ನಮ್ಮ ವಿಷ ನಮಗೇ ನೀಡುವ ನಗರ ಕೆರೆಗಳು
Team Udayavani, Jan 11, 2021, 1:02 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಕೃತಿ ನ್ಯಾಯವೇ ಅಂತಹದ್ದು. ಗಾಳಿ, ನೀರು, ಮರ-ಗಿಡ ಯಾವುದೇ ಆಗಿರಲಿ. ನಾವು ಅದಕ್ಕೆ ಧಕ್ಕೆ ಉಂಟುಮಾಡಿದರೆ, ಅದಕ್ಕೆ ಬೆಲೆ ತೆರುವಂತೆ ಮಾಡುತ್ತದೆ. ನಗರದ ಕೆರೆಗಳ ವಿಚಾರವೂ ಇದಕ್ಕೆ ಹೊರತಾಗಿಲ್ಲ. ಕೆರೆಗಳಿಗೆ ಕೈಗಾರಿಕೆ, ಗೃಹ ಮತ್ತಿತರ ತ್ಯಾಜ್ಯವನ್ನು ನೇರವಾಗಿ ಹರಿಬಿಡುತ್ತಿರುವುದರಿಂದ ಅಲ್ಲಿನ ನೀರು ಈ ಮೊದಲೇ ಕಲುಷಿತಗೊಂಡಿದೆ. ಈಗ ಆ ಕಲುಷಿತ ನೀರಿನಲ್ಲಿರುವ ಹಾನಿಕಾರಕ ಅಂಶಗಳು ಸುತ್ತಲಿನ ಮಣ್ಣು ಮತ್ತು ಬೆಳೆಗಳಲ್ಲೂ ಸೇರಿಕೊಳ್ಳುತ್ತಿರುವ ಆತಂಕಕಾರಿ ಅಂಶ ಜಿಕೆವಿಕೆ ತಜ್ಞರು ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಆರು ಕೆರೆಗಳಲ್ಲಿ ಈ ಅಧ್ಯಯನ ನಡೆದಿದ್ದು, ವರದಿಯಲ್ಲಿರುವ ಅಂಶಗಳ ಸುತ್ತ ಈ ಬಾರಿಯ ಸುದ್ದಿ ಸುತ್ತಾಟ…
“ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬ ಮಾತಿದೆ. ಆದರೆ, ನಾವು ಕೆರೆಗೆ ನೀರಿನೊಂದಿಗೆ ಅನುಪಯುಕ್ತ ವಸ್ತುಗಳ ಮೂಲಕ ವಿಷಯವನ್ನೂ ಸುರಿಯುತ್ತಿದ್ದೇವೆ. ಪರಿಣಾಮ ಪ್ರಕೃತಿಯು ಆ “ವಿಷ’ವನ್ನು ಪರೋಕ್ಷವಾಗಿ ನಮಗೇ ಉಣಿಸುತ್ತಿದೆ! ಕೈಗಾರಿಕೆ, ಎಲೆಕ್ಟ್ರಾನಿಕ್, ಗೃಹಬಳಕೆ ಮತ್ತಿತರ ತ್ಯಾಜ್ಯಗಳನ್ನು ರಾಜ ಕಾಲುವೆಗಳು ಸೇರಿದಂತೆ ವಿವಿಧ ರೂಪದಲ್ಲಿ ತೇಲಿಬಿಡುವುದರಿಂದ ನಗರದ ಕೆರೆಗಳು ಮೊದಲೇ ಕಲುಷಿತಗೊಂಡಿವೆ.
ಈಗ ಆ ಕಲುಷಿತ ನೀರು ಮಣ್ಣು ಮತ್ತು ಕೃಷಿ ಬೆಳೆಗಳಲ್ಲೂ ಸೇರಿಕೊಳ್ಳುತ್ತಿರುವುದು ಪತ್ತೆಯಾಗಿದ್ದು, ಹೀಗೆ ಬೆಳೆದ ಬೆಳೆಗಳನ್ನು ನಮಗೇ ಅರಿವಿಲ್ಲದೆ ನಾವು ನಿತ್ಯ ಸೇವನೆ ಮಾಡುತ್ತಿದ್ದೇವೆ. ನಗರದ ಹೊರವಲಯದಲ್ಲಿರುವ ಆಯ್ದ ಆರು ಕೆರೆಗಳು ಮತ್ತು ಆ ಕೆರೆಗಳ ನೀರಿನಿಂದ ಬೆಳೆದ ಬೆಳೆ ಹಾಗೂ ಮಣ್ಣಿನ ಮಾದರಿಗಳನ್ನು ಇತ್ತೀಚೆಗೆ ತಜ್ಞರು ಅಧ್ಯಯನ ನಡೆಸಿದ್ದು, ಸಂಗ್ರಹಿಸಿದ ಮಾದರಿಗಳಲ್ಲಿ ಭಾರತೀಯ ಮಟ್ಟ (ಐಎಸ್) ಮತ್ತು ಯೂರೋಪಿಯನ್ ಯೂನಿಯನ್ (ಇಯೂ) ಪರಿಮಿತಿಗಿಂತ ಅಧಿಕ ಪ್ರಮಾಣದಲ್ಲಿ ಭಾರಿ ಲೋಹದ ಅಂಶಗಳು ಇರುವುದು ತಿಳಿದುಬಂದಿದೆ.
ಸಂಶೋಧನಾ ಲೇಖನ ಪ್ರಕಟ: ದೇಶಾದ್ಯಂತ ಸುದ್ದಿ ಮಾಡಿದ್ದ ವರ್ತೂರು ಕೆರೆ ಸೇರಿದಂತೆ ಎಲೆಮಲ್ಲಪ್ಪ ಶೆಟ್ಟಿ, ಮಾರಗೊಂಡನಹಳ್ಳಿ, ಬೈರಮಂಗಲ, ಜಿಗಣಿ, ಹೊಸಕೋಟೆ ಕೆರೆಗಳ ನೀರನ್ನು ಸುತ್ತಲಿನ ರೈತರು ಕೃಷಿ ಉದ್ದೇಶಗಳಿಗೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ಆ ಜಮೀನುಗಳ ಮಣ್ಣು ಮತ್ತು ಬೆಳೆಗಳ ಗುಣಮಟ್ಟವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಣ್ಣಿನ ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದ ಡಾ.ಎನ್.ಬಿ.ಪ್ರಕಾಶ್ ಮತ್ತು ಡಾ.ಎನ್. ಹಂಸ ಎಂಬುವರು ಅಧ್ಯಯನ ನಡೆಸಿದ್ದಾರೆ. ಈ ಸಂಶೋಧನಾ ಲೇಖನ ಭಾರತೀಯ ವಿಜ್ಞಾನ ಅಕಾಡೆಮಿ ಹೊರತರುವ ಸೈನ್ಸ್ ಜರ್ನಲ್‌ನಲ್ಲಿ ಇತ್ತಿಚೆಗೆ ಪ್ರಕಟಗೊಂಡಿದೆ.
ಒಟ್ಟು 157 ಮಾದರಿ ಸಂಗ್ರಹ: ಅಧ್ಯಯನಕ್ಕೆ ಆರೂ ಕೆರೆಗಳಲ್ಲಿ ಸಂಗ್ರಹಿಸಿದ 74 ಮಣ್ಣಿನ ಮಾದರಿಗಳಲ್ಲಿ ಪರಿಮಿತಿಗಿಂತ ಕನಿಷ್ಠ ಶೇ.15ರಿಂದ ಗರಿಷ್ಠ ಶೇ.33 ಪ್ರಮಾಣ ಹೆಚ್ಚು ಲೋಹದ ಅಂಶಗಳಿವೆ. ಅದೇ ರೀತಿ, 83 ವಿವಿಧ ಪ್ರಕಾರದ ಬೆಳೆಗಳ ಮಾದರಿಗಳಲ್ಲೂ ಕ್ರೋಮಿಯಂ ಮತ್ತು ನಿಕ್ಕೆಲ್ ಹೆಚ್ಚಿರುವುದು ಕಂಡುಬಂದಿದೆ. ಸೀಸ ಮತ್ತು ಕ್ಯಾಡ್ಮಿಯಂ ಅಂಶಗಳ ಪರಿಮಿತಿಗಿಂತ ಕಡಿಮೆ ಇವೆ. ಉದ್ದೇಶಿತ ಕೆರೆಗಳ ನೀರಿನಿಂದ ಸುತ್ತಲಿನ ನೂರಾರು ಎಕರೆಯಲ್ಲಿ ವಿವಿಧ ಪ್ರಕಾರದ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಹಣ್ಣಿನ ಬೆಳೆಗಳಲ್ಲಿ ಈ ರಾಸಾಯನಿಕ ಅಂಶಗಳು ಅಷ್ಟಾಗಿ ಪ್ರಭಾವ ಬೀರಿಲ್ಲ. ಭೂಮಿಯ ಒಳಗೆ ಬೆಳೆಯುವ ಬೆಳೆಗಳಲ್ಲಿ ಅಧಿಕವಾಗಿರುವುದು ಕಂಡುಬಂದಿದೆ.
ಕೆರೆಗಳ ಶುದ್ಧೀಕರಣಕ್ಕೆ ಕ್ರಮಕೈಗೊಳ್ಳಬೇಕು: ಈ ಹಿನ್ನೆಲೆಯಲ್ಲಿ ಉದ್ದೇಶಿತ ಆರೂ ಕೆರೆಗಳ ನೀರಿನಲ್ಲಿ ಬೆಳೆದ ಬೆಳೆಗಳು ಸೇವನೆಗೆ ಯೋಗ್ಯವಿಲ್ಲ. ಒಂದು ವೇಳೆ ಸೇವಿಸಿದರೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಸುತ್ತಲಿನ ರೈತರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು. ಜತೆಗೆ ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳು ಕೆರೆಗಳ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ ಎಂದು ವರದಿಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚು ಲೋಹದ ಅಂಶಗಳು ಶೇಖರಣೆ: ನಗರ ಮತ್ತು ಹೊರವಲಯದಲ್ಲಿ ಒಟ್ಟಾರೆ 280-285 ಕೆರೆಗಳಿವೆ. ಇದರಲ್ಲಿ ಬಹುತೇಕ ಒತ್ತುವರಿ ಮತ್ತಿತರ ಕಾರಣಗಳಿಂದ ಕಳೆದುಹೋಗಿವೆ. ಇನ್ನು ಕೆಲವು ಖಾಸಗಿ ನಿರ್ವಹಣೆಯಲ್ಲಿವೆ. ಸದ್ಯ ಆ ಪೈಕಿ ಆರು ಕೆರೆಗಳನ್ನು ನಾವು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದೆವು. ಪ್ರತಿ ಕೆರೆಯ ಸುತ್ತಲಿನ 80ಕ್ಕೂ ಹೆಚ್ಚು ಗಿಡಗಳ ಮಾದರಿಗಳು ಹಾಗೂ 15-20 ಸೆಂ.ಮೀ. ಆಳದವರೆಗಿನ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ, ವೈಜ್ಞಾನಿಕ ಪರೀಕ್ಷೆಗೆಒಳಪಡಿಸಲಾಯಿತು. ಈ ವೇಳೆ ನಿಗದಿಗಿಂತ ಹೆಚ್ಚು ಲೋಹದ ಅಂಶಗಳು ಶೇಖರಣೆಗೊಂಡಿರುವುದು ತಿಳಿದುಬಂತು ಎಂದು ಜಿಕೆವಿಕೆ ಮಣ್ಣಿನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಬಿ.ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಬೈರಮಂಗಲ, ಜಿಗಣಿ, ವರ್ತೂರಲ್ಲಿ ಹೆಚ್ಚು ಕ್ರೋಮಿಯಂ ಸಾಮಾನ್ಯವಾಗಿ ಚರ್ಮದ ಸಂಸ್ಕರಣೆ, ಟಿಂಬರ್ ಸಂಸ್ಕರಣೆ, ತುಕ್ಕುಹಿಡಿಯುವಿಕೆ ರಕ್ಷಣೆ, ಜವಳಿ ಮತ್ತಿತರ ಉದ್ದೇಶಕ್ಕೆ ಬಳಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಉದ್ದಿಮೆಗಳು ನೇರವಾಗಿ ತ್ಯಾಜ್ಯವನ್ನು ಕೆರೆಗೆ ಬಿಡುವುದರಿಂದ ಕಲುಷಿತಗೊಳ್ಳುತ್ತಿದೆ. ಬೈರಮಂಗಲ ಕೆರೆಯ ಸುತ್ತಲಿನ ಮಣ್ಣಿನಲ್ಲಿ ಈ ಕ್ರೋಮಿಯಂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡಿದೆ. ಅದೇ ರೀತಿ, ಗಾಲ್ವನೈಸ್ ಪೈಪ್‌ಗ್ಳು ತುಕ್ಕು ಹಿಡಿಯದಿರಲು, ನಿರುಪಯುಕ್ತ ಬ್ಯಾಟರಿ, ರಾಸಾಯನಿಕ ಬಣ್ಣದಲ್ಲಿ ಕಂಡುಬರುವ ಕ್ಯಾಡ್ಮಿಯಂ ಹೆಚ್ಚಿನ ಪ್ರಮಾಣದಲ್ಲಿ ಜಿಗಣಿ ಕೆರೆಯ ಸುತ್ತಲಿನ ಪ್ರದೇಶಗಳಲ್ಲಿನ ಮಣ್ಣಿನಲ್ಲಿ ಪತ್ತೆಯಾಗಿದೆ. ವರ್ತೂರು ಕೆರೆ ನೀರಿನಲ್ಲಿ ನಿಕ್ಕೆಲ್ ಮತ್ತು ಸೀಸ ನಿಗದಿತ ಪ್ರಮಾಣಕ್ಕಿಂತ ಅಧಿಕ ಶೇಖರಣೆಯಾಗಿತ್ತು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಇದನ್ನೂ ಓದಿ:ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಪವನ್ ಕುಮಾರ್ ಮಾಲಪಾಟಿ: ಗೊಂದಲಕ್ಕೆ ತೆರೆ
ಎಸ್‌ಟಿಪಿಗೆ ಟೆಂಡರ್ ಪ್ರಕ್ರಿಯೆ
ಉದ್ದೇಶಿತ ಆರು ಕೆರೆಗಳ ಪೈಕಿ ಸದ್ಯಕ್ಕೆ ಎಲೆಮಲ್ಲಪ್ಪ ಶೆಟ್ಟಿ ಕೆರೆಗೆ ಈಗಾಗಲೇ 15 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಉಳಿದ ಐದು ಕೆರೆಗಳಲ್ಲಿ ಸಂಸ್ಕರಣಾ ಘಟಕಗಳ ನಿರ್ಮಾಣ ಪ್ರಕ್ರಿಯೆ ಇನ್ನೂ ಟೆಂಡರ್ ಹಂತದಲ್ಲಿದೆ.
ಅಧ್ಯಯನಕ್ಕೆ ತೆಗೆದುಕೊಂಡ ಕೆರೆಗಳು ಬಹುತೇಕ ನಗರದ ಹೊರವಲಯದಲ್ಲಿ ಬರುತ್ತವೆ. ಹಾಗಾಗಿ, ಬಿಬಿಎಂಪಿಗೆ ಹೊಸದಾಗಿ ಸೇರಿಕೊಂಡ 110 ಹಳ್ಳಿಗಳೊಂದಿಗೆ ಸೇರ್ಪಡೆಗೊಂಡಿದ್ದು, ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಟೆಂಡರ್ ಆಹ್ವಾನಿಸಲಾಗಿದೆ. 2023ಕ್ಕೆ ಘಟಕಗಳ ಯೋಜನೆ ಪೂರ್ಣಗೊಳಿಸುವ ಗುರಿ ಇದೆ ಎಂದು ಜಲಮಂಡಳಿ ಮೂಲ ಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಲಮಂಡಳಿ ಅಧ್ಯಕ್ಷ ಜಯರಾಂ, “ಮಂಡಳಿ ವ್ಯಾಪ್ತಿಯ ಬಹುತೇಕ ಎಲ್ಲ ಕೆರೆಗಳಿಗೆ ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದೆ.
ಆ ಮೂಲಕ ಗೃಹಬಳಕೆ ಮತ್ತು ಕೈಗಾರಿಕೆ ನೀರು ನೇರವಾಗಿ ಸೇರ್ಪಡೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಹೊಸ ದಾಗಿ 110 ಹಳ್ಳಿಗಳ ಸೇರ್ಪಡೆಯಲ್ಲಿ ಬರುವ ಕೆರೆಗಳಲ್ಲೂ ವ್ಯವಸ್ಥಿತ ಜಾಲ ನಿರ್ಮಿಸಲಾಗಿದೆ. ಘಟಕಗಳ ಸ್ಥಾಪನೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಯಾವ್ಯಾವ ಬೆಳೆಗಳ ಪರೀಕ್ಷೆ?
ದಂಟು, ಟೊಮೆಟೋ, ಸೊಪ್ಪು, ಭತ್ತ, ಕೊತ್ತಂಬರಿ, ಬೀನ್ಸ್, ಬೀಟ್ರೂಟ್, ಮೂಲಂಗಿಯ ಒಟ್ಟಾರೆ 83 ಮಾದರಿಗಳನ್ನು ಸಂಗ್ರಹಿಸಿ, ಅದರಲ್ಲಿನ ರಾಸಾಯನಿಕ ಅಂಶಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದರಲ್ಲಿ ಬಹುತೇಕ ಬೆಳೆಗಳಲ್ಲಿ ಕ್ರೋಮಿಯಂ ಅಂಶವು ಪರಿಮಿತಿಗಿಂತ ಹೆಚ್ಚು ದಾಖಲಾಗಿದೆ.
ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.