ಚಿತ್ರ ನಿರ್ಮಾಪಕನ ಕೊಂದವರ ಬಂಧನ
Team Udayavani, Dec 1, 2018, 12:33 PM IST
ಬೆಂಗಳೂರು: ದುಬಾಸಿಪಾಳ್ಯ ರೈಲ್ವೇಗೇಟ್ ಸಮೀಪದ ಮೋರಿಯಲ್ಲಿ ದೊರೆತ ಅಪರಿಚಿತ ಶವದ ಜೇಬಿನಲ್ಲಿದ್ದ ಡ್ರೈವಿಂಗ್ ಲೈಸೆನ್ಸ್ ಹಾಗೂ ಫೋಟೋ ಆಧರಿಸಿ ತನಿಖೆ ಚುರುಕುಗೊಳಿಸಿದ ಕೆಂಗೇರಿ ಪೊಲೀಸರು ಚಿತ್ರ ನಿರ್ಮಾಪಕನ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.
ಚಿತ್ರ ನಿರ್ಮಾಪಕ ಹಾಗೂ ವ್ಯಾಪಾರಿ ರಮೇಶ್ ಕುಮಾರ್ ಜೈನ್ ಅವರನ್ನು ಕೊಲೆಗೈದು ಶವ ಬಿಸಾಡಿದ್ದ ತಾಯಿ,ಮಗಳು ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ದೀಪಾಂಜಲಿ ನಗರ ನಿವಾಸಿಗಳಾದ ಹೀನಾ ಮತ್ತು ಅವರ ಪುತ್ರಿ ಶಬೀನಾ ತಾಜ್,ಇಸ್ಲಾಂ ಖಾನ್, ಅಬ್ದುಲ್ ಹಶೀಂ, ಸೈಯ್ಯದ್ ಅಹಮದ್, ಮೊಹಮ್ಮದ್ ಜುಬೇರ್ ಬಂಧಿತರು.
ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ದುಬಾಸಿಪಾಳ್ಯದಲ್ಲಿ ಮೋರಿಯಲ್ಲಿ ಅಪರಿಚಿತ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮೃತದೇಹದ ಜೇಬಿನಲ್ಲಿದ್ದ ಡಿ.ಎಲ್ ಮತ್ತು ಫೋಟೋ ನೆರವಿನೊಂದಿಗೆ ಪುತ್ರ ರಾಕೇಶ್ ಅವರನ್ನು ಸಂಪರ್ಕಿಸಿದಾಗ. ಕೊಲೆಯಾದವರು ಚಿತ್ರನಿರ್ಮಾಪಕ ಹಾಗೂ ವ್ಯಾಪಾರಿ ರಮೇಶ್ ಕುಮಾರ್ ಜೈನ್ ಗೊತ್ತಾಯಿತು. ರಾಕೇಶ್ ಅವರು ಹೀರಾ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಈ ಮಾಹಿತಿ ಮೇರೆಗೆ ಹೀನಾ ಹಾಗೂ ಸಬೀನಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆ ಬಾಡಿಗೆ ನೀಡುವ ವಿಚಾರಕ್ಕೆ ರಮೇಶ್ ಕುಮಾರ್ ಅವರನ್ನು ಕೊಲೆಮಾಡಿದ ಬಗ್ಗೆ ಬಾಯ್ಬಿಟ್ಟಿದ್ದು, ಉಳಿದ ಆರೋಪಿಗಳನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ವಿಜಯನಗರ ಆರ್‌ಪಿಸಿ ಲೇಔಟ್ ನಿವಾಸಿ ರಮೇಶ್ ಕುಮಾರ್ ಜೈನ್ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು.ಜತೆಗೆ ಪ್ಲಾಸ್ಟಿಕ್ ಚೇರ್ ತಯಾರಿಕಾ ಕಾರ್ಖಾನೆ ಹೊಂದಿದ್ದು ಅದರಲ್ಲಿ ನಜೀರ್ ಎಂಬಾತನು ಪಾಲುದಾರನಾಗಿದ್ದ. ಅದೇ ಸ್ನೇಹದ ಮೇಲೆ ದೀಪಾಂಜಲಿ ನಗರದಲ್ಲಿರುವ ತಮ್ಮ ಮನೆಯನ್ನು ನಜೀರ್ ಕುಟುಂಬಕ್ಕೆ ಬಾಡಿಗೆಗೆ ಕೊಟ್ಟಿದ್ದರು. ಕೆಲ ವರ್ಷಗಳ ಹಿಂದೆ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಬೇರೆ ಬೇರೆಯಾಗಿದ್ದರು.
ಕಳೆದ ಏಳು ವರ್ಷಗಳಿಂದ ಬಾಕಿ ಇದ್ದ ಮನೆ ಬಾಡಿಗೆ ಮೊತ್ತ ತಿಂಗಳಿಗೆ 5 ಸಾವಿರ ರೂ.ಯಂತೆ ಒಟ್ಟು 4.20 ಲಕ್ಷ ರೂ.ಗಳನ್ನು ನಜೀರ್ ಕುಟುಂಬ ನೀಡಿರಲಿಲ್ಲ. ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ನಜೀರ್ ಅವರು ಹಾಸಿಗೆ ಬಿಟ್ಟು ಎದ್ದೇಳಲು ಆಗದ ಪರಿಸ್ಥಿತಿಯಲ್ಲಿದ್ದರು.
ವ್ಯವಹಾರ ಪಾಲುದಾರಿಕೆ ಸ್ನೇಹ ಕಡಿದುಕೊಂಡಿದ್ದ ರಮೇಶ್ ಕುಮಾರ್ ಜೈನ್, ಬಾಡಿಗೆ ಕೊಟ್ಟು ಮನೆ ಖಾಲಿ ಮಾಡಿ ಎಂದು ನಜೀರ್ ಪತ್ನಿ ಹೀನಾ ಮತ್ತು ಪುತ್ರಿ ಶಬೀನಾ ತಾಜ್‌ಗೆ ಹಲವು ಬಾರಿ ಹೇಳಿದ್ದರು. ಬಾಡಿಗೆ ನೀಡದ ಕಾರಣಕ್ಕೆ ಅವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು, ಎರಡು ಕಡೆಯವವರನ್ನು ಠಾಣೆಗೆ ಕರೆಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದರು.
ಬಾಡಿಗೆ ಕೊಡುತ್ತೇವೆ ಎಂದು ಕರೆದು ಕೊಂದರು: ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದ ಜಗಳದಿಂದ ರಮೇಶ್ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಹೀನಾ ಹಾಗೂ ಅವರ ಪುತ್ರಿ, ನ. 28ರಂದು ಬಾಡಿಗೆ ನೀಡುತ್ತೇವೆ ಎಂದು ಅವರನ್ನು ಮನೆಗೆ ಕರೆಸಿಕೊಂಡಿದ್ದಾರೆ.
ಬಳಿಕ ಇತರೆ ಆರೋಪಿಗಳನ್ನು ಕರೆಯಿಸಿಕೊಂಡು, ರಮೇಶ್ ಕುಮಾರ್ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ತಡರಾತ್ರಿ 12 ಗಂಟೆಯವರೆಗೂ ಕಾಯ್ದು ಮೂಟೆ ಕಟ್ಟಿ ಪ್ರಯಾಣಿಕ ಆಟೋದಲ್ಲಿ ಶವವನ್ನು ಹಾಕಿಕೊಂಡು ಕೆಂಗೇರಿ ಉಪನಗರ ಬಳಿಯ ದುಬಾಸಿ ಪಾಳ್ಯ ರೈಲ್ವೆ ಸಮನಾಂತರ ರಸ್ತೆ ಬಳಿಯ ಮೋರಿಯಲ್ಲಿ ಬಿಸಾಡಿ ಪರಾರಿಯಾಗಿದ್ದರು.
ಇತ್ತ ತಂದೆ ರಾತ್ರಿಯಾದರೂ ಮನೆಗೆ ಮರಳದ ಕಾರಣ ಆತಂಕಗೊಂಡ ರಮೇಶ ಪುತ್ರ ರಾಕೇಶ್, ನಜೀರ್ ಮನೆಗೆ ಫೋನ್ ಮಾಡಿ ವಿಚಾರಿಸಿದ್ದರು. ನಮ್ಮ ಮನೆಗೆ ರಮೇಶ್ ಬಂದಿಲ್ಲ ಎಂದು ನಜೀರ್ ಪತ್ನಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ರಾಕೇಶ್ ನ.29ರಂದು ವಿಜಯನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.