Bengaluru: ಚಿನ್ನಾಭರಣ ಇರಿಸಿದ್ದ ಯುವಕನ ಬ್ಯಾಗ್ ಕದ್ದ ಆಟೋ ಡ್ರೈವರ್ ಬಂಧನ
Team Udayavani, May 8, 2024, 11:05 AM IST
ಬೆಂಗಳೂರು: ಪೋಷಕರು ಬುದ್ಧಿವಾದ ಹೇಳಿದಕ್ಕೆ ಬೇಸರಗೊಂಡು ಮನೆ ಬಿಟ್ಟು ಹೋಗಿದ್ದ ಯುವಕನ ಬಳಿ ಚಿನ್ನಾಭರಣವಿದ್ದ ಬ್ಯಾಗ್ ಕಸಿದು ಕೊಂಡು ಪರಾರಿಯಾಗಿದ್ದ ಆಟೋ ಚಾಲಕನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಂ.ಎಸ್.ಪಾಳ್ಯದ ಸಿಂಗಾ ಪುರ ಲೇಔಟ್ ನಿವಾಸಿ ಸಾದಿಕ್ ಅಲಿಯಾಸ್ ಅನಿ(32) ಬಂಧಿತ.
ಈತನಿಂದ 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ದೊಡ್ಡನಕ್ಕುಂದಿ ನಿವಾಸಿ ಕಿಶನ್ ರೆಡ್ಡಿ (20) ಎಂಬಾತನ ಬಳಿ ಆರೋಪಿ ಏ.2ರಂದು ಚಿನ್ನಾಭರಣವಿದ್ದ ಬ್ಯಾಗ್ ದರೋಡೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ದೊಡ್ಡನಕ್ಕುಂದಿ ನಿವಾಸಿ ಕಿಶನ್ ರೆಡ್ಡಿ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದು, ಆದರೆ, ಓದಿನ ಕಡೆ ಆಸಕ್ತಿ ಇರದೆ, ಸ್ನೇಹಿತರ ಜತೆಯೇ ಹೆಚ್ಚು ಕಾಲ ಕಳೆಯುತ್ತಿದ್ದ. ಹೀಗಾಗಿ ಆತನ ತಂದೆ ಸ್ನೇಹಿತರ ಒಡನಾಟ ಕಡಿಮೆ ಮಾಡಿ ಓದಿನ ಕಡೆಗೆ ಗಮನ ಕೊಡುವಂತೆ ಬೈದಿದ್ದರು. ಅದರಿಂದ ಬೇಸರಗೊಂಡು ಕಿಶನ್ ರೆಡ್ಡಿ ಏ.2ರಂದು ಮುಂಜಾನೆ ಮನೆ ಬಿಟ್ಟು ಹೋಗಿದ್ದಾನೆ. ಈ ಸಂಬಂಧ ಆತನ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಆತನ ಮೊಬೈಲ್ ಕರೆಗಳನ್ನು ಆಧರಿಸಿ ಕಿಶನ್ ರೆಡ್ಡಿ ಪುರಿ ಜಗನ್ನಾಥ ದೇವಸ್ಥಾನದ ಬಳಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಕೂಡಲೇ ಒಂದು ತಂಡ ಪುರಿಗೆ ತೆರಳಿ ಏ.6ರಂದು ಕಿಶನ್ ರೆಡ್ಡಿಯನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಮನೆಯವರ ವಿಚಾರಣೆ ವೇಳೆ ದರೋಡೆ ಬೆಳಕಿಗೆ: ಕೆಲ ದಿನಗಳ ಬಳಿಕ ಕಿಶನ್ ರೆಡ್ಡಿ ದಿನ ಧರಿಸುತ್ತಿದ್ದ ಚಿನ್ನದ ಸರ, ಉಂಗುರ ಕಾಣಿಸದಿರುವ ಬಗ್ಗೆ ಆತನ ಚಿಕ್ಕಪ್ಪ ಪ್ರಶ್ನಿಸಿದ್ದಾರೆ. ಆಗ ಆಟೋ ಚಾಲಕ ಬ್ಯಾಗ್ ದರೋಡೆ ಮಾಡಿದ ಬಗ್ಗೆ ಕಿಶನ್ ರೆಡ್ಡಿ ಮಾಹಿತಿ ನೀಡಿದ್ದ. ಹೀಗಾಗಿ ಏ.13ರಂದು ಠಾಣೆಗೆ ಮತ್ತೂಂದು ದೂರು ನೀಡಿದ್ದರು. ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಏ.2ರಂದು ಮುಂಜಾನೆ ಆಟೋ ಸಂಚರಿಸಿದ ಸಮಯ, ಮಾರ್ಗದ ಆಧಾರದ ಮೇಲೆ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆಟೋದ ನೋಂದಣಿ ಸಂಖ್ಯೆ ಪತ್ತೆ ಹಚ್ಚಿ ಆಟೋ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪತ್ನಿ ಹೆಸರಿನಲ್ಲಿ ಅಡಮಾನ ಇರಿಸಿದ್ದ ! : ಸುಲಿಗೆ ಮಾಡಿದ್ದ ಚಿನ್ನಾಭರಣಗಳನ್ನು ಆರೋಪಿ ಸಾದಿಕ್, ಪತ್ನಿಯ ಹೆಸರಿನಲ್ಲಿ ವಿದ್ಯಾರಣ್ಯಪುರದ ಖಾಸಗಿ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿದ್ದ. ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿದ್ದ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮೂತ್ರ ವಿಸರ್ಜನೆ ವೇಳೆ ಬ್ಯಾಗ್ ಕಸಿದ ಆರೋಪಿ : ಏ.2ರಂದು ಕಿಶನ್ ರೆಡ್ಡಿ ಮುಂಜಾನೆ ಸುಮಾರು 4.30ಕ್ಕೆ ಮನೆ ಬಿಟ್ಟು ಹೊರಗೆ ಬಂದಿದ್ದಾನೆ. ಈ ವೇಳೆ ದೊಡ್ಡನಕ್ಕುಂದಿ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ತೆರಳಲು ಆರೋಪಿ ಸಾದಿಕ್‌ನ ಆಟೋ ಹತ್ತಿದ್ದಾನೆ. ಬಳಿಕ ತಾನು ಧರಿಸಿದ್ದ 91 ಗ್ರಾಂ ತೂಕದ ಚಿನ್ನದ ಸರ ಮತ್ತು 9 ಗ್ರಾಂ ತೂಕದ ಉಂಗುರವನ್ನು ಬಿಚ್ಚಿ ಬ್ಯಾಗ್‌ಗೆ ಇರಿಸಿಕೊಂಡಿದ್ದಾನೆ. ಅದನ್ನು ಗಮನಿಸಿದ ಆಟೋ ಚಾಲಕ ಸಾದಿಕ್, ಮಾರ್ಗ ಮಧ್ಯೆ ಮುಖ್ಯರಸ್ತೆಯೊಂದರಲ್ಲಿ ಮೂತ್ರ ವಿಸರ್ಜ ನಗೆ ಆಟೋ ನಿಲ್ಲಿಸಿದ್ದಾನೆ. ಈ ವೇಳೆ ಬ್ಯಾಗ್ ಹಿಡಿ ದುಕೊಂಡೇ ಕಿಶನ್ ರೆಡ್ಡಿ ಮೂತ್ರ ವಿಸರ್ಜನೆಗೆ ತೆರಳಿದ್ದಾನೆ. ಈ ವೇಳೆ ಸಾದಿಕ್ ಹಿಂದಿನಿಂದ ಆಟೋ ಚಲಾಯಿಸಿಕೊಂಡು ಬಂದು ಕಿಶನ್ ರೆಡ್ಡಿಯ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ. ನಂತರ ಕಿಶನ್ ರೆಡ್ಡಿ ಬೇರೆ ಆಟೋ ಹಿಡಿದು ಮೆಜೆ ಸ್ಟಿಕ್‌ಗೆ ತೆರಳಿ ಅಲ್ಲಿಂದ ರೈಲು ಹಿಡಿದು ಭುವನೇಶ್ವರಕ್ಕೆ ಹೋಗಿದ್ದ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.