ಸರ್ವೆ ವ್ಯತ್ಯಾಸ: 500 ಕೋಟಿ ರೂ. ನಷ್ಟ
ಟೋಟಲ್ ಸ್ಟೇಷನ್ ಸರ್ವೆ ವರದಿ ಮಂಡನೆಯಿಂದ ಪಾಲಿಕೆ ಅಧಿಕಾರಿಗಳ ಅವ್ಯವಹಾರ ಬಯಲು
Team Udayavani, Aug 11, 2020, 7:57 AM IST
ಬೆಂಗಳೂರು: ಟೋಟಲ್ ಸ್ಟೇಷನ್ ಸರ್ವೆ ವರದಿ ಸತತ ನಾಲ್ಕನೇ ಬಾರಿ ಕೌನ್ಸಿಲ್ ಸಭೆಯಲ್ಲಿ ಮಂಡನೆಯಾಗಿದ್ದು, ಅಂದಾಜು 500 ಕೋಟಿ ರೂ. ಪಾಲಿಕೆಗೆ ನಷ್ಟ ಉಂಟಾಗಿರುವುದು ಬಹಿರಂಗಗೊಂಡಿದೆ.
ಸೋಮವಾರ ನಡೆದ ಪಾಲಿಕೆ ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಟೋಟಲ್ ಸ್ಟೇಷನ್ ಸರ್ವೇ ವರದಿ ಮಂಡನೆ ಮಾಡಿದರು. ಅದರಲ್ಲಿ ಪಾಲಿಕೆ ಅಧಿಕಾರಿಗಳು ಮಾಡಿರುವ ಈ ಅವ್ಯವಹಾರ ಬಯಲಾಗಿದೆ.ಸಭೆಯಲ್ಲಿ ಟೋಟಲ್ ಸ್ಟೇಷನ್ ಸರ್ವೇ ವರದಿ ಬಗ್ಗೆ ವಿಷಯ ಪ್ರಸ್ತಾಪಿಸಿದ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ, ಸತತ ಮೂರು ಬಾರಿಯೂ ಟೋಟಲ್ ಸ್ಟೇಷನ್ ಸರ್ವೇ ವರದಿ ಅಪೂರ್ಣವಾಗಿತ್ತು. ಈ ಬಾರಿ ಶೇ. 90ರಷ್ಟು ವರದಿ ಮಂಡನೆಯಾಗಿದೆ. ಪಾಲಿಕೆಯ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವುಂಟಾಗಿರುವುದು ಬೆಳಕಿಗೆಬಂದಿದೆ ಎಂದರು. ಪಾಲಿಕೆ ವ್ಯಾಪ್ತಿಯ ಬಹುತೇಕ ವಲಯಗಳಲ್ಲಿ ಬರುವ ಐಷಾರಾಮಿ ಹೋಟೆಲ್‌ಗಳು, ಪ್ರತಿಷ್ಠಿತ ಸಂಸ್ಥೆಗಳು ತೆರಿಗೆ ಪಾವತಿಯಲ್ಲಿ ನಷ್ಟ ಉಂಟು ಮಾಡಿರುವುದು ಗೊತ್ತಾಗಿದೆ.
ದಕ್ಷಿಣ ವಲಯದ ವರದಿ ಮಂಡನೆಯಾಗಿಲ್ಲ: ದಕ್ಷಿಣ ವಲಯದಲ್ಲಿ ಉಪ ತಂಡದ ಮುಖ್ಯಸ್ಥರು ಟೋಟಲ್ ಸ್ಟೇಷನ್ ಸರ್ವೇಗೆ ಸಂಬಂಧಿಸಿದಂತೆ ವರದಿ ಮಂಡನೆ ಮಾಡಿರುವುದಿಲ್ಲ. ಈ ಸಂಬಂಧ ಹಲವು ಬಾರಿ ಸೂಚನೆ ನೀಡದರೂ ಸ್ಪಂದಿಸಿಲ್ಲ. ಇದರಿಂದ ವರದಿ ಮಂಡನೆಗೆ ವಿಳಂಬವಾಗಿರುತ್ತದೆ ಎಂದ ಪದ್ಮನಾಭರೆಡ್ಡಿ, ಇಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. “ಅಧಿಕಾರಿಗಳ ಲೋಪದಿಂದ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಸರ್ವೇ ಲೋಪದೋಷ ಪತ್ತೆ ಮಾಡುವ ಉದ್ದೇಶಕ್ಕಾಗಿ ಪ್ರಾರಂಭಿಸಲಾಗಿತ್ತು. ಆದರೆ, ಇದರಿಂದ ಪಾಲಿಕೆಗೆ ಯಾವುದೇ ಲಾಭವಾಗಿಲ್ಲ ಬದಲಿಗೆ ಅಧಿಕಾರಿಗಳು ಇದರಲ್ಲಿ ಬಹುಕೋಟಿ ಅವ್ಯವಹಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.
ಅಧಿಕಾರಿಗಳಿಗೆ ಶಿಕ್ಷೆಯಾಗಲಿ: ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟುಮಾಡಿರುವ ಹಲವು ಅಧಿಕಾರಿಗಳು ಎರವಲು ಸೇವೆ ಆಧಾರದ ಮೇಲೆ ಪಾಲಿಕೆಯಲ್ಲಿ ಸೇವೆ ಸಲ್ಲಿಸಿರುವವರೂ ಇದ್ದಾರೆ. ಇವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ಸಂಬಂಧ ಪಾಲಿಕೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಎಂ.ಗೌತಮ್‌ಕುಮಾರ್, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಹಸಿಕಸ ಟೆಂಡರ್‌ದಾರರಿಗೆ ಕಾರ್ಯಾದೇಶ : ನಗರದಲ್ಲಿ ಮನೆ- ಮನೆಯಿಂದ ಪತ್ಯೇಕವಾಗಿ ಹಸಿ ಕಸ ಸಂಗ್ರಹಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಅಂತಿಮವಾಗಿದ್ದ 45 ಮಂದಿ ಗುತ್ತಿಗೆದಾರರಿಗೆ ಕೊನೆಗೂ ಪಾಲಿಕೆ ಕಾರ್ಯಾದೇಶ ನೀಡಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಮೇಯರ್ ಎಂ.ಗೌತಮ್‌ಕುಮಾರ್ ಅವರು, ಈಗಾಗಲೇ ಅಂತಿಮಗೊಂಡ 45 ವಾರ್ಡ್‌ಗಳ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವುದಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 45 ಗುತ್ತಿಗೆದಾರರ ಪೈಕಿ 39 ಗುತ್ತಿಗೆದಾರರಿಗೆ ಕಾರ್ಯಾದೇಶ ಸಹ ನೀಡಲಾಗಿದ್ದು, ಇನ್ನು ಆರು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕಿದೆ ಎಂದರು. 105 ವಾರ್ಡ್‌ಗಳಲ್ಲಿ ವಾರ್ಡ್‌ಗಳಲ್ಲಿ ಟೆಂಡರ್‌ಗೆ ಗುತ್ತಿಗೆದಾರರು ಸಲ್ಲಿಸಿರುವ ಬಿಡ್ ಮೊತ್ತ ಮತ್ತು ದಾಖಲೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. 18 ವಾರ್ಡ್‌ಗಳಲ್ಲಿ ಯಾವುದೇ ಗುತ್ತಿಗೆದಾರರ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಈ ಸಂಬಂಧ ಅಲ್ಪಾವಧಿ ಟೆಂಡರ್ ಆಹ್ವಾನಿಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಎಂಎಸ್‌ಜಿಪಿಗೆ ನೀಡಲಾದ 30 ವಾರ್ಡ್‌ಗಳ ಟೆಂಡರ್ ಅನ್ನು ಮರು ಪರಿಶೀಲನೆ ನಡೆಸುವುದಕ್ಕೆ ಸೂಚನೆ ನೀಡಲಾಗಿದೆ. ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆಗೆ ಒಳಗಾಗದಂತೆ ಕಾನೂನು ತಜ್ಞರ ಸಮಿತಿಯ ಶಿಫಾರಸುಗಳನ್ನು ಅನುಸರಿಸುವ ಸಂಬಂಧ ಪಾಲಿಕೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ಸಭೆಯ ಪ್ರಮುಖ ನಿರ್ಣಯಗಳು :
- ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರ ಪ್ರತಿಮೆ ಹಾಗೂ ಉದ್ಯಾನದ ನಿರ್ವಹಣೆಯನ್ನು 5 ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿಯನ್ನು ಬಸವ ಸಮಿತಿಗೆ. ಆದರೆ, ಜಾಹೀರಾತಿಗೆ ಅವಕಾಶ ಇಲ್ಲ.
- 2016-17 ಮತ್ತು 2017-18ನೇ ಸಾಲಿನಲ್ಲಿ ಪಾಲಿಕೆ ಎಲ್ಲ ಸದಸ್ಯರು ಆಸ್ತಿ ಘೋಷಣೆ ಮಾಡಬೇಕಿತ್ತು. ಆಸ್ತಿ ಘೋಷಣೆ ಮಾಡುವಲ್ಲಿ 34 ಪಾಲಿಕೆ ಸದಸ್ಯರು ವಿಳಂಬ ಮಾಡಿದ್ದಾರೆ. ಕ್ರಮಕ್ಕೆ ಸರ್ಕಾರಕ್ಕೆ ಪತ್ರ.
- ವಿಧಾನಸೌಧ ಸುತ್ತಲಿನ ಪ್ರದೇಶದಲ್ಲಿ ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಟೇಬಲ್ ಇಂಡಿಯಾ ಎಂಬ ಸಂಸ್ಥೆಯವರು ಸ್ವಂತ ವೆಚ್ಚದಲ್ಲಿ ಶೌಚಗೃಹ ನಿರ್ಮಿಸಿ ನಿರ್ವಹಣೆ ಮಾಡಲು ಅವಕಾಶ.
- ಕೋವಿಡ್ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದ ಸಹಾಯಕ ಆಯುಕ್ತ ಎಚ್. ಗಂಗಾಧರಯ್ಯ ಅವರ ಕುಟುಂಬಕ್ಕೆ 25 ಲಕ್ಷ ರೂ. ನೆರವು.
- ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮೆ.ಬಟರ್ ಸ್ಟೊರೀಸ್ ಹಾಸ್ಪೆಟಾಲಿಟಿ ಪ್ರೈ.ಲಿ ಸಂಸ್ಥೆಯಿಂದ ಮಾಸಿಕ 5 ಸಾವಿರ ರೂ. ಪಾವತಿಸಿ ಉಪಾಹಾರದ ಮೊಬೈಲ್ ಕ್ಯಾಂಟೀನ್ ನಡೆಸಲು ಅವಕಾಶ.
ಅಧಿಕಾರ ಅವಧಿ ಮುಗಿಯುವವರೆಗೆ ಸಭೆ : ಪಾಲಿಕೆ ಸದಸ್ಯರ ಅಧಿಕಾರ ಅವಧಿ ಇದೇ ಸೆ. 10ಕ್ಕೆ ಮುಕ್ತಾಯವಾಗಲಿದೆ. ಈ ಅವಧಿಯವರೆಗೂ ಕೌನ್ಸಿಲ್ ಸಭೆಗಳನ್ನು ನಡೆಸಿ, ನಿರ್ಣಯಗಳನ್ನು ತೆಗೆದುಕೊಳ್ಳಬಹುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಕೋವಿಡ್ ಸೋಂಕು ಆವರಿಸಿದ ಕಾರಣ ಹೆಚ್ಚು ಸಭೆಗಳನ್ನು ನಡೆಸಲು ಆಗಲಿಲ್ಲ. ಇನ್ನು ಒಂದು ತಿಂಗಳು ಸಭೆ ನಡೆಸುವ ಬಗ್ಗೆ ಗೊಂದಲಗಳಿದ್ದು, ಇದಕ್ಕೆ ಉತ್ತರಿಸಬೇಕು ಎಂದುಪಾಲಿಕೆ ಸದಸ್ಯರು ಮನವಿ ಮಾಡಿದರು. ಅಲ್ಲದೆ, ಪ್ರತಿಬಾರಿ ಅಧಿಕಾರಾವಧಿ ಮುಗಿಯುವ 45 ದಿನಗಳು ಮುನ್ನವೇ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸಲಾಗುತ್ತಿತ್ತು. ಈ ಬಾರಿ ಚುನಾವಣೆ ನಡೆಸುವ ಬಗ್ಗೆ ನೀತಿ ಸಂಹಿತೆ ಹೊರಡಿಸದ ಕಾರಣ ಕೌನ್ಸಿಲ್ ಸಭೆಗಳನ್ನು ಮುಂದಿನ ದಿನಗಳಲ್ಲಿ ನಡೆಸಬಹುದೇ ಎಂದು ಪ್ರಶ್ನಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತರು, ಅವಧಿ ಮುಗಿಯುವವರೆಗೆ ಸಭೆಗಳನ್ನು ನಡೆಸಬಹುದು ಎಂದು ಉತ್ತರಿಸಿದರು.
ತಪ್ಪು ಮಾಹಿತಿ ನೀಡಿದ ಗುತ್ತಿಗೆದಾರರು ಕಪ್ಪುಪಟ್ಟಿಗೆ : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವುದಕ್ಕೆ ತಪ್ಪು ದಾಖಲೆಗಳನ್ನು ನೀಡಿರುವ ಗುತ್ತಿಗೆದಾರರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಿ ಎಂದು ಮೇಯರ್ ಗೌತಮ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಕಾಮಗಾರಿ ನಡೆಸುತ್ತಿರುವುದು ಹಾಗೂ ಸುಳ್ಳು ದಾಖಲೆ ನೀಡಿರುವ ಸಂಬಂಧ ದೂರುಗಳು ಕೇಳಿಬರುತ್ತಿವೆ. ನಗರಾಭಿವೃದ್ಧಿ ಇಲಾಖೆಯಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ, ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತರು ಪಾಲಿಕೆಯ ಗುತ್ತಿಗೆದಾರರ ಕಾಮಗಾರಿ ನಿರ್ವಹಿಸಿರುವ ದೃಢೀಕರಣ ಪತ್ರ ( ವರ್ಕ್‌ಡನ್ ಪ್ರಮಾಣ ಪತ್ರ) ನೀಡದೆ ಹಾಗೂ ನಿಯಮ ಉಲ್ಲಂಘನೆ ಮಾಡಿರುವ ಗುತ್ತಿಗೆದಾರರನ್ನು ಪತ್ತೆ ಮಾಡಿ ಕಪ್ಪುಪಟ್ಟಿಗೆ ಸೇರಿಸುವಂತೆ ನಿರ್ದೇಶನ ನೀಡಿದರು.
ಬೋರ್‌ವೆಲ್ ರಿಪೇರಿಗೆ ಕ್ರಮಕ್ಕೆ ಮನವಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಲಮಂಡಳಿಯು ಬೋರ್‌ವೆಲ್‌ಗಳನ್ನು ದುರಸ್ತಿ ಮಾಡದಿರುವ ಬಗ್ಗೆ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ. ಬಿಬಿಎಂಪಿ ಆಯುಕ್ತರು ಜಲಮಂಡಳಿಯೊಂದಿಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಬೇಕು. –ಮುನೀಂದ್ರ ಕುಮಾರ್, ಆಡಳಿತ ಪಕ್ಷದ ನಾಯಕ
ಬಿಎಂಟಿಸಿ ನಿಲ್ಲುವ ಸ್ಥಳದಲ್ಲಿ ನಗರದಾದ್ಯಂತ 1,650 ಬಸ್ ಶೆಲ್ಟರ್ ನಿರ್ಮಿಸುವಂತೆ ಎರಡು ಸಂಸ್ಥೆಗಳಿಗೆ 2016ರಲ್ಲಿ ಟೆಂಡರ್ ನೀಡಲಾಗಿತ್ತು. ಆದರೆ, 642 ಶೆಲ್ಟರ್ ನಿರ್ಮಿಸಿದೆಯಷ್ಟೇ. ಇದರಿಂದ ಪಾಲಿಕೆಗೆ ನಷ್ಟವಾಗುತ್ತಿದೆ. ಈ ಲೋಪವನ್ನು ಕೂಡಲೇ ಸರಿಪಡಿಸಬೇಕು. -ಅಬ್ದುಲ್ ವಾಜಿದ್, ವಿರೋಧ ಪಕ್ಷದ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.