ತಂತ್ರಜ್ಞಾನವೇ ಜಗತ್ತಿನಲ್ಲಿ ಬದಲಾವಣೆ ಅಂಶ
Team Udayavani, May 10, 2017, 11:36 AM IST
ಬೆಂಗಳೂರು: ಜಾಗತೀಕರಣ, ಭೌಗೋಳಿಕ ಬದಲಾವಣೆ, ತಂತ್ರಜ್ಞಾನದ ಅಭಿವೃದ್ಧಿಯು ಬದಲಾಗುತ್ತಿರುವ ಜಗತ್ತಿನ ನಿರ್ಣಾಯಕ ಅಂಶಗಳಾಗಿವೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವಿಸಸ್‌ನ ಮುಖ್ಯಸ್ಥ ಡಾ.ಮೋಹನ್‌ದಾಸ್ ಪೈ ಹೇಳಿದ್ದಾರೆ.
ಭಾರತೀಯ ಕೈಗಾರಿಕಾ ಸಂಸ್ಥೆ (ಸಿಐಐ) ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ರಾಷ್ಟ್ರೀಯ ವ್ಯಾಪಾರ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, “ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜಾಗತೀಕರಣದಿಂದ ಜನತೆಯ ಆದಾಯ ಪ್ರಮಾಣ ಕುಸಿಯುತ್ತಿದ್ದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗಳಿಕೆ ಏರುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕನ್ನರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ವಲಸೆ ನೀತಿ ಜಾರಿಗೆ ಮುಂದಾಗಿದ್ದಾರೆ. ಇದರಿಂದ ಅಮೆರಿಕಾ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಮುಕ್ತ ಮಾರುಕಟ್ಟೆ ವ್ಯವಸ್ಥೆ ಹಿಂಜರಿಕೆಯಿಂದಾಗಿ ಜಗತ್ತಿನಾದ್ಯಂತ ಬಹಳಷ್ಟು ರಾಷ್ಟ್ರಗಳು ಅಭದ್ರತೆಯ ಆತಂಕಕ್ಕೆ ಸಿಲುಕಿವೆ,’ ಎಂದು ವಿಶ್ಲೇಷಿಸಿದರು.
“ತಂತ್ರಜ್ಞಾನದ ಅಭಿವೃದ್ಧಿ ಜತೆಗೆ ಇಂಟರ್‌ನೆಟ್ ವ್ಯವಸ್ಥೆಯು ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದೆ. ಹಾಗಾಗಿ ಸುಲಭವಾಗಿ ಸಂಪರ್ಕ ಸಾಧಿಸಲು ಅವಕಾಶವಿದ್ದು, ತೀವ್ರಗತಿಯಲ್ಲಿ ಬದಲಾವಣೆಗಳಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ವಿನಿಮಯಕ್ಕೆ ಅವಕಾಶವಿದೆ. ಒಟ್ಟಾರೆ ಇಂಟರ್‌ನೆಟ್, ಕೈಗಾರಿಕಾ ಕ್ರಾಂತಿ ಹಾಗೂ ತಂತ್ರಜ್ಞಾನದ ಬದಲಾವಣೆ ಗಂಭೀರ ಪರಿಣಾಮ ಬೀರುತ್ತಿದೆ,’ ಎಂದು ಅಭಿಪ್ರಾಯಪಟ್ಟರು.
“ದೇಶದಲ್ಲಿ ಕಳೆದ 15 ವರ್ಷಗಳಲ್ಲಿ ಬ್ಯಾಂಕ್‌ಗಳ ಆಸ್ತಿ ಪ್ರಮಾಣ ಸುಮಾರು 15 ಪಟ್ಟು ಹೆಚ್ಚಳವಾಗಿದ್ದರೂ ಉದ್ಯೋಗ ಪ್ರಮಾಣ ಶೇ.5ರಷ್ಟು ಮಾತ್ರ ಏರಿಕೆಯಾಗಿದೆ. ಹೀಗೆ ಮುಂದುವರಿದರೆ 2025ರ ವೇಳೆಗೆ 45 ವರ್ಷ ದೊಳಗಿನ 20 ಕೋಟಿ ಮಂದಿ ನಿರುದ್ಯೋಗಿಗಳಾ ಗಲಿದ್ದಾರೆ ಎಂಬ ಅಂದಾಜು ಇದೆ. ಒಟ್ಟಾರೆ ತೀವ್ರಗತಿಯ ಬದಲಾವಣೆಗೆ ಪೂರಕವಾದ ವ್ಯವಸ್ಥೆ ರೂಪಿಸಿಕೊಳ್ಳಬೇಕಿದೆ,’ ಎಂದು ತಿಳಿಸಿದರು.
ಐಬಿಎಂ ಇಂಡಿಯಾ ಸಂಸ್ಥೆ ಅಧ್ಯಕ್ಷೆ ವನಿತಾ ನಾರಾಯಣನ್ ಮಾತನಾಡಿ, “ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಜನ ಬಯಸುವ ಗುಣಮಟ್ಟದ ಸೇವೆಯನ್ನು ಕಲ್ಪಿಸುವತ್ತ ಗಮನ ಹರಿಸಬೇಕು. ಸರಕು- ಸೇವೆಗಳ ವಹಿವಾಟು ವೃದ್ಧಿಗೆ ಡಿಜಿಟಲ್ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಅಗತ್ಯವಿದೆ,’ ಎಂದು ಹೇಳಿದರು. ಸಿಐಐ ಮಾಜಿ ಅಧ್ಯಕ್ಷ ಅಶೋಕ್ ಸೂಟ, ಸಿಐಐ ಇನ್‌ಸ್ಟಿಟ್ಯೂಟ್ ಆಫ್ ಕ್ವಾಲಿಟಿ ವಿಭಾಗದ ಮುಖ್ಯಸ್ಥ ಆರ್.ಮುಕುಂದನ್ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.