ಗಾಂಜಾ ಪೂರೈಕೆ: ಜೈಲು ಸಿಬ್ಬಂದಿ ಸೆರೆ
Team Udayavani, Dec 21, 2018, 10:55 AM IST
ಬೆಂಗಳೂರು: ರಾಜ್ಯದ ಕುಖ್ಯಾತ ದಂಡುಪಾಳ್ಯ ತಂಡದ ಸಜಾ ಬಂಧಿಗಳಿಗೆ ಮಾದಕ ವಸ್ತು ಗಾಂಜಾ ಪೂರೈಕೆ ಮಾಡುತ್ತಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ಪೊಲೀಸರ ಬಲೆಗೆ ಬಿದ್ದಿದ್ದು, ಈ ಮೂಲಕ ಕೇಂದ್ರ ಕಾರಾಗೃಹದ ಅವ್ಯವಸ್ಥೆ ಮತ್ತೂಮ್ಮೆ ಬಯಲಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೋಕುಲ ನಗರ ನಿವಾಸಿ ಬಿ.ಕುಮಾರಸ್ವಾಮಿ (32) ಬಂಧಿತ. ನಾಲ್ಕು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುರುವಾರ ಬೆಳಗ್ಗೆ ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.
ಕೇಂದ್ರ ಕಾರಾಗೃಹದ ಕಂಪ್ಯೂಟರ್ ವಿಭಾಗದ ಸರ್ವರ್ ರೂಮ್‌ನಲ್ಲಿ ಪ್ರಥಮ ದರ್ಜೆಯ ಬೋಧಕನಾಗಿರುವ ಕುಮಾರಸ್ವಾಮಿ, ಇಲಾಖೆಯ ವಸತಿ ನಿಲಯದಲ್ಲಿ ವಾಸವಾಗಿದ್ದ. ಹಣದಾಸೆಗಾಗಿ ಕಾರಾಗೃಹದ ಇತರೆ ಸಿಬ್ಬಂದಿ ಸಹಕಾರದಿಂದ ಸಜಾಬಂಧಿಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಎಂಬ ಮಾಹಿತಿ ಲಭಿಸಿದ್ದು, ತನಿಖೆ
ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಆರೋಪಿ 3-4 ವರ್ಷಗಳಿಂದ ಕೇಂದ್ರ ಕಾರಾಗೃಹ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾರಿಂದ ಗಾಂಜಾ ಪಡೆಯುತ್ತಿದ್ದ ಎಂಬ ಮಾಹಿತಿಯಿಲ್ಲ. ಆ.21ರಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ, ತಪಾಸಣೆಗೆ ಒಳಗಾಗದೆ ಕರ್ತವ್ಯಕ್ಕೆ ಹಾಜರಾದ ಆರೋಪಿ, ಕಂಪ್ಯೂಟರ್ ಸರ್ವರ್ ರೂಂನಲ್ಲಿದ್ದ ಸಜಾಬಂಧಿ ಮಂಜುನಾಥ್‌ಗೆ 4 ಪ್ಯಾಕೆಟ್‌ಗಳಲ್ಲಿ 100 ಗ್ರಾಂ. ಗಾಂಜಾ ಕೊಟ್ಟು, ಹಣ ಪಡೆದುಕೊಂಡಿದ್ದ. ಇದನ್ನು ಗಮನಿಸಿದ ಕಾರಾಗೃಹ ಸಿಬ್ಬಂದಿ ಶ್ರೀನಿವಾಸ್ ಭಜಂತ್ರಿ, ಸಜಾಬಂಧಿಯನ್ನು ತಪಾಸಣೆಗೆ ಒಳಪಡಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಶ್ರೀನಿವಾಸ್, ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪರಿಶೀಲಿಸಿ ಆರೋಪಿಯ ವಿರುದ್ಧ ಕ್ರಮಕೈಗೊಳ್ಳುವಷ್ಟರಲ್ಲಿ ಕುಮಾ ರಸ್ವಾಮಿ ಕಾರಾಗೃಹದಿಂದ ತಲೆಮರೆಸಿಕೊಂಡಿದ್ದ. ಈ ಸಂಬಂಧ ಕಾರಾಗೃಹದ ಮುಖ್ಯಅಧೀಕ್ಷಕ ಎಂ. ಸೋಮಶೇಖರ್ ಸೆ.26ರಂದು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಪ್ರಕರಣ ದಾಖಲಿಸಿದ್ದರು.
ನಾಲ್ಕು ತಿಂಗಳು ತಲೆಮರೆಸಿಕೊಂಡಿದ್ದ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪೊಲೀಸರಿಗೆ ಸಿಗದೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೋಕುಲ ನಗರದ ಹೊರವಲಯದಲ್ಲಿ ತಲೆಮರೆಸಿಕೊಂಡಿದ್ದ. ಈ ಮಧ್ಯೆ ಆರೋಪಿ, ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ, ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಹೈಕೋರ್ಟ್‌ಗೆ ಮತ್ತೂಂದು ಅರ್ಜಿ ಸಲ್ಲಿಸಿ, ತಾನು ತಲೆಮರೆಸಿಕೊಂಡಿಲ್ಲ ಎಂದು ಸುಳ್ಳು ಮಾಹಿತಿ ನೀಡಿ, ಜಾಮೀನು ಪಡೆಯಲು ಪ್ರಯತ್ನಿಸಿದ್ದ ಎಂದು ಪೊಲೀಸರು ಹೇಳಿದರು.
ಸಿಬ್ಬಂದಿ ಮೇಲೆ ದಬ್ಟಾಳಿಕೆ: ಸಾಮಾನ್ಯವಾಗಿ ಯಾರೇ ಕಾರಾಗೃಹ ಪ್ರವೇಶಿಸಿದರೂ ಅಲ್ಲಿನ ದಾಖಲಾತಿ ಪುಸ್ತಕದಲ್ಲಿ ವಿವರವನ್ನು ಕಡ್ಡಾಯವಾಗಿ ಬರಯಲೇ ಬೇಕು. ಅದು ಹೊರತುಪಡಿಸಿದರೆ, ಕಾರಾಗೃಹದ ಅಧೀಕ್ಷಕರು, ಮುಖ್ಯಅಧೀಕ್ಷಕರು ಸೇರಿ ಕೆಲ ಹಿರಿಯ ಅಧಿಕಾರಿಗಳನ್ನು ಹೊರತು ಪಡಿಸಿ ಇತರೆ ಎಲ್ಲ ಸಿಬ್ಬಂದಿಯನ್ನು ಕಡ್ಡಾಯವಾಗಿ ಕಾರಾಗೃಹದ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಲಾಗುತ್ತದೆ. ಆದರೆ, ಆರೋಪಿ ಕುಮಾರಸ್ವಾಮಿ, 2-3 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೇ ಅನುಮಾನ ಪಡುತ್ತೀರಾ ಎಂದು ಭದ್ರತಾ ಸಿಬ್ಬಂದಿ ಮೇಲೆ ದಬ್ಟಾಳಿಕೆ ಮಾಡುತ್ತಿದ್ದ. ಕೆಲ ಸಂದರ್ಭಗಳಲ್ಲಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಅಥವಾ ಗಮನ ಬೇರೆಡೆ ಸೆಳೆದು ನೇರವಾಗಿ ಒಳ ಪ್ರವೇಶಿಸುತ್ತಿದ್ದ. ಈ ವೇಳೆ ಮಾದಕ ವಸ್ತು ಕೊಂಡೊಯ್ಯುತ್ತಿದ್ದ.
ಈತನ ವರ್ತನೆಯಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ, ಆತನ ವರ್ತನೆ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಬಳಿಕ ಈತನ ಬಗ್ಗೆ ಕಾರಾಗೃಹ ಸಿಬ್ಬಂದಿಯೇ ತನಿಖೆ ಆರಂಭಿಸಿದಾಗ, ಈತ ಕೆಲ ಸಜಾಬಂಧಿಗಳ ಜತೆ ಆತ್ಮೀಯವಾಗಿ ಇರುವುದು ತಿಳಿದು ಬಂದಿತ್ತು. ಜತೆಗೆ ಪ್ರವೇಶ ದ್ವಾರದಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈತನ ಮೇಲಿನ ಕೆಲ ಅನುಮಾನಗಳು ಬಲವಾದವು. ಈ ಮಧ್ಯೆ ಆರೋಪಿ ಸಜಾಬಂಧಿ ಮಂಜುನಾಥ್‌ಗೆ ಗಾಂಜಾ ಪೂರೈಕೆ ಮಾಡಿ ಸಿಕ್ಕಿ ಬಿದ್ದಿದ್ದಾನೆ.
ಅಮಾನತು: ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಂತೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಆತನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಈ ನಡುವೆ ಆರೋಪಿ ಚಿತ್ರದುರ್ಗದಲ್ಲಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.
ಅನಾರೋಗ್ಯ ನೆಪವೊಡ್ಡಿ ತಪ್ಪಿಸಿಕೊಂಡಿದ್ದ
ಆರೋಪಿ ಕುಮಾರಸ್ವಾಮಿ ಸಜಾಬಂಧಿಗೆ ಗಾಂಜಾ ಕೊಟ್ಟಿದ್ದನ್ನು ಗಮನಿಸಿದ ಕಾರಾಗೃಹ ಸಿಬ್ಬಂದಿ ಶ್ರೀನಿವಾಸ್ ಭಜಂತ್ರಿ, ಕೂಡಲೇ ಸಜಾಬಂಧಿ ಮಂಜುನಾಥ್‌ನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದರು. ಬಳಿಕ ಹಿರಿಯ ಅಧಿಕಾರಿಗಳ ಬಳಿ ಕರೆದೊಯ್ದು ವಿಚಾರಣೆ ನಡೆಸಿದಾಗ ಮಂಜುನಾಥ್, ಕುಮಾರಸ್ವಾಮಿಯ ಹೆಸರು ಬಾಯ್ಬಿಟ್ಟಿದ್ದ. ಆದರೆ, ಈ ಆರೋಪ ತಳ್ಳಿಹಾಕಿದ್ದ ಆರೋಪಿ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದ. ಕೆಲ ಹೊತ್ತಿನ ಬಳಿಕ ಆತಂಕಗೊಂಡವನಂತೆ ನಟಿಸಿ ನೇರವಾಗಿ ಕಾರಾಗೃಹದ ಪ್ರವೇಶ ದ್ವಾರದ ಬಳಿ ಓಡಿ ಬಂದಿದ್ದಾನೆ. ನಂತರ ನನಗೆ ಆರೋಗ್ಯ ಸರಿಯಿಲ್ಲ, ಕೂಡಲೇ ಮನೆಗೆ ಹೋಗಬೇಕು ಎಂದು ಭದ್ರತಾ ಸಿಬ್ಬಂದಿ ಬಳಿ ಸುಳ್ಳು ಹೇಳಿ ಪರಾರಿಯಾಗಿದ್ದ. ನಂತರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದವನು ತಲೆಮರೆಸಿಕೊಂಡಿದ್ದ ಎಂದು ಕಾರಾಗೃಹ ಮೂಲಗಳು ತಿಳಿಸಿವೆ.
ಆರೋಪಿ ಕುಮಾರಸ್ವಾಮಿಗೆ ಇದ್ದವಾ ಹಲವು ಶೋಕಿ?
ಕುಮಾರಸ್ವಾಮಿ ನಿತ್ಯ ರಿಕ್ರಿಯೆಷನ್ ಕ್ಲಬ್‌ಗಳಿಗೆ ಹೋಗುತ್ತಿದ್ದು, ಜೂಜಾಟ ಆಡಲು ಸ್ನೇಹಿತರ ಬಳಿ ಹಣ ಪಡೆದು, ಸೋಲುತ್ತಿದ್ದ. ಈ ಹಣ ಹಿಂದಿರುಗಿಸಲಾಗದೆ, ಸಜಾಬಂಧಿಗಳನ್ನು ಸಂಪರ್ಕಿಸಿ ಹಣದಾಸೆಗೆ ಮಾದಕ ವಸ್ತು
ಪೂರೈಕೆಯಲ್ಲಿ ತೊಡಗಿದ್ದ ಎಂದು ಹೇಳಲಾಗಿದೆ.
ದುಂಡುಪಾಳ್ಯ ಕೃಷ್ಣನಿಗೆ ಗಾಂಜಾ ಪೂರೈಕೆ ಕೇಂದ್ರ ಕಾರಾಗೃಹದಲ್ಲಿ ದಂಡುಪಾಳ್ಯ ತಂಡದ ದೊಡ್ಡ ಹನುಮ, ತಿಮ್ಮ, ವೆಂಕಟೇಶ, ಕೃಷ್ಣ ಎಂಬ ನಾಲ್ವರು ಸಜಾಬಂಧಿಗಳಿದ್ದಾರೆ. ಈ ಪೈಕಿ ಕೃಷ್ಣ ಅಲಿಯಾಸ್ ದಂಡುಪಾಳ್ಯ ಕೃಷ್ಣ, ಮತ್ತೂಬ್ಬ ಸಜಾಬಂಧಿ ಮಂಜುನಾಥ್ ಜತೆ ಕಂಪ್ಯೂಟರ್ ರೂಮ್‌ಗೆ ಹೋಗಿ ಆರೋಪಿ ಕುಮಾರಸ್ವಾಮಿ ಯನ್ನು ಭೇಟಿಯಾಗಿ ಗಾಂಜಾ ಪೂರೈಕೆ ಬಗ್ಗೆ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿ, ಆ.21ರಂದು ಮಹಿಳೆಯೊಬ್ಬರ ಮೂಲಕ ಗಾಂಜಾ ತರಿಸಿ ಸಜಾಬಂಧಿ ಮಂಜುನಾಥ್‌ಗೆ ಪೂರೈಕೆ ಮಾಡಿ, ಹಣ ಪಡೆದುಕೊಂಡಿದ್ದ. ಈ ಹಿಂದೆಯೂ ಹಲವು ಬಾರಿ ಕೈದಿಗಳಿಗೆ ಮಾದಕ ವಸ್ತು ಸರಬರಾಜು ಮಾಡಿರುವ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಹೇಳಿದರು.
ಕಾರಾಗೃಹ ಇಲಾಖೆಗೆ ಮುಜುಗರ ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾರ
ಆಪೆ¤ ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸಲು ಕಾರಾ ಗೃಹದ ಹಿರಿಯ ಅಧಿಕಾರಿಗಳು 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಅಂದಿನ ಡಿಐಜಿ ಡಿ.ರೂಪಾ ಗಂಭೀರ ಆರೋಪ ಮಾಡಿದ್ದರು. ಈ ಮೂಲಕ ಇಡೀ ಇಲಾಖೆಯೇ ಮುಜುಗರಕ್ಕೊಳಗಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಪ್ರಕರಣದ ತನಿಖೆಗೆ ವಿಶೇಷ ಸಮಿತಿ ಕೂಡ ರಚಿಸಿತ್ತು. ಇದೀಗ
ಕುಮಾರಸ್ವಾಮಿಯ ಕೃತ್ಯದಿಂದ ಮತ್ತೂಮ್ಮೆ ಇಲಾಖೆ ಮುಜುಗರಕ್ಕೊಳಗಾಗಿದೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಈ ಹಿಂದೆ ಕಾರಾಗೃಹಕ್ಕೆ ಮಾಂಸ, ತರಕಾರಿ ತರುವ ವಾಹನಗಳು ಹಾಗೂ ಟಿಫಿನ್ ಬಾಕ್ಸ್‌ಗಳಲ್ಲಿ ಕೈದಿಗಳಿಗೆ ಗಾಂಜಾ ಪೂರೈಕೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತ ಕಾರಾಗೃಹದ ಹಿರಿಯ ಅಧಿಕಾರಿಗಳು, ಯಾವುದೇ ವಾಹನಗಳನ್ನು ಒಳಗಡೆ ಬಿಡದೆ, ಪ್ರವೇಶ ದ್ವಾರ ದಲ್ಲೇ ಮಾಂಸ ಮತ್ತು ತರಕಾರಿಗಳನ್ನು ಇಲಾಖೆ ವಾಹನಕ್ಕೆ ತುಂಬಿಸಿಕೊಂಡು ಒಳಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ಮಧ್ಯೆಯೂ ಕೈದಿಗಳಿಗೆ ಗಾಂಜಾ ಸಿಗುತ್ತಿರುವ ಬಗ್ಗೆ ಜೈಲಿನ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದರು. ಇದೀಗ ಜೈಲಿನ ಅಧಿಕಾ ರಿಯೇ ಸಿಕ್ಕಿ ಬಿದ್ದಿರುವುದು “ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ’ ಎಂದು ಕಾರಾಗೃಹದ ಅಧಿಕಾರಿಗಳು ಬೇಸರವ್ಯಕ್ತಪಡಿಸಿದರು.
ಪ್ರಕರಣ ಸಂಬಂಧ ಕಾರಾಗೃಹ ಸಿಬ್ಬಂದಿ ಕುಮಾರ ಸ್ವಾಮಿಯನ್ನು ಬಂಧಿಸಲಾಗಿದ್ದು, ಈತ ಯಾರಿಂದ ಗಾಂಜಾ ತರುತ್ತಿದ್ದ ಎಂದು ತಿಳಿಯಲು ತನಿಖೆ ಮುಂದುವರಿದಿದೆ.
ಡಾ.ಬೋರಲಿಂಗಯ್ಯ, ಡಿಸಿಪಿ ಆಗ್ನೇಯ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.