ಪ್ರಜಾತಂತ್ರ ಹಬ್ಬಕ್ಕೆ ಜನರನ್ನು ಸೇರಿಸುವ ಸಂಭ್ರಮ
Team Udayavani, Apr 11, 2019, 3:00 AM IST
ಬೆಂಗಳೂರು: ಬೆಳಗಾದರೆ ಕವಾಯತು, ದೈಹಿಕ ಕಸರತ್ತುಗಳು ನಡೆಯುವ ಮೈದಾನ ಅದು. ಬುಧವಾರ ಅಲ್ಲಿ ಸಂಭ್ರಮ ಮನೆಮಾಡಿತ್ತು. ಪೆಂಡಾಲ್ ಹಾಕಿ, ಅಲಂಕರಿಸಿದ ಆ ಮೈದಾನದಲ್ಲಿ ಮತದಾನದ ಮಹತ್ವ ಸಾರುವ ಸಾಲುಗಳು, ಭಾಷಣಗಳು ಮೊಳಗುತ್ತಿದ್ದವು. ಇದಕ್ಕೆ ಪೂರಕವಾದ ಸಂದೇಶಗಳನ್ನು ಹೊತ್ತ ಸೈಕಲ್‌ಗಳು ಅಲ್ಲಿಗೆ ಧಾವಿಸುತ್ತಿದ್ದವು. ಹೀಗೆ ಬಂದ ಸೈಕಲ್‌ಗಳನ್ನು ಸಂಗೀತ ವಾದ್ಯದೊಂದಿಗೆ ಕಳುಹಿಸಿಕೊಡಲಾಗುತ್ತಿತ್ತು.
ಹೌದು, ಅದು ಪ್ರಜಾತಂತ್ರ ಹಬ್ಬಕ್ಕೆ ಜನರನ್ನು ಸೇರಿಸುವ ಸಂಭ್ರಮದ ಕಾರ್ಯಕ್ರಮ. “ಉದಯವಾಣಿ’ ಮತ್ತು ಕೆಎಸ್‌ಆರ್‌ಪಿ ಜಂಟಿಯಾಗಿ ಕೋರಮಂಗಲದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಕಡ್ಡಾಯ ಮತದಾನ, ನಾವೆಲ್ಲಾ ಕೈಜೋಡಿಸೋಣ’ ಕಾರ್ಯಕ್ರಮದಲ್ಲಿ ಲಾಠಿ ಹಿಡಿದು ರಸ್ತೆಗಿಳಿಯುವ ಪೊಲೀಸರು ಕೇಂದ್ರಬಿಂದು ಆಗಿದ್ದರು.
ಮಹಿಳಾ ಸೈಕಲ್ ಪಡೆ ಸೇರಿದಂತೆ ಪೊಲೀಸ್ ಸಿಬ್ಬಂದಿ ತಮ್ಮ ಕೆಲಸದ ಒತ್ತಡದ ನಡುವೆಯೂ ನಸುಕಿನಲ್ಲೇ ಧಾವಿಸಿ, ಮೈದಾನವನ್ನು ಶುಚಿಗೊಳಿಸಿ, ಸಿಂಗಾರಗೊಳಿಸಿದ್ದರು. ಅಧಿಕಾರಿಗಳೂ ಒಳಗೊಂಡಂತೆ ಅಲ್ಲಿ ಬಂದವರಿಗೆಲ್ಲಾ “ಎನರ್ಜಿ ಡ್ರಿಂಕ್’ ಕೊಟ್ಟು, ಸಂದೇಶ ವಾಹಕ ಸೈಕಲ್ ನೀಡುತ್ತಿದ್ದರು. ಇಂತಹ 50ಕ್ಕೂ ಹೆಚ್ಚು ಪೊಲೀಸರು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ಸೈಕಲ್ ಏರಿ ನಗರದ ಬೀದಿಗಳಲ್ಲಿ ಮತದಾನದ ಬಗ್ಗೆ ಜನ ಜಾಗೃತಿ ಮೂಡಿಸಿದರು.
ಎಡಿಜಿಪಿ ಭಾಸ್ಕರ್‌ರಾವ್ ನೇತೃತ್ವದಲ್ಲಿ ಹೊರಟ ಸೈಕಲ್ ಜಾಥಾದಲ್ಲಿ ಕೆಎಸ್‌ಆರ್‌ಪಿ ಡಿಐಜಿ ಎನ್. ಸತೀಶ್‌ಕುಮಾರ್, ಕಮಾಂಡೆಂಟ್‌ಗಳಾದ ಮೊಹಮದ್ ಸುಜೀತ, ರಾಮಕೃಷ್ಣ ಪ್ರಸಾದ್, ಅಸಿಸ್ಟೆಂಟ್ ಕಮಾಂಡೆಂಟ್ ಗಂಗಯ್ಯ, ಪೊಲೀಸ್ ಇನ್ಸ್‌ಪೆಕ್ಟರ್ (ನ್ಪೋರ್ಟ್ಸ್ ಆಫೀಸರ್) ಶ್ರವಂತ್, ಸೈಕಲ್‌ನಲ್ಲಿ ಭಾರತ ಸುತ್ತಿದ್ದ ಡಿಎಆರ್ ಪೇದೆ ಭೀಮಾಶಂಕರ ಮಡಿಗಾಳ್ ಸೇರಿದಂತೆ ಹಿರಿಯ ಅಧಿಕಾರಿಗಳು ಮಹಿಳಾ ಪೊಲೀಸ್ ಪೇದೆಗಳ ಸೈಕ್ಲಿಸ್ಟ್ ತಂಡ ಉದಯವಾಣಿ ಸಿಬ್ಬಂದಿ ಪಾಲ್ಗೊಂಡಿದ್ದರು.
“ನನ್ನ ಮತ ದೇಶಕ್ಕೆ ಹಿತ’,”ಮತ ಕೊಟ್ಟು ದೇಶ ಕಟ್ಟಿ’, “ಸದೃಢ ಭಾರತಕ್ಕೆ ನಿಮ್ಮ ಮತ’, “ನನ್ನ ಮತ ಮಾರಾಟಕ್ಕಿಲ್ಲ’, “ಮತದಾನ ಎಂದರೆ ರಜಾ-ಮಜಾ ಅಲ್ಲ’ ಎಂಬ ಹತ್ತಾರು ಸಂದೇಶಗಳನ್ನು ಹೊತ್ತು ಸೈಕಲ್‌ಗಳೊಂದಿಗೆ ಬೀದಿಗಿಳಿದ ಪೊಲೀಸರು, ಸುಮಾರು ಎಂಟು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಮಾರ್ಗದುದ್ದಕ್ಕೂ ಬರುವ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಒಂದು ತಾಸು ನಡೆದ ಸೈಕಲ್ ಜಾಥಾ ಪುನಃ ಮೈದಾನದಲ್ಲೇ ಸಮಾಪನಗೊಂಡಿತು.
ಮೌಲ್ಯ ಹೆಚ್ಚಿಸುವ ಕಾರ್ಯಕ್ರಮ: ಸೈಕಲ್ ಜಾಥಾ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಸ್ಕರ್ ರಾವ್, ಸಾಮಾನ್ಯವಾಗಿ ಕಾನೂನು- ಸುವ್ಯವಸ್ಥೆಗೆ ಧಕ್ಕೆ ಉಂಟಾ ದಾಗ ಅಥವಾ ಅಂತಹ ಸಂದರ್ಭಗಳು ಕಂಡುಬಂದಾಗ ಮಿಸಲು ಪೊಲೀಸರು ರಸ್ತೆಗಿಳಿಯುತ್ತಾರೆ. ಇದು ವಾಸ್ತವ ಮತ್ತು ಜನರ ಮನಃಸ್ಥಿತಿ ಕೂಡ. ಆದರೆ, ಜನರಲ್ಲಿ ಸಾಂವಿಧಾನಿಕ ಹಕ್ಕಿನ ಬಗ್ಗೆ ಅರಿವು ಮೂಡಿಸಲು ನಮ್ಮ ಪಡೆ ರಸ್ತೆಗಿಳಿದಿದೆ. ಈ ಸಾಮಾಜಿಕ ಕಳಕಳಿಗೆ ವೇದಿಕೆ ಕಲ್ಪಿಸಿದ್ದು “ಉದಯವಾಣಿ’ ತಂಡ. ಈ ಪ್ರಯತ್ನದಿಂದ ನಮ್ಮ ಮೌಲ್ಯ ಮತ್ತಷ್ಟು ಹೆಚ್ಚಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹಕ್ಕಿನ ಜಾಗೃತಿಗೆ ಪುಟ್ಟ ಹೆಜ್ಜೆ: “ಉದಯವಾಣಿ’ ಸಂಪಾದಕ ಬಾಲಕೃಷ್ಣ ಹೊಳ್ಳ ಮಾತನಾಡಿ, “ನಾವೆಲ್ಲಾ ವ್ಯವಸ್ಥೆಯನ್ನು ದೂರುತ್ತೇವೆ. ಆದರೆ, ಆ ವ್ಯವಸ್ಥೆ ಸರಿಹೋಗಲು ಎಲ್ಲಕ್ಕಿಂತ ಮುಖ್ಯವಾಗಿ ಮಾಡಬೇಕಾದದ್ದು ನಮ್ಮ ಹಕ್ಕುಗಳ ಚಲಾವಣೆ. ಅದು ಸರಿಯಾಗಿ ಆಗುತ್ತಿಲ್ಲ. ಈ ಹಿನ್ನೆ ಲೆ ಯ ಲ್ಲಿ ಕೆಎಸ್‌ಆರ್‌ಪಿ ಯೊಂದಿಗೆ ಕೈಜೋಡಿಸಿ, ಜನ ಜಾಗೃತಿ ಮೂಡಿಸುವ ಒಂದು ಪುಟ್ಟ ಹೆಜ್ಜೆ ಈ ಸೈಕಲ್ ಜಾಥಾ’ ಎಂದು ಹೇಳಿದರು.
ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಅನಂತಕೃಷ್ಣನ್ ಮಾತನಾಡಿದರು. ಕೆಎಸ್‌ಆರ್‌ಪಿ ಡಿಐಜಿ ಎನ್. ಸತೀಶ್ ಕುಮಾರ್, ನಾಲ್ಕನೇ ಬೆಟಾಲಿಯನ್ ಕಮಾಂಡೆಂಟ್ ಎಂ.ಎಸ್. ಮೊಹಮ್ಮದ್ ಸುಜೀತ ಉಪಸ್ಥಿತರಿದ್ದರು. ಮೂರನೇ ಬೆಟಾಲಿಯನ್ ಕಮಾಂ ಡೆಂಟ್ ರಾಮಕೃಷ್ಣ ಪ್ರಸಾದ್ ಸ್ವಾಗತಿಸಿದರು. ವೇದಿಕೆ ಕಾರ್ಯಕ್ರಮವನ್ನು ಅಸಿಸ್ಟೆಂಟ್ ಕಮಾಡೆಂಟ್ ಲೋಕೇಶ್, ಆರ್‌ಎಸ್‌ಐಗಳಾದ ಶಿವಾನಂದ ನಾಯಕ್ ಹಾಗೂ ಮುಫೀದ್‌ಖಾನ್ ನಿರ್ವಹಿಸಿದರು.
ಎಲ್ಲೆಲ್ಲಿ ಹಾದುಬಂತು?: ಬೆಳಿಗ್ಗೆ 7ರ ಸುಮಾರಿಗೆ ಕೋರಮಂಗಲದ ಕೆಎಸ್‌ಆರ್‌ಪಿ ಮೂರನೇ ಬೆಟಾಲಿಯನ್ ಕೇಂದ್ರ ಕಚೇರಿಯ ಕವಾಯತು ಮೈದಾನದಿಂದ ಆರಂಭವಾದ ಸೈಕಲ್ ಜಾಥಾ ನೇರವಾಗಿ ಅಗರ ಕೆರೆ ಉದ್ಯಾನ, 14ನೇ ಮುಖ್ಯರಸ್ತೆ, ಎಚ್‌ಎಸ್‌ಆರ್ ಲೇಔಟ್‌ನ ಪ್ರಮುಖ ರಸ್ತೆಗಳ ಮಾರ್ಗವಾಗಿ ಉಗ್ರಪ್ಪ ಉದ್ಯಾನದ ಮೂಲಕ ಹಾದುಬಂದಿತು. 9ರ ಸುಮಾರಿಗೆ ಮೈದಾನದಲ್ಲಿ ಅಂತ್ಯಗೊಂಡಿತು.
ಮಹಿಳಾ ಸಬಲೀಕರಣಕ್ಕಾಗಿ ಸೈಕಲ್ ತುಳಿದಿದ್ದಾಯ್ತು. ಹೆಣ್ಣುಮಕ್ಕಳ ಹಕ್ಕು ಮತ್ತು ರಕ್ಷಣೆಗಾಗಿ ಸೈಕಲ್ ಜಾಥಾ ನಡೆಸಿದ್ದಾಯ್ತು. ಈಗ ಮತದಾನ ಜಾಗೃತಿಗಾಗಿ ಕೆಎಸ್‌ಆರ್‌ಪಿ ಮಹಿಳಾ ಪಡೆ ಸೈಕಲ್ ಏರಿದೆ. ಹೌದು, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್‌ಆರ್‌ಪಿ) ಮಹಿಳಾ ಪಡೆ ಸದ್ದು ಮಾಡುತ್ತಿದೆ.
ಕಳೆದ ವರ್ಷ ಡಿಸೆಂಬರ್ 4ರಿಂದ 9ರವರೆಗೆ ಬೆಳಗಾವಿಯಿಂದ ಬೆಂಗಳೂರಿನವರೆಗೆ ಮಹಿಳಾ ಹಕ್ಕುಗಳ ಬಗ್ಗೆ ಈ ಪಡೆ ಸೈಕಲ್ ಜಾಥಾ ನಡೆಸಿತ್ತು. ಈ ವರ್ಷ ಅದೇ ತಂಡ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಜಾಗೃತಿಗೆ ಮುಂದಾಗಿದೆ. ಬುಧವಾರ “ಉದಯವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ತಂಡ ಭಾಗವಹಿಸಿ ಗಮನಸೆಳೆಯಿತು.
ಕೆಎಸ್‌ಆರ್‌ಪಿ ನಾಲ್ಕನೇ ಬೆಟಾಲಿಯನ್ ಈ ಮಹಿಳಾ ತಂಡದಲ್ಲಿ 55 ಜನರಿದ್ದು, ಈ ಪೈಕಿ ಬಹುತೇಕರು ಸೈಕ್ಲಿಂಗ್ ಪರಿಣಿತಿ ಪಡೆದಿದ್ದಾರೆ. ಕೆಎಸ್‌ಆರ್‌ಪಿಯಲ್ಲಿ ಪುರುಷರು ಸೈಕ್ಲಿಂಗ್ ಜಾಥಾ ಮಾಡಿದ್ದರಾದರೂ ಮಹಿಳಾ ಪಡೆ ಮೊದಲ ಬಾರಿ 2018ರ ಡಿಸೆಂಬರ್‌ನಲ್ಲಿ ಜಾಥಾ ಹೊರಟ್ಟಿತ್ತು.
ಬೆಳಗಾವಿಯಿಂದ ಬೆಂಗಳೂರಿನ ಮಾರ್ಗವಾಗಿ 540 ಕಿ.ಮೀ ಸೈಕ್ಲಿಂಗ್ ಜಾಥಾ ಮಾಡುವುದು ಸವಾಲಿನಿದ್ದಾಗಿತ್ತು. ಅದನ್ನು ಹೆಮ್ಮೆಯಿಂದಲೇ ಸ್ವೀಕರಿಸಿದ್ದ ಕೆಎಸ್‌ಆರ್‌ಪಿ ಮಹಿಳಾ ಪಡೆ ಯಶಸ್ವಿಯಾಗಿ ಪೂರೈಸಿತ್ತು. ಸಾರ್ವಜನಿಕರಿಂದಲೂ ಮೆಚ್ಚುಗೆ ಗಳಿಸಿತ್ತು. ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲಿನ ಹೆಣ್ಣುಮಕ್ಕಳಿಗೆ “ಗುಡ್ ಟಚ್’ ಮತ್ತು “ಬ್ಯಾಡ್ ಟಚ್’ಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು.
ಸದಾ ಕಠಿಣ ಪರಿಸ್ಥಿತಿಗಳನ್ನೇ ಎದುರಿಸಿ ಅನುಭವವಾಗಿದ್ದ ನಮಗೆ ಇದು ಹೊಸ ಅನುಭವನ್ನು ನೀಡಿತ್ತು. ಸಮಾಜದೊಂದಿಗೆ ಬೆರೆಯುವ ಅವಕಾಶದಿಂದ ಮತ್ತು ಜನರ ಮೆಚ್ಚುಗೆಯ ಮಾತುಗಳಿಂದ ಕೆಲಸ ಮಾಡುವುದಕ್ಕೆ ಇನ್ನಷ್ಟು ಹುಮ್ಮಸ್ಸು ಮೂಡಲು ಪ್ರಾರಂಭಿಸಿತ್ತು’ ಎಂದು ಸೈಕ್ಲಿಂಗ್ ಅನುಭವ ಹಂಚಿಕೊಳ್ಳುತ್ತಾರೆ ಮಹಿಳಾ ಸೈಕಲ್ ತಂಡದ ಸದಸ್ಯೆ ಸವಿತಾ.
ಲೋಕಸಭಾ ಮತದಾನ ಜಾಗೃತಿ ಸಲುವಾಗಿ ಉದಯವಾಣಿ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಸಹಯೋಗದಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಮಹಿಳಾ ಸಿಬ್ಬಂದಿ.
ಆರ್. ಜಯಶ್ರೀ (ಆರ್‌ಎಸ್‌ಐ), ಶಾಂತಾ ಅಪ್ಪಯ್ಯ ತೇರದಾಳ (ಆರ್‌ಎಸ್‌ಐ), ಶ್ವೇತಾ, ಕವಿತಾ ಕಡೆಮನಿ, ಲಾಯಾಗಂಗಾ ದೇವಿ ಡೋಣಿ, ಉಮ್ಮೇಸಲ್ಮಾ ಮಕು¤ಮನವರ, ಶೈಲಜಾ ರುಸ್ತಾನಪೂರ, ಚೈತ್ರಾ ಟಿ, ಜಾಹಿದಾ ಬೇಗಂ ಪಠಾಣ, ಅನಿತಾ ಎಸ್, ಪಲ್ಲವಿ ಸಿ.ಟಿ., ಶ್ರಾವಂತಮ್ಮ ಎಸ್.ಒ, ಭಾರತಿ ಪಿ ಮೇತ್ರಿ, ಹನುಮಕ್ಕ ಎಚ್, ವೀಣಾ ಎ.ಎನ್.,
ಸರಸ್ವತಿ ಪೂಜೇರಿ, ಭಾಗ್ಯಶ್ರೀ ಹೀರೇಮಠ, ಮಹದೇವಿ ಕಾರಿಮನಿ, ಕೆ.ಟಿ. ಗೀತಾ, ಉಷಾರಾಣಿ ಕಾಂಬಳೆ, ಅನಿತಾ ಎಸ್.ಆರ್., ವಿದ್ಯಾ ಶ್ರೀ ಗುಣದಾಳ, ಶೋಭಾ ಬಸಪ್ಪ ಮಂಟೂರ, ಮಂಜುಳಾ ಹುನಗುಂಡಿ, ಪೂರ್ಣಿಮಾ ಪಾಟೀಲ್, ವಿಜಯಲಕ್ಷ್ಮೀ, ವಿದ್ಯಾ ಸಿ.ಎಲ್., ರಶೀದಾ ನದಾಫ್, ಶ್ರೀದೇವಿ ಎನ್ ಮಾದರ, ಸವಿತಾ ಜಿ. ದಾವಣಗೆರೆ.
ಈ ಹಿಂದೆ ಸೈಕ್ಲಿಂಗ್‌ನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದಲ್ಲದೇ ರಾಜ್ಯ ಪ್ರವಾಸ ಮಾಡಿದ್ದೆವು. ಆದರೆ, ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮತದಾನ ಮಹತ್ವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದು ಇದೇ ಮೊದಲು. ಮತದಾನ ನಮ್ಮ ಕರ್ತವ್ಯವಾಗಿದ್ದು, ನಾವೆಲ್ಲ ತಪ್ಪದೇ ಮತದಾನ ಮಾಡುವ ಜತೆಗೆ ಇತರರನ್ನು ಮತದಾನಕ್ಕೆ ಪ್ರೇರೇಪಿಸೋಣ.
-ಎಸ್.ಒ. ಶಾವಂತ್ರಮ್ಮ, ಮಹಿಳಾ ಸಿಬ್ಬಂದಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್
ಸಂವಿಧಾನ ಹಾಗೂ ಸರ್ಕಾರಗಳಿಂದ ವಿವಿಧ ಸೌಲಭ್ಯಗಳನ್ನು ಪಡೆಯುವ ಪ್ರತಿಯೊಬ್ಬ ನಾಗರಿಕರು ತಪ್ಪದೇ ಮತದಾನ ಮಾಡಬೇಕು. ಮಹಾನಗರಗಳಲ್ಲಿ ಮತದಾನಕ್ಕೆ ಸಾಕಷ್ಟು ಜನ ಹಿಂದೇಟು ಹಾಕುತ್ತಿದ್ದು, ಜಾಗೃತಿ ಮೂಡಿಸುವುದು ಅಗತ್ಯವಿದೆ. ಆ ನಿಟ್ಟಿನಲ್ಲಿ ನಡೆದ ಸೈಕಲ್ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದು, ಹೆಮ್ಮೆ ಎನಿಸುತ್ತಿದೆ.
-ಭಾಗ್ಯಶ್ರೀ, ಮಹಿಳಾ ಸಿಬ್ಬಂದಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್
ಸಾಲು ಸಾಲು ರಜೆಗಳು ಬಂದಿರುವುದರಿಂದ ಸಿಲಿಕಾನ್ ಸಿಟಿಯ ಬಹುತೇಕ ಟೆಕ್ಕಿಗಳು, ವಲಸಿಗರು ಆ ದಿನದಂದು ಪ್ರವಾಸ ಹೋಗುವ ಯೋಜನೆ ಹಾಕುತ್ತಿದ್ದಾರೆ. ಆದರೆ, ಅವರಲ್ಲಿ ಮತದಾನದ ಮಹತ್ವವನ್ನು ತಿಳಿಸಿ, ಈ ಬಾರಿಯಾದರೂ ಮತದಾನ ಹೆಚ್ಚಸುವ ನಿಟ್ಟಿನಲ್ಲಿ ಮಹಿಳಾ ಪೊಲೀಸರು ಕಾರ್ಯ ನಿರತವಾಗಿರುವುದು ಶ್ಲಾಘನೀಯ .
ಪುಟ್ಟರಾಜು, ವಾಯುವಿಹಾರಿ
ಜನರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಇಂತಹ ಜಾಗೃತಿ ಜಾಥಾ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯ ನಿರಂತರವಾಗಬೇಕು.
-ರಾಮಕೃಷ್ಣ ಪ್ರಸಾದ್, ಕಮಾಂಡೆಂಟ್, 3ನೇ ಬೆಟಾಲಿಯನ್.
ಪ್ರಜಾಪ್ರಭುತ್ವದ ಪ್ರಮುಖ ಪ್ರಕ್ರಿಯೆಯಾದ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು. ಇದು ಪ್ರತಿ ನಾಗರಿಕರ ಆದ್ಯ ಕರ್ತವ್ಯವಾಗಿದೆ”
-ಮೊಹಮದ್ ಸುಜೀತ, ಕಮಾಂಡೆಂಟ್, 4ನೇ ಬೆಟಾಲಿಯನ್
ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವುದರ ಜತೆಗೆ ಮತದಾನ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ.
-ಗಂಗಯ್ಯ, ಸಹಾಯಕ ಕಮಾಂಡೆಂಟ್, 4ನೇ ಬೆಟಾಲಿಯನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.