಚ್ಚವೂ ಬರುವುದಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯವಾಗಿ ಖರೀದಿ ಮಾಡುವ ಬಸ್‌ಗಳ ಆಯಸ್ಸು ಇರುವುದೇ 9ರಿಂದ 10 ವರ್ಷ. ನಂತರ ಅವು ಗುಜರಿಗೇ ಸೇರುತ್ತವೆ ಎಂಬುದು ಬಿಎಂಟಿಸಿ ಅಧಿಕಾರಿಗಳ ವಾದ.
ಈ ಮಧ್ಯೆ ಟೆಂಡರ್‌ನಲ್ಲಿ ಭಾಗವಹಿಸಿ ಕಾರ್ಯಾದೇಶ ಪಡೆದ ಕಂಪನಿಗಳು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಈ ರೀತಿಯ ಗೊಂದಲದಿಂದ ಬಸ್ ತಯಾರಿಕೆ ಮತ್ತು ಪೂರೈಕೆ ಕಂಪನಿಗಳು ವಿಶ್ವಾಸ ಕಳೆದುಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆದಾಗ, ಭಾಗವಹಿಸಲು ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ.
ಎಲ್ಲೆಲ್ಲಿ ಗುತ್ತಿಗೆ?
-ಬೆಂಗಳೂರು- 60 ಎಸಿ (12 ಮೀ. ಉದ್ದ), 20 ನಾನ್‌ಎಸಿ (9 ಮೀ. ಉದ್ದ)
-ಹೈದರಾಬಾದ್- 100 ಎಸಿ (12 ಮೀ. ಉದ್ದ)
-ಮುಂಬೈ- 80 ಎಸಿ ಮತ್ತು ನಾನ್‌ಎಸಿ
ಖರೀದಿ ಎಲ್ಲೆಲ್ಲಿ?
ಲಖನೌ, ಜಮ್ಮು, ಇಂಧೋರ್, ಗುವಾಹಟಿ, ಜೈಪುರ
ಗೊಂದಲದ ಹಿಂದೆ ಲಾಭಿ?: ಗುತ್ತಿಗೆ ಪದ್ಧತಿಗೆ ಸಬ್ಸಿಡಿ ನೀಡದಿರುವುದರ ಹಿಂದೆ ಕಂಪನಿಗಳು ಅಥವಾ ಪ್ರಭಾವಿಗಳ ಲಾಬಿ ಇರುವ ಸಾಧ್ಯತೆಯೂ ಇದೆ. ಗುತ್ತಿಗೆ ಪಡೆದರೆ, ಖರೀದಿಸುವ ಅಗತ್ಯ ಇರುವುದಿಲ್ಲ. ಇದು ತಯಾರಿಕೆ ಕಂಪನಿಗಳು ಮತ್ತು ಅವುಗಳಿಂದ ಅನುಕೂಲ ಪಡೆಯುವ ಲೆಕ್ಕಾಚಾರದಲ್ಲಿದ್ದ ಪ್ರಭಾವಿಗಳಿಗೆ ಹಿನ್ನಡೆ ಆಗಲಿದೆ. ಆದ್ದರಿಂದ ಪ್ರಭಾವ ಬಳಸಿ, ಈ ತಂತ್ರ ರೂಪಿಸಿರುವ ಸಾಧ್ಯತೆ ಇದೆ ಎಂದು ನಿಗಮದ ಉನ್ನತ ಮೂಲಗಳು ತಿಳಿಸಿವೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.