ಟಾರ್ಗೆಟ್‌ ಬೆನ್ನತ್ತಿ ಬೀದಿಗೆ ಬಂದವರು!

ಸುದ್ದಿ ಸುತ್ತಾಟ

Team Udayavani, Jun 10, 2019, 3:10 AM IST

target

ಪಾರ್ಕಿಂಗ್‌ ಜಾಗ ಇದ್ದರೆ ಮಾತ್ರ ಕಾರು ನೋಂದಣಿಗೆ ಅವಕಾಶ ಕಲ್ಪಿಸುವಂತಹ ನಿಯಮ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ, ಆ್ಯಪ್‌ ಆಧಾರಿತ ಸೇವಾ ಕಂಪನಿಗಳು ಸಾವಿರಾರು ವಾಹನಗಳನ್ನು ರಸ್ತೆಗಿಳಿಸಿವೆ. ಅವುಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆಯೇ? ಉತ್ತರ- ಇಲ್ಲ. ಬೆಂಗಳೂರು ಸುತ್ತಲಿನ ಸಾವಿರಾರು ಯುವಕರು ಈ ವಾಹನಗಳನ್ನು ಗುತ್ತಿಗೆ ಪಡೆದು, ಅವುಗಳನ್ನು ಓಡಿಸುತ್ತಿದ್ದಾರೆ. ದಿನದ 20 ತಾಸು ನಗರವನ್ನು ತಿರುಗಿದರೂ ಕಂಪನಿ ಕೊಟ್ಟ ಗುರಿ ತಲುಪಲು ಆಗುವುದಿಲ್ಲ. ಹಾಗಿದ್ದರೆ, ಅವರೆಲ್ಲಾ ಎಲ್ಲಿ ನಿದ್ರೆ ಮಾಡುತ್ತಾರೆ? ಅವರ ಶೌಚ, ಸ್ನಾನ ಹೇಗೆ? ವಸತಿ ಪ್ರದೇಶಗಳಲ್ಲಿ ಇದು ಯಾವ ರೀತಿ ಸಮಸ್ಯೆಯಾಗಿ ಪರಿಣಮಿಸಿದೆ? ಇಂತಹ ಹಲವು ಮುಖಗಳನ್ನು ಅನಾವರಣಗೊಳಿಸುವ ಪ್ರಯತ್ನ ಈ ಬಾರಿಯ “ಸುದ್ದಿ ಸುತ್ತಾಟ’ದಲ್ಲಿ…

ಇವರು “ಗುರಿ’ಯ ಬೆನ್ನಟ್ಟಿ ಹೊರಟವರು. ದಿನದ 24 ಗಂಟೆಯೊಳಗೆ ಆ ಗುರಿ ತಲುಪಬೇಕು. ಇದಕ್ಕಾಗಿ ಬೆಳಗಾದರೆ ಕಾರು ಏರಿ ನಗರ ಪ್ರದಕ್ಷಿಣೆ ಹಾಕುತ್ತಲೇ ಇರುತ್ತಾರೆ. ಆದರೆ, ಇವರು ಹತ್ತಿರ ಹೋಗುತ್ತಿದ್ದಂತೆ ಅದು (ಗುರಿ) ಮತ್ತೆ ಮಾರುದೂರ ಜಿಗಿಯುತ್ತದೆ. ಹೀಗೆ ಸುತ್ತಾಡಿ ಸುಸ್ತಾಗಿ “ನಾಳೆ ನೋಡಿದರಾಯ್ತು’ ಅಂತ ರಸ್ತೆ ಪಕ್ಕದಲ್ಲೇ ವಾಹನ ನಿಲ್ಲಿಸಿ ಅದರಲ್ಲೇ ಮಲಗುತ್ತಾರೆ. ನಿದ್ರೆಯಿಂದ ಏಳುತ್ತಿದ್ದಂತೆ ಕಾರಿನ ಮೊಬೈಲ್‌ ಸ್ಕ್ರೀನ್‌ ಮೇಲೆ ಕಾಣುವುದು ಮತ್ತದೇ ಗುರಿ…!

ಹೌದು, ನೀವು ಮೊಬೈಲ್‌ನಲ್ಲಿ ಗುಂಡಿ ಒತ್ತಿದರೆ ಸಾಕು, ಮಧ್ಯರಾತ್ರಿಯಲ್ಲೂ ನಿಮ್ಮ ಮನೆ ಬಾಗಿಲಿಗೆ ಟ್ಯಾಕ್ಸಿ ಬಂದು ನಿಲ್ಲುತ್ತದೆ. ನೀವು ಹೇಳಿದ ಜಾಗಕ್ಕೆ ಕರೆದೊಯ್ಯುತ್ತದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಈ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ನಿಧಾನವಾಗಿ “ಸಂಚಾರ ನಾಡಿ’ಯಾಗುತ್ತಿದೆ. ಹಾಗೇ ಸಾವಿರಾರು ಉದ್ಯೋಗಗಳನ್ನೂ ಸೃಷ್ಟಿಸಿದೆ. ಆದರೆ, ಇದರ ಬೆನ್ನಲ್ಲೇ ಈ ಟ್ಯಾಕ್ಸಿಗಳನ್ನು ಓಡಿಸುವ ಚಾಲಕರನ್ನು ಬೀದಿಗೆ ತಂದುನಿಲ್ಲಿಸಿದೆ!

ಟ್ಯಾಕ್ಸಿ ಚಾಲಕನಾಗಿ ಸಿಗುವ ಕೂಲಿಯಲ್ಲಿ ಬಾಡಿಗೆ ಮನೆ ಅಸಾಧ್ಯ. ಹಾಗಾಗಿ, ಹೆಂಡತಿ-ಮಕ್ಕಳು, ತಂದೆ-ತಾಯಿಯನ್ನು ಊರಲ್ಲೇ ಬಿಟ್ಟು, ತಾವು ನಗರದಲ್ಲಿ ಟ್ಯಾಕ್ಸಿ ಚಾಲನೆ ಮಾಡುತ್ತಿದ್ದಾರೆ. ಕಂಪನಿ ಕೊಟ್ಟ ಟಾರ್ಗೆಟ್‌ ತಲುಪಲು ಪ್ರತಿ ದಿನ ಹೆಚ್ಚು-ಕಡಿಮೆ 20 ತಾಸು ಕಾರು ಓಡಿಸುವ ಅನಿವಾರ್ಯತೆ ಇದೆ. ತಿರುಗಾಟದಲ್ಲಿ ಹೊತ್ತುಹೋಗಿದ್ದೂ ಗೊತ್ತಾಗುವುದಿಲ್ಲ. ಗಡಿಯಾರದ ಮುಳ್ಳು ನೋಡಿದಾಗಲೇ ತಿಳಿಯುತ್ತದೆ. ವಾಹನ ಓಡಿಸಿ ಹೈರಾಣಾಗಿ ನಗರದ ಬೀದಿಗಳ ಬದಿಯಲ್ಲಿ ನಿಲ್ಲಿಸಿ, ನಿದ್ರೆಗೆ ಜಾರುತ್ತಾರೆ. ಆಗ ಬದುಕು ಅರಸಿ ಬಂದ ಆಧುನಿಕ ಅಲೆಮಾರಿ ಜನರ ಎತ್ತಿನ ಬಂಡಿಗಳು ಸಾಲುಗಟ್ಟಿ ನಿಂತಂತೆ ಅದು ಕಾಣಿಸುತ್ತದೆ.

ಎಲ್ಲೆಲ್ಲಿಂದ ಹೆಚ್ಚಾಗಿ ಬಂದಿದ್ದಾರೆ?: “ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ರಾಮನಗರ ಸೇರಿದಂತೆ ನಾನಾ ಭಾಗದಿಂದ ಬಂದವರು ಇಲ್ಲಿ ಚಾಲಕರಾಗಿದ್ದಾರೆ. ನಗರದಲ್ಲಿ ಈ ಮಾದರಿಯ ಅಂದಾಜು ಒಂದು ಲಕ್ಷ ಟ್ಯಾಕ್ಸಿಗಳಿದ್ದು, ಶೇ.30ರಷ್ಟು ಲೀಸ್‌ನಲ್ಲಿ ಪಡೆದು, ಚಾಲನೆ ಮಾಡುತ್ತಿದ್ದಾರೆ. ಆರಂಭದಲ್ಲಿ ಲಾಭ ಇದ್ದುದರಿಂದ ನಿರೀಕ್ಷೆ ಮೀರಿ ಜನ ಇತ್ತ ಹರಿದುಬಂದರು. ಈಗ ಬೀದಿಗೆ ಬಿದ್ದಿದ್ದಾರೆ. ಕಂಪನಿಗಳು ನೀಡುವ ಟಾರ್ಗೆಟ್‌ ತಲುಪಲು ಕಂಡಲ್ಲೇ ವಾಹನಗಳ ನಿಲುಗಡೆ ಮಾಡಿ, ಅಲ್ಲಿಯೇ ಮಲಗುತ್ತಾರೆ.

ಪಬ್ಲಿಕ್‌ ಟಾಯ್ಲೆಟ್‌ ಅಥವಾ ಗೆಳೆಯರ ರೂಂಗಳಲ್ಲಿ ಫ್ರೆಶ್‌ಅಪ್‌ ಆಗಿ, ಹೋಟೆಲ್‌ನಲ್ಲಿ ತಿಂಡಿ ತಿಂದು ಕೆಲಸಕ್ಕೆ ಅಣಿಯಾಗುತ್ತಾರೆ. ದಿನದ ಬಹುತೇಕ ಕಾಲ ಕಾರಿನಲ್ಲೇ ಕಳೆಯುವುದರಿಂದ ಚಾಲಕರಲ್ಲಿ ಪೈಲ್ಸ್‌, ಬೊಜ್ಜು ಮತ್ತಿತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ’ ಎಂದು ಒಲಾ, ಟ್ಯಾಕ್ಸಿ ಫಾರ್‌ ಶ್ಯೂರ್‌ ಮತ್ತು ಉಬರ್‌ ಡ್ರೈವರ್ ಆಂಡ್‌ ಓನರ್ ಅಸೋಸಿಯೇಷನ್‌ ಅಧ್ಯಕ್ಷ ಎನ್‌. ಅಶೋಕ್‌ಕುಮಾರ್‌ ಮಾಹಿತಿ ನೀಡಿದರು.

“ನಾನು ಮೂಲತಃ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ವಾರಹುಣಸೇನಹಳ್ಳಿಯವನು. ಅಪ್ಪ-ಅಮ್ಮ ಊರಲ್ಲೇ ಇದ್ದಾರೆ. ಈಗ ಒಂದು ಅಗ್ರಿಗೇಟ್‌ ಕಂಪನಿಯೊಂದಿಗೆ ಕಾರ್‌ ಲಿಂಕ್‌ ಮಾಡಿಕೊಂಡಿದ್ದು, ಯಲಹಂಕದಲ್ಲಿ ರೂಂ ಮಾಡಿದ್ದೇನೆ. ಆದರೆ, ಮಲಗಲು ರೂಂಗೆ ಹೋಗುವುದು ತುಂಬಾ ಅಪರೂಪ. ಏಕೆಂದರೆ, ಟ್ರಿಪ್‌ಗಳು ಸಿಗುವುದು ಎಲೆಕ್ಟ್ರಾನಿಕ್‌ ಸಿಟಿ, ಕೋರಮಂಗಲ, ಮಡಿವಾಳ ಕಡೆಗೆ. ದಿನದ ಟಾರ್ಗೆಟ್‌ 18 ಟ್ರಿಪ್‌ ಪೂರೈಸಲೇಬೇಕು.

ಇದನ್ನು ಪೂರೈಸುವಷ್ಟರಲ್ಲಿ ರಾತ್ರಿ 1 ಅಥವಾ 2 ಗಂಟೆ ಆಗಿರುತ್ತದೆ. ಹಾಗಾಗಿ, ಮಾರ್ಗಮಧ್ಯೆಯೇ ರಸ್ತೆ ಬದಿ ಪಾರ್ಕ್‌ ಮಾಡಿ ಸೀಟ್‌ ಬಾಗಿಸಿ, ನಿದ್ರೆ ಮಾಡುತ್ತೇನೆ. ಬೆಳಗ್ಗೆ ಹತ್ತಿರದ ಯಾವುದಾದರೂ ಪಬ್ಲಿಕ್‌ ಟಾಯ್ಲೆಟ್‌ಗೆ ಹೋಗುವುದು, ಫ್ರೆಶ್‌ಅಪ್‌ ಆಗಿ ಗಾಡಿ ಏರುವುದು. ತಿಂಗಳಿಗೊಮ್ಮೆ ಪೋಷಕರ ಮುಖದರ್ಶನ ಮಾಡಿಕೊಂಡು ಬರುತ್ತೇನೆ’ ಎಂದು ಕ್ಯಾಬ್‌ ಚಾಲಕ ಅನಿಲ್‌ಕುಮಾರ್‌ ತಿಳಿಸುತ್ತಾರೆ.

ದೂರುಗಳ ಸುರಿಮಳೆ: ನಿತ್ಯ ಸಾವಿರಾರು ಜನರಿಗೆ ಅನುಕೂಲವಾಗಿರುವ ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಮತ್ತೊಂದು ರೀತಿಯಲ್ಲಿ ಸಮಸ್ಯೆಯಾಗಿಯೂ ಪರಿಣಮಿಸುತ್ತಿವೆ. ಜನವಸತಿ ಪ್ರದೇಶಗಳಲ್ಲಿ ಮುಜುಗರ ಉಂಟುಮಾಡುವ ಘಟನೆಗಳೂ ನಡೆಯುತ್ತಿವೆ. ಈ ಸಂಬಂಧ ದೂರುಗಳ ಸುರಿಮಳೆಯೇ ಸಂಚಾರ ಪೊಲೀಸರಿಗೆ ಬರುತ್ತಿವೆ.

ಪೊಲೀಸರ ಕಾಟ ಅಥವಾ ರಸ್ತೆ ಅಪಘಾತಗಳ ಆತಂಕದ ಹಿನ್ನೆಲೆಯಲ್ಲಿ ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡುವುದಿಲ್ಲ. ಬದಲಿಗೆ ಜನವಸತಿ ಪ್ರದೇಶಗಳಲ್ಲಿ “ನೋ ಪಾರ್ಕಿಂಗ್‌’ ಬೋಡ್‌ಗಳಿಲ್ಲದ ಜಾಗಗಳಲ್ಲಿ ನಿಲ್ಲಿಸುತ್ತಾರೆ. ಇದರಿಂದ ಬೆಳಗ್ಗೆ ಮನೆ ಮಾಲಿಕರು ತಮ್ಮ ಸ್ವಂತ ವಾಹನ ತೆಗೆಯಲು ಪರದಾಡುತ್ತಾರೆ. ಅಲ್ಲದೆ, ಈ ಚಾಲಕರು ವಾಹನಗಳಲ್ಲೇ ಮಲಗಿ, ಅಲ್ಲೇ ಬಾಟಲಿ ನೀರಿನಿಂದ ಹಲ್ಲು ಉಜ್ಜುವುದು, ಮುಖ ತೊಳೆಯುವುದು ಮಾಡುತ್ತಾರೆ. ಧೂಮಪಾನ ಮಾಡುತ್ತಾರೆ ಎಂಬ ದೂರುಗಳು ಇ-ಮೇಲ್‌ ಮೂಲಕ ಬರುತ್ತಿವೆ ಎಂದು ಸಂಚಾರ ಪೊಲೀಸರು ತಿಳಿಸುತ್ತಾರೆ.

ಇಲ್ಲಿ ಹೆಚ್ಚು ಪಾರ್ಕಿಂಗ್‌: ಹೀಗೆ ವಾಹನಗಳ ನಿಲುಗಡೆಯಿಂದ ಜನವಸತಿ ಪ್ರದೇಶಗಳಲ್ಲಿ ತುಂಬಾ ಸಮಸ್ಯೆ ಆಗುತ್ತಿದೆ. ಹೆಚ್ಚಾಗಿ ಬಿಟಿಎಂ ಲೇಔಟ್‌, ಜಯನಗರ, ಕೋರಮಂಗಲ, ಮಡಿವಾಳ, ಯಶವಂತಪುರದ ಉಪ ರಸ್ತೆಗಳಲ್ಲಿ ನಿಲುಗಡೆ ಆಗಿರುತ್ತವೆ. ನಾಲ್ಕಾರು ಚಾಲಕರು ಒಂದೆಡೆ ಸೇರಿ, ನಿಂತ ಜಾಗದಲ್ಲಿಯೇ ಮುಖತೊಳೆಯುತ್ತಾರೆ. ಹತ್ತಿರದಲ್ಲೇ ಮೂತ್ರವಿಸರ್ಜನೆ ಮಾಡುತ್ತಾರೆ.

ಇನ್ನು ಕೆಲವು ಸಲ ಮದ್ಯದ ಬಾಟಲಿಗಳು ಕೂಡ ಬಿದ್ದಿರುತ್ತವೆ ಎಂಬ ದೂರುಗಳೂ ಬರುತ್ತವೆ ಎಂದು ಹೆಸರು ಹೇಳಲಿಚ್ಛಿಸದ ಸಂಚಾರ ನಿಯಂತ್ರಣ ಕೇಂದ್ರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. “ಆದರೆ, ಈ ವಿಚಾರದಲ್ಲಿ ನಾವು ಕೂಡ ಅಸಹಾಯಕರು. ಚಾಲಕ “ನೊ ಪಾರ್ಕಿಂಗ್‌’ನಲ್ಲಿ ನಿಲುಗಡೆ ಮಾಡಿರುವುದಿಲ್ಲ. ಡಬಲ್‌ ಪಾರ್ಕಿಂಗ್‌ ಮಾಡಿದ್ದರೆ ಹೆಚ್ಚೆಂದರೆ ದಂಡ ವಿಧಿಸಬಹುದು. ಇದಕ್ಕಿಂತ ಹೆಚ್ಚಾಗಿ ಏನೂ ಮಾಡಲಾಗುವುದಿಲ್ಲ. ಹೀಗೆ ರಸ್ತೆ ಬದಿ ನಿಲುಗಡೆ ಆಗುವ ವಾಹನಗಳು ಎಷ್ಟು ಎಂಬ ಲೆಕ್ಕವೂ ಇಲ್ಲ’ ಎಂದು ಅವರು ಹೇಳುತ್ತಾರೆ.

ಸ್ನಾನ ಇಲ್ಲ; ಶಿಸ್ತೂ ಇಲ್ಲ: ಅಷ್ಟೇ ಅಲ್ಲ, ಟ್ಯಾಕ್ಸಿ ಚಾಲಕರು ಸ್ನಾನ ಮಾಡಿರುವುದಿಲ್ಲ. ಜೋರಾಗಿ ಎಫ್ಎಂ ಹಾಕಿಕೊಂಡು ಬರುತ್ತಾರೆ. ಬೆಳಿಗ್ಗೆ ಈ ವಾಹನಗಳ ನಿಲುಗಡೆಯಿಂದ ಸಂಚಾರದಟ್ಟಣೆ ಕೂಡ ಉಂಟಾಗುತ್ತಿದೆ ಎಂಬ ದೂರುಗಳೂ ಬರುತ್ತಿವೆ. “ಅಂದಾಜು ಒಂದು ಲಕ್ಷ ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ನಗರದಲ್ಲಿವೆ. ಅವುಗಳೆಲ್ಲಾ ಎರಡು-ಮೂರು ಕಂಪೆನಿಗಳು ಆಪರೇಟ್‌ ಮಾಡುತ್ತಿವೆ. ಅವುಗಳ ಪಾರ್ಕಿಂಗ್‌ಗೆ ಆ ಕಂಪೆನಿಗಳು ವ್ಯವಸ್ಥೆ ಮಾಡಿಲ್ಲ. ಹಾಗಿದ್ದರೆ, ಅವರೆಲ್ಲಾ ಎಲ್ಲಿ ನಿಲುಗಡೆ ಮಾಡುತ್ತಾರೆ? ಅವರ ಶೌಚ, ಸ್ನಾನ ಎಲ್ಲಿ ಆಗುತ್ತದೆ?

ನಿತ್ಯ ಈ ಸಂಬಂಧ ಜನವಸತಿ ಪ್ರದೇಶಗಳಿಂದ ಅನೇಕ ದೂರುಗಳು ನನಗೆ ಬರುತ್ತಿವೆ. ಅಲ್ಲದೆ, ನೆರೆಯ ಊರುಗಳಿಂದ ಇಲ್ಲಿಗೆ ಬಂದು ಚಾಲಕರಾಗಿರುತ್ತಾರೆ. ದಿನದಲ್ಲಿ 20 ತಾಸುಗಟ್ಟಲೆ ವಾಹನ ಚಾಲನೆ ಮಾಡುವುದರಿಂದ ಕಾರುಗಳಲ್ಲೇ ಮಲಗುತ್ತಾರೆ. ಸ್ನಾನ ಮಾಡಿರುವುದೇ ಇಲ್ಲ. ಈ ಬಗ್ಗೆಯೂ ದೂರುಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಪರಣಮಿಸುವ ಸಾಧ್ಯತೆ ಇದೆ’ ಎಂದು ಸ್ವತಃ ಹೆಚ್ಚುವರಿ ಆಯುಕ್ತ (ಸಂಚಾರ) ಪಿ. ಹರಿಶೇಖರನ್‌ ಸೂಚ್ಯವಾಗಿ ಹೇಳಿದರು.

ಕಳ್ಳರ ಕಾಟ: ಚಾಲಕರು ಕಾರಿನಲ್ಲಿ ಮಲಗಿದಾಗ ಗಾಜುಗಳನ್ನು ಒಡೆದು, ಬೆದರಿಸಿ ಮೊಬೈಲ್‌, ಹಣ ದೋಚಿದ ಪ್ರಕರಣಗಳೂ ಇವೆ ಎಂದು ಅಶೋಕ್‌ಕುಮಾರ್‌ ಮಾಹಿತಿ ನೀಡುತ್ತಾರೆ. “ಸುಸ್ತಾಗಿ ಟ್ಯಾಕ್ಸಿಗಳನ್ನು ರಸ್ತೆ ಬದಿ ನಿಲ್ಲಿಸಿ ಮಲಗಿದಾಗ, ದುಷ್ಕರ್ಮಿಗಳು ಹೀಗೆ ದೋಚಿದ್ದುಂಟು. ಆದ್ದರಿಂದ ಸಿಸಿ ಕ್ಯಾಮೆರಾಗಳು ಇರುವಲ್ಲಿ ಅಥವಾ ಈ ಮೊದಲೇ ವಾಹನಗಳು ನಿಲುಗಡೆ ಆಗಿದ್ದರೆ ಅಂತಹ ಕಡೆ ಪಾರ್ಕಿಂಗ್‌ ಮಾಡುತ್ತೇವೆ. ಬೆಳಗ್ಗೆ ಕಣ್ಣುಬಿಟ್ಟಾಗ ಎಷ್ಟೋ ಸಲ ಯಾವ ವಾಹನಗಳೂ ಇರುವುದಿಲ್ಲ. ಗಾಬರಿಯಿಂದ ಎದ್ದು ಫ್ರೆಶ್‌ಅಪ್‌ ಆಗಿ ಹೋಗುತ್ತೇವೆ’ ಎಂದು ಶಂಕರಪ್ಪ ತಿಳಿಸುತ್ತಾರೆ.

ಏನಿದು ಟಾರ್ಗೆಟ್‌?: ಅಗ್ರಿಗೇಟರ್‌ಗಳು ಪ್ರತಿ ಟ್ಯಾಕ್ಸಿಗೆ ಇಂತಿಷ್ಟು ಟ್ರಿಪ್‌ ಅಥವಾ ಗಳಿಕೆ ಎಂದು ನಿಗದಿಪಡಿಸುತ್ತಾರೆ. ಸಾಮಾನ್ಯವಾಗಿ ಮೂರು ಸ್ಲಾಬ್‌ಗಳನ್ನು ಮಾಡಲಾಗಿದ್ದು, 2,800 ರೂ., 3,400 ರೂ. ಹಾಗೂ 3,800 ರೂ. ಇರುತ್ತದೆ. ಇದರಲ್ಲಿ ಚಾಲಕ ಕೊನೆಪಕ್ಷ ಮೊದಲ ಸ್ಲಾಬ್‌ ಆದರೂ ಪೂರ್ಣಗೊಳಿಸಲೇಬೇಕು. ಅಂದಾಗ ಆತನಿಗೆ 450 ರೂ. ಪ್ರೋತ್ಸಾಹಧನ ಸಿಗುತ್ತದೆ. ಇದಕ್ಕಾಗಿ ಪ್ರಸ್ತುತ ಸಂದರ್ಭದಲ್ಲಿ 18ರಿಂದ 20 ತಾಸು ಕಾರು ಓಡಿಸಬೇಕಾಗುತ್ತದೆ.

ಚಾಲಕರ ಪ್ರಕಾರಗಳು
* ಸ್ವಂತ ವಾಹನ ಪಡೆದು, ಕಂಪನಿ ಜತೆ ಒಪ್ಪಂದ ಮಾಡಿಕೊಂಡಿರುತ್ತಾರೆ.
* ಲೀಸ್‌ನಲ್ಲಿ ತೆಗೆದುಕೊಂಡು ಓಡಿಸುತ್ತಾರೆ. ಇದಕ್ಕಾಗಿ 25 ಸಾವಿರ ರೂ. ಠೇವಣಿ ನೀಡಬೇಕು. ದಿನಕ್ಕೆ ಇಂತಿಷ್ಟು ಬಾಡಿಗೆ ಕಟ್ಟಬೇಕು.
* ಕಂಪನಿಯಿಂದ ವಾಹನ ಪಡೆದು, ಪ್ರತಿ ತಿಂಗಳು ಕಂತಿನಲ್ಲಿ ಸಾಲ ಪಾವತಿಸುವವರೂ ಇದ್ದಾರೆ.

ನಿದ್ರಾಹೀನತೆಯಿಂದ ಅಪಘಾತ: ನಿದ್ದೆಗೆಟ್ಟು ವಾಹನಗಳ ಚಾಲನೆ ಮಾಡುವುದರ ಜತೆಗೆ ಕಡಿಮೆ ಸಮಯದಲ್ಲಿ ಹೆಚ್ಚು ಟ್ರಿಪ್‌ಗಳನ್ನು ಪೂರ್ಣಗೊಳಿಸುವ ಒತ್ತಡಕ್ಕೆ ಚಾಲಕರು ಸಿಲುಕಿದ್ದಾರೆ. ಇದು ಅಪಘಾತಕ್ಕೂ ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸಮುದಾಯಕ್ಕೊಂದು ಭವನಗಳಿವೆ. ಅದೇ ರೀತಿ, ಅಸೋಸಿಯೇಷನ್‌ನಿಂದ ನಗರದ ಅಲ್ಲಲ್ಲಿ ಕ್ಯಾಬ್‌ ಚಾಲಕರ ಶೌಚ, ಸ್ನಾನ ಮತ್ತು ವಸತಿಗೆ ಭವನಗಳನ್ನು ಸ್ಥಾಪಿಸಬಹುದು. ಇದಕ್ಕೆ ಸರ್ಕಾರದ ನೆರವು ಪಡೆಯಬಹುದು. ಸಾಕಷ್ಟು ಪಿಜಿಗಳು, ಹೋಟೆಲ್‌ಗ‌ಳಿವೆ. ಅವುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.