ಅಂಚೆ ಕಚೇರಿ ಮೂಲಕ ಡ್ರಗ್ಸ್ ಸರಬರಾಜು
Team Udayavani, Dec 31, 2019, 3:10 AM IST
ಬೆಂಗಳೂರು: ಅಂತಾರಾಷ್ಟ್ರೀಯ “ಡ್ರಗ್ಸ್’ ಜಾಲವೊಂದು ವಿದೇಶಗಳಿಂದ ಪಾರ್ಸೆಲ್ ಕಳುಹಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಅಂಚೆ ಇಲಾಖೆಯ ನಾಲ್ವರು ನೌಕರರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಲೆಗೆ ಬಿದ್ದಿದ್ದಾರೆ.
ಸಿಸಿಬಿ ಪೊಲೀಸರ ಈ ಕಾರ್ಯಾಚರಣೆ ರಾಜಧಾನಿಗೆ ವ್ಯವಸ್ಥಿತವಾಗಿ ತಲುಪುತ್ತಿದ್ದ ವಿದೇಶಿ “ಡ್ರಗ್ಸ್’ ಜಾಲದ ಮತ್ತೂಂದು ಮಾರ್ಗವನ್ನು ಬಯಲು ಮಾಡಿದೆ. ಅಷ್ಟೇ ಅಲ್ಲದೆ ಹೊಸ ವರ್ಷಾಚರಣೆ ವೇಳೆ ಮಾದಕ ವ್ಯಸನಿಗಳಿಗೆ ತಲುಪಲಿದ್ದ ಅಪಾರ “ಡ್ರಗ್ಸ್’ ಕೂಡ ಜಪ್ತಿಯಾಗಿದೆ.
ಚಾಮರಾಜಪೇಟೆಯ ಅಂಚೆ ಇಲಾಖೆಯ ವಿದೇಶಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ, ಮಾಜಿ ಸೈನಿಕ ರಮೇಶ್‌ಕುಮಾರ್, ನೌಕರರಾದ ಎಚ್.ಸುಬ್ಬ, ಸೈಯದ್ ಮಾಜೀದ್, ಪ್ರಧಾನ ಅಂಚೆ ಕಚೇರಿಯ ಭದ್ರತಾ ಸಿಬ್ಬಂದಿ ವಿಜಯ್ ರಾಜನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಎಂಡಿಎಂಎ ಹೆಸರಿನ ಡ್ರಗ್ಸ್ ಮಾತ್ರೆಗಳು, 30 ಗ್ರಾಂ. ತೂಕದ ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಳೆದ ಆರು ತಿಂಗಳಿನಿಂದ ದಂಧೆ ನಡೆಸುತ್ತಿದ್ದರು. ಡೆನ್ಮಾರ್ಕ್, ಅಮೆರಿಕ, ನೆದರ್‌ಲ್ಯಾಂಡ್‌ನಿಂದ ಬರುತ್ತಿದ್ದ ಪಾರ್ಸೆಲ್‌ಗಳಲ್ಲಿನ ಡ್ರಗ್ಸ್‌ನ್ನು ನಗರದ ಕಾಲೇಜು ವಿದ್ಯಾರ್ಥಿಗಳು ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿರುವ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಹೊಸ ವರ್ಷದ ಆಚರಣೆಗೆ ಕೆಲವರಿಗೆ ಡ್ರಗ್ಸ್ ಸರಬರಾಜು ಮಾಡಲು ಸಿದ್ಧತೆ ನಡೆಸಿದ್ದರು. ಆರೋಪಿಗಳ ಜತೆ ಕೈ ಜೋಡಿಸಿರುವ ಇತರ ಆರೋಪಿಗಳು, ದಂಧೆಕೋರರ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಂಕ ಅಧಿಕಾರಿಗಳ ಯಾಮಾರಿಸಿದರು: ಪ್ರಧಾನ ಅಂಚೆ ಕಚೇರಿಯಲ್ಲಿಯೇ ಇದ್ದ ವಿದೇಶಿ ಅಂಚೆ ವಿಭಾಗ ಕಳೆದ ಕೆಲ ತಿಂಗಳ ಹಿಂದೆ ಚಾಮರಾಜಪೇಟೆಗೆ ಸ್ಥಳಾಂತರಗೊಂ ಡಿತ್ತು. ಈ ವಿಭಾಗದಲ್ಲಿ ಪೋಸ್ಟಲ್ ಅಧಿಕಾರಿಯಾಗಿ ರಮೇಶ್‌ಕುಮಾರ್, ಡಿ ಗ್ರೂಪ್ ನೌಕರರಾಗಿ ಸುಬ್ಬು ಹಾಗೂ ಸೈಯದ್ ಕಾರ್ಯನಿರ್ವಹಿಸುತ್ತಿದ್ದರು. ಇದೇ ಕಚೇರಿಯಲ್ಲಿ ಸುಂಕ ಆಧಿಕಾರಿಗಳು ಕೆಲಸ ಮಾಡುತ್ತಾರೆ.
ವಿದೇಶಗಳಿಂದ ಬರುವ ಪಾರ್ಸೆಲ್‌ಗಳನ್ನು ಸುಂಕ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕವಷ್ಟೇ ಗ್ರಾಹಕ ರಿಗೆ ತಲುಪಿಸಬೇಕಿತ್ತು. ಆದರೆ, ಸುಂಕ ಅಧಿಕಾರಿಗಳು ಪರಿಶೀಲನೆಗೆ ಬರುವಷ್ಟರಲ್ಲಿ ರಮೇಶ್‌ಕುಮಾರ್, ಡೆನ್ಮಾರ್ಕ್, ನೆದರ್‌ಲ್ಯಾಂಡ್, ಕೆನಡಾ, ಅಮೆರಿಕದಿಂದ ಬಂದ ನಿರ್ದಿಷ್ಟ ಪಾರ್ಸೆಲ್‌ಗಳನ್ನು ಒಡೆಯುತ್ತಿದ್ದರು.
ಇಲ್ಲವೇ ಮಾದಕ ವಸ್ತು ಇರುವುದನ್ನು ಖಚಿತಪಡಿಸಿ ಕೊಂಡು ಕದ್ದು ಸುಬ್ಬ, ಸೈಯದ್‌ಗೆ ನೀಡುತ್ತಿದ್ದ. ಅವರಿಬ್ಬರೂ ತಂದು ಕೊಡುತ್ತಿದ್ದ ಮಾದಕವಸ್ತುವನ್ನು ವಿಜಯ್ ರಾಜನ್, ಪರಿಚಯಸ್ಥ ಗ್ರಾಹಕರಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಬಂದ ಹಣದಲ್ಲಿ ನಾಲ್ವರು ಆರೋಪಿಗಳು ಹಂಚಿಕೊಳ್ಳುತ್ತಿದ್ದರು.
ವಿಳಾಸವೇ ಇರುತ್ತಿರಲಿಲ್ಲ: ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಪೊಲೀಸರಿಗೆ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ಸಾಮಾನ್ಯ ಪಾರ್ಸೆಲ್‌ನಂತೆಯೇ ಡ್ರಗ್ಸ್ ಕಳಿಸುತ್ತಿದ್ದರು. ನಿರ್ದಿಷ್ಟ ಗ್ರಾಹಕರಿಗೆ ಅದು ತಲುಪುತ್ತಿತ್ತು. ಕೆಲವೊಮ್ಮೆ ಪಾರ್ಸೆಲ್‌ನಲ್ಲಿ ವಿಳಾಸವೇ ಇರುತ್ತಿರಲಿಲ್ಲ. ಹೀಗಾಗಿ ದಂಧೆಯಲ್ಲಿ ಇನ್ನೂ ಹಲವರು ಶಾಮೀಲಾಗಿರುವ ಶಂಕೆಯಿದೆ. ಬಂಧಿತ ನಾಲ್ವರು ಆರೋಪಿಗಳಿಗೆ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇರುವುದು ಗೊತ್ತಾಗುತ್ತಿದ್ದದು ಹೇಗೆ, ಇವರೇ ಸರಬರಾಜುದಾರರಾಗಿ ಕೆಲಸ ಮಾಡುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ದಂಧೆಕೋರರೂ ಬರುತ್ತಿರಲಿಲ್ಲ: ವಿದೇಶಗಳಿಂದ ಬಂದ “ಡ್ರಗ್ಸ್’ ತಲುಪದಿದ್ದರೂ ಜಾಲದ ಸರಬರಾಜುದಾರರು ಅಂಚೆ ಕಚೇರಿಯಲ್ಲಿ ವಿಚಾರಿಸುತ್ತಿರಲಿಲ್ಲ. ಪೊಲೀಸರಿಗೆ ಸಿಕ್ಕಿಬೀಳುವ ಆತಂಕ ಅವರಿಗೆ ಕಾಡುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ವಾರಕ್ಕೆ, ಹದಿನೈದು ದಿನಕ್ಕೊಮ್ಮೆ ಬರುತ್ತಿದ್ದ ಪಾರ್ಸೆಲ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿ ಹೇಳಿದರು.
ಪೆಡ್ಲರ್‌ಗಳ ಜತೆ ಶಾಮೀಲು: ಡಾರ್ಕ್‌ವೆಬ್, ಟಾರ್ ಎಂಬ ವೆಬ್‌ಸೈಟ್‌ಗಳ ಮೂಲಕ ನೆದರ್‌ಲ್ಯಾಂಡ್ ಸೇರಿ ವಿದೇಶಗಳಿಂದ ನಗರಕ್ಕೆ ಇಲ್ಲಿನ ದಂಧೆಕೋರರು ಮಾದಕವಸ್ತು ಆಮದು ಮಾಡಿಕೊಳ್ಳುತ್ತಿದ್ದರು. ಅಲ್ಲಿಂದ ಕೊರಿಯರ್ (ಪಾರ್ಸೆಲ್) ಮೂಲಕ ಅಂಚೆ ಕಚೇರಿಗೆ ತಲುಪುತ್ತಿದ್ದ ಮಾದಕ ವಸ್ತುವನ್ನು ಇಲ್ಲಿನ ದಂಧೆಕೋರರಿಗೆ ಈ ನಾಲ್ವರು ಆರೋಪಿತರೇ ತಲುಪಿಸಿ ಸಹಾಯ ಮಾಡಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಡಾರ್ಕ್‌ವೆಬ್ ಮೂಲಕ ನಡೆಯುತ್ತಿದ್ದ ಮಾದಕ ವಸ್ತು ಮಾರಾಟ ಜಾಲದ ಭೇದಿಸಿರುವ ಸಿಸಿಬಿ ಪೊಲೀಸರು, ನ.29ರಂದು ಕೊಲ್ಕೋತಾ ಮೂಲದ ಆಸ್ಟಿಫ್ ಸಲೀಂ ಎಂಬಾತನನ್ನು ಬಂಧಿಸಿದ್ದರು. ಆತ ಕೆನಡಾದಿಂದ ಹಾಲಿನ ಡಬ್ಬಗಳ ಮೂಲಕ ಮರಿಜೋನಾ ಎಂಬ ದುಬಾರಿ ಬೆಲೆಯ ಹೈಡ್ರೋ ಗಾಂಜಾ ತರಿಸುತ್ತಿದ್ದ. ಡಿ.13ರಂದು ಬಿಹಾರ ಮೂಲದ ಅಮಾತ್ಯ ರಿಷಿ (23), ಆತನ ಸಹಚರರಾದ ಮಂಗಲ್ ಮುಕ್ಯ (30) ಹಾಗೂ ಬನಶಂಕರಿ ನಿವಾಸಿ ಆದಿತ್ಯ ಕುಮಾರ್ (21) ಎಂಬವರನ್ನು ಬಂಧಿಸಿದ್ದರು. ಬಳಿಕ ಡಿ.23ರಂದು ತುಷಾರ್ ಜೈನ್ ಹಾಗೂ ಶಾಕೀಬ್ ಖಾನ್‌ನನ್ನು ಬಂಧಿಸಿದ್ದರು.
ಮೂಲಕ್ಕೆ ಕೈ ಹಾಕಿದ ತನಿಖಾ ತಂಡ: ಮಾದಕ ವಸ್ತು ಸಂಗ್ರಹ ಮಾಡಿದ್ದ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಮಾದಕ ವಸ್ತು ನಿಗ್ರಹ ಘಟಕ ನಡೆಸಿದ ಕಾರ್ಯಾಚರಣೆಯಲ್ಲಿ ಟ್ಯಾನರಿ ರಸ್ತೆ ನಿವಾಸಿ ತುಷಾರ್‌ಜೈನ್ (20) ಮತ್ತು ವಿಜಯನಗರದ ಶಾಕೀಬ್ ಖಾನ್ (21) ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿಕೊಂಡಿತ್ತು. ಈ ಪ್ರಕರಣದ ತನಿಖೆಯಲ್ಲಿ ತೊಡಗಿಸಿಕೊಂಡಿದ್ದ ಇನ್ಸ್‌ಪೆಕ್ಟರ್‌ಗಳಾದ ಮೊಹಮದ್ ಸಿರಾಜುದ್ದೀನ್, ಬೊಳೆತ್ತಿನ್ ನೇತೃತ್ವದ ತಂಡ,
ಆರೋಪಿಗಳಿಗೆ ವಿದೇಶದಿಂದ ಮಾದಕ ವಸ್ತು ತಲುಪುತ್ತಿದ್ದ ಮೂಲ ಕೆದಕಿದಾಗ ಅಂಚೆ ಕಚೇರಿಯ ನೌಕರರು ಶಾಮೀಲಾಗಿರುವ ಮಾಹಿತಿ ಗೊತ್ತಾಗಿತ್ತು. ವಿಜಯ್ ರಾಜನ್ ತುಷಾರ್ ಜೈನ್‌ಗೆ ಮಾದಕ ವಸ್ತು ನೀಡುತ್ತಿದ್ದ ಬಗ್ಗೆಯೂ ಬಯಲಾಗಿತ್ತು. ಈ ಜಾಡು ಬೆನ್ನತ್ತಿದ್ದ ತಂಡ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಜಾಲದಲ್ಲಿ ತೊಡಗಿದ್ದ ನಾಲ್ವರು ಅಂಚೆ ಕಚೇರಿ ನೌಕರರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.