ಎಲ್ಲರಿಗೂ ಉಚಿತ ಪಾಸ್‌ಗೆ ಬಿಜೆಪಿ ಒತ್ತಾಯ
Team Udayavani, Jul 25, 2018, 12:03 PM IST
ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳನ್ನು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯ ವಿದಾರ್ಥಿಗಳೆಂದು ವಿಭಜಿಸುವುದು ಖಂಡನೀಯ. ಯಾವುದೇ ತಾರತಮ್ಯವಿಲ್ಲದಂತೆ ರಾಜ್ಯದಲ್ಲಿ ಶಾಲೆಯಿಂದ ಸ್ನಾತಕೋತ್ತರದವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಸಮ್ಮಿಶ್ರ ಸರ್ಕಾರವು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ. ಬಸ್‌ಪಾಸ್, ಬೋಧಕ- ಬೋಧಕೇತರ ಸಿಬ್ಬಂದಿ ನೇಮಕ, ಉಪನ್ಯಾಸಕರು, ಶಿಕ್ಷಕರ ನೇಮಕ, ವಿಶ್ವವಿದ್ಯಾಲಯಗಳನ್ನು ಕಡೆಗಣಿಸಿದೆ.
ಸರ್ಕಾರಿ ಶಾಲಾ- ಕಾಲೇಜು ಮಕ್ಕಳಿಗಷ್ಟೇ ಉಚಿತ ಬಸ್‌ಪಾಸ್ ನೀಡಿರುವುದಾಗಿ ಮುಖ್ಯಮಂತ್ರಿಗಳು ಹೇಳುವ ಮೂಲಕ ಶಿಕ್ಷಣ ಕ್ಷೇತ್ರ ಹಾಗೂ ಸಮಾಜವನ್ನು ವಿಭಜಿಸುವ ಕಾರ್ಯಕ್ಕೆ ಮುಂದಾಗಿರುವುದು ಖಂಡನೀಯ ಎಂದರು.
ಕಣ್ಣೀರು ಬರುವುದಿಲ್ಲವೇ: ಪಾಸ್ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಕಣ್ಣೀರು ಬರುವುದಿಲ್ಲವೆ? ವಿದ್ಯಾರ್ಥಿಗಳ ಬಗ್ಗೆ ಇಷ್ಟು ಕಠಿಣ ನಿಲುವು ಏಕೆ? ದುಬಾರಿ ಶುಲ್ಕ, ಡೊನೇಷನ್ ನಿಯಂತ್ರಣ ಸಾಧ್ಯವಾಗದಿದ್ದರೆ, ಉಚಿತ ಬಸ್‌ಪಾಸ್ ನೀಡಲಾಗದಿದ್ದರೆ ಸ್ಥಾನ ಬಿಟ್ಟು ಹೋಗಲಿ ಬಿಜೆಪಿ ಅಧಿಕಾರ ನಡೆಸಲಿದೆ ಎಂದು ಮಾರ್ಮಿಕವಾಗಿ ನುಡಿದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಿಪಿಎಲ್ ಕುಟುಂಬದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
1.10 ಕೋಟಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿದ್ದು, ಮುಖ್ಯಮಂತ್ರಿಗಳು ಈ ವಿದ್ಯಾರ್ಥಿಗಳ ಹಿತ ಕಾಪಾಡದಿದ್ದರೆ ರಾಜ್ಯದ ಹಿತ ಹೇಗೆ ಕಾಪಾಡುತ್ತಾರೆ. ರಾಮನಗರ, ಮಂಡ್ಯ, ಹಾಸನ ಜಿಲ್ಲೆಗಳಿಗೆ ನೀಡಿರುವ ಅನುದಾನದಲ್ಲಿ 150 ಕೋಟಿ ರೂ. ಕಡಿತಗೊಳಿಸಿ ಉಚಿತ ಪಾಸ್ ನೀಡಲಿ ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉತ್ತರ ಕರ್ನಾಟಕ ಭಾಗದವರು ಪ್ರತ್ಯೇಕ ರಾಜ್ಯ ರಚಿಸಿಕೊಳ್ಳಲಿ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರು ಜೆಡಿಎಸ್‌ಗೆ ಮತ ಹಾಕಿದವರಿಗಷ್ಟೇ ಮುಖ್ಯಮಂತ್ರಿಯೋ ಅಥವಾ ರಾಜ್ಯದ ಆರೂವರೆ ಕೋಟಿ ಜನರಿಗೂ ಮುಖ್ಯಮಂತ್ರಿಯೋ ಎಂಬುದು ಗೊತ್ತಾಗುತ್ತಿಲ್ಲ.
-ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.