ಟಾರ್ಗೆಟ್ ಮಂದಿರ: ರಾಮನಗರದಲ್ಲಿ ಭಯೋತ್ಪಾದಕನ ಸೆರೆ
Team Udayavani, Aug 7, 2018, 6:00 AM IST
ಬೆಂಗಳೂರು/ ರಾಮನಗರ: ಕೋಲಾರ, ರಾಮನಗರ ಮತ್ತಿತರ ಕಡೆ ಕಳೆದ ನಾಲ್ಕು ವರ್ಷಗಳಿಂದ ಅವಿತುಕೊಂಡಿದ್ದ ಜಮಾತ್-ಉಲ್- ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘಟನೆಯ ಸದಸ್ಯ ಹಾಗೂ ರಾಜ್ಯ ಮತ್ತಿತರ ಕಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ನಡೆಸುತ್ತಿದ್ದ ಮುನೀರ್ ಶೇಕ್ ಅಲಿಯಾಸ್ ಕೌಸರ್ (36)ನನ್ನು ರಾಮನಗರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿವೆ.
ಆತ ಬಿಹಾರದ ಬೋಧ್‌ಗಯಾ ಸ್ಫೋಟಕ್ಕೆ ಸಂಚು ನಡೆಸಿದ್ದು, ಅಲ್ಲಿಗೆ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸಿದ್ದ ಹಾಗೂ ರಾಷ್ಟ್ರದ ಹಲವು ಕಡೆಗಳಲ್ಲಿ ಸ್ಫೋಟಗಳನ್ನು ನಡೆಸಲು ಸಂಚು ನಡೆಸಿದ್ದ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ಕೇರಳ ಮೂಲದ ಭಯೋತ್ಪಾದನೆ ಚಟುವಟಿಕೆ ನಿರತರೊಂದಿಗೂ ನಿಕಟ ಸಂಪರ್ಕ ಇರಿಸಿಕೊಂಡಿರುವ ಆತ, ಪ್ರಮುಖ ದೇವಾಲಯಗಳು, ಮಸೀದಿಗಳು ಮತ್ತಿತರ ಪ್ರಾರ್ಥನಾ ಸ್ಥಳಗಳನ್ನು ಭಯೋತ್ಪಾದನಾ ಸಂಚಿನ ಗುರಿಯಾಗಿಸಿಕೊಂಡಿದ್ದ ಎಂದು ಹೇಳಲಾಗಿದೆ. ಆತನ ಬಳಿಯಿಂದ ಆರು ಸಿಮ್ ಕಾರ್ಡ್, ಎರಡು ಮೊಬೈಲ್ ಫೋನ್, ಟ್ಯಾಬ್, ಸ್ಫೋಟಕ ಸಾಮಗ್ರಿಗಳಾದ ಜಿಲ್ಯಾಟಿನ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನನ್ನು ವಶಕ್ಕೆ ಪಡೆದುಕೊಂಡಿರುವ ತನಿಖಾಧಿಕಾರಿಗಳು ಬೆಂಗಳೂರಿನ ರಹಸ್ಯ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
ದೇಶದಲ್ಲಿ ಜನಾಂಗೀಯ ಘರ್ಷಣೆಗಳನ್ನು ಸೃಷ್ಟಿಸುವ ಉದ್ದೇಶ ಇರುವ ಆತ, ಜಮಾತ್-ಉಲ್- ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ)ನಲ್ಲಿ ಗುರುತಿಸಿಕೊಂಡಿದ್ದ. ಆತ ಬಾಂಗ್ಲಾದೇಶ ಮೂಲದವನೆಂದೂ ಹೇಳಲಾಗಿದ್ದು, ತನಿಖೆ ಮುಂದುವರಿದಿದೆ. ಮುನೀರ್ ಶೇಖ್, ಮೂಲತಃ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು, ಅಕ್ಟೋಬರ್ 2, 2014ರಲ್ಲಿ ಅಲ್ಲಿನ ಬುದ್ವಾìನ್‌ನಲ್ಲಿ ಎರಡಂತಸ್ತಿನ ಕಟ್ಟಡದಲ್ಲಿನ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಆ ಮನೆ ಸ್ಥಳೀಯ ತೃಣಮೂಲ ಕಾಂಗ್ರೆಸ್‌ನ ನಾಯಕ ನೂರುಲ್ ಹಸನ್ ಚೌಧರಿ ಅವರಿಗೆ ಸೇರಿದ್ದು, ಅಲ್ಲಿ ಆತ ಬಾಡಿಗೆಗೆ ವಾಸವಾಗಿದ್ದ. ಬಾಂಬ್ ತಯಾರಿಕೆ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡು ಆತನ ಭಯೋತ್ಪಾದನೆ ಚಟುವಟಿಕೆ ಬಗ್ಗೆ ಮಾಹಿತಿ ಬಹಿರಂಗಗೊಂಡಿತ್ತು. ಆ ಬಳಿಕ ಸ್ಥಳೀಯ ಪೊಲೀಸರ ವಶದಲ್ಲಿದ್ದ ಆತ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಅಲ್ಲಿಂದ ಆತನ ಪತ್ತೆಗೆ ಪೊಲೀಸರು ಎನ್‌ಐಎ ಮೊರೆಹೋಗಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ. ಆತ, ಬುದ್ವಾìನ್ ಪ್ರಕರಣದಲ್ಲಿ 24ನೇ ಆರೋಪಿಯಾಗಿದ್ದ.
ಬುದ್ವಾìನ್ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರು. 2015ರಲ್ಲಿ ಅಸ್ಸಾಮ್ ಮೂಲದ ಫುಲ್‌ಬರ್ ಹುಸೇನ್ ಎಂಬವನನ್ನು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ 2015ರಲ್ಲಿ ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಮುನೀರ್ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹುಸೇನ್ ಮಾಹಿತಿ ನೀಡಿದ್ದ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.
ಬಟ್ಟೆ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದ ಉಗ್ರ
2014ರಲ್ಲಿ ಆರೋಪಿ ಕರ್ನಾಟಕದ ಕೋಲಾರಕ್ಕೆ ಕುಟುಂಬ ಸಮೇತ ಬಂದು, ಖಾಸಗಿ ಕಾರ್ಖಾನೆಯೊಂದರಲ್ಲಿ ನೌಕರಿ ಪಡೆದುಕೊಂಡಿದ್ದ. ಆ ಸಂದರ್ಭದಲ್ಲಿ ಬೇರೆ ಬೇರೆ ಸ್ಥಳಗಳಿಗೆ ವಾಸ್ತವ್ಯ ಬದಲಾಯಿಸಿ, ತನ್ನ ಪೊಲೀಸ್ ಕಣ್ಣಿನಿಂದ ತಪ್ಪಿಸಿಕೊಂಡಿದ್ದ ಆತ, ಇತ್ತೀಚೆಗೆ ರಾಮನಗರದ ಖಾಸಗಿ ಕಾರ್ಖಾನೆ ಮಾಲಿಕನ ಮನೆಯಲ್ಲಿ ಬಾಡಿಗೆ ವಾಸವಿದ್ದ. ತಾನು ಬಟ್ಟೆ ವ್ಯಾಪಾರಿ ಎಂದು ಪರಿಚಯಿಸಿಕೊಂಡಿದ್ದ ಆತ, 50 ಸಾವಿರ ಮುಂಗಡ ಹಣ ನೀಡಿ ಬಾಡಿಗೆ ಮನೆ ಪಡೆಯುವಲ್ಲಿ ಯಶಸ್ವಿಯಾಗಿದ್ದ. ಸೋಮವಾರವಷ್ಟೇ ಮುನೀರ್ ಜೊತೆಗೆ ಮನೆ ಬಾಡಿಗೆಯ ಕರಾರು ಮಾಡಿಕೊಳ್ಳಬೇಕಿತ್ತು ಎನ್ನಲಾಗಿದೆ.
ಹಿನ್ನೆಲೆ: 2008 ಮತ್ತು 2013 ರ ಪಂಚಾಯತ್ ಚುನಾವಣೆಯಲ್ಲಿ ಬುದ್ವಾìನ್‌ನಲ್ಲಿ ನ ಮನೆಯನ್ನು ತೃಣಮೂಲ ಕಾಂಗ್ರೆಸ್‌ನ ಕಚೇರಿಯಾಗಿ ಬಳಸಲಾಗಿತ್ತು. ಚೌಧರಿಯವರು, ಶಕೀಲ್ ಆಹಮದ್ ಎಂಬವನಿಗೆ ಮನೆ ಬಾಡಿಗೆ ನೀಡಿದ್ದರು. 2014 ಅಕ್ಟೋಬರ್ 2ರಂದು ಆ ಮನೆಯಿಂದ ಸ್ಫೋಟದ ಸದ್ದು ಕೇಳಿ ಮತ್ತು ಹೊಗೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲಿದ್ದ ಇಬ್ಬರು ಮಹಿಳೆಯರು ಬಂದೂಕು ತೋರಿಸಿ ಅಲ್ಲಿಗೆ ಧಾವಿಸಿದ ಪೊಲೀಸರನ್ನು ತಡೆದು, ಕಟ್ಟಡವನ್ನೇ ಸ್ಫೋಟಿಸುವುದಾಗಿ ಬೆದರಿಸಿದ್ದರು. ಆ ವೇಳೆಗೆ ಅಲ್ಲಿದ್ದ ಮಹತ್ವದ ದಾಖಲೆಗಳನ್ನು ನಾಶಪಡಿಸಿದ್ದರು. ಆ ಸಂದರ್ಭದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಶಕೀಲ್ ಆಹಮದ್ ಸ್ಥಳದಲ್ಲೆ ಅಸುನೀಗಿದ್ದರು. ಗಾಯಗೊಂಡಿದ್ದ ಶೋಭನ್ ಮಂಡಲ್ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಪೊಲೀಸರಿಗೆ ಪ್ರತಿರೋಧ ತೋರಿದ್ದ ಶಕೀಲ್ ಆಹಮದ್ ಪತ್ನಿ ಮತ್ತಿನ್ನೊಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದು, ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಪೊಲೀಸರು ಬಳಿಕ 50ಕ್ಕೂ ಹೆಚ್ಚು ಜೀವಂತ ಬಾಂಬ್‌ಗಳನ್ನು, ಸ್ಫೋಟಕ ತಯಾರಿಕೆಗೆ ಇಟ್ಟಿದ್ದ ಟೈಮರ್ ಗಡಿಯಾರಗಳು, ಸಿಮ್ ಕಾರ್ಡ್ ಮತ್ತಿತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ರಾಜ್ಯದ ಹಲವು ದೇಗುಲಗಳನ್ನು, ಪ್ರವಾಸಿ ತಾಣಗಳನ್ನು, ಮಸೀದಿಗಳನ್ನು, ಅಣೆಕಟ್ಟೆಗಳನ್ನು ಧ್ವಂಸ ಮಾಡಲು ಈತ ಸಂಚು ರೂಪಿಸಿದ್ದ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ಚಿತ್ರಗಳು, ನಕ್ಷೆಗಳನ್ನು ಶಂಕಿತ ಉಗ್ರನಿಂದ ವಶಪಡಿಕೊಳ್ಳಲಾಗಿದೆ. ಆಗಸ್ಟ್ 3 (ಶುಕ್ರವಾರ) ಎನ್‌ಐಎ ತಂಡ, ಕೇರಳದಲ್ಲಿ ಇಬ್ಬರು ಉಗ್ರರನ್ನು ಬಿಹಾರದ ಬೋಧ್‌ಗಯಾ ಸ್ಫೋಟ ಸಂಚಿನ ಆರೋಪದಲ್ಲಿ ಬಂಧಿಸಲಾಗಿತ್ತು. ಮುರ್ಷಿದಾಬಾದ್‌ನ ಅಬ್ದುಲ್ ಕರೀಮ್, ಮುಝಾಫರ್ ರೆಹಮಾನ್ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಬಾಂಗ್ಲಾದೇಶೀಯರಾದ ಆರೋಪಿಗಳು ಬೋಧ್‌ಗಯಾದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದರು.
ಆ ಇಬ್ಬರೂ ಆರೋಪಿಗಳು ಬೊಮಾ ಮಿಝಾನ್ ಅಲಿಯಾಸ್ ಕೌಸರ್ ಅಲಿಯಾಸ್ ಮುನ್ನಾ ಅಲಿಯಾಸ್ ಬಡಾಭಾಯಿ ಮತ್ತು ಮುಸ್ತಾಫಿಝುರ್ ಅಲಿಯಾಸ್ ತುಹಿನ್ ಎಂಬಿಬ್ಬರು ಬಾಂಗ್ಲಾದೇಶೀ ಭಯೋತ್ಪಾದಕರ ಸಹಚರರೆಂದು ಮೂಲಗಳು ತಿಳಿಸಿವೆ. ಕೌಸರ್ ಎಂಬವನು ಈಗ ರಾಮನಗರದಲ್ಲಿ ಬಂಧಿತನಾಗಿರುವ ಮುನೀರ್ ಎಂಬವನೇ ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಆದರೆ, ಕೇರಳದಲ್ಲಿ ನಡೆಸಿದ ಕಾರ್ಯಾಚರಣೆ ಬಳಿಕ ರಾಮನಗರದಲ್ಲಿ ಮುನೀರ್ ಬಂಧನವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.