ರಾಜಧಾನಿಯ ಮಂದಿರಗಳಲ್ಲಿ ಶರನ್ನವರಾತ್ರಿಯ ಸಂಭ್ರಮ
Team Udayavani, Sep 22, 2017, 11:46 AM IST
ಬೆಂಗಳೂರು: ಸಿಲಿಕಾನ್ ಸಿಟಿಯ ದೇವಾಲಯಗಳಲ್ಲೀಗ ಶರನ್ನವರಾತ್ರಿಯ ಝೇಂಕಾರ ಮೊಳಗುತ್ತಿದೆ. ಎಲ್ಲೆಲ್ಲೂ ಗಂಟೆಯ ನಾದ-ನಿನಾದದ ಜೊತೆಗೆ
ಸಹಸ್ರಾರು ಭಕ್ತಾರ ಹಾಜರಿ ಕಾಣುತ್ತಿದೆ. ಐತಿಹಾಸಿಕ ದೈವಮಂದಿರಗಳಂತೂ ತಳಿರು-ತೋರಣಗಳಿಂದ ಸಿಂಗಾರಗೊಂಡಿದ್ದು ,ಭಕ್ತಿಯ ಪರಾಕಷ್ಟೆಗೆ ಸಾಕ್ಷಿಯಾಗುತ್ತಿವೆ. ಈಗಾಗಲೇ ಹೇವಿಳಂಬಿನಾಮ ಸಂವತ್ಸರದ ಶರನ್ನವರಾತ್ರಿ ಆರಂಭವಾಗಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತ ರು ದೇವಿಮಂದಿರಗಳಲ್ಲಿ ಸಾಲುಗಟ್ಟಿದ್ದು ಕಂಡು ಬಂತು.
ಬೆಳಗ್ಗೆಯಿಂದ ಸಂಜೆಯ ವರೆಗೂ ಮಂತ್ರ ವೇದ ಘೋಷಗಳು ಮೊಳಗುತ್ತಿದ್ದು, ಭಕ್ತಿಯ ನವ್ಯ ಲೋಕವೇ ಧರೆಯ ಮೇಲೆ ಅರಳಿ ನಿಂತತ್ತಿದೆ. ದೈವಿಕ ಪರಂಪರೆಗೆ ಮುನ್ನುಡಿ ಬರೆದಿರುವ ಕನಕಪುರ ರಸ್ತೆಯ ಪಕ್ಕದಲ್ಲಿ ನೆಲೆಸಿರುವ ಬನಶಂಕರಿ ದೇವಾಲಯ, ರಾಜರಾಜೇಶ್ವರಿ ನಗರದಲ್ಲಿರುವ ರಾಜರಾಜೇಶ್ವರಿ ದೇಗುಲ, ಶಂಕರಪುರಂನಲ್ಲಿರುವ ಶೃಂಗೇರಿ ಶಂಕರ ಮಠ, ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಾಲಯ,
ಸಂಪಿಗೆ ರಸ್ತೆಯಲ್ಲಿರುವ ಮಹೇಶ್ವರಿ ದೇವಾಲಯ, ಇಂದಿರಾನಗರದ ಹೆಚ್.ಎ.ಎಲ್ 2ನೇ ಹಂತದಲ್ಲಿರುವ ಶ್ರೀವಾಸವಿ ಕನ್ಯಕಾಪರಮೇಶ್ವರಿ ಮತ್ತು ಶಿವದೇವಾಲಯ, ಮತ್ತಿಕೆರೆಯ ಚೌಡೇಶ್ವರಿ ದೇವಾಲಯ, ಯಡಿಯೂರಿನ ದುರ್ಗಾಪರಮೇಶ್ವರಿ ದೇವಾಲಯ, ಮಹಾಲಕ್ಷ್ಮೀಪುರದ ಆವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ಮತ್ತು ಕುಮಾರ ಪಾರ್ಕ್ ನ ಪಶ್ಚಿಮ ಭಾಗದಲ್ಲಿರುವ ಮಹಾಲಕ್ಷ್ಮೀ ಮಂದಿರ ಟ್ರಸ್ಟ್ ಸೇರಿದಂತೆ ನಗದರ ಹಲವು ದೇವಾಲಯಗಳ ಮುಂದೇ ಭಕ್ತರ ದಂಡೇ ನೆರೆದಿತ್ತು.
ಇತಿಹಾಸ ಪ್ರಸಿದ್ದ ಬನಶಂಕರಿ ದೇವಾಲಯ ಮುಂದೆ ಗುರುವಾರ ಮುಂಜಾನೆ 4ಗಂಟೆಗೆ ನೂರಾರು ಸಂಖ್ಯೆಲ್ಲಿ ಭಕ್ತಿರು ಸಾಲುಗಟ್ಟಿ ನಿಂತದ್ದು ಗೋಚರಿಸಿತು. ಮುಂಜಾನೆಯಿಂದಲೇ ನಡೆದ ಅಮ್ಮನವರ ಸುಪ್ರಭಾತ ಸೇವೆ, ವಿಶೇಷ ಪಂಚಾಮೃತಾಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆಯಲ್ಲಿ ಭಕ್ತರು ಪಾಲ್ಗೊಂಡು ಭಕ್ತಿ ಕೈಂಕರ್ಯ ಮೆರೆದರು.
ಶರನ್ನವರಾತ್ರಿ ಮಹೋತ್ಸದ ಹಿನ್ನಲೆಯಲ್ಲಿ ಸೆ,30 ರ ವರೆಗೆ ವಿವಿಧ ಪೂಜಾಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಯಜ್ಞ ಶಾಲೆಯಲ್ಲಿ ನವಗ್ರಹ ಹೋಮ,ಮೃತ್ಯುಂಜಯ ಹೋಮ,ಪವಮಾನ ಹೋಮ ಸೇರಿದಂತೆ ಇನ್ನಿತರ ಹೋಮ ಹವನಗಳು ನಡೆಯಲಿವೆ ಎಂದು ಬನಶಂಕರಿ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಅವರು ತಿಳಿಸಿದ್ದಾರೆ.
ಶಂಕರಪುರದಲ್ಲಿರುವ ಶಂಗೇರಿ ಶಂಕರಮಠ ಇಂತಹದ್ದೇ ಭಕ್ತಿ ಸನ್ನಿವೇಶಕ್ಕೆ ಮುನ್ನುಡಿ ಬರೆಯಿತು. ಮುಂಜಾನೆ ನಡೆದ ಸಹಸ್ರ ಮೋದಕ ಮಹಾಗಣಪತಿ ಹೋಮದಲ್ಲಿ ಅಸಂಖ್ಯಾತ ಭಕ್ತಲೋಕ ಪಾಲ್ಗೊಂಡಿತ್ತು. ಅಲ್ಲದೆ, ಅ.5 ರ ವರೆಗೂ ಶೃಂಗೇರಿ ಶಾರದ ಪೀಠದ ಶ್ರೀಗಳ ಸಾನಿಧ್ಯದಲ್ಲಿ ವಿವಿಧ ರೀತಿಯ ದೈವಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
ರಾಜರಾಜೇಶ್ವರಿ ದೇವಾಲಯದಲ್ಲೂ ಕೂಡ ಇದೇ ವಾತಾವರಣ ಕಂಡುಬಂತು. ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ಸೆ.30 ರ ವರೆಗೆ ಶರನ್ನವರಾತ್ರಿ ಕಾರ್ಯಕ್ರಮಗಳು ಜೊತೆಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲೂ ನವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.
ದೇವಿಗೆ ಮಹಾಭಿಷೇಕ ಅರಿಶಿನ ಕುಂಕುಮ ಅಲಂಕಾರದ ಜೊತೆಗೆ ನಡೆದ ದುರ್ಗಾ ಹೋಮದಲ್ಲಿ ಹಲವು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪುನೀತರಾದರು. ಪ್ರತಿದಿನ ಸಂಜೆ ಧೈವಿಕ ಕಾರ್ಯಕ್ರಮಗಳು ಭಕ್ತರ ಹಸಿವು ತಣಿಸುತ್ತಿವೆ.ಮತ್ತಿಕೆರೆಯ ಹೆಚ್.ಎಂ.ಟಿ ಬಡಾವಣೆಯಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ಅದ್ಧೂರಿಯಿಂದ ಆರಂಭಗೊಂಡಿದ್ದು, ಬೆಳಗ್ಗೆ ನಡೆದ ಸಂಕಲ್ಪ, ಅಭಿಷೇಕ,ಚಂಡಿ ಪಾರಾಯಣ ಪೂಜೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಮಹೇಶ್ವರಿ ದೇವಸ್ಥಾನದಲ್ಲಿ ಸೆ.30ರ ವರೆಗೆ ದೇವತೆಗೆ ಮುತ್ತಿನ ಅಲಂಕಾರ, ಗೋಡಂಬಿ ,ಬಾದಾಮಿ ಅಲಂಕಾರ, ದಾಳಿಂಬೆ ಮತ್ತು ಮುಸುಕಿನ ಜೋಳದ ಅಲಂಕಾರ,ಕವಡೇ ಅಲಂಕಾರ, ಗುಲಗಂಜಿ ಮುಸುಕಿನ ಜೋಳದ ಅಲಂಕಾರ, ಮಲ್ಲಿಗೆ ಮೊಗ್ಗಿನ ಅಲಂಕಾರ ಜೊತೆಗೆ ಅಂತಿಮ ದಿನದಂದು ಮಲ್ಲಿಗೆ ಮೊಗ್ಗಿನ ಕರಗ ನಡೆಯಲಿದೆ.ಭಕ್ತರಾಕರ್ಷಣೆ ಆಗಿರುವ ಮಲ್ಲಿಗೆ ಮೊಗ್ಗಿನ ಕರಗಕ್ಕೆ ದೇವಾಲಯದ ಆಡಳಿತ ಮಂಡಳಿ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.