ವರಿಷ್ಠರ ಸೂಚನೆ ಮೇರೆಗೆ ಹೋರಾಟ ಕೈಬಿಟ್ಟ ಬಿಜೆಪಿ ಅಸಮಾಧಾನಿತರು
Team Udayavani, May 14, 2017, 10:58 AM IST
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಮುನಿಸಿಕೊಂಡು ಸಂಘಟನೆ ಉಳಿಸಿ ಸಭೆ ನಡೆಸಿ ಗೊಂದಲ ಬಗೆಹರಿಸಲು ಮೇ 10ರ ಗಡುವು ವಿಧಿಸಿದ್ದ ಪಕ್ಷದ ಅಸಮಾಧಾನಿತರ ಗುಂಪು ತಮ್ಮ ಮುಂದಿನ ಹೋರಾಟ ಕೈಬಿಡಲು ತೀರ್ಮಾನಿಸಿದೆ.
ಮೇ 10ರೊಳಗೆ ಪಕ್ಷದಲ್ಲಿ ಉದ್ಭವವಾಗಿರುವ ಸಮಸ್ಯೆ ಬಗೆಹರಿಸದಿದ್ದಲ್ಲಿ ಮೇ 20ರಂದು ಬೆಂಗಳೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು ಎಂದು ಅಸಮಾಧಾನಿತರ ಗುಂಪು ಏ. 27ರಂದು ಸಭೆ ನಡೆಸಿ ಎಚ್ಚರಿಕೆ ನೀಡಿತ್ತು. ಆದರೆ, ವರಿಷ್ಠರ ಸೂಚನೆ ಮೇಲೆ ಮುಂದಿನ ಹೋರಾಟ ಕೈಬಿಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
“ನಿಮ್ಮ ಹೋರಾಟದ ಉದ್ದೇಶ ಒಳ್ಳೆಯದಿದ್ದರೂ ಮಾರ್ಗ ಸರಿಯಲ್ಲ. ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿದರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಹೋರಾಟ ಕೈಬಿಡಿ. ಸಂಘಟನೆಯನ್ನು ಜತೆಗೆ ಕೊಂಡೊಯ್ಯಬೇಕು, ಮೂಲ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂಬ ನಿಮ್ಮ ಬೇಡಿಕೆಗಳನ್ನು ನಾವು ಈಡೇರಿಸುತ್ತೇವೆ’ ಎಂದು ವರಿಷ್ಠರು ಸ್ಪಷ್ಟ ಮಾತುಗಳಲ್ಲಿ ಭರವಸೆ ನೀಡಿದ್ದಾರೆ. ಹೋರಾಟಕ್ಕಿಂತ ಮೂಲ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಒತ್ತಾಯ. ಹೀಗಾಗಿ ವರಿಷ್ಠರ ಭರವಸೆ ಹಿನ್ನೆಲೆಯಲ್ಲಿ ಸಂಘಟನೆ ಉಳಿಸಿ ಹೋರಾಟದಿಂದ ದೂರ ಸರಿಯಲು ನಿರ್ಧರಿಸಿದ್ದೇವೆ. ಶೀಘ್ರವೇ ಸಮಸ್ಯೆ ಬಗೆಹರಿಯುವ ಭರವಸೆ ಇದೆ ಎಂದು ಅಸಮಾಧಾನಿತ ಮುಖಂಡರೊಬ್ಬರು ತಿಳಿಸಿದ್ದಾರೆ.
ರಾಜ್ಯ ಬಿಜೆಪಿಯ ವಿರೋಧ, ಶಿಸ್ತು ಕ್ರಮದ ಎಚ್ಚರಿಕೆ ನಡುವೆಯೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಕೆಲವು ಮುಖಂಡರು ಏ. 27ರಂದು “ಸಂಘಟನೆ ಉಳಿಸಿ’ ಸಭೆ ಹಮ್ಮಿಕೊಂಡಿದ್ದರು. ಪಕ್ಷದಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ವರಿಷ್ಠರಿಗೆ ಮೇ 10ರ ಗಡುವು ನೀಡಿದ್ದ ಅವರು, ಅಷ್ಟರೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಮೇ 20ರಂದು ಬೆಂಗಳೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಸಂಘಟನೆ ಉಳಿಸಿ ಸಭೆ ನಡೆಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಅವರ ಆಪ್ತ ಕೆಲವು ಶಾಸಕರು, ಮಾಜಿ ಸಚಿವರು ಒತ್ತಾಯಿಸಿದ್ದರು. ಈ ಬಗ್ಗೆ ವರಿಷ್ಠರಿಗೆ ದೂರು ನೀಡಲೂ ತೀರ್ಮಾನಿಸಿದ್ದರು. ಇದರಿಂದ ಪಕ್ಷದಲ್ಲಿ ಗೊಂದಲ ತೀವ್ರವಾಗುತ್ತಿರುವುದನ್ನು ಗಮನಿಸಿದ ಬಿಜೆಪಿ ರಾಷ್ಟ್ರೀಯ ನಾಯಕರು ಮಧ್ಯಪ್ರವೇಶಿಸಿ ಯಾರೂ ಪಕ್ಷ ಮತ್ತು ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಬಾರದು ಎಂದು ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಮೈಸೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಮೂಲ ಕಾರ್ಯಕರ್ತರನ್ನು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ 10 ಸಾವಿರ ವಿಸ್ತಾರಕರನ್ನು ನೇಮಿಸಲು ತೀರ್ಮಾನಿಸಲಾಗಿತ್ತು.
ಇನ್ನೊಂದೆಡೆ ಅಸಮಾಧಾನಿತ ಮುಖಂಡರನ್ನು ಸಂಪರ್ಕಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರು, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೋರಾಟ ನಿಲ್ಲಿಸಿ ಎಂದು ಸೂಚಿಸಿದ್ದರು. ಇದಾದ ಬಳಿಕ ಅಸಮಾಧಾನಿತ ಮುಖಂಡರು ಪ್ರತ್ಯೇಕ ಸಮಾಲೋಚನೆ ನಡೆಸಿ ತಮ್ಮ ಹೋರಾಟ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಘಟನೆ ಉಳಿಸಿ ಹೋರಾಟ ಕೈಬಿಡುವ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಮುಖಂಡರೊಬ್ಬರು, ಪಕ್ಷದ ಹಿತದೃಷ್ಟಿಯಿಂದ ಹೋರಾಟ ಕೈಬಿಡಿ, ನಿಮ್ಮ ಕೋರಿಕೆ ಪರಿಗಣಿಸಲಾಗುವುದು ಎಂದು ವರಿಷ್ಠರು ಭರವಸೆ ನೀಡಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ನಾವು ಹೋರಾಟ ನಿಲ್ಲಿಸಲು ನಿರ್ಧರಿಸಿದ್ದೇವೆ. ಅದೇ ರೀತಿ ವರಿಷ್ಠರು ಮತ್ತು ರಾಜ್ಯ ನಾಯಕರು ಮೂಲ ಕಾರ್ಯಕರ್ತರಿಗೆ ಆದ್ಯತೆ ನೀಡುವ ಮೂಲಕ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಲು ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ಇನ್ನೂ ಗೊಂದಲದಲ್ಲಿ ಈಶ್ವರಪ್ಪ
ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ನಾನೇ ಮುಂದಾಳುತ್ವ ವಹಿಸುತ್ತೇನೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಖುದ್ದು ಮಾತನಾಡಿ ಮೇ 18ರಿಂದ ಆರಂಭವಾಗಲಿರುವ ತಮ್ಮ ರಾಜ್ಯ ಪ್ರವಾಸಕ್ಕೆ ಕೈಜೋಡಿಸುವಂತೆ ಕೇಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದರೂ ಈಶ್ವರಪ್ಪ ಮಾತ್ರ ಇನ್ನೂ ಗೊಂದಲದಲ್ಲೇ ಇದ್ದಾರೆ.
ರಾಜ್ಯದ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ಈಶ್ವರಪ್ಪ ಅವರು ಮೇ 15 ರಿಂದ 17 ರವರೆಗೆ ವಿಜಯಪುರ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲು ಈಗಾಗಲೇ ನಿರ್ಧರಿಸಿದ್ದಾರೆ. ಯಡಿಯೂರಪ್ಪ ಅವರಿಂದ ಇನ್ನೂ ಆಹ್ವಾನ ಬಾರದ ಕಾರಣ ಅವರು ನಿಗದಿಯಂತೆ ತಮ್ಮ ಪ್ರವಾಸ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇದನ್ನು ವಿವಾದ ಮಾಡಲು ಇಚ್ಛಿಸದ ಈಶ್ವರಪ್ಪ ಅವರು, ರಾಜ್ಯಾಧ್ಯಕ್ಷರು ಕೈಗೊಂಡಿರುವ ರಾಜ್ಯ ಪ್ರವಾಸಕ್ಕೆ ಆಹ್ವಾನ ಬಂದರೆ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಬರ ಅಧ್ಯಯನಕ್ಕೆ ನಮ್ಮೊಂದಿಗೆ ಬನ್ನಿ, ಪ್ರತ್ಯೇಕ ಪ್ರವಾ ಬೇಡ ಎಂದು ಹೇಳಿದರೆ ಅದಕ್ಕೂ ಒಪ್ಪಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.