ತಬ್ಲೀಘಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ
Team Udayavani, Apr 8, 2020, 12:04 PM IST
ಬೆಂಗಳೂರು: ದೆಹಲಿ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಸಮಾವೇಶದಲ್ಲಿ ವಿದೇಶಿಯರು ಪಾಲ್ಗೊಂಡಿರುವ ಕಾರಣ ರಾಜ್ಯ ಸರ್ಕಾರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು, ಸಮಾವೇಶದಲ್ಲಿ ಭಾಗವಹಿಸಿದ ಕರ್ನಾಟಕಕ್ಕೆ ಹಿಂದಿರುಗಿದವರನ್ನು ತ್ವರಿತವಾಗಿ ಪತ್ತೆ ಹಚ್ಚಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೋವಿಡ್ 19 ವೈರಸ್ ಸೋಂಕು ಹರಡುವ ಅಪಾಯದ ಹಿನ್ನೆಲೆಯಲ್ಲಿ ಮರ್ಕಜ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ವ್ಯಕ್ತಿಗಳನ್ನು ಪತ್ತೆ ಹೆಚ್ಚಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ವಕೀಲೆ ಗೀತಾ ಮಿಶ್ರಾ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಏ.3ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಮರ್ಕಜ್ ಸಮಾವೇಶದಲ್ಲಿ ಕರ್ನಾಟಕದ ಎಷ್ಟು ಜನ ಪಾಲ್ಗೊಂಡಿದ್ದರು? ಅವರ ಪೈಕಿ ಎಷ್ಟು ಜನ ಕರ್ನಾಟಕಕ್ಕೆ ವಾಪಸ್ ಆಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಅವರಿಂದ ಯಾರಿಗೆಲ್ಲಾ ಕೋವಿಡ್19 ವೈರಸ್ ಸೋಂಕು ಹರಡಿದೆ ಎಂಬುದನ್ನು ಕಂಡು ಹಿಡಿದು ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಮಂಗಳವಾರ ಅರ್ಜಿ ವಿಚಾರಣೆಗೆ ಬಂದಾಗ ಮುಖ್ಯ ನ್ಯಾ. ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರಿ ವಕೀಲರು ವರದಿ ಸಲ್ಲಿಸಿದರು.
ಅದರಂತೆ, ಮರ್ಕಜ್ ನಿಜಾಮುದ್ದೀನ್ ವಿಚಾರವಾಗಿ ಮಾ.21ರಂದು ಮಾಹಿತಿ ಸಿಕ್ಕ ತಕ್ಷಣ ಮಾರ್ಚ್ ಎರಡನೇ ಮತ್ತು ಮೂರನೇ ವಾರದಲ್ಲಿ ಕರ್ನಾಟಕದಿಂದ ಎಷ್ಟು ಮಂದಿ ಅದರಲ್ಲಿ ಪಾಲ್ಗೊಂಡಿದ್ದರು ಎಂಬ ಬಗ್ಗೆ ಮಾಹಿತಿ ಪಡೆದುಕೊಂಡು ತಕ್ಷಣ ತುರ್ತು ಕ್ರಮಗಳನ್ನು ಕೈಗೊಳ್ಳಲಾಯಿತು. ರಾಜ್ಯದಲ್ಲಿದ್ದ ತಬ್ಲೀಗ್ ಜಮಾತ್‌ನ 50 ವಿದೇಶಿ ಸದಸ್ಯರನ್ನು ಪತ್ತೆ ಹಚ್ಚಿ ಅವರನ್ನು ಕ್ವಾರಂಟೈನಲ್ಲಿ ಇಡಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ ಒಟ್ಟು 24 ವಿದೇಶಿ ತಬ್ಲೀಗಿ ಸದಸ್ಯರು, ಬೀದರ್‌ನಲ್ಲಿ ಕಿರ್ಗಿಸ್ತಾನದ 8 ಮಂದಿ, ಬೆಳಗಾವಿಯಲ್ಲಿಇಂಡೋನೇಷ್ಯಾದ 10, ತುಮಕೂರಿನಲ್ಲಿ ದಕ್ಷಿಣಾ ಆಫ್ರಿಕಾದ 4, ಜಾಂಬಿಯಾದ 3, ಅಮೇರಿಕಾದ ಒಬ್ಬರು ಇದ್ದಾರೆ. ಈ ಬಗ್ಗೆ ಇನ್ನೂ ಮಾಹಿತಿ ಪಡೆದುಕೊಳ್ಳಬೇಕಾಗಿದೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಸರ್ಕಾರಿ ವಕೀಲರು ಮಾಹಿತಿ ನೀಡಿದರು. ಆ ವರದಿ ಪರಿಶೀಲಿಸಿದ ನ್ಯಾಯಪೀಠ, ಸರ್ಕಾರ ಒದಗಿಸಿರುವ ಮಾಹಿತಿ ಸೂಕ್ತವಾಗಿಲ್ಲ. ಜಮಾತ್ ಸಮಾವೇಶಕ್ಕೆ ಕರ್ನಾಟಕದ ಎಷ್ಟು ಜನ ಪಾಲ್ಗೊಂಡಿದ್ದರು? ಎಷ್ಟು ರಾಜ್ಯಕ್ಕೆ ಹಿಂದಿರುಗಿದ್ದಾರೆ? ಸದ್ಯ ಎಲ್ಲೆಲ್ಲಿ ನೆಲೆಸಿದ್ದಾರೆ? ಎಂಬ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಅವರನ್ನು ಪತ್ತೆ ಹಚ್ಚಬೇಕು. ಆದ್ದರಿಂದ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದ್ದು, ಸಮಗ್ರ ವರದಿ ಸಲ್ಲಿಸಬೇಕು ಎಂದು ಸೂಚಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.