ಮೋಡಗಳ ಸಾಂಗತ್ಯಕ್ಕೆ ಯುದ್ಧ ವಿಮಾನಗಳ ಅಡ್ಡಿ !
Team Udayavani, Aug 28, 2017, 10:15 AM IST
ಬೆಂಗಳೂರು: ಸರಕಾರದ ‘ವರ್ಷಧಾರೆ’ ಯೋಜನೆಯಿಂದ ಮೋಡಗಳು ಎಷ್ಟು ಮಳೆ ಸುರಿಸಿದವೋ ಗೊತ್ತಿಲ್ಲ. ಆದರೆ ಬೆನ್ನೇರಿ ಬರುವ ಬಿತ್ತನೆ ವಿಮಾನಗಳ ಜತೆ ಸಾಂಗತ್ಯ ಸಾಧಿಸಲು ಮೋಡಗಳಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ದಿಟ. ಇದಕ್ಕೆಲ್ಲ ಕಾರಣ ಯುದ್ಧ ವಿಮಾನ!
ಒಂದು ರೀತಿಯಲ್ಲಿ ಕಳೆದ ಕೆಲವು ದಿನಗಳಿಂದ ತಾಂತ್ರಿಕ ಹಾಗೂ ಪ್ರಕೃತಿ ನಡುವೆ ‘ಕಣ್ಣಾಮುಚ್ಚಾಲೆ’ ಆಟ ನಡೆಯುತ್ತಿದೆ ಎಂದರೂ ತಪ್ಪಿಲ್ಲ. ಮೋಡ ಬಿತ್ತನೆಗೆ ವಿಮಾನಗಳು ಸಜ್ಜಾಗಿದ್ದಾಗ ವಾಯು ಸಂಚಾರ ನಿಯಂತ್ರಕರ (ಎಟಿಸಿ) ಅನುಮತಿ ಸಿಕ್ಕಿರುವುದಿಲ್ಲ. ಅನುಮತಿ ಸಿಕ್ಕಿದಾಗ ಮೋಡಗಳು ಚದುರಿ ಹೋಗಿರುತ್ತವೆ. ‘ಎಲ್ಲಿ ಹೋಗುವಿರಿ ಮೋಡಗಳೇ ನಿಲ್ಲಿ… ನಿಲ್ಲಿ… ನಿಲ್ಲಿ’ ಅನ್ನುವ ಬದಲು ‘ಎಲ್ಲಿ ಹೋದವು ಮೋಡಗಳು’ ಎಂದು ಹುಡುಕುವುದು ವರ್ಷಧಾರೆ ನಿರ್ವಹಿಸುತ್ತಿರುವವರ ನಿತ್ಯದ ಕಾಯಕ ಆಗಿಬಿಟ್ಟಿದೆ.
ಮೋಡ ಬಿತ್ತನೆ ವಿಮಾನ ಆಕಾಶಕ್ಕೆ ಹಾರಬೇಕಾದರೆ ಜಕ್ಕೂರು, ಯಲಹಂಕ ಹಾಗೂ ಎಚ್‌ಎಎಲ್‌ನ ವಾಯು ಸಂಚಾರ ನಿಯಂತ್ರಕರ (ಎಟಿಸಿ) ಅನುಮತಿ ಬೇಕು. ಆದರೆ ಮೋಡ ಬಿತ್ತನೆ ವಿಮಾನ ಹಾರಾಟ ಆರಂಭಿಸುವಾಗ ಒಂದು ವೇಳೆ ಈ ಮೂರು ವಾಯು ನೆಲೆಗಳಲ್ಲಿ ಯುದ್ಧ ವಿಮಾನಗಳ ತರಬೇತಿ ಹಾರಾಟ ಅಥವಾ ಬೇರೆ ವಿಮಾನಗಳ ಪ್ರಯೋಗಾರ್ಥ ಹಾರಾಟ ನಡೆಯುತ್ತಿದ್ದರೆ ಎಟಿಸಿಗಳು ಮೋಡ ಬಿತ್ತನೆ ವಿಮಾನ ಹಾರಾಟಕ್ಕೆ ಅನುಮತಿ ನೀಡುವುದಿಲ್ಲ. ಎಟಿಸಿಗಳು ಅನುಮತಿ ಕೊಟ್ಟಾಗ ಮೋಡಗಳು ಕಣ್ಮರೆಯಾಗಿರುತ್ತವೆ.
ಹೀಗೆ ಇತ್ತ ರಾಡಾರ್ ಸಂಕೇತಗಳನ್ನು ಆಧರಿಸಿ ಮೋಡ ಬಿತ್ತನೆಗೆಂದು ಆಕಾಶಕ್ಕೆ ಹಾರಲು ಇನ್ನೇನು ವಿಶೇಷ ವಿಮಾನ ಸಜ್ಜಾಗಿರುವಾಗ ವಿಮಾನ ಹಾರಾಟಕ್ಕೆ ಜಕ್ಕೂರು, ಯಲಹಂಕ, ಎಚ್‌ಎಎಲ್ ವಾಯುನೆಲೆಗಳ ‘ವಾಯು ಸಂಚಾರ ನಿಯಂತ್ರಕರಿಂದ’ ಹಸಿರು ನಿಶಾನೆ ಕೊಡುವುದಿಲ್ಲ. ಕಳೆದೊಂದು ವಾರದಿಂದ ‘ನೀ ಕೊಡೆ, ನಾ ಬಿಡೆ’ಯಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಕಂಗೆಟ್ಟಿದೆ.
ವಾಯು ಸಂಚಾರ ನಿಯಂತ್ರಕರ ಈ ತಾಂತ್ರಿಕ ಅಸಹಕಾರಕ್ಕೆ ಮುಖ್ಯವಾಗಿ ಯುದ್ಧ ವಿಮಾನಗಳ ತರಬೇತಿ ಹಾರಾಟ ಕಾರಣ ಎನ್ನಲಾಗಿದೆ. ಯುದ್ಧ ವಿಮಾನಗಳ ತರಬೇತಿ ಹಾರಾಟ ನಡೆಯುತ್ತಿರುವಾಗ ಆ ವ್ಯಾಪ್ತಿಯಲ್ಲಿ ಬೇರೆ ವಿಮಾನಗಳ ಹಾರಾಟಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಸಕಾಲಕ್ಕೆ ನಿಗದಿತ ಪ್ರದೇಶಗಳಲ್ಲಿ ಮೋಡ ಬಿತ್ತನೆ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಾರೆ ಆದ್ದರಿಂದ ಈ ತಾಂತ್ರಿಕ ಅಸಹಕಾರ ಅಥವಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಮೋಡಬಿತ್ತನೆಯ ಉಸ್ತುವಾರಿ, ರಾಜ್ಯ ಸರಕಾರದ ಅಭಿವೃದ್ಧಿ ಆಯುಕ್ತ ಟಿ.ಎಂ. ವಿಜಯಭಾಸ್ಕರ್ ಮಂಗಳವಾರ (ಆ. 29) ಜಕ್ಕೂರು, ಯಲಹಂಕ ಹಾಗೂ ಎಚ್‌ಎಎಲ್‌ನ ವಾಯು ಸಂಚಾರ ನಿಯಂತ್ರಕರ (ಎಟಿಸಿ) ಜತೆಗೆ ಸಭೆ ನಡೆಸಲಿದ್ದಾರೆ. ‘ಇದೊಂದು ರೈತರ ಕಾರ್ಯಕ್ರಮವಾಗಿದ್ದು, ಇದರ ಯಶಸ್ಸಿಗೆ ನಿಮ್ಮ ಸಹಕಾರ ಬೇಕು. ರಾಡಾರ್‌ಗಳ ಸಂಕೇತಗಳು ಬಂದಾಗ, ತತ್‌ಕ್ಷಣ ಕಾರ್ಯಾಚರಣೆ ನಡೆಸಿದರೆ ಮೋಡ ಬಿತ್ತನೆ ಯಶಸ್ವಿಯಾಗುತ್ತದೆ. ಹಾಗಾಗಿ ಮೋಡ ಬಿತ್ತನೆ ವಿಮಾನಗಳ ಹಾರಾಟಕ್ಕೆ ನಿರ್ಬಂಧಿತ ಮತ್ತು ಸಕಾಲಿಕ ಅನುಮತಿ ಬೇಕಾಗುತ್ತಿದೆ. ಮೋಡ ಬಿತ್ತನೆ ಯೋಜನೆ ಮುಗಿಯುವವರೆಗೆ ಯುದ್ಧ ವಿಮಾನಗಳ ತರಬೇತಿ ಹಾರಾಟದ ಸಮಯ ಮತ್ತು ಅವಧಿಯಲ್ಲಿ ಮಾರ್ಪಾಡು ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಈ ಇಂತಿಷ್ಟು ಸಮಯದವರೆಗೆ ಮೋಡ ಬಿತ್ತನೆ ವಿಮಾನಗಳು ಹಾರಾಟ ನಡೆಸುತ್ತಿರುವ ಪ್ರದೇಶಗಳಲ್ಲಿ ಯುದ್ದ ವಿಮಾನಗಳ ಹಾರಾಟ ನಿರ್ಬಂಧಿಸಬಹುದು. ಅದಕ್ಕಾಗಿ ವಿಮಾನಗಳ ವೇಗ, ಹಾರಾಟ ಪ್ರದೇಶ ಹಾಗೂ ಮಾರ್ಗ ಇದೆಲ್ಲ ನಿರ್ಧರಿಸಿ ಪರಸ್ಪರ ಒಪ್ಪಿಗೆಯ ಮೂಲಕ ಸಹಕಾರ ಖಾತರಿಪಡಿಸಿಕೊಳ್ಳಲಾಗುವುದು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮಸ್ಯೆ ಏನು?
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಮಾನಗಳಿಂದ ಮೋಡ ಬಿತ್ತನೆ ವಿಮಾನಗಳ ಹಾರಾಟಕ್ಕೆ ಅಷ್ಟೊಂದು ಅಡಚಣೆ ಉಂಟಾಗುವುದಿಲ್ಲ. ಏಕೆಂದರೆ ಅಲ್ಲಿಂದ ಆಕಾಶಕ್ಕೆ ಹಾರುವ ವಿಮಾನಗಳು ಹಾರಾಟ ಆರಂಭಿಸಿದ ಕೇವಲ 10ರಿಂದ 15 ನಿಮಿಷಗಳಲ್ಲಿ 35 ಸಾವಿರ ಅಡಿ ಎತ್ತರಕ್ಕೆ ಹೋಗಿ ಬಿಡುತ್ತವೆ. ಆದರೆ ಜಕ್ಕೂರು, ಯಲಹಂಕ ಹಾಗೂ ಎಚ್‌ಎಎಲ್‌ನಲ್ಲಿ ಹೆಚ್ಚಾಗಿ ಯುದ್ಧ ವಿಮಾನಗಳ ತರಬೇತಿ ಹಾರಾಟ ನಡೆಯುತ್ತದೆ. ಈ ವಿಮಾನಗಳು 10 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತವೆ. ಅದೇ ಮೋಡ ಬಿತ್ತನೆಯ ವಿಮಾನಗಳು 5ರಿಂದ 7 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಯುದ್ಧ ತರಬೇತಿ ವಿಮಾನಗಳು ಜೆಟ್ ವಿಮಾನಗಳಾದರೆ, ಮೋಡ ಬಿತ್ತನೆಯದು ಅತ್ಯಾಧುನಿಕ ತಂತ್ರಜ್ಞಾನದ ವಿಶೇಷ ವಿಮಾನವಾಗಿರುತ್ತದೆ. ಎರಡೂ ವಿಮಾನಗಳು ಒಂದೇ ಅಥವಾ ಸಮೀಪದ ಪ್ರದೇಶಗಳಲ್ಲಿ ಹಾರಾಟ ನಡೆಸುವುದು ಸಾಧ್ಯವಿಲ್ಲ. ತಾಂತ್ರಿಕ ಸಮಸ್ಯೆಗಳು ಎದುರಾಗುವುದರ ಜತೆಗೆ ಕೆಲವೊಮ್ಮೆ ಅನಾಹುತಗಳೂ ಸಂಭವಿಸಬಹುದು ಅಧಿಕಾರಿಗಳು ವಿವರಿಸುತ್ತಾರೆ.
ಇದು ಮೊದಲೇ ಗೊತ್ತಿರಲಿಲ್ಲವೆ ?
ಈ ಸಮಸ್ಯೆ ಮೊದಲೇ ಗೊತ್ತಿರಲಿಲ್ಲವೇ? ಇಂತಹ ಗಂಭೀರ ತಾಂತ್ರಿಕ ವಿಷಯ ಕಡೆಗಣಿಸಿದ್ದು ಯಾಕೆ ಎಂದು ಕೇಳಿದ್ದಕ್ಕೆ, ಸಮಸ್ಯೆ ಇಷ್ಟೊಂದು ಗಂಭೀರ ಆಗಬಹುದು ಎಂದು ಅಂದುಕೊಂಡಿರಲಿಲ್ಲ. ಅಲ್ಲದೇ ಮೋಡ ಬಿತ್ತನೆಯ ಆರಂಭದ ದಿನ ಮಾತ್ರ ಜಕ್ಕೂರು ವಾಯುನೆಲೆಯಿಂದ ಹಾರಾಟ ನಡೆಸಿ, ಬಳಿಕ ಎಚ್‌ಎಎಲ್ ಮೂಲಕ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದಾಗಿ ಜಕ್ಕೂರು ವಾಯುನೆಲೆ ಬಳಸಿಕೊಂಡೇ ಕಾರ್ಯಾಚರಣೆ ನಡೆಸಬೇಕಾಯಿತು. ಜಕ್ಕೂರು ಹಾಗೂ ಯಲಹಂಕ ವಾಯುನೆಲೆಗಳು ಒಂದೇ ಕಡೆ, ಕಡಿಮೆ ಅಂತರದಲ್ಲಿ ಇರುವುದರಿಂದ ಯಲಹಂಕದ ವಾಯುನೆಲೆಯಿಂದ ಯುದ್ಧ ವಿಮಾನಗಳ ತರಬೇತಿ ಹಾರಾಟ ಹೆಚ್ಚಾಗಿರುತ್ತದೆ. ಹಾಗಾಗಿ ಈ ತಾಂತ್ರಿಕ ಸಮಸ್ಯೆ ನಾವು ಭಾವಿಸಿದ್ದಕ್ಕಿಂತ ಹೆಚ್ಚು ಗಂಭೀರವಾಗಿ ಮೂಡಿಬಂದಿದೆ. ಎಟಿಸಿಗಳ ಜತೆಗಿನ ಸಭೆಯಲ್ಲಿ ಇದಕ್ಕೆಲ್ಲ ಪರಿಹಾರ ಕಂಡುಕೊಂಡು ವರ್ಷಧಾರೆಗೆ ಅಡ್ಡಿಯಾಗಿರುವ ಗೊಂದಲಗಳನ್ನು ದೂರ ಮಾಡಲಾಗುವುದು ಎಂದು ಅಧಿಕಾರಿಗಳು ಸಮರ್ಥನೆ ನೀಡುತ್ತಾರೆ.
‘ಎರಡು ದಿನಗಳ ಹಿಂದೆ ಉಸ್ತುವಾರಿ ಸಮಿತಿ ಸಭೆ ನಡೆಸಲಾಗಿದೆ. ಆ. 29ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಚ್‌ಎಎಲ್, ಯಲಹಂಕ ಹಾಗೂ ಜಕ್ಕೂರು ವಾಯುನೆಲೆಗಳ ವಾಯು ಸಂಚಾರ ನಿಯಂತ್ರಕರ ಸಭೆ ಕರೆಯಲಾಗಿದೆ. ಈ ಸಭೆಯನ್ನು ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ಸಮನ್ವಯ ಮಾಡುತ್ತಿದ್ದಾರೆ’.
– ಟಿ.ಎಂ. ವಿಜಯಭಾಸ್ಕರ್, ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ
*ರಫೀಕ್ ಅಹ್ಮದ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.