ಶುರುವಾಗಿದೆ ಟ್ಯಾಂಕರ್ ಟ್ರೆಂಡ್!
Team Udayavani, Apr 12, 2018, 3:10 PM IST
ಬೆಂಗಳೂರು: ಆಕಡೆ ರಾಜಕಾರಣಿಗಳು, ಜನಪ್ರತಿನಿಧಿಗಳು ಕಳಿಸುತ್ತಿದ್ದ ಟ್ಯಾಂಕರ್‌ಗಳು ನಿಂತಿವೆ. ಈ ಕಡೆ ಕಾವೇರಿ ಸಂಪರ್ಕವೇ ಇಲ್ಲ. ಸಂಪರ್ಕವಿದ್ದರೂ ಕೊಳಾಯಿಗಳಲ್ಲಿ ಗಾಳಿಯ ಹೊರತು ನೀರು ಬರುವುದೇ ಇಲ್ಲ. ಇದು ಮಹದೇವಪುರ ವಲಯದ ಜೀವಜಲದ ಜಂಜಾಟ.
ಸಾಮಾನ್ಯ ದಿನಗಳಲ್ಲೇ ನೀರಿನ ಸಮಸ್ಯೆ ಎದುರಿಸುವ ಮಹದೇವಪುರ ಹಾಗೂ ಕೃಷ್ಣರಾಜಪುರ ಭಾಗಗಳಲ್ಲಿ ಬೇಸಿಗೆ
ಆರಂಭವಾದಾಗಿನಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಜನಪ್ರತಿನಿಧಿಗಳು ಕಳುಹಿಸುವ ನೀರಿನ ಟ್ಯಾಂಕರ್‌ಗಳಿಗೆ ಕಾಯಬೇಕು ಇಲ್ಲವೆ, ಖಾಸಗಿ ಟ್ಯಾಂಕರ್‌ಗಳ ಮೇಲೆ ಅವಲಂಬನೆಯಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಬೆಂಗಳೂರು ಜಲಮಂಡಳಿ ಸಂಪರ್ಕ ಹೊಂದಿರುವ ಭಾಗಗಳಿಗೆ ವಾರದಲ್ಲಿ ಕನಿಷ್ಠ ಎರಡು ದಿನವಾದರೂ ನೀರು ದೊರೆಯುತ್ತಿದೆ. ಆದರೆ, ಸರ್ಕಾರಿ ಬೋರ್‌ವೆಲ್ ಗಳನ್ನೇ ನಂಬಿಕೊಂಡಿರುವ ಹಲವಾರು ಹಳ್ಳಿಗಳಲ್ಲಿ ಜನರು ನೀರಿಗಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲಬೇಕಾದ ಹಾಗೂ ಟ್ಯಾಂಕರ್‌ಗಳ ಬಳಿ ನಿಂತು ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀತಿ ಸಂಹಿತೆ ಜಾರಿಯಾದಾಗಿನಿಂದ ಸ್ಥಳೀಯ ಪಾಲಿಕೆ ಸದಸ್ಯರು, ಶಾಸಕರು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದು, ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿಯವರಿಗೆ ನೂರಾರು ರೂಪಾಯಿ ಕೊಟ್ಟು ನೀರು ಖರೀದಿಸಬೇಕಿದೆ. ಕೆ.ಆರ್. ಪುರ ಹಾಗೂ ಮಹದೇವಪುರದ ಹಲವು ಬಡಾವಣೆಗಳಲ್ಲಿ ಬಹುತೇಕ ಮನೆಗಳ ಮುಂದೆ ಎರಡು ಅಥವಾ ಮೂರು ಸಿಂಟೆಕ್ಸ್‌ಗಳಿರುವುದು ಕಂಡು ಬರುತ್ತವೆ. ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಜನ ಹೆಚ್ಚುವರಿ ಸಿಂಟೆಕ್ಸ್ ಖರೀದಿಸಿದ್ದು, ಜನಪ್ರತಿನಿಧಿಗಳು ಟ್ಯಾಂಕರ್ ಕಳುಹಿಸಿದಾಗ ಅವುಗಳಿಗೆ ನೀರು ತುಂಬಿಸಿ ಶೇಖರಿಸಿ ಇರಿಸಿಕೊಳ್ಳುತ್ತಾರೆ.
ಕ್ಯಾನ್ ನೀರಿಗೆ ಭಾರಿ ಬೇಡಿಕೆ: ಕೆ.ಆರ್.ಪುರ ಹಾಗೂ ಮಹದೇವಪುರ ಭಾಗಗಳಲ್ಲಿನ ಬಹುತೇಕ ಸರ್ಕಾರಿ ಕೊಳವೆಬಾವಿಗಳು ಬತ್ತಿವೆ. ಕೆಲ ಭಾಗಗಳಲ್ಲಿ ಬೋರ್‌ವೆಲ್ ಗಳಲ್ಲಿ ನೀರಿದ್ದರೂ, ಅದು ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಈ ವಲಯದಲ್ಲಿ 25 ಲೀ. ಕುಡಿಯುವ ನೀರಿನ ಕ್ಯಾನ್‌ಗಳಿಗೆ ಭಾರಿ ಬೇಡಿಕೆಯಿದೆ. ಪ್ರತಿ ಕ್ಯಾನ್‌ಗೆ 25ರಿಂದ 35 ರೂ. ಪಾವತಿಸಬೇಕಿದೆ.
ತುಕ್ಕು ಹಿಡಿದ ಟ್ಯಾಂಕರ್‌ಗಳು: ಈ ನಡುವೆ ನೀರಿನ ಸಮಸ್ಯೆಯಿಂದಾಗಿ ಜನರು ಹೆಚ್ಚಾಗಿ ಟ್ಯಾಂಕರ್ ನೀರನ್ನು ಆಶ್ರಯಿಸಿದ್ದು, ಈ ಟ್ಯಾಂಕರ್‌ಗಳ ನೀರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ. ನಿಯಮದಂತೆ ಟ್ಯಾಂಕರ್‌ಗಳ ಒಳಭಾಗದಲ್ಲಿ ಸ್ಟೀಲ್ ಕೋಟಿಂಗ್ ಮಾಡಿರಬೇಕು. ಜತೆಗೆ ನೀರನ್ನು ಎಲ್ಲಿಂದ ತರಲಾಗುತ್ತಿದೆ ಎಂಬ ಮಾಹಿತಿಯೊಂದಿಗೆ ಅವರ ವಿಳಾಸವನ್ನು ಮುದ್ರಿಸಿರಬೇಕು.
ಆದರೆ, ಬಹುತೇಕ ಟ್ಯಾಂಕರ್‌ಗಳು ತುಕ್ಕುಹಿಡಿದ ಸ್ಥಿತಿಯಲ್ಲಿದ್ದು, ನೀರು ಎಲ್ಲಿಂದ ತರಲಾಗುತ್ತದೆ ಎಂಬ ಮಾಹಿತಿ ಇರುವುದಿಲ್ಲ.
ನೀರಿನ ಸಮಸ್ಯೆಯಿರುವ ಭಾಗಗಳು: ಭಟ್ಟರಹಳ್ಳಿ, ಪ್ರಿಯಾಂಕ ನಗರ, ಬಸವನಪುರ, ಚನ್ನಸಂದ್ರ, ಜಯಂತಿನಗರ, ಹೊರಮಾವು, ಗುಂಜೂರು, ದೇವಸಂದ್ರ, ಗರುಡಾಚಾರಪಾಳ್ಯ, ಹಗದೂರು, ಕಲ್ಕೆರೆ, ಗೆದ್ದಲಹಳ್ಳಿ, ಚೆಳ್ಳಕೆರೆ, ಬಾಬುಸಪಾಳ್ಯ, ಕುಂಬೇನ ಅಗ್ರಹಾರ, ರಾಮಗೊಂಡನಹಳ್ಳಿ, ಕಾಡುಬೀಸನಹಳ್ಳಿ, ದೊಡ್ಡಕನ್ನಳ್ಳಿ, ರಾಮಮೂರ್ತಿ ನಗರ, ಹೂಡಿ, ಬಿಳಿಶಿವಳ್ಳಿ, ಮಹದೇವಪುರ ಸುತ್ತಮುತ್ತಲಿನ ಭಾಗಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.
ಹಗದೂರು ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇದೀಗ ಬೇಸಿಗೆ ಬಂದಿರುವ ಕಾರಣ ಬಿಂದಿಗೆ ನೀರಿಗೂ ಸಮಸ್ಯೆ ಅನುಭವಿಸುವಂತಾಗಿದೆ.
ಮದ್ದೂರಮ್ಮ, ಹಗದೂರು
ಇಷ್ಟು ದಿನ 2 ಪಕ್ಷಗಳ ಮುಖಂಡರು ನೀರಿನ ಟ್ಯಾಂಕರ್ ಕಳುಹಿಸುತ್ತಿದ್ದರು. ಇದೀಗ ಹಲವು ದಿನಗಳಿಂದ ಟ್ಯಾಂಕರ್
ಬರುವುದು ನಿಂತಿದೆ. ಇದರಿಂದಾಗಿ ತೀವ್ರ ತೊಂದರೆಯಾಗುತ್ತಿದೆ.
ಲಕ್ಷ್ಮಮ್ಮ, ಜಯಂತಿನಗರ
ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.