ಬೈಕ್ ಆಸೆಗೆ ಅಜ್ಜ-ಅಜ್ಜಿಯ ಕೊಂದ
Team Udayavani, Nov 30, 2017, 11:43 AM IST
ಬೆಂಗಳೂರು: ತಂದೆ ಇಲ್ಲವೆಂದು ಪ್ರೀತಿಯಿಂದ ಸಾಕಿದ ಮೊಮ್ಮಗನೆ ಕೇವಲ ಬೈಕ್ ಆಸೆಗಾಗಿ ತನ್ನ ಸ್ವಂತ ಅಜ್ಜ-ಅಜ್ಜಿಯನ್ನೇ ಕೊಂದು ಜೈಲು ಪಾಲಾಗಿದ್ದಾನೆ. ವಿಚಿತ್ರವೆಂದರೆ ಒಮ್ಮೆ ಮನೆಕಳವು ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದ ಈತ, ತನ್ನದೇ ಆದ ಒಂದು ಅಪರಾಧಿಗಳ ಗ್ಯಾಂಗ್ ಕೂಡ ಸೃಷ್ಟಿಸಿಕೊಂಡಿದ್ದ.
ಇದೀಗ ಅಜ್ಜ ಬಿಇಎಲ್ ನಿವೃತ್ತ ನೌಕರ ಗೋವಿಂದನ್(65) ಮತ್ತು ಅಜ್ಜಿ ಸರೋಜ(60) ಅವರನ್ನು ಕೊಂದ ಆರೋಪದ ಮೇಲೆ ಮೊಮ್ಮಗ ಪ್ರಮೋದ್(21), ಈತನ ಸ್ನೇಹಿತ ಹಸೈನ್ ಬಾಷಾ(20) ಹಾಗೂ ಪ್ರವೀಣ್(20)ರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಪೈಕಿ ಪ್ರಮೋದ್ ಮತ್ತು ಪ್ರವೀಣ್‌ನನ್ನು ಕೃತ್ಯ ನಡೆದ ನಾಲ್ಕೈದು ಗಂಟೆಗಳಲ್ಲೇ ಬಂಧಿಸಿದ್ದಾರೆ. ಆದರೆ, ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಮತ್ತೂಬ್ಬ ಆರೋಪಿ ಹಸೈನ್ ಪಾಷಾನನ್ನು ಬುಧವಾರ ಸಂಜೆ 4 ರ ಸುಮಾರಿಗೆ ಎಚ್‌ಎಎಲ್ ಠಾಣೆಯ ಪಿಎಸ್‌ಐ ಪ್ರಶೀಲಾ ಅವರು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.
ತಂದೆ ಇಲ್ಲದ ಮಗ: ಕೊಲೆಯಾದ ದಂಪತಿಗೆ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಈ ಪೈಕಿ ಒಬ್ಬ ಮಗ ಈಗಾಗಲೇ ಮರಣಹೊಂದಿದ್ದು, ಇವರ ಪತ್ನಿ ಮತ್ತು ಮಕ್ಕಳು ಮೈಸೂರಿನಲ್ಲಿ ನೆಲೆಸಿದ್ದು, ಮತ್ತೂಬ್ಬ ಮಗ ನಗರದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ದಂಪತಿಗೆ ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ. ಮಗಳು ಉಷಾ ವಿವಾಹವಾಗಿದ್ದು ಹಲಸೂರಿನಲ್ಲಿ ಪತಿ ವೆಂಕಟೇಶ್ ಜತೆ ನೆಲೆಸಿದ್ದರು.
4 ವರ್ಷಗಳ ಹಿಂದಷ್ಟೇ ಪತಿ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಹೀಗಾಗಿ ಒಬ್ಬಳೇ ಮಗಳು ಉಷಾ ಮತ್ತು ಈಕೆಯ ಪುತ್ರ ಹಾಗೂ ಪ್ರಕರಣದ ಮಾಸ್ಟರ್ ಮೈಂಡ್ ಪ್ರಮೋದ್‌ನನ್ನು ತಮ್ಮ ಸ್ವಂತ ಮನೆಯ ಒಂದು ಮಹಡಿಯಲ್ಲಿ ಇರಲು ಅವಕಾಶ ಕೊಟ್ಟಿದ್ದರು. ಉಷಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಒಂದು ಪ್ರಕರಣ: ಬಿಕಾಂ ಸೇರಿದ್ದ ಪ್ರಮೋದ್ ಅರ್ಧಕ್ಕೆ ಮೊಟಕುಗೊಳಿಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಹಲಸೂರು ಠಾಣೆಯಲ್ಲಿ ಮನೆಕಳವು ಪ್ರಕರಣ ದಾಖಲಾಗಿದೆ. ಇದೇ ವೇಳೆ ತನ್ನ ಸಹಪಾಠಿಯಾಗಿದ್ದ ಹಸೈನ್‌ಪಾಷಾನ ಜತೆ ಸೇರಿಕೊಂಡು ಭಾರಿ ಮೊತ್ತದ ಮೊಬೈಲ್‌ಗಳನ್ನು ದರೋಡೆ ಮಾಡಿದ್ದ ಸಂಬಂಧ ಮಹದೇವಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪ್ರವೀಣ್ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣವಿದೆ.
ಅಜ್ಜ-ಅಜ್ಜಿಯ ಬಳಿಯೇ ಹಣ ಪಡೆಯುತ್ತಿದ್ದ: ಗೋವಿಂದನ್ ಬಿಇಎಲ್‌ನಲ್ಲಿ ನೌಕರನಾಗಿದ್ದು, 7 ತಿಂಗಳ ಹಿಂದೆಯಷ್ಟೇ ನಿವೃತ್ತಿಯಾಗಿದ್ದರು. ನಿವೃತ್ತಿಯ ನಂತರ ಗೋವಿಂದನ್ ತಮ್ಮ ನಾಲ್ಕು ಅಂತಸ್ತಿನ ಕಟ್ಟಡದ ಒಂದು ಮಳಿಗೆಯಲ್ಲಿ ನೆಲೆಸಿದ್ದು, ಮತ್ತೂಂದನ್ನು ಪುತ್ರಿ ಉಷಾಗೆ ಬಿಟ್ಟುಕೊಟ್ಟಿದ್ದರು. ಇನ್ನೆರಡು ಬಾಡಿಗೆಗೆ ಕೊಟ್ಟಿದ್ದಾರೆ.
ಈ ಮಧ್ಯೆ ಮೊಮ್ಮಗ ಪ್ರಮೋದ್ ಆಗಾಗ್ಗೆ ಮನೆಗೆ ಬಂದು ತಾತಾ-ಅಜ್ಜಿಯ ಬಳಿ ಹಣ ಕೇಳುತ್ತಿದ್ದ. ಅಲ್ಪಸ್ವಲ್ಪ ಕೊಡುತ್ತಿದ್ದರು. ಆದರೆ, ಇತ್ತೀಚೆಗೆ ಹೊಸ ಬೈಕ್ ಖರೀದಿಗೆ ನಿರ್ಧರಿಸಿದ್ದ ಈತ, ಅಜ್ಜ-ಅಜ್ಜಿಯ ಬಳಿಯಿರುವ ಹಣ ಮತ್ತು ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ. ಅದರಂತೆ ತನ್ನ ಸ್ನೇಹಿತರಾದ ಪ್ರವೀಣ್ ಮತ್ತು ಹಸೈನ್‌ಪಾಷಾ ಜತೆ ಪ್ಲಾನ್ ಮಾಡಿದ್ದ.
ಕೊಂದು ಮೂಟ್ಟೆ ಕಟ್ಟಿದ್ದರು: ಎಂದಿನಂತೆ ನ.26ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪ್ರಮೋದ್ ತಾತ-ಅಜ್ಜಿಯನ್ನು ಮಾತನಾಡಿಸಲು ಮನೆಗೆ ಬಂದು ಮನೆಯ ಹಿಂಬಾಗಿಲನ್ನು ತೆರೆದಿದ್ದ. ತಾತ-ಅಜ್ಜಿಯೊಂದಿಗೆ ಮಾತನಾಡುತ್ತಿದ್ದಂತೆ ತನ್ನ ಸ್ನೇಹಿತರನ್ನು ಹಿಂಬಾಗಿಲ ಮೂಲಕ ಕರೆಸಿಕೊಂಡಿದ್ದಾನೆ. ಒಳ ಬರುತ್ತಿದ್ದಂತೆ ಹಸೈನ್ ಪಾಷಾ ದೊಣ್ಣೆಯಿಂದ ಅಜ್ಜಿ ಸರೋಜಾ ಅವರಿಗೆ ಹೊಡೆದಿದ್ದಾನೆ.
ಈ ಶಬ್ಧ ಕೇಳಿದ ಅಜ್ಜ ಗೋವಿಂದನ್ ಕೊಠಡಿಯಿಂದ ಹೊರಬರುತ್ತಿದ್ದಂತೆ ಅವರ ತಲೆಗೂ ದೊಣ್ಣೆಯಲ್ಲಿ ಹೊಡೆದಿದ್ದು, ಆಗ ಪ್ರವೀಣ್ ಮತ್ತು ಹಸೈನ್ ಪಾಷಾ ದಿಬ್ಬಿನಿಂದ ಮುಖ ಒತ್ತಿದ್ದಾರೆ. ಆಗ ಪ್ರಮೋದ್ ಚಾಕುವಿನಿಂದ ಇರಿದಿದ್ದಾನೆ. ನಂತರ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಗೆ ಬಂದ ಮೂವರು, ಈ ಪೈಕಿ ಪ್ರವೀಣ್ ಮನೆಯ ಹೊರಗಡೆ ಕಾಯುತ್ತಿದ್ದರೆ, ಪ್ರಮೋದ್ ಮತ್ತು ಹಸೈನ್ ಪಾಷಾ ಮನೆಯೊಳಗೆ ಹೋಗಿ ಮೃತ ದೇಹಗಳ ಕೈ, ಕಾಲು ಕಟ್ಟಿ ಹಳೇ ಬಟ್ಟೆಗಳನ್ನು ಸುತ್ತಿ ಮೂಟೆ ಕಟ್ಟಿದ್ದರು. ಬಳಿಕ ಮನೆಯಲ್ಲಿದ್ದ 220 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ನಗದು ದೋಚಿ ಹೋಗಿದ್ದರು.
ಮಂಗಳವಾರ ಮತ್ತೆ ಬಂದ ಆರೋಪಿಗಳು ಸಿಲಿಂಡರ್ ಸ್ಫೋಟದಿಂದ ಘಟನೆ ನಡೆದಿದೆ ಎಂದು ಬಿಂಬಿಸಲು ಗ್ಯಾಸ್ ಸಿಲಿಂಡರ್ ಅನ್ನು ಸೋರಿಕೆ ಮಾಡಿದ್ದಾರೆ. ಆದರೆ, ಸಿಲಿಂಡರ್ ಸ್ಫೋಟಗೊಳ್ಳುವ ಭಯದಲ್ಲಿ ಸ್ಥಳದಿಂದ ಪರಾರಿಯಾಗಿದ್ದರು. ಪರಿಣಾಮ ಸ್ಥಳೀಯ ನಿವಾಸಿಗಳಲ್ಲಿ ಗ್ಯಾಸ್ ಸೋರಿಕೆ ವಾಸನೆ ಬರುತ್ತಿತ್ತು.
ಜತೆಗೆ ಈ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಕೂಡಲೇ ಇದನ್ನು ಕೊಲೆಯಾದ ದಂಪತಿ ಪುತ್ರಿಗೆ ತಿಳಿಸಿದ್ದು, ಇತ್ತ ಗ್ಯಾಸ್ ಏಜೆನ್ಸಿಯವರಿಗೂ ತಿಳಿಸಿದ್ದಾರೆ. ಗ್ಯಾಸ್ ಎಜೆನ್ಸಿ ಸಿಬ್ಬಂದಿಯನ್ನು ಹಿಂಬಾಗಿಲ ಮೂಲಕ ಪುತ್ರಿ ಉಷಾ ಕರೆದೊಯ್ದಾಗ ಹತ್ಯೆ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಸಿಸಿಬಿ ಜಂಟಿ ಆಯುಕ್ತ ಸತೀಶ್ ಕುಮಾರ್, ಡಿಸಿಪಿ ಅಬ್ದುಲ್ ಅಹ್ಮದ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ತಂಡ ಸ್ಥಳೀಯರ ಮಾಹಿತಿಯನ್ನಾಧರಿಸಿ ತಾಯಿ ಉಷಾ ಅವರಿಗೆ ತಿಳಿಸದೆಯೇ ಮೊಮ್ಮಗ ಪ್ರಮೋದ್ ಮತ್ತು ಪ್ರವೀಣ್‌ನನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದ್ದರು.
ಇವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮತ್ತೂಬ್ಬ ಹಸೈನ್ ಪಾಷಾನ ಮಾಹಿತಿ ಸಿಕ್ಕಿತ್ತು. ನಂತರ ಪ್ರಮೋದ್ ಮೂಲಕ ಹಸೈನ್‌ಗೆ ಕರೆ ಮಾಡಿಸಿದ ಪೊಲೀಸರು, ನಮ್ಮನ್ನ ಪೊಲೀಸರು ಬಂಧಿಸಿಲ್ಲ. ನೀನು ಎಲ್ಲಿದಿಯಾ ಹೇಳು ಅಲ್ಲಿಗೆ ಬರುತ್ತೇವೆ ಎಂದು ಆತ ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದರು.
ಮಹದೇವಪುರ ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಎಚ್‌ಎಎಲ್ ಠಾಣೆ ಪಿಎಸ್‌ಐ ಪ್ರಶೀಲ ಮತ್ತು ಪೇದೆ ರವಿ ದಾಶ್ಯಾಳ ಅವರೊಂದಿಗೆ ಯಮಲೂರು ಕೆಂಪಾಪುರ ಮಧ್ಯ ರಸ್ತೆಯಲ್ಲಿ ಹೋಗಿ ಬಂಧಿಸಲು ಹೋದಾಗ, ಹಸೈನ್ ಬಾಷಾ ಪೇದೆ ರವಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆಗ ಪಿಎಸ್‌ಐ ಪ್ರಶೀಲಾ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಕ್ಯಾರೆ ಎನ್ನದ ಆರೋಪಿ ಮತ್ತೂಮ್ಮೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಆತನ ಎಡಗಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಪೇದೆ ರವಿ ಮತ್ತು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ತಮಿಳುನಾಡಿನ ದೇಗುಲಕ್ಕೆ ಹೋಗುವುದಾಗಿ ಹೇಳಿದ್ದ ದಂಪತಿ: ಪಕ್ಕದ ಮನೆಯಲ್ಲಿದ್ದ ಕೊಲೆಯಾದ ದಂಪತಿ ಪುತ್ರಿ ಉಷಾ, ನಿತ್ಯ ತಂದೆ, ತಾಯಿಯನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಭಾನುವಾರ ಬೆಳಗ್ಗೆ ದಂಪತಿ ಪುತ್ರಿ ಉಷಾಗೆ ತಾವು ಸೋಮವಾರ ಬೆಳಗ್ಗೆ ತಮಿಳುನಾಡಿನ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ್ದರು.
ಹೀಗಾಗಿ ಸೋಮವಾರ ಅವರನ್ನು ಭೇಟಿಯಾಗಲು ಹೋಗಲಿಲ್ಲ. ಆದರೆ, ಫೋನ್ ಮಾಡಿದರೆ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಮಂಗಳವಾರ ಮತ್ತೆ ಮನೆಗೂ ಹೋಗಲಿಲ್ಲ. ಫೋನ್ ಕೂಡ ಮಾಡಲಿಲ್ಲ ಎಂದು ತಿಳಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ತಾಯಿಗೆ ಹೇಳಿದ್ನಾ ಆರೋಪಿ?: ಪ್ರೀತಿಯ ಅಜ್ಜ-ಅಜ್ಜಿಯನ್ನು ಕೊಂದ ಆರೋಪಿ ಪ್ರಮೋದ್ ತನ್ನ ಕೃತ್ಯವನ್ನು ತಾಯಿ ಉಷಾರಿಗೆ ಹೇಳಿದ್ದ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಇದುವರೆಗಿನ ತನಿಖೆಯಲ್ಲಿ ಈ ರೀತಿಯ ಯಾವುದೇ ಅಂಶಗಳು ಪತ್ತೆಯಾಗಿಲ್ಲ.
ಒಂದು ವೇಳೆ ಆರೋಪಿಗಳ ವಿಚಾರಣೆಯಲ್ಲಿ ಈ ಅಂಶ ಪತ್ತೆಯಾದರೆ, ಉಷಾ ಅವರಿಂದ ಹೇಳಿಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಕದ್ದ ಚಿನ್ನಾಭರಣವನ್ನು ಪ್ರಮೋದ್ ತನ್ನ ಮನೆಯಲ್ಲೇ ಬಟ್ಟೆ ಸುತ್ತಿ ಇಟ್ಟಿದ್ದ. ಆದರೆ ಹಣವನ್ನು ಮೂವರು ಹಂಚಿಕೊಂಡಿದ್ದರು. ಕದ್ದ ಮಾಲನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದಷ್ಟೇ ಅಲ್ಲ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ರಿ ಉಷಾ ತನ್ನ ತಂದೆ-ತಾಯಿ ವಿರುದ್ಧವೇ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಮೈಸೂರಿನಲ್ಲಿದ್ದ ಪುತ್ರ ಈಗಾಗಲೇ ಮರಣಹೊಂದಿರುವುದರಿಂದ ಅವರ ಮಕ್ಕಳಿಗೆ ಆಸ್ತಿ ಬರೆಯಲು ಅಜ್ಜ-ಅಜ್ಜಿ ನಿರ್ಧರಿಸಿದ್ದರು ಎಂದು ಹೇಳಲಾಗಿದೆ. ಇದನ್ನು ವಿರೋಧಿಸಿ ಉಷಾ ಕೋರ್ಟ್ ಮೊರೆ ಹೋಗಿದ್ದರು.
ಖಡಕ್ ಅಧಿಕಾರಿ ಪ್ರಶೀಲಾ: ಎಚ್‌ಎಎಲ್ ವೃದ್ಧ ದಂಪತಿ ಕೊಲೆಗೈದ ಆರೋಪಿಗಳ ಪತ್ತೆಗೆ ಪ್ರಮುಖ ಪಾತ್ರವಹಿಸಿದ್ದ ಎಚ್‌ಎಎಲ್ ಠಾಣೆಯ ಪಿಎಸ್‌ಐ ಪ್ರಶೀಲಾ ಜನಮೆಚ್ಚುಗೆ ಗಳಿಸಿದ್ದಾರೆ. ಅವರ ರಿವಾಲ್ವರ್‌ನಿಂದ ಸಿಡಿದ ಗುಂಡು ಪ್ರಮುಖ ಆರೋಪಿಯ ಬಂಧನಕ್ಕೆ ಕಾರಣವಾಗಿದೆ.
ವೃದ್ಧ ದಂಪತಿಗಳ ಕೊಲೆ ಪ್ರಕರಣ ಸುಫಾರಿ ಪಡೆದಿದ್ದ ಆರೋಪಿ ಹಸೈನ್ ಬಾಷಾನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪ್ರಶೀಲಾ ಇಲಾಖೆಯಲ್ಲಿ ಖಡಕ್ ಅಧಿಕಾರಿ ಎಂದೆ ಹೆಸರು ಮಾಡಿದವರು. 2010ನೇ ಬ್ಯಾಚ್‌ನ ಅಧಿಕಾರಿಯದ ಪ್ರಶೀಲಾ ಮಡಿಕೇರಿಯ ಗ್ರಾಮಾಂತರ ಠಾಣೆಯಲ್ಲಿ ಪ್ರೊಬೆಷನರಿ ಅವಧಿ ಮುಕ್ತಾಯಗೊಳಿಸಿದರು.
ಬಳಿಕ ಬಡ್ತಿ ಪಡೆದು ಹೆಣ್ಣೂರು ಠಾಣೆಗೆ ವರ್ಗಾವಣೆ ಆದರು. ಈ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪೋಕೊ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಿದ್ದರು. ನಂತರ ಬಾಣಸವಾಡಿ ಠಾಣೆಗೆ ವರ್ಗಾವಣೆಯಾದ ಬಳಿಕ ಇಲ್ಲಿ ದಾಖಲಾಗಿದ್ದ ನೈಜಿರಿಯಾ ಪ್ರಜೆ ವಂಚನೆ ಪ್ರಕರಣವನ್ನು ಕೂಡ ಇತ್ಯರ್ಥ ಪಡಿಸಿದ್ದರು.
ಇದೀಗ ಎಚ್‌ಎಎಲ್ ಠಾಣೆಗೆ ಬಂದು ಕೆಲವೇ ತಿಂಗಳಲ್ಲಿ ಶೂಟೌಟ್ ನಡೆಸಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಶೂಟೌಟ್ ಮಾಡಿ ಆರೋಪಿಯನ್ನು ಸೆರೆ ಹಿಡಿದು ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಅಲ್ಲದೆ ಇತ್ತೀಚಿಗಷ್ಟೇ ರೌಡಿಗಳ ಪರೇಡ್ ಮಾಡಿಸಿದ್ದ ಪ್ರಶೀಲಾ, ಅವರ ಮನೆಗೇ ಹೋಗಿ ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಹುಶಾರ್ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.