ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಚುರುಕು
Team Udayavani, Dec 24, 2017, 6:00 AM IST
ಬೆಂಗಳೂರು: ಶಿಕ್ಷಕ ಸಮೂಹ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಶಾಲಾ ಶಿಕ್ಷಕರ ವರ್ಗಾವಣೆಗೆ ಕೊನೆಗೂ ವೇಳಾಪಟ್ಟಿ ಪ್ರಕಟಗೊಳಿಸಲಾಗಿದೆ. ಡಿ.29ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಜ.10 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ವರ್ಗಾವಣೆ ಪ್ರಕ್ರಿಯೆಯು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯದವರೆಗೂ ಅಂದರೆ 2018ರ ಮಾರ್ಚ್ 4ರ ತನಕ ನಡೆಯಲಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಪ್ರತ್ಯೇಕವಾಗಿ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ದಾಖಲೆ ಸಮೇತವಾಗಿ ಡಿ.29ರಿಂದ ಜ.10ರವರೆಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಪಡೆದು, ಶಿಕ್ಷಕರು ತಮ್ಮ ಸಹಿ ನಮೂದಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಜ.12ರೊಳಗೆ ಸಲ್ಲಿಸಬೇಕು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಸೇವಾದಾಖಲೆಗಳೊಂದಿಗೆ ತಾಳೆ ನೋಡಿ, ಅಂತರ್ಜಾಲದಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ನ್ಯೂನತೆಗಳಿದ್ದರೆ ಸರಿಪಡಿಸಿ ಮಾಹಿತಿ ದೃಢೀಕರಿಸಿ ಅರ್ಜಿ ನಮೂದಿಸಲು ಜ.16ರ ತನಕ ಕಾಲಾವಕಾಶ ನೀಡಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ವೀಕೃತ ಅರ್ಜಿಗಳ ಸಂಬಂಧ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿ, ಅರ್ಹತೆ ಕುರಿತಂತೆ ದೃಢೀಕೃತ ಶಿಫಾರಸ್ಸಿನೊಂದಿಗೆ ಅರ್ಜಿಯ ಮುಂದಿನ ಕ್ರಮಕ್ಕಾಗಿ ಜ.17ರೊಳಗೆ ಪ್ರಾಧಿಕಾರಕ್ಕೆ ಸಲ್ಲಿಸಲು ಇಲಾಖೆ ಸೂಚಿಸಿದೆ.
ಜ.19ರಂದು ಕೋರಿಕೆ ವರ್ಗಾವಣೆ ಬಯಸಿದ ಶಿಕ್ಷಕರ ತಾತ್ಕಾಲಿಕ ಆದ್ಯತಾಪಟ್ಟಿ(ಘಟಕದ ಒಳಗೆ ಮತ್ತು ಹೊರಗೆ) ಪ್ರಕಟಿಸಲಾಗುತ್ತದೆ. ಜ.24ರ ತನಕ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೋರಿಕೆ ಅಥವಾ ಪರಸ್ಪರ ಅಭ್ಯರ್ಥಿಗಳಿಂದ ಪಡೆದ ಮೂಲ ಪ್ರಮಾಣ ಪತ್ರವನ್ನು ದೃಢೀಕರಿಸಿ ಜ.27ರೊಳಗೆ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಬೇಕು.
ಜ.31ರೊಳಗೆ ಜಿಲ್ಲಾ ಉಪನಿರ್ದೇಶಕರು ಆ ಪಟ್ಟಿಯನ್ನು ವರ್ಗಾವಣೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಫೆ.3ರಂದು ಪರಸ್ಪರ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ ಪ್ರಕಟಿಸಲಾಗುತ್ತದೆ. ಫೆ.5ರಂದು ಕೋರಿಕೆ ವರ್ಗಾವಣೆಯ ಖಾಲಿ ಹುದ್ದೆಯ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಫೆ.6ರಂದು ಕೋರಿಕೆ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಕೌನ್ಸೆಲಿಂಗ್ ಪ್ರಕ್ರಿಯೆ:
ಫೆ.8ರಿಂದ 12ರ ತನಕ “ಬಿ’ವಲಯದ ಶಿಕ್ಷಕರನ್ನು “ಎ’ ವಲಯಕ್ಕೆ, “ಸಿ’ ವಲಯದ ಶಿಕ್ಷಕರನ್ನು “ಎ’ ವಲಯಕ್ಕೆ ಹಾಗೂ “ಸಿ’ ವಲಯದ ಶಿಕ್ಷಕರನ್ನು “ಬಿ’ ವಲಯಕ್ಕೆ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ. ಪ್ರೌಢಶಾಲಾ ವಿಶೇಷ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ, ಹಿರಿಯ ಮುಖ್ಯಶಿಕ್ಷಕ ಹಾಗೂ ವಿಶೇಷ ಶಿಕ್ಷಕರ ಕೌನ್ಸೆಲಿಂಗ್ ಫೆ.14 ಮತ್ತು 15ರಂದು ನಡೆಯಲಿದೆ. ಫೆ.20ರಂದು ಘಟಕದ ಒಳಗಿನ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.
ಫೆ.21ರಿಂದ 24ರ ತನಕ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್, ಫೆ.25ರಿಂದ 28ರ ತನಕ ಅಂತರ್ ವಿಭಾಗದ ವರ್ಗಾವಣೆ, ಮಾರ್ಚ್ 1ರಿಂದ 3ರ ತನಕ ಘಟಕದ ಹೊರಗೆ ಪರಸ್ಪರ ವರ್ಗಾವಣೆ ನಡೆಯಲಿದೆ. ಪ್ರೌಢಶಾಲಾ ವಿಭಾಗದ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ಫೆ.26ರಿಂದ ಮಾ.1ರ ತನಕ, ದೈಹಿಕ ಶಿಕ್ಷಕ, ವಿಶೇಷ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ಮಾ.2 ಮತ್ತು 3ರಂದು ನಡೆಯಲಿದೆ. ಮಾ.4ರಂದು ಘಟಕದ ಹೊರಗಿನ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.
ಕಡ್ಡಾಯ ವರ್ಗಾವಣೆ
ಡಿ.29ರಿಂದ ಜ.10ರ ತನಕ ಕಡ್ಡಾಯ ವರ್ಗಾವಣೆಗಳ ಕುರಿತು ಕ್ಷೇತ್ರಶಿಕ್ಷಣಾಧಿಕಾರಿಗಳ, ಉಪನಿರ್ದೇಶಕರ ಹಂತದಲ್ಲಿ ಪೂರ್ವಭಾವಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ವರ್ಗಾವಣೆ ನಿಯಮ 21(3)ರ ಪ್ರಕಾರ ಮೊದಲ ಹಂತದಲ್ಲಿ ಯಾವುದೇ ತಾಲೂಕಿನಲ್ಲಿ ಮಂಜೂರಾದ ವೃಂದ ಬಲದ ಶೇ.20 ಮತ್ತು ಹೆಚ್ಚಿನ ಹುದ್ದೆ ಖಾಲಿ ಇದ್ದರೆ ವಿಶೇಷ ವರ್ಗಾವಣೆ ನಡೆಸಲು ಪೂರಕವಾದ ಪಟ್ಟಿಯನ್ನು ಜ.12ರಂದು ಪ್ರಕಟಿಸಲಾಗುತ್ತದೆ.
“ಎ’ ವಲಯದಲ್ಲಿ 10 ವರ್ಷಕ್ಕಿಂತ ಹೆಚ್ಚುಕಾಲ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪಟ್ಟಿಯನ್ನು ಜ.12ರಂದು ಪ್ರಕಟಿಸಿ, ಜ.18ರತನಕ ಆಕ್ಷೇಪಣೆ ಆಹ್ವಾನಿಸಲಾಗುತ್ತದೆ. ಜ.20ರಂದು ಅಂತಿಮ ಆದ್ಯತಾ ಪಟ್ಟಿ ಹಾಗೂ ವಿಷಯವಾರು ಖಾಲಿ ಹುದ್ದೆ ವಿವರ ಪ್ರಕಟಿಸಲಾಗುತ್ತದೆ. ಜ.22ರಂದು ಖಾಲಿ ಹುದ್ದೆ ಕೌನ್ಸೆಲಿಂಗ್ ನಡೆಯಲಿದೆ ಎಂದು ಇಲಾಖೆ ವೇಳಾಪಟ್ಟಿಯಲ್ಲಿ ತಿಳಿಸಿದೆ.
ಕಡ್ಡಾಯ ವರ್ಗಾವಣೆ ಅಡಿಯಲ್ಲಿ “ಎ’ ವಲಯದಿಂದ “ಸಿ’ ವಲಯಕ್ಕೆ ಫೆ.15ರಂದು ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ. ಕಡ್ಡಾಯ ವರ್ಗಾವಣೆ ಸೆಕ್ಷನ್ 3ಎ(1)(2)ರಂತೆ “ಎ’ ವಲಯದಿಂದ “ಬಿ’ ವಲಯಕ್ಕೆ ಮತ್ತು “ಎ’ ವಲಯದಿಂದ “ಸಿ’ ವಲಯಕ್ಕೆ ಫೆ.16 ಮತ್ತು 17ರಂದು ಕೌನ್ಸೆಲಿಂಗ್ ನಡೆಯಲಿದೆ. ಕ್ರಿಮಿನಲ್ ಹಾಗೂ ಶಿಸ್ತುಕ್ರಮ ಎದುರಿಸುತ್ತಿರುವ ಶಿಕ್ಷಕರ ವರ್ಗಾವಣೆ ಫೆ.19ರಂದು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.