ತಂತ್ರಜ್ಞಾನಕ್ಕೆ ಹೊಂದುವ ನೀತಿ ಅಗತ್ಯ
Team Udayavani, Nov 25, 2017, 10:33 AM IST
ಬೆಂಗಳೂರು: ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಕೈಗಾರಿಕಾ ನೀತಿ ರೂಪಿಸುವ ನಿಟ್ಟಿನಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ಮತ್ತು ಉದ್ಯಮಿಗಳು ಸರ್ಕಾರಕ್ಕೆ ಅಗತ್ಯ ಸಲಹೆ, ಸೂಚನೆ ನೀಡುತ್ತಿರಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆದ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಕೈಗಾರಿಕೆಗಳ ಕೊಡುಗೆ ಸಾಕಷ್ಟಿದೆ. ತಂತ್ರಜ್ಞಾನ ಬದಲಾಗುತ್ತಿದ್ದಂತೆ ಕೈಗಾರಿಕಾ ನೀತಿಯಲ್ಲೂ ಮಾರ್ಪಾಡು ಮಾಡಬೇಕಾಗುತ್ತದೆ ಎಂದರು.
ಕೈಗಾರಿಕಾ ನೀತಿಯನ್ನು ಶ್ರೇಷ್ಠ ಮಟ್ಟದಲ್ಲಿ ರೂಪಿಸಲು ಸರ್ಕಾರಗಳಿಗೆ ಕೈಗಾರಿಕೊದ್ಯಮಿಗಳ ಸಲಹೆ ಅಗತ್ಯವಾಗಿರುತ್ತದೆ. ಕೈಗಾರಿಕೆಗಳ ಸಲಹೆ ಸ್ವೀಕರಿಸಲು ಅಧಿಕಾರಿಗಳಿಗೂ ತಿಳಿಸಿದ್ದೇವೆ. ಕೇಂದ್ರದಲ್ಲಿ ಆಡಳಿತ ನಡೆಸಿದ ಎನ್‌ಡಿಎ ಹಾಗೂ ಯುಪಿಎ ಸರ್ಕಾರಗಳು ಅನೇಕ ನೀತಿ ಜಾರಿ ಮಾಡುವ ಮೊದಲೇ ಕರ್ನಾಟಕ ಸರ್ಕಾರ ಕೈಗಾರಿಕಾ ಸ್ನೇಹಿಯಾದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ. ಇನ್‌ವೆಸ್ಟ್ ಕರ್ನಾಟಕ ಸಮಿತಿಗೆ ಇಬ್ಬರು ಅಧಿಕಾರಿಗಳ ಜತೆಗೆ ಕೈಗಾರಿಕೋದ್ಯಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಂಡಿದ್ದೇವೆ ಎಂದು ವಿವರ ನೀಡಿದರು.
ರಾಜ್ಯದಲ್ಲಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕೈಗಾರಿಕಾ ನೀತಿ, ನವೋದ್ಯಮ ನೀತಿ ಸೇರಿ ಎಲ್ಲಾ ಕ್ಷೇತ್ರದಲ್ಲೂ ನೀತಿ ರೂಪಿಸಿದ್ದೇವೆ. ಬಂಡವಾಳ ಹೂಡಿಕೆಯ ಜತೆಗೆ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಮೂಲಭೂತ ಸೌಕರ್ಯಗಳಾದ ಭೂಮಿ, ನೀರು, ವಿದ್ಯುತ್ ಮೊದಲಾದ ಅವಶ್ಯಕತೆಗಳನ್ನು ಪೂರೈಸುವುದು ನಮ್ಮ ಆದ್ಯತೆಯಾಗಿದೆ ಎಂದರು.
ಹೂಡಿಕೆಗಾಗಿ ಮಾತುಕತೆ: ಕೈಗಾರಿಕೆಗಳು ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಎರಡು ದಿನದ ಹೂಡಿಕೆದಾರರ ಶೃಂಗಸಭೆಯಲ್ಲಿ ಉದ್ಯಮಿಗಳು ಮತ್ತು ಸರಬರಾಜುದಾರರು ಪರಿಸ್ಪರ ಹಲವು ಒಪ್ಪಂದ ಮಾಡಿಕೊಂಡಿದ್ದಾರೆ. ಸಣ್ಣ ಕೈಗಾರಿಕೆಗಳು ದೊಡ್ಡ ಮಟ್ಟದಲ್ಲಿ ಬೆಳೆಯಲು ಇದು ವೇದಿಕೆಯಾಗಿದೆ. ಚೀನಾದ 8 ಹಾಗೂ ಥೈವಾನ್‌ನ 4 ಸೇರಿ 12 ಆಟೊಕಾಂಪೋನೆಂಟ್ಸ್ ಕಂಪನಿಗಳು ಮೈಸೂರಿನಲ್ಲಿ ಹೂಡಿಕೆ ಮಾಡುವ ಕುರಿತು ಚರ್ಚೆ ನಡೆಸಿವೆ ಎಂದು ಹೇಳಿದರು.
ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವೆ ಡಾ.ಮೋಹನ ಕುಮಾರಿ ಮಾತನಾಡಿ, ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದೆ ಮತ್ತು ಸಾಧಿಸುವ ಗುರಿಯೂ ದೊಡ್ಡದಿದೆ. ಕೈಗಾರಿಕೆಗಳಿಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸುವ ಜತೆಗೆ ಅವರ ಸಮಸ್ಯೆಗೂ ಸ್ಪಂದಿಸುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. 63 ಉದ್ಯಮಗಳಿಗೆ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿ ಹಾಗೂ 61 ಉದ್ಯಮಗಳಿಗೆ ಇದೇ ಮೊದಲ ಬಾರಿಗೆ ಸರ್.ಎಂ.ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಜಿಎಸ್‌ಕೆ ಇಂಡಿಯಾ ಫಾರ್ಮಾ ಮುಖ್ಯಸ್ಥ ಜೇಮ್ಸ್ ಹಾಗ್, ಕೇಂದ್ರ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ವಂದನಾ ಕುಮಾರಿ, ಕಾಸಿಯಾ ಅಧ್ಯಕ್ಷ ಎಚ್.ಹನುಮಂತಗೌಡ, ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಟಾರಿಯಾ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದಲ್ಲೂ ಸಭೆ ನಡೆಯಲಿ: ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ ಜಿಲ್ಲಾ ಮಟ್ಟದಲ್ಲಿ ಆಗಬೇಕು. ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ರಾಷ್ಟ್ರಮಟ್ಟದಲ್ಲೂ ನಡೆಯಬೇಕು. ರಾಜ್ಯಮಟ್ಟದಲ್ಲಿ ಈ ಸಮ್ಮೇಳನ ನಿರಂತರವಾಗಿ ನಡೆಯಬೇಕಾದರೆ ಸಿದ್ದರಾಮಯ್ಯ ಮತ್ತೇ ಮುಖ್ಯಮಂತ್ರಿಯಾಗಬೇಕು. ಅದಕ್ಕೆ ನೀವು ಏನು ಮಾಡಬೇಕೆಂದು ನಾನೇನು ಹೇಳಬೇಕಾಗಿಲ್ಲ. ಅದು ನಿಮಗೆ ಬಿಟ್ಟ ವಿಷಯ ಎಂದು ಪರೋಕ್ಷವಾಗಿ ಕೈಗಾರಿಕೋದ್ಯಮಿಗಳನ್ನು ಮುಂದಿನ ಚುನಾವಣೆಗೆ ಸಜ್ಜು ಮಾಡುವ ಕೆಲಸ ಸಚಿವ ದೇಶಪಾಂಡೆ ಮಾಡಿದರು.
ಕರ್ನಾಟಕ ಹೂಡಿಕೆದಾರರ ತಾಣವಾಗುತ್ತಿದೆ. ಮಾಹಿತಿ ತಂತ್ರಜ್ಞಾನದ ಜತೆಗೆ ಜೈವಿಕ ತಂತ್ರಜ್ಞಾನ, ಆಟೊಮೊಬೈಲ್, ಫಾರ್ಮಸಿ ಮೊದಲಾದ ಕ್ಷೇತ್ರದಲ್ಲೂ ಹೂಡಿಕೆಯಾಗುತ್ತಿದೆ. ಹೂಡಿಕೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಮತ್ತು ಸರ್ಕಾರ ಇದಕ್ಕೆ ಸಹಕಾರ ನೀಡಬೇಕು.
-ಕ್ರಿಸ್ ಗೋಪಾಲಕೃಷ್ಣನ್, ಇನ್ಫೋಸಿಸ್ ಸಹ ಸಂಸ್ಥಾಪಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.