ಮನ ಪರಿವರ್ತನೆ ಮನೆಗಳಿಗೇ “ಬಾಲ’ಗ್ರಹ
Team Udayavani, Dec 3, 2018, 12:03 PM IST
ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಮನಸ್ಸು ಪರಿವರ್ತನೆಯಾಗುತ್ತಿಲ್ಲ. ಬಾಲಮಂದಿರಗಳಲ್ಲಿನ ಕೆಲವು ಅವ್ಯವಸ್ಥೆ, ಅಧಿಕಾರಿಗಳು, ಇಲಾಖೆ, ಸರ್ಕಾರದ ನಿರ್ಲಕ್ಷ್ಯ, ಕಾನೂನಿನಲ್ಲಿರುವ ಕೆಲ ನಿರ್ಬಂಧಗಳು ಹಾಗೂ ಭದ್ರತೆಯಲ್ಲಿನ ಲೋಪಗಳಿಂದಾಗಿ ಬಾಲಮಂದಿರದಿಂದ ಮಕ್ಕಳು ಪದೇ ಪದೆ ಪರಾರಿಯಾಗುತ್ತಿದ್ದಾರೆ. ಮಕ್ಕಳ ಮನ ಪರಿವರ್ತಿಸಬೇಕಾದ ಸರ್ಕಾರಿ ವೀಕ್ಷಣಾಲಯಗಳ ಸ್ಥಿತಿ-ಗತಿ ಕುರಿತ ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…
ಬೆಂಗಳೂರು: ಮಾದಕ ವಸ್ತುಗಳ ವ್ಯಸನ, ದುಶ್ಚಟಗಳಿಗೆ ಹಣ ಹೊಂದಿಸುವುದು, ಚಾಳಿ ಬಿದ್ದ ಆರೋಪಿಗಳ ನೆರವಿನಿಂದ ತಮಗರಿವಿಲ್ಲದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳ ಮನ ಪರಿವರ್ತನೆ ಮಾಡಲು ಸರ್ಕಾರ, ಸ್ವಯಂಸೇವಾ ಸಂಸ್ಥೆಗಳು ಶ್ರಮಿಸುತ್ತಿದ್ದರೂ, ಇಂತಹ ಮಕ್ಕಳ ಮನಃಸ್ಥಿತಿ ಮಾತ್ರ ಬದಲಾಗುತ್ತಿಲ್ಲ ಎಂಬ ಅಸಮಾಧಾನ ಕೇಳಿಬರುತ್ತಿದೆ!
ರಾಜ್ಯ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಮಡಿವಾಳದ ಬಾಲಮಂದಿರದಿಂದ (ಸರ್ಕಾರಿ ವೀಕ್ಷಣಾಲಯ) ಕಳೆದ 10 ತಿಂಗಳಲ್ಲಿ 45ಕ್ಕೂ ಹೆಚ್ಚು ಮಕ್ಕಳು ಪರಾರಿಯಾಗಿದ್ದಾರೆ. ಜತೆಗೆ, ಹಲವರು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ಘಟನೆಗಳು ಆ ಅಸಮಾಧಾನಕ್ಕೆ ಪುಷ್ಟಿ ನೀಡುತ್ತಿವೆ.
ಈ ರೀತಿ ಪರಾರಿಯಾಗುವ ಮಕ್ಕಳ ಪೈಕಿ ಹಲವರನ್ನು ಪೊಲೀಸರು ಪತ್ತೆಹಚ್ಚಿ ವಾಪಸ್ ಕರೆತರುತ್ತಾರಾದರೂ ಕೆಲವೇ ದಿನಗಳಲ್ಲಿ ಅವರು ಮತ್ತೆ ಅಲ್ಲಿಂದ ನಾಪತ್ತೆಯಾಗುತ್ತಾರೆ. ಕೆಲವೊಮ್ಮೆ ಮಕ್ಕಳು ತಪ್ಪಿಸಿಕೊಳ್ಳುವಾಗ ಅಡ್ಡ ಬಂದವರ ಮೇಲೆ ಹಲ್ಲೆ ನಡೆಸಿ ಓಡಿ ಹೋದ ಉದಾಹರಣೆಗಳೂ ಇವೆ.
ಕಾನೂನು ಸಂಘರ್ಷದಲ್ಲಿರುವ ಮಕ್ಕಳ ಈ ಪ್ರವೃತ್ತಿಗೆ ಬಾಲಮಂದಿರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ಲಕ್ಷ್ಯ, ನುರಿತ ವೈದ್ಯರಿಂದ ಕೌನ್ಸೆಲಿಂಗ್ ಕೊಡಿಸುವಲ್ಲಿನ ವಿಫಲತೆ, ಬಾಲಮಂದಿರದ ಪರಿಸರಕ್ಕೆ ಮಕ್ಕಳು ಹೊಂದಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಕ್ಷಮ ಪ್ರಾಧಿಕಾರಗಳು ಗಮನಹರಿಸದೇ ಇರುವುದೂ ಕಾರಣ ಎಂದರೆ ತಪ್ಪಾಗಲಾರದು.
ಸಮಸ್ಯೆಗಳ ಸರಮಾಲೆ: ಸರ್ಕಾರಿ ವೀಕ್ಷಣಾಲಯದಲ್ಲಿ ಮೂಲ ಸೌಕರ್ಯಗಳಿಲ್ಲ. 40ಕ್ಕೂ ಹೆಚ್ಚು ಮಕ್ಕಳಿರುವ ಸಂಸ್ಥೆಯಲ್ಲಿ ಕೇವಲ ನಾಲ್ಕು ಕೊಠಡಿಗಳಿವೆ. 11 ಮಂದಿ ಭದ್ರತಾ ಸಿಬ್ಬಂದಿ ಇದ್ದು, ಮೂರು ಪಾಳಿಯಲ್ಲಿ ತಲಾ ಮೂವರು ಸಿಬ್ಬಂದಿ (ಗೃಹ ರಕ್ಷಕ ದಳ) ಹಾಗೂ ಸಾಮಾನ್ಯ ಪಾಳಿಯಲ್ಲಿ ಇಬ್ಬರು ಕಾರ್ಯ ನಿರ್ವಹಿಸುತ್ತಾರೆ.
ನಿಯಮಗಳ ಪ್ರಕಾರ ಇಲ್ಲಿನ ಭದ್ರತಾ ಸಿಬ್ಬಂದಿ ಯಾವುದೇ ಕಾರಣಕ್ಕೂ ಸಮವಸ್ತ್ರ ಧರಿಸುವಂತಿಲ್ಲ. ಹೀಗಾಗಿ ಹೆಚ್ಚಿನ ಮಕ್ಕಳು ಹಲ್ಲೆ ನಡೆಸಲು ಹಿಂಜರಿಯುವುದಿಲ್ಲ ಎಂದು ವೀಕ್ಷಣಾಲಯದ ಅಧಿಕಾರಿಯೊಬ್ಬರು ಹೇಳುತ್ತಾರೆ. ವೀಕ್ಷಣಾಲಯದಲ್ಲಿ ಶೇ.30ರಷ್ಟು ಮಾತ್ರ ಸರ್ಕಾರಿ ಸಿಬ್ಬಂದಿ ಇದ್ದಾರೆ.
ಒಬ್ಬರು ಮೇಲುಸ್ತುವಾರಿ, ಮೂವರು ಪ್ರೊಬೆಷನರಿ ಆಫೀಸರ್, ಒಬ್ಬರು ಎಸ್‌ಡಿಸಿ (ಹೆಚ್ಚುವರಿ ಕಾರ್ಯ) ಅಧಿಕಾರಿಯಿದ್ದು, ಒಬ್ಬ ಡಿ ಗ್ರೂಪ್ ನೌಕರರಿದ್ದಾರೆ. ಆದರೆ, ಪ್ರಮುಖವಾಗಿ ಅಗತ್ಯವಿರುವ ಹೌಸ್ ಮದರ್ ಹಾಗೂ ಅಡುಗೆ ಸಿಬ್ಬಂದಿ ಹುದ್ದೆ ಖಾಲಿಯಿದ್ದು, ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಇವರಿಗೆ ಎಲ್ಲ ಜವಾಬ್ದಾರಿ ನೀಡುವಂತೆಯೂ ಇಲ್ಲ. ಇದು ಸಹ ಪೊಲೀಸರು, ಭದ್ರತಾ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ.
ಸಮವಸ್ತ್ರದಲ್ಲಿ ಹೋಗುವಂತಿಲ್ಲ: ಬಾಲ ನ್ಯಾಯ ಕಾಯ್ದೆ ಪ್ರಕಾರ ಪೊಲೀಸರು ಸಮವಸ್ತ್ರದಲ್ಲಿ ವೀಕ್ಷಣಾಲಯ ಪ್ರವೇಶಿವಂತಿಲ್ಲ. ಹೀಗಾಗಿ ಅಲ್ಲಿನ ಮಕ್ಕಳಿಗೆ ಪೊಲೀಸರು ಮತ್ತು ಕಾನೂನಿನ ಭಯವಿಲ್ಲ. ಪದೇ ಪದೆ ಅಪರಾಧ ಪ್ರಕರಣಗಳಲ್ಲಿ ತೊಡಗುವ ಮಕ್ಕಳೇ ನಾಪತ್ತೆಯಾಗುತ್ತಿರುತ್ತಾರೆ.
ತಮ್ಮ ದುಷಟಗಳನ್ನು ಬಿಟ್ಟಿರಲಾರದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಾರೆ. 50ಕ್ಕೂ ಹೆಚ್ಚು ಬಾಲಕರಿರುವ ಈ ಕೇಂದ್ರದಲ್ಲಿ ಬೆರಳೆಣಿಕೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳಲು ಕೇಂದ್ರದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬಾಲಮಂದಿರಗಳ ವಾತಾವರಣ ಬದಲಾಯಿಸಿ: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಬಾಲಮಂದಿರ ಸೇರುವ ಕಾನೂನಿನ ಜತೆಗೆ ಸಂಘರ್ಷದಲ್ಲಿರುವ ಮಕ್ಕಳ ಮನ ಪರಿವರ್ತನೆ ಆಗಬೇಕಿರುವ ಕೇಂದ್ರದಲ್ಲಿ ಸಮಸ್ಯೆಗಳೇ ಹೊದ್ದು ಮಲಗಿವೆ. ಈ ಲೋಪಗಳೇ ಮಕ್ಕಳು ಇಲ್ಲಿಂದ ಪರಾರಿಯಾಗಲು ಪ್ರೇರಣೆಯಾಗಿರಬಹುದು ಎಂದು ಸಾಮಾಜಿಕ ಕಾರ್ಯಕರ್ತರು ವ್ಯಾಖ್ಯಾನಿಸುತ್ತಾರೆ.
ಸರ್ಕಾರಿ ವೀಕ್ಷಣಾಲಯಗಳ ಬಾಲಕರಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಇರುವ ಸಕ್ತಿ ಗುರುತಿಸಿ ಆ ಕ್ಷೇತ್ರದ ಬಗ್ಗೆ ಮಾಹಿತಿ ನೀಡಬೇಕು. ಆದರೆ, ಯಾವುದೇ ವೀಕ್ಷಣಾಲಯಗಳಲ್ಲಿ ಈ ಕೆಲಸ ಆಗುತ್ತಿಲ್ಲ. ಇನ್ನು ಪರಾರಿಯಾದ ಮಕ್ಕಳ ಬಗ್ಗೆ ಸಂಸ್ಥೆಯ ಅಧಿಕಾರಿಗಳಾಗಲಿ, ಸಂಬಂಧಪಟ್ಟ ಇಲಾಖೆಯಾಗಲಿ ಹೆಚ್ಚು ಗಮನ ಹರಿಸುವುದಿಲ್ಲ. ನಾಪತ್ತೆಯಾದ ಮಕ್ಕಳನ್ನು ದೊಡ್ಡ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಬಳಸಿಕೊಂಡು ಇನ್ನಷ್ಟು ಅಪರಾಧಗಳನ್ನು ಮಾಡಿಸುತ್ತಾರೆ ಎಂದು ಹೇಳುತ್ತಾರೆ.
ವೀಕ್ಷಣಾಲಯಗಳು ಮನ ಪರಿವರ್ತನಾ ಕೇಂದ್ರಗಳಾಗಬೇಕು. ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಅವರಿಗೆ ಸಂಗೀತ, ಕ್ರೀಡೆ, ನಾಟಕ ಅಥವಾ ಶಿಕ್ಷಣದಲ್ಲಿ ಆಸಕ್ತಿ ಇರುವ ಬಗ್ಗೆ ತಿಳಿದುಕೊಂಡು ಮಾರ್ಗದರ್ಶನ ನೀಡಬೇಕು. ಕನಿಷ್ಠ 4 ಮಕ್ಕಳಿಗೆ ಒಬ್ಬ ಆಪ್ತಸಮಾಲೋಚಕರು ಇರಲೇಬೇಕು ಎಂದು ಸಾಮಾಜಿಕ ಕಾರ್ಯಕರ್ತೆ, ಪ್ರೇರಣಾ ವಿಕಾಸ ವೇದಿಕೆಯ ರೂಪಾ ಹಾಸನ್ ಹೇಳುತ್ತಾರೆ.
ಅಧಿಕಾರಿಗಳು ಹೇಳುವುದೇನು?: ಹೊರಗಡೆ ಸ್ವತಂತ್ರವಾಗಿ ಓಡಾಡುತ್ತಾ ಮಾದಕ ವ್ಯಸನ ಸೇರಿದಂತೆ ಕೆಟ್ಟ ಚಟಗಳಿಗೆ ದಾಸರಾದ ಮಕ್ಕಳಿಗೆ ಇಲ್ಲಿಗೆ ಬಂದ ನಂತರ ಶಿಸ್ತಿನ ಜೀವನ ಇಷ್ಟವಾಗುವುದಿಲ್ಲ. ಹೀಗಾಗಿ ವೀಕ್ಷಣಾಲಯದಲ್ಲಿರಲು ಇಷ್ಟಪಡುವುದಿಲ್ಲ. ಹೊರಗೆ ಹೋಗಲು ಅವಕಾಶ ಇಲ್ಲದ ಕಾರಣ, ಕೈಗೆ ಸಿಕ್ಕ ವಸ್ತುಗಳಿಂದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಾರೆ.
ಇಂತಹ ಮಕ್ಕಳು ನೇರವಾಗಿ ಮನೆಗೂ ಹೋಗುದೆ ಬೇರೆಲ್ಲೋ ವಾಸವಾಗಿರುತ್ತಾರೆ. ಇಲ್ಲಿರುವ ಪ್ರತಿ ಬಾಲಕರಿಗೂ ನಿತ್ಯ ಮುಂಜಾನೆ 6 ಗಂಟೆಯಿಂದ ಸಂಜೆ 6.30ರವರೆಗೆ ಪ್ರಾರ್ಥನೆ, ಯೋಗ, ಶಿಕ್ಷಣ, ಆಪ್ತ ಸಮಾಲೋಚನೆ ಕೊಡಿಸಲಾಗುತ್ತದೆ. ಆದರೂ, ಕೆಲ ಮಕ್ಕಳು ಬದಲಾಗುವುದಿಲ್ಲ. ಪದೇ ಪದೆ ಅಪರಾಧ ಕೃತ್ಯಗಳಲ್ಲಿ ತೊಡಗುವ ಮಕ್ಕಳೇ ಈ ರೀತಿ ಪರಾರಿಯಾಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ನಗರದಲ್ಲಿರುವುದು ಒಂದೇ ವೀಕ್ಷಣಾಲಯ. ಇಲ್ಲಿಗೆ ಬರುವ ಪ್ರತಿ ಬಾಲಕರಿಗೂ ಕೂಡಲೇ ಆಪ್ತಸಮಾಲೋಚನೆ ಮಾಡಲಾಗುತ್ತದೆ. ಬಳಿಕ ಈ ವರದಿಯನ್ನು ಬಾಲ ನ್ಯಾಯ ಮಂಡಳಿಗೆ ಸಲ್ಲಿಸಿ, ಬಾಲಕನಿಗೆ ವಾರದಲ್ಲಿ ಎಷ್ಟು ದಿನ ಆಪ್ತ ಸಮಾಲೋಚನೆ ಅಗತ್ಯವಿದೆ ಎಂದು ನಿರ್ಧರಿಸಲಾಗುತ್ತದೆ. ಸಂಸ್ಥೆಯಲ್ಲಿರುವ ನುರಿತ ಆಪ್ತಸಮಾಲೋಚಕರು ಮಾತ್ರವಲ್ಲದೆ, ಖಾಸಗಿ ಸಂಸ್ಥೆಯ ಆಪ್ತ ಸಮಾಲೋಚಕರು ಹಾಗೂ ನಿಮ್ಹಾನ್ಸ್ ಸಂಸ್ಥೆಯ ವೈದ್ಯರಿಂದ ಸಲಹೆ ಕೊಡಿಸಲಾಗುತ್ತದೆ ಎಂದು ಬಾಲಮಂದಿರ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
10 ತಿಂಗಳಲ್ಲಿ 45 ಮಕ್ಕಳು ಪರಾರಿ: ಮಡಿವಾಳದಲ್ಲಿರುವ ವೀಕ್ಷಣಾಲಯದಲ್ಲಿ ಈ ಹಿಂದೆಯೂ ಹತ್ತಾರು ಬಾಲಕರು ಪರಾರಿಯಾಗಿದ್ದರು. ಮೇ 26ರಂದು 6, ಜುಲೈ 23ರಂದು 9, ನವೆಂಬರ್ 2ರಂದು 5 ಮಂದಿ ಸೇರಿ ಕಳೆದ 10 ತಿಂಗಳಲ್ಲಿ 45ಕ್ಕೂ ಹೆಚ್ಚು ಬಾಲಕರು ಪರಾರಿಯಾಗಿದ್ದಾರೆ. ಈ ಸಂಬಂಧ 5 ಪ್ರಕರಣಗಳು ದಾಖಲಾಗಿವೆ. 2016ರಲ್ಲಿ 3, 2017ರಲ್ಲಿ 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲ ನ್ಯಾಯ ಕಾಯಿದೆ ಹೇಳುವುದೇನು?
-ಅಪ್ರಾಪ್ತರು ಬಂಧನಕ್ಕೊಳಗಾದ ನಾಲ್ಕು ತಿಂಗಳಲ್ಲಿ ಅವರ ಪ್ರಕರಣ ಇತ್ಯರ್ಥ ಪಡಿಸಬೇಕು. ಒಂದು ವೇಳೆ ಮಗು ತಪ್ಪೊಪ್ಪಿಕೊಂಡರೆ ಕೋರ್ಟ್‌ನಲ್ಲಿ ಆ ಮಗುವಿನ ಹೇಳಿಕೆ ಪಡೆದು, ಜಾಮೀನುಸಹಿತ ಇಲ್ಲವೇ ಜಾಮೀನು ಇಲ್ಲದೆಯೇ ಬಿಡುಗಡೆ ಮಾಡಬೇಕು. ಆದರೆ, ಆ ಮಗು ನಿಯಮಿತವಾಗಿ ಬಾಲ ನ್ಯಾಯ ಮಂಡಳಿ ಎದುರು ಹಾಜರಾಗುತ್ತಿರಬೇಕು.
-ಒಂದು ವೇಳೆ ಆ ಮಗು ಅಮಾಯಕ ಎಂದು ಹೇಳಿಕೊಂಡರೆ, ಆಗ ವಿಚಾರಣೆ ಆರಂಭಿಸಿ, ಸಾಕ್ಷಿಗಳನ್ನು ಕರೆಸಿ ಹೇಳಿಕೆ ಪಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ದೋಷಿ ಎಂದು ಸಾಬೀತಾದರೆ, ಮಗುವಿಗೆ ಆಪ್ತ ಸಮಾಲೋಚನೆ ನೀಡಿ, ಮನಪರಿವರ್ತನೆ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಸಬೇಕು.
-ಬಾಲ ನ್ಯಾಯ ಕಾಯ್ದೆ ಪ್ರಕಾರ ಬಾಲಮಂದಿರ ಅಥವಾ ವೀಕ್ಷಣಾಲಯದಲ್ಲಿ ಉತ್ತಮ ಆಹಾರ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಕ್ರೀಡೆ ಇತರೆ ತರಬೇತಿ ನೀಡಬೇಕು.
-ರಾಜ್ಯ ಸರ್ಕಾರ ಅಥವಾ ಸ್ವಯಂ ಸೇವಾ ಸಂಸ್ಥೆಗಳ ನಿರ್ವಹಣೆಯಲ್ಲಿ ವಿಶೇಷ ಮನೆಗಳನ್ನು (ಬಾಲ ಮಂದಿರ ಅಥವಾ ವೀಕ್ಷಣಾಲಯ) ತೆರೆಯಬೇಕು. ಇವುಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಈ ರೀತಿ ನೋಂದಣಿಯಾದ ಕೇಂದ್ರಗಳಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಸೇರಿಸಿಕೊಳ್ಳುವುದು ಕಡ್ಡಾಯ.
-ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳಿರುವ ಬಾಲಮಂದಿರದ ಉಸ್ತುವಾರಿ ಹೊತ್ತಿರುವ ವ್ಯಕ್ತಿಯಿಂದ ಯಾವುದೇ ಲೋಪ ಉಂಟಾದಲ್ಲಿ ಅಥವಾ ನಿಯಮಾನುಸಾರ ಕಾರ್ಯನಿರ್ವಹಿಸದೇ ಇದ್ದಲ್ಲಿ ಅಂತಹ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
-ಬಾಲಮಂದಿರದಲ್ಲಿರುವ ಮಕ್ಕಳು, ಅವರ ಚಟುವಟಿಕೆಗಳು, ಬಾಲ ಮಂದಿರದಿಂದ ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿ ತಿಂಗಳು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ವರದಿ ಸಲ್ಲಿಸಬೇಕು.
-ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಅವರ ವಯಸ್ಸು, ಲಿಂಗ ಆಧರಿಸಿ ಬಾಲಮಂದಿರಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಬೇಕು. ಈ ವೇಳೆ ಅವರು ಎಸಗಿರುವ ಅಪರಾಧಗಳ ಬಗ್ಗೆ ಮಾಹಿತಿ ಪಡೆದು ಆಪ್ತ ಸಮಾಲೋಚನೆ ನಡೆಸಿ, ಅವರನ್ನು ಮುಖ್ಯ ವಾಹಿನಿಗೆ ಕರೆತರುವ ವ್ಯವಸ್ಥೆ ಮಾಡಬೇಕು.
-ಘೋರ ಅಪರಾಧ ಎಸಗಿರುವ 16ರಿಂದ 18 ವರ್ಷದೊಳಗಿನ ಮಕ್ಕಳಿಗೆ ಸೂಕ್ತ ರಕ್ಷಣೆಯೊಂದಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಅವರ ವಿಚಾರಣೆ ಸಂದರ್ಭದಲ್ಲಿ ಅಗತ್ಯ ಕಾನೂನು ನೆರವು ನೀಡಬೇಕು.
ಬಾಲಕಿಯರ ವೀಕ್ಷಣಾಲಯ ಇಲ್ಲ: ರಾಜ್ಯಾದ್ಯಂತ 18 ವೀಕ್ಷಣಾಲಯಗಳಿವೆ. ಆದರೆ, ಎಲ್ಲಿಯೂ ಬಾಲಕಿಯರಿಗಾಗಿ ಪ್ರತ್ಯೇಕ ವೀಕ್ಷಣಾಲಯವಿಲ್ಲ. ಹಾಲಿ ಇರುವ ಬಾಲಮಂದಿರಗಳಲ್ಲಿಯೇ ಕಾನೂನು ಸಂಘರ್ಷಕ್ಕೊಳಗಾದ ಹೆಣ್ಣು ಮಕ್ಕಳನ್ನು ಇರಿಸಲಾಗುತ್ತಿದೆ ಎನ್ನಲಾಗಿದೆ. ಇದು ಈ ಮಂದಿರಗಳಲ್ಲಿರುವ ಅಮಾಯಕ ಹೆಣ್ಣು ಮಕ್ಕಳನ್ನು ಅಪರಾಧ ಜಗತ್ತಿನ ಕಡೆ ಆಕರ್ಷಿಸುತ್ತದೆ ಎಂಬ ಆರೋಪವೂ ಇದೆ.
ಸರ್ಕಾರದ ಗಮನಕ್ಕೆ ತರಲಾಗಿದೆ: ಸರ್ಕಾರಿ ವೀಕ್ಷಣಾಲಯದಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರದ ಸೂಚನೆ ಹೊರತಾಗಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರ ಕಾರ್ಯವೈಖರಿ ಮೇಲೂ ಇಲಾಖೆ ಅಧಿಕಾರಿಗಳು ಸದಾ ನಿಗಾ ಇರಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಹೆಚ್ಚು ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳ ಪರಿವರ್ತನೆ ಬಹಳ ಕಷ್ಟ. ಹೀಗಾಗಿ ಬಾಲ ಮಂದಿರದಲ್ಲಿ ಯಾವ ರೀತಿ ಮನಪರಿವರ್ತನೆ ನಡೆಯುತ್ತಿದೆ ಎಂಬುದು ಮುಖ್ಯ. ಆ ಮಕ್ಕಳ ಸಾಮರ್ಥ್ಯ ಹಾಗೂ ದೌರ್ಬಲ್ಯ ಅರಿತು ಆಪ್ತ ಸಮಾಲೋಚನೆ ಕೊಡುವುದರ ಜತೆಗೆ ಪ್ರೀತಿ ಸಿಗುವ ವಾತಾವರಣ ಸೃಷ್ಟಿಸಬೇಕು.
-ಡಾ.ಸತೀಶ್ ರಾಮಯ್ಯ, ಮನೋವೈದ್ಯ
ಸ್ವತಂತ್ರವಾಗಿ ಇರಲು ಬಯಸುವ ಮಕ್ಕಳೇ ಈ ರೀತಿ ನಾಪತ್ತೆಯಾಗುತ್ತಾರೆ. ಈ ರೀತಿಯ ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳಿಗೆ ಆಪ್ತ ಸಮಾಲೋಚನೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಮಾರ್ಗದರ್ಶನ ನೀಡಬೇಕು.
-ಸಿ.ಎನ್.ನಾಗಮಣಿ, ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್
ಮಡಿವಾಳದ ವೀಕ್ಷಣಾಲಯದಲ್ಲಿ ಪದೇ ಪದೆ ನಾಪತ್ತೆಯಾಗುತ್ತಿರುವ ಮಕ್ಕಳ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕಾನೂನು ಪ್ರಕಾರ ಭದ್ರತೆಗೆ ಪೊಲೀಸರನ್ನು ನಿಯೋಜಿಸಲು ಸಾಧ್ಯವಿಲ್ಲ. ಸಮವಸ್ತ್ರದಲ್ಲಿ ಹೋಗುವಂತಿಲ್ಲ. ಹೀಗಾಗಿ ಗೃಹ ರಕ್ಷಕ ದಳ ಮತ್ತು ಇಲಾಖೆಯ ಅಧಿಕಾರಿಗಳೇ ಭದ್ರತೆ ಕೈಗೊಳ್ಳಬೇಕು.
-ಸೀಮಂತ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತರು
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.