ಸೀರೆ ಚೋರ ದಂಪತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ
Team Udayavani, Jul 31, 2018, 10:56 AM IST
ಬೆಂಗಳೂರು: ವಿದ್ಯಾರಣ್ಯಪುರದ ನಂಜಪ್ಪ ಸರ್ಕಲ್ ಬಳಿ ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದ ದಂಪತಿ ದುಬಾರಿ ಬೆಲೆಯ ಸೀರೆಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಭಾನುವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಆಂಧ್ರಪ್ರದೇಶ ನೋಂದಣಿಯ ಬೈಕ್‌ನಲ್ಲಿ ಬಂದ ದಂಪತಿ ಕೃತ್ಯವೆಸಗಿದ್ದಾರೆ. ಕಳ್ಳರ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ಸದ್ಯದಲ್ಲೇ ಬಂಧಿಸುತ್ತೇವೆ ಎಂದು ವಿದ್ಯಾರಣ್ಯಪುರ ಪೊಲೀಸರು ತಿಳಿಸಿದ್ದಾರೆ.
ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್‌ನಲ್ಲಿ ಭಾನುವಾರ ಮಧ್ಯಾಹ್ನ ಮಹಿಳಾ ಸಿಬ್ಬಂದಿ ಒಬ್ಬರೇ ಇದ್ದರು. ಇದೇ ವೇಳೆ ಯುವಕನೊಬ್ಬ ಬಂದು ವಿವಿಧ ಮಾದರಿಯ ಸೀರೆಗಳನ್ನು ತೋರಿಸುವಂತೆ ಕೇಳಿದ್ದಾನೆ. ಸಿಬ್ಬಂದಿ ತೋರಿಸುತ್ತಿದ್ದರು. ಇದೇ ವೇಳೆ ಬೈಕ್‌ನಲ್ಲಿ ಬಂದ ದಂಪತಿ ದುಬಾರಿ ಮೌಲ್ಯದ ರೇಷ್ಮೆ ಸೀರೆಗಳನ್ನು ತೋರಿಸುವಂತೆ ಕೋರಿದ್ದಾರೆ.
ಪ್ರತಿಕ್ರಿಯಿಸಿದ ಸಿಬ್ಬಂದಿ ಹತ್ತಾರು ಸೀರೆ ದಂಪತಿಯ ಮುಂದೆ ಇಟ್ಟಿಟ್ಟು, ಮೌಲ್ಯವನ್ನು ವಿವರಿಸಿದ್ದರು. ಮತ್ತೂಂದೆಡೆ ಅಲ್ಲೇ ಇದ್ದ ಯುವಕ ತಮಗೂ ಅದೇ ಮೌಲ್ಯದ ಸೀರೆಗಳನ್ನು ತೋರಿಸುವಂತೆ ಹೇಳಿದ್ದಾನೆ. ಸಿಬ್ಬಂದಿ ಅತ್ತ ಗಮನ ಹರಿಸುತ್ತಿದ್ದಂತೆ ದಂಪತಿ ಸುಮಾರು 20 ದುಬಾರಿ ಮೌಲ್ಯದ ಸೀರೆಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು
ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆ: ಮಳಿಗೆಯ ಮಹಿಳಾ ಸಿಬ್ಬಂದಿ ಯುವಕನಿಗೆ ಸೀರೆ ತೋರಿಸುತ್ತಿದ್ದರು. ಈ ವೇಳೆ ದಂಪತಿ ತಮ್ಮ ಕೈ ಚಳಕ ತೋರಿದ್ದಾರೆ. ಈ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿ ಮಹಿಳೆ ಸುಮಾರು 20 ಸೀರೆಗಳನ್ನು ತನ್ನ ಸೀರೆಯೊಳಗೆ ಇಟ್ಟುಕೊಂಡಿದ್ದಾಳೆ. ಇದನ್ನು ಸಿಬ್ಬಂದಿಗೆ ಎದುರಾಗಿ ಈಕೆಯ ಗಂಡ ಸೀರೆಯೊಂದನ್ನು ಮರೆ ಮಾಚಿದ್ದಾನೆ. ಅನಂತರ ಕೆಲ ಸೀರೆಗಳನ್ನು ನೋಡಿ ಮತ್ತೂಮ್ಮೆ ಸೀರೆಗೆ ಬರುವುದಾಗಿ ಹೇಳಿ ವಾಪಸ್ ಹೋಗಿದ್ದಾರೆ.
ಕೆಲವೇ ಹೊತ್ತಿನಲ್ಲಿ ಯುವಕ ಕೂಡ ಹೋಗಿದ್ದಾನೆ. ಸಿಬ್ಬಂದಿ ಸೀರೆ ಜೋಡಿಸುವಾಗ ಕಳವು ಗೋಚರವಾಗಿದೆ. ಈ ಕುರಿತು ಮಳಿಗೆಯ ಮಾಲೀಕರು 3 ಲಕ್ಷ ರೂ. ಮೌಲ್ಯದ 20 ಸೀರೆಗಳು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಖ್ಯಾತ ಮನೆಗಳ್ಳನ ಬಂಧನ
ಬೆಂಗಳೂರು: ನಗರದ ಕುಖ್ಯಾತ ಅಂತಾರಾಜ್ಯ ದರೋಡೆಕೋರ, ಮನೆಗಳ್ಳ ಸಲೀಂ ಆಲಿಯಾಸ್ ಬಾಂಬೆ ಸಲೀಂ ಹಾಗೂ ಈತನ ಇಬ್ಬರು ಸಹಚರರನ್ನು ಇಂದಿರಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋರಿಪಾಳ್ಯದ ಸಲೀಂ ಆಲಿಯಾಸ್ ಬಾಂಬೆ ಸಲೀಂ (40),ಯಲಹಂಕ ನಿವಾಸಿ ಧನಂಜಯ್ (28) ಮತ್ತು ಸೀಗೆ ಹಳ್ಳಿ ನಿವಾಸಿ ರಾಜೇಶ್(28) ಬಂಧಿತರು. ನಾಲ್ಕು ತಿಂಗಳ ಹಿಂದಷ್ಟೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಆರೋಪಿ ಮತ್ತೆ ತನ್ನ ಸಹಚರ ಜತೆ ಸೇರಿ ಮನೆಗಳ್ಳತನ ಮಾಡುತ್ತಿದ್ದ.
ಇತ್ತೀಚೆಗಷ್ಟೇ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದು, ಕೆಲ ದಿನಗಳ ಹಿಂದೆ ಅನುಮಾನಸ್ಪದವಾಗಿ ಓಡಾಡು ತ್ತಿದ್ದ. ಈ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.
ಸಲೀಂ ವಿರುದ್ಧ ಶ್ರೀರಾಮಪುರ, ರಾಜಾಜಿ ನಗರ, ಮಲ್ಲೇಶ್ವರ ಠಾಣೆ ಸೇರಿ ನಗರದ ವಿವಿಧ ಠಾಣೆಗಳಲ್ಲಿ ಸುಮಾರು 40 ಮನೆಗಳವು ಮತ್ತು ದರೋಡೆ, ಸುಲಿಗೆ ಇತರೆ ಪ್ರಕರಣ ದಾಖಲಾಗಿವೆ. ಜೈಲಿನಲ್ಲಿ ಇದ್ದೇ ಮನೆಗಳ್ಳತನ ಮಾಡಿಸುವುದು, ಕಳ್ಳರ ತಂಡ ಕಟ್ಟುತ್ತಿದ್ದ ಸಲೀಂ. ಸುಪಾರಿ ಕಿಲ್ಲರ್ ಕೂಡ ಹೌದು.
ಈತನ ಕೃತ್ಯ ಹೇಗೆ?: ಮೊದಲಿಗೆ ಬೀಗ ಹಾಕಿದ ಮನೆಗಳನ್ನು ಗುರುತ್ತಿಸುತ್ತಿದ್ದ ಸಲೀಂ ನಂತರ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕೃತ್ಯವೆಸಗುತ್ತಿದ್ದ. ಬಳಿಕ ನೇರವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ತನ್ನ ಸಹಚರರ ಜತೆ ತಲೆ ಮರೆಸಿಕೊಳ್ಳುತ್ತಿದ್ದ. ಸದ್ಯ ಆರೋಪಿಯನ್ನು 14 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದು, ಈತನ ಇತರೆ
ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.