ಬಿಪಿಎಲ್ ಪಡಿತರದಾರರಿಗೆ ಹೆಚ್ಚುವರಿ ಅಕ್ಕಿ ಹೊಂದಿಸುವ ಸವಾಲು
Team Udayavani, Apr 16, 2017, 10:49 AM IST
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟಂಬದ ಫಲಾನುಭವಿಗಳಿಗೆ ಏಪ್ರಿಲ್ 1ರಿಂದ 2 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲು ರಾಜ್ಯ ಸರ್ಕಾರ ಘೋಷಣೆಯೇನೊ ಮಾಡಿದೆ. ಆದರೆ, ಹೆಚ್ಚುವರಿ ಅಕ್ಕಿಯನ್ನು ಹೊಂದಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.
ರಾಜ್ಯದಲ್ಲಿ ಒಟ್ಟು 1.08 ಕೋಟಿ ಬಿಪಿಎಲ್ ಕುಟುಂಬಗಳಿದ್ದು, ಪ್ರತಿ ಕುಟುಂಬಕ್ಕೆ 2 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಕೊಡಬೇಕಾದರೆ, ತಿಂಗಳಿಗೆ 60 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬೇಕು. ಇದಕ್ಕಾಗಿ ರಾಜ್ಯದ ಬೊಕ್ಕಸಕ್ಕೆ ಪ್ರತಿ ತಿಂಗಳಿಗೆ ಆಗುವ ಹೊರೆ ಬರೋಬ್ಬರಿ 180 ಕೋಟಿ ರೂ. ಪ್ರತಿ ತಿಂಗಳು 60 ಸಾವಿರ ಮೆಟ್ರಿಕ್ ಟನ್ ಅಕ್ಕಿ ರಾಜ್ಯದಲ್ಲಿಯೇ ಸಿಗುವುದು ಕಷ್ಟ. ಹಾಗಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಪಂಜಾಬ್‌ಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರಬಹುದು. ಆಗ ಮಾರುಕಟ್ಟೆ ದರ, ಸಾಗಣೆ ವೆಚ್ಚ ಇತ್ಯಾದಿ ಸೇರಿ ಮತ್ತಷ್ಟು ದುಬಾರಿ ಆಗಬಹುದು.
ಆಹಾರ ಇಲಾಖೆ ಮಾಹಿತಿ ಪ್ರಕಾರ ಅಕ್ರಮ ದಾಸ್ತಾನು ಜಪ್ತಿ ಹಾಗೂ ಆಧಾರ್ ಸಂಖ್ಯೆ ಜೋಡಣೆ ಮಾಡದ ಕುಟುಂಬಗಳಿಗೆ ಪಡಿತರ ಸ್ಥಗಿತಗೊಳಿಸಿದ್ದು ಸೇರಿ ವಿವಿಧ ಕಾರಣಗಳಿಂದ 1.70 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನಿದೆ. ಇದನ್ನು ಜೂನ್‌ವರೆಗೆ ನಿಭಾಯಿಸಬಹುದು.
ಪ್ರತಿ ತಿಂಗಳಿಗೆ ಅಕ್ಕಿ ಹೊಂದಿಸುವ ಸವಾಲು ಜುಲೈನಿಂದ ಪ್ರಾರಂಭವಾಗುತ್ತದೆ. ಆಗ ಟೆಂಡರ್ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡಬೇಕಾಗುತ್ತದೆ. ಟೆಂಡರ್ ಕರೆದರೆ, ಕರ್ನಾಟಕ ಅಲ್ಲದೇ ಬೇರೆ ರಾಜ್ಯದ ಅಕ್ಕಿ ಮಾರಾಟಗಾರರು ಪಾಲ್ಗೊಳ್ಳುವುದರಿಂದ 60 ಸಾವಿರ ಮೆಟ್ರಿಕ್ ಟನ್ ಅಕ್ಕಿ ಹೊಂದಿಸುವುದು ಕಷ್ಟ ಆಗಲಿಕ್ಕಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ಪಡಿತರ ವಿತರಣೆ ವ್ಯವಸ್ಥೆಯಡಿ ರಾಜ್ಯದ ಬಿಪಿಎಲ್ (ಆದ್ಯತಾ) ಕುಟುಂಬಗಳಿಗೆ ವಿತರಿಸಲು ಆಹಾರ ಭದ್ರತಾ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ರಾಜ್ಯದ 1.08 ಕೋಟಿ ಬಿಪಿಎಲ್ ಕುಟುಂಬಗಳಿಗೆ ತಲಾ 5 ಕೆಜಿಯಂತೆ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೆಜಿಗೆ 3ರೂ.ಗಳಂತೆ ಕೇಂದ್ರ ಸರ್ಕಾರ ನೀಡುತ್ತದೆ. ಅದನ್ನು ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಿಸುತ್ತಿದೆ.
ಇದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ತಿಂಗಳಿಗೆ ಸುಮಾರು 65 ಕೋಟಿ ರೂ. ಪಾವತಿಸುತ್ತದೆ. ಅಲ್ಲದೇ ಈಗ 2 ಕೆಜಿ ಅಕ್ಕಿ ಹೆಚ್ಚುವರಿಯಾಗಿ ರಾಜ್ಯ ಸರ್ಕಾರವೇ ಕೊಡುತ್ತಿರುವುದರಿಂದ ಇದಕ್ಕೆ ತಗಲುವ 180 ಕೋಟಿ ರೂ. ರಾಜ್ಯದ ಬೊಕ್ಕಸದಿಂದಲೇ ಕೊಡಬೇಕು.
2 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆಗೆ ತಗಲುವ ವೆಚ್ಚ ಸರಿದೂಗಿಸಲು “ಒಂದು ಕೊಟ್ಟು ಇನ್ನೊಂದು ವಾಪಸ್ ಪಡೆದುಕೊಳ್ಳುವ’ ಸೂತ್ರ ಪಾಲಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ರಾಜ್ಯ ಸರ್ಕಾರ ಸಕ್ಕರೆ, ಉಪ್ಪು ಮತ್ತು ತಾಳೆ ಎಣ್ಣೆಗೆ ಕತ್ತರಿ ಹಾಕಿದೆ.
ಬೇಳೆಗೆ ಸಮಸ್ಯೆ ಇಲ್ಲ: ಈಗಿರುವ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 1 ಕೆಜಿಯಂತೆ ವಿತರಿಸಲು 10,500 ಮೆಟ್ರಿಕ್ ಟನ್ ತೊಗರಿ ಬೇಳೆ ಬೇಕು. ಅಗತ್ಯ ಪ್ರಮಾಣದಲ್ಲಿ ತೊಗರಿ ಬೇಳೆ ಸಿಗದಿದ್ದರಿಂದ ಒಂದೆರಡು ತಿಂಗಳು ವ್ಯತ್ಯಯ ಆಗಿತ್ತು. ಈಗ ತೊಗರಿ ಬೇಳೆ ಖರೀದಿಗೆ ಮತ್ತೆ ಕರೆದಿದ್ದ ಟೆಂಡರ್‌ಗೆ ರಾಜ್ಯ ಮತ್ತು ಬೇರೆ ರಾಜ್ಯದ ಸುಮಾರು 80 ಜನ ಮಾರಾಟಗಾರರು ನೋಂದಣಿ ಮಾಡಿಕೊಂಡಿರುವುದರಿಂದ ಮುಂದೆ ಅಗತ್ಯ ಪ್ರಮಾಣದ ತೊಗರಿ ಬೇಳೆ ಸಿಗುವ ನೀರಿಕ್ಷೆಯಿದ್ದು, ಯಾವುದೇ ಸಮಸ್ಯೆ ಆಗುವುದಿಲ್ಲವೆಂದು ಆಹಾರ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಸಕ್ಕರೆ, ಎಣ್ಣೆ, ಉಪ್ಪಿಗೆ 70 ಕೋಟಿ ರೂ. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಸಕ್ಕರೆ, ತಾಳೆ ಎಣ್ಣೆ ಹಾಗೂ ಉಪ್ಪು ವಿತರಿಸಲಾಗುತ್ತಿತ್ತು. ಪ್ರತಿ ವ್ಯಕ್ತಿಗೆ 13.50 ರೂ. ಗೆ 1 ಕೆಜಿ ಸಕ್ಕರೆ, 25 ರೂ.ಗೆ ಲೀಟರ್ ತಾಳೆ ಎಣ್ಣೆ ಹಾಗೂ 2 ರೂ.ಗೆ ಉಪ್ಪು ಕೊಡಲಾಗುತ್ತಿತ್ತು. ಕೇಂದ್ರ ಸರ್ಕಾರವು ಕೆಜಿ ಸಕ್ಕರೆಗೆ ನೀಡುತ್ತಿದ್ದ 32 ರೂ. ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ 25 ರೂ.ಗೆ ನೀಡುವ ಎಣ್ಣೆಯನ್ನು ಕೆಜಿಗೆ 75 ರೂ.ಗೆ ಖರೀದಿಸಬೇಕಿತ್ತು. 2 ರೂ.ಗೆ ನೀಡುವ ಉಪ್ಪನ್ನು 12 ರಿಂದ 13 ರೂ. ಕೊಟ್ಟು ಖರೀದಿಸಬೇಕಿತ್ತು. ಇದಕ್ಕೆ ಫಲಾನುಭವಿಗಳು ನೀಡುವ ರಿಯಾಯಿತಿ ದರದ ಹಣ ಬಿಟ್ಟು ರಾಜ್ಯ ಸರ್ಕಾರ ತಿಂಗಳಿಗೆ 65 ರಿಂದ 70 ಕೋಟಿ ರೂ. ಖರ್ಚು ಮಾಡುತ್ತಿತ್ತು. ಅದರ ಜತೆಗೆ ಈಗ ತಿಂಗಳಿಗೆ 180 ಕೋಟಿ ರೂ. ಹೊರೆ ಬೀಳಲಿದೆ.
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.