ಕಲ್ಯಾಣ ಮರೆತರೆ ಕ್ರಮ ಖಂಡಿತ
Team Udayavani, Nov 30, 2017, 11:43 AM IST
ಬೆಂಗಳೂರು: ಬಿಬಿಎಂಪಿ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ಘೋಷಿಸಿರುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬುಧವಾರ ಬಿಬಿಎಂಪಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷ ನಾಯಕ ಮಹಮದ್ ರಿಜ್ವಾನ್ ನವಾಬ್ ವಿಷಯ ಪ್ರಸ್ತಾಪಿಸಿ, ಪಾಲಿಕೆಯ ಅಧಿಕಾರಿಗಳು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬೇಜವಾಬ್ದಾರಿ ವಹಿಸಿದ್ದು, ಪ್ರತಿವರ್ಷ ಕಲ್ಯಾಣ ಕಾರ್ಯಕ್ರಮಗಳು ಜಾರಿಯಾಗದೆ ಅನುದಾನ ಹಾಗೆ ಉಳಿಯುತ್ತಿದೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಮಂಜುನಾಥ ರಾಜು, ಕಳೆದ ಮೂರು ವರ್ಷಗಳಿಂದ ಸುಮಾರು 1,289 ಕೋಟಿ ರೂ.ಗಳನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ಆದರೆ, ಆ ಪೈಕಿ ಈವರೆಗೆ ಬಳಕೆಯಾಗಿರುವುದು ಕೇವಲ 600 ಕೋಟಿ ರೂ. ಮಾತ್ರ. ಉಳಿದ ಹಣವನ್ನು ಯಾವುದೇಕ್ಕೆ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಲಿ ಎಂದು ಕೋರಿದರು.
ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಪಾಲಿಕೆಯಿಂದ ನೀಡಲಾಗುವ ಇಸಿ ಪೆಟ್ಟಿಗೆ ಪಡೆಯಲು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹೀಗೆ ಫಲಾನುಭವಿಗಳು ಹತ್ತಾರು ದಾಖಲೆಗಳನ್ನು ಸಲ್ಲಿಸಬೇಕು. ಹೀಗಾಗಿ ಪಾಲಿಕೆಯ ಸಹವಾಸವೇ ಬೇಡವೆಂದು ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸುತ್ತಿಲ್ಲ. ಪಾಲಿಕೆಯ ಯೋಜನೆಗಳು ಸುಲಭವಾಗಿ ಫಲಾನುಭವಿಗಳಿಗೆ ದೊರೆಯುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಮೇಯರ್ ಸಂಪತ್‌ರಾಜ್, ಒಂಟಿ ಮನೆ ಯೋಜನೆ ಹೊರತುಪಡಿಸಿ ಉಳಿದ ಕಾರ್ಯಕ್ರಮಗಳಿಗೆ ಒಂದು ಅಫಿಡವಿಟ್ ಸಲ್ಲಿಸಿದರೆ ಸಾಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ. ಅದರ ನಡುವೆಯೂ ಅಧಿಕಾರಿಗಳು ದಾಖಲೆಗಳನ್ನು ಕೇಳುವುದು ಸರಿಯಲ್ಲ. ಇದರೊಂದಿಗೆ ಫಲಾನುಭವಿಗಳಿಗೆ ವಯಸ್ಸಿನ ಮಿತಿ ಹಾಕುವುದು ಸರಿಯಲ್ಲ. ಹೀಗಾಗಿ ಫಲಾನುಭವಿಗಳು ಒಂದು ಅಫಿಡವಿಟ್ ಸಲ್ಲಿಸಿದರೆ ಸೌಲಭ್ಯಗಳು ದೊರೆಯುವಂತಾಗಬೇಖು ಎಂದು ತಿಳಿಸಿದರು.
ವಾರ್ಡ್ ಸಮಿತಿ ನಿರ್ಧರಿಸಲಿ: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಡವರಿಗೆ ಪಾಲಿಕೆಯಿಂದ ರೂಪಿಸುತ್ತಿರುವ ಸೌಲಭ್ಯಗಳು ದೊರೆಯುತ್ತಿಲ್ಲ. ಹೀಗಾಗಿ ವಾರ್ಡ್‌ಮಟ್ಟದ ಕಾಮಗಾರಿಗಳು, ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳ ಆಯ್ಕೆ, ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ವಾರ್ಡ್ ಸಮಿತಿಗಳಿಗೆ ನೀಡಬೇಕು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಒತ್ತಾಯಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮ: ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಜವಾಬ್ದಾರಿ ಜಂಟಿ ಆಯುಕ್ತರಿಗೆ ನೀಡಲಾಗಿದ್ದು, ಫಲಾನುಭವಿಗಳ ಪಟ್ಟಿ ಕೇಂದ್ರ ಕಚೇರಿಗೆ ನೀಡಿದರೆ ಹಣ ಬಿಡುಗಡೆ ಮಾಡಲಾಗುವುದು. ಪ್ರತಿವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ 30 ಹಾಗೂ ಹಿಂದುಳಿದ ವರ್ಗದವರಿಗೆ 15 ಒಂಟಿ ಮನೆ ನಿಗದಿಗೊಳಿಸಿದ್ದು, ಒಂದೊಮ್ಮೆ ವಾರ್ಡ್‌ನಲ್ಲಿ ಹಿಂದುಳಿದವರು ಇಲ್ಲದಿದ್ದರೆ ಅವರ ಅನುದಾನ ಪರಿಶಿಷ್ಟ ಜಾತಿ/ಪಂಗಡಗಳಿಗೆ ನೀಡಲು ಅವಕಾಶವಿದೆ. ಪಾಲಿಕೆಯ ಎಲ್ಲ ವಲಯಗಳಲ್ಲಿನ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಆಯುಕ್ತರು ನೀಡಿದರು.
15ರೊಳಗೆ ಯೋಜನೆ ಅನುಷ್ಠಾನ: ಇದೇ ವೇಳೆ ಮಾತನಾಡಿದ ಮೇಯರ್ ಸಂಪತ್‌ರಾಜ್, ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಟೆಂಡರ್ ಆಗಬೇಕು. ಟೆಂಡರ್ ಆಗಿರುವ ಯೋಜನೆಗಳಿಗೆ ಕೂಡಲೇ ಕಾರ್ಯಾದೇಶ ನೀಡಬೇಕು. ಜತೆಗೆ ಡಿ.3ರಂದು ವಿಶ್ವ ಅಂಗವಿಕಲರ ದಿನಾಚರಣೆಯ ಹಿನ್ನೆಲೆಯಲ್ಲಿ ಎಲ್ಲ 798 ಅಂಗವಿಕಲ ಫಲಾನುಭವಿಗಳಿಗೆ ವಾಹನ ವಿತರಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಪರಿಹಾರ ಅವ್ಯವಹಾರ: ರಾಜರಾಜೇಶ್ವರಿನಗರ ಹಾಗೂ ಮಹಾಲಕ್ಷ್ಮಿ ಬಡಾವಣೆ ವಿಧಾನಸಭೆ ಕ್ಷೇತ್ರಗಳಲ್ಲಿ ಮಳೆ ಪರಿಹಾರ ಹಂಚಿಕೆಯಲ್ಲಿ ಅವ್ಯವಹಾರ ನಡೆಸಿದ್ದು, ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು. ಬುಧವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 4,215 ಮನೆಗಳಿಗೆ ಮಳೆ ನೀರು ನುಗ್ಗಿದೆ ಎಂದು 2.78 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.
ಹೀಗಾಗಿ ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿರುವುದು ಹಾಗೂ ಮನೆಗಳಿಗೆ ನೀರು ನುಗ್ಗಿರುವ ಫೋಟೋಗಳೊಂದಿಗೆ ಕಡತಗಳನ್ನು ಗುರುವಾರ ಮೇಯರ್ ಮುಂದಿಡಲಿ ಎಂದು ಆಗ್ರಹಿಸಿದರು. ರಾಜರಾಜೇಶ್ವರಿ ನಗರದಲ್ಲಿ ವಿತರಣೆಯಾದ 2.78 ಕೋಟಿಯಲ್ಲಿ ಶೇ.50ರಷ್ಟು ಅವ್ಯವಹಾರ ನಡೆದಿದ್ದು, ಚುನಾವಣೆಯ ಪೂರ್ವಭಾವಿಯಾಗಿ ತೆರಿಗೆದಾರರ ಹಣವನ್ನು ಹಂಚಲಾಗಿದ್ದು,
ಒಂದೇ ಮನೆಗೆ 18-19 ಚೆಕ್‌ಗಳನ್ನು ವಿತರಿಸಲಾಗಿದೆ. ಸಾಮಾನ್ಯವಾಗಿ ಫಲಾನುಭವಿಗಳಿಗೆ ಸ್ಥಳೀಯ ಪಾಲಿಕೆ ಸದಸ್ಯರು, ಶಾಸಕರು, ಸಂಸದರು ಪರಿಹಾರ ವಿತರಿಸುವುದು ವಾಡಿಕೆ. ಆದರೆ, ರಾಜರಾಜೇಶ್ವರಿನಗರದಲ್ಲಿ ಅಧಿಕಾರಿಗಳು ಸೋತಿರುವ ಅಭ್ಯರ್ಥಿಯಿಂದ ವಿತರಣೆ ಮಾಡಿಸಿರುವುದು ಎಷ್ಟು ಸರಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯರಿಗಿಂತ ಸೋತಿರುವ ಸದಸ್ಯರಿಗೆ ಹೆಚ್ಚು ಆದ್ಯತೆ ದೊರೆಯುವುದಾದರೆ, ಎಲ್ಲ ಸೋತಿರುವ ಅಭ್ಯರ್ಥಿಗಳನ್ನು ಕೌನ್ಸಿಲ್ ಸಭೆಗೆ ತಂದು ಕೂರಿಸಿ. ಜಾಗವಿಲ್ಲದಿದ್ದರೆ, ನಮ್ಮ ಭುಜದ ಮೇಲೇ ಕೂರಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂತಹ ಅಯೋಗ್ಯ ಅಧಿಕಾರಿಗಳಿಗೆ ಆಯುಕ್ತರು ರಕ್ಷಣೆ ನೀಡದೆ ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾರತಮ್ಯ ಏಕೆ ಮಾಡುತ್ತೀರಾ: ಬೊಮ್ಮನಹಳ್ಳಿಯ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕ್ಷೇತ್ರದ ಹಲವಾರು ಭಾಗದ ಜನರು ಮಳೆಯಿಂದ ತೊಂದರೆ ಅನುಭವಿಸಿದ್ದಾರೆ. ಮಳೆಯಿಂದ ಹಾನಿಗೊಳಗಾದವರ ಪಟ್ಟಿ ನೀಡಿ ಒಂದು ವರ್ಷವಾದರೂ ಈವರೆಗೆ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಆದರೆ, ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಮಾತ್ರ ಶೀಘ್ರ ಪರಿಹಾರ ವಿತರಿಸಲಾಗಿದೆ. ರಾಜರಾಜೇಶ್ವರಿ ನಗರಕ್ಕಿಂತ ಹೆಚ್ಚು ಹಾನಿ ಬೊಮ್ಮನಹಳ್ಳಿಯಲ್ಲಿ ಆಗಿದೆ. ಆದರೂ, ಪರಿಹಾರ ನೀಡಿದೆ ಏಕೆ ತಾರತಮ್ಯ ಮಾಡುತ್ತೀದ್ದೀರಾ? ನಾವೇನು ಕೈಗೆ ಬಳೆ ತೊಡ್ಕೊಂಡಿದ್ದೀವಿ ಎಂದು ತಿಳಿದಿದ್ದೀರಾ? ಶಕ್ತಿ ಪ್ರದರ್ಶನ ಮಾಡಬೇಕಾ? ಎಂದು ಗರಂ ಆದರು.
ಇದಕ್ಕೆ ಉತ್ತರಿಸಿದ ಮೇಯರ್ ಆರ್.ಸಂಪತ್‌ರಾಜ್, ಮೂರು ದಿನಗಳಲ್ಲಿ ಕಳೆದ ವರ್ಷದ 400 ಮಂದಿ ಸಂತ್ರಸ್ತರು ಹಾಗೂ ಪ್ರಸಕ್ತ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಉತ್ತರಿಸಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಮಳೆಯಿಂದ ಅನಾಹುತಕ್ಕೆ ಒಳಗಾಗುವವ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಪೂರ್ಣ ಅಧಿಕಾರಿವನ್ನು ಜಂಟಿ ಆಯುಕ್ತರಿಗೆ ನೀಡಲಾಗಿದ್ದು, ಹಣ ಇಲ್ಲದಿದ್ದರೆ ಕೇಳುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ಪಾಲಿಕೆ ಅಧಿಕಾರಿಗಳಿಂಧ ಸ್ವತ್ಛತೆ ಪಾಠ!: 2016ರ ದೇಶದ ಪ್ರಥಮ ಸ್ವತ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾದ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಂಗಳವಾರ ಬಿಬಿಎಂಪಿ ಸದಸ್ಯರಿಗೆ “ಸ್ವತ್ಛ ಸರ್ವೆಕ್ಷನ್ ರ್‍ಯಾಂಕಿಂಗ್’ನಲ್ಲಿ ಉತ್ತಮ ಸಾಧನೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಸ್ವತ್ಛ ಸರ್ವೆಕ್ಷನ್ ರ್‍ಯಾಂಕಿಂಗ್ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಗತ್ಯ ಸಿದ್ಧತೆ ನಡೆಸಿರುವ ಕುರಿತು ಮಂಗಳವಾರ “ಉದಯವಾಣಿ’ ಪತ್ರಿಕೆ ವಿಶೇಷ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಮೈಸೂರು ಪಾಲಿಕೆಯ ಅಧಿಕಾರಿಗಳು ಪಾಲಿಕೆಯ ಸಿಬ್ಬಂದಿಗೆ ಉತ್ತಮ ಅಂಕಗಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿತೆ ನೀಡಿದರು.
ಮೈಸೂರು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ನಾಗರಾಜ್ ಅವರು, ಪ್ರಮುಖವಾಗಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಿ ಅಂಕಗಳನ್ನು ನೀಡಲಾಗುತ್ತದೆ. ತ್ಯಾಜ್ಯ ನಿರ್ವಹಣೆ, ಸ್ವತ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಕೇಂದ್ರದಿಂದ ನಿಯೋಜಿಸಿ ಮೂರನೇ ವ್ಯಕ್ತಿಯ ಸಂಸ್ಥೆ ನಗರದ 20 ಸ್ಥಳಗಳಿಗೆ ಭೇಟಿ ನೀಡಿ ಪಾಲಿಕೆಯಿಂದ ನೀಡಲಾಗಿರುವ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ ಅಂಕ ನೀಡಲಿದ್ದಾರೆ ಎಂದು ತಿಳಿಸಿದರು.
ಸದಸ್ಯರ ಕೊರತೆ: ಬುಧವಾರ ನಿಗದಿತ ಅವಧಿಯ ವೇಳೆಗೆ ಕೋರಂ ಇಲ್ಲದ ಕಾರಣ ಎರಡೂವರೆ ಗಂಟೆ ವಿಳಂಬವಾಗಿ ಸಭೆ ಆರಂಭವಾಯಿತು. ಬೆಳಗ್ಗೆ 10-30ಕ್ಕೆ ಸಭೆಯನ್ನು ನಿಗದಿ ಮಾಡಲಾಗಿತ್ತಾದರೂ, ಸಚಿವ ಕೆ.ಜೆ.ಜಾರ್ಜ್ ಹಾಗೂ ವಿನಯ್‌ಕುಲಕರ್ಣಿ ರಾಜಿನಾಮೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಸಭೆಯನ್ನು ಮಧ್ಯಹ್ನ 12 ಗಂಟೆಗೆ ಮುಂದೂಡಲಾಯಿತು.
ಪಾಲಿಕೆ ಸದಸ್ಯೆಯರಿಗೆ “ಪಿಂಕ್ ಹವರ್’
ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಹಿಳೆಯರಿಗೆ ಮಾತನಾಡಲು ಅವಕಾಶ ದೊರಕಿಸಲು ಮುಂದಾಗಿರುವ ಮೇಯರ್ ಸಂಪತ್‌ರಾಜ್, ಪ್ರತಿ ಸಭೆಯಲ್ಲಿ ಒಂದು ಗಂಟೆಯನ್ನು “ಪಿಂಕ್ ಹವರ್’ ಎಂದು ಪರಿಗಣಿಸಿ ಆ ಸಮಯದಲ್ಲಿ ಮಹಿಳೆಯರಿಗೆ ಮಾತ್ರ ಮಾತನಾಡಲು ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ.
ಬಿಬಿಎಂಪಿಯ 198 ಪಾಲಿಕೆ ಸದಸ್ಯರ ಪೈಕಿ 102 ಮಂದಿ ಮಹಿಳಾ ಪಾಲಿಕೆ ಸದಸ್ಯರಿದ್ದಾರೆ. ಆದರೆ, ಪಾಲಿಕೆಯ ಸಭೆಯಲ್ಲಿ ತಮ್ಮ ವಾರ್ಡ್ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ದೊರೆಯುತ್ತಿಲ್ಲ ಎಂದು ಹಲವಾರು ಮಹಿಳಾ ಸದಸ್ಯರು ಸಭೆಯಲ್ಲಿ ನೋವು ತೋಡಿಕೊಂಡ ಘಟನೆಗಳು ನಡೆದಿವೆ. ಅದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್ ಪಿಂಕ್ ಹವರ್ ಜಾರಿಗೊಳಿಸಲು ಮುಂದಾಗಿದ್ದಾರೆ.
ಬುಧವಾರ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಮಾತನಾಡಿದ ಮೇಯರ್ ಸಂಪತ್‌ರಾಜ್, ಪ್ರತಿಯೊಂದು ಸಭೆಯಲ್ಲಿಯೂ ಒಂದು ಗಂಟೆಯನ್ನು ಪಿಂಕ್ ಹವರ್ ಎಂದು ಪರಿಗಣಿಸಿ ಮಹಿಳಾ ಸದಸ್ಯರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದರು. ಈ ನಿರ್ಧಾರಕ್ಕೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.