ಕರಾವಳಿ ಭಾಗದ 2 ಯೋಜನೆಗಳಿಗೆ ಅಸ್ತು
Team Udayavani, Dec 12, 2017, 6:55 AM IST
ಬೆಂಗಳೂರು: ಕರಾವಳಿ ಭಾಗದ ಜನರ ಬಹುವರ್ಷದ ಕನಸು ಪಶ್ಚಿಮ ವಾಹಿನಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕೊನೆಗೂ ಹಸಿರು ನಿಶಾನೆ ತೋರಿದ್ದು, ಜತೆಗೆ ಇಂಡಿಯನ್ ಕೋಸ್ಟಲ್ ಗಾರ್ಡ್ ಸಂಸ್ಥೆಯು 1010 ಕೋಟಿ ರೂ. ವೆಚ್ಚದಲ್ಲಿ ಕರಾವಳಿ ರಕ್ಷಣಾ ಪಡೆ ತರಬೇತಿ ಕೇಂದ್ರ ನಿರ್ಮಾಣ ಯೋಜನೆಗೂ ಅನುಮತಿ ದೊರೆತಿದೆ.
ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಪಶ್ಚಿಮ ವಾಹಿನಿ ಯೋಜನೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು ಕರಾವಳಿ ರಕ್ಷಣಾ ಪಡೆ ತರಬೇತಿ ಕೇಂದ್ರ ನಿರ್ಮಾಣ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುವ ನದಿಗಳಿಗೆ ನೀರು ಸಮುದ್ರ ಸೇರುವ ಮುನ್ನ ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಿ ನೀರು ಸಂಗ್ರಹ ಮಾಡಿ ಅದನ್ನು ಕುಡಿಯುವ ನೀರು ಮತ್ತು ಕೃಷಿಗೆ ಬಳಸುವುದು ಪಶ್ಚಿಮ ವಾಹಿನಿ ಯೋಜನೆಯ ಉದ್ದೇಶ. ಇದರಿಂದ ಆ ಭಾಗದಲ್ಲಿ ಅಂತರ್ಜಲ ಮಟ್ಟವೂ ಸುಧಾರಣೆಯಾಗುತ್ತದೆ ಎಂದು ಹೇಳಿದರು.
ಪಶ್ಚಿಮ ವಾಹಿನಿ ಯೋಜನೆ ಜಾರಿಗೊಳಿಸುವ ಕುರಿತು 2017-18ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅದಕ್ಕಾಗಿ 100 ಕೋಟಿ ರೂ. ಅನುದಾನ ನಿಗದಿಪಡಿಸಿದ್ದರು. ಆದರೆ, ಇದೀಗ 200 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಆರಂಭಿಸಲು ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಲಾಗಿದೆ. ಈ ಯೋಜನೆ ಜಾರಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ 19 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕರಾವಳಿ ರಕ್ಷಣಾ ಪಡೆ ತರಬೇತಿ ಕೇಂದ್ರ
ಮಂಗಳೂರಿನ ಇಂಡಿಯನ್ ಕೋಸ್ಟ್ ಗಾರ್ಡ್ ಸಂಸ್ಥೆಯು 1010 ಕೋಟಿ ರೂ. ವೆಚ್ಚದಲ್ಲಿ ಕರಾವಳಿ ರಕ್ಷಣಾಪಡೆ ತರಬೇತಿ ಕೇಂದ್ರ (ಐಸಿಜಿಟಿಸಿ) ನಿರ್ಮಾಣ ಯೋಜನೆಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸೋಮವಾರ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ನಾಲ್ಕು ಮಹತ್ವದ ಯೋಜನೆಗಳಿಗೆ ಹಸಿರು ನಿಶಾನೆ ತೋರಿದೆ. ಪಣಂಬೂರಿನಲ್ಲಿನ ಇಂಡಿಯನ್ ಕೋಸ್ಟ್ ಗಾರ್ಡ್ ಸಂಸ್ಥೆ ನೂತನ ತರಬೇತಿ ಕೇಂದ್ರ ನಿರ್ಮಾಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿಯಲ್ಲಿ 160 ಎಕರೆ ಕೆಐಎಡಿಬಿ ಪ್ರದೇಶ ನೀಡಲು ಸಭೆ ಅನುಮೋದನೆ ನೀಡಿದೆ. ಈ ಯೋಜನೆ ಅನುಷ್ಠಾನದಿಂದ 250 ಹೊಸ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಹಿರಿಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಏನಿದು ಪಶ್ಚಿಮ ವಾಹಿನಿ ?
ರಾಜ್ಯ ಸರ್ಕಾರ ಬಯಲು ಸೀಮೆ ಭಾಗಗಳಿಗೆ ನೀರೊದಗಿಸುವ ಎತ್ತಿನಹೊಳೆ ಯೋಜನೆ ಆರಂಭಿಸುವ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಬೇಸಿಗೆಯಲ್ಲಿ ನಮಗೆ ನೀರು ಇರುವುದಿಲ್ಲ. ಅಂತಹದ್ದರಲ್ಲಿ ಕರಾವಳಿ ಭಾಗಕ್ಕೆ ಬರಬೇಕಾದ ನೀರನ್ನು ಬಯಲುಸೀಮೆ ಜಿಲ್ಲೆಗಳಿಗೆ ಹರಿಸುವುದು ಎಷ್ಟು ಸರಿ ಎಂದು ಆ ಭಾಗದ ಜನ ಆಕ್ಷೇಪಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರ ಆ ಭಾಗದ ಜನರ ನೀರಿನ ಸಮಸ್ಯೆ ಬಗೆಹರಿಸಲು ಪಶ್ಚಿಮ ವಾಹಿನಿ ಯೋಜನೆ ಪ್ರಸ್ತಾಪಿಸಿತ್ತು.
ಅದರಂತೆ ಪಶ್ಚಿಮಾಭಿಮುಖವಾಗಿ ಸಮುದ್ರಕ್ಕೆ ಸೇರುವ ನದಿ ನೀರನ್ನು ಕಿಂಡಿ ಅಣೆಕಟ್ಟೆಗಳ ಮೂಲಕ ಸಂಗ್ರಹಿಸಿ ಅದನ್ನು ಕುಡಿಯುವ ನೀರು ಮತ್ತು ಕೃಷಿ ಉದ್ದೇಶಕ್ಕೆ ಬಳಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಸುಮಾರು 1394 ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿತ್ತು. ಇದೀಗ ಮೊದಲ ಹಂತದಲ್ಲಿ 200 ಕೋಟಿ ವೆಚ್ಚದಲ್ಲಿ ಯೋಜನೆ ಕಾರ್ಯಾರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಸಚಿವ ಸಂಪುಟದ ತೀರ್ಮಾನಗಳು
– ಸರ್ಕಾರಿ ನೌಕರರಿಗೆ ಮನೆ ಕಟ್ಟಿಕೊಳ್ಳಲು ನೀಡುವ ಮುಂಗಡ (ಬಡ್ಡಿ ರಹಿತ ಸಾಲದ ರೂಪದಲ್ಲಿ) ಮೊತ್ತವನ್ನು ಈ ಹಿಂದೆ ಇದ್ದ 15 ಲಕ್ಷ ರೂ. ಮತ್ತು 25 ಲಕ್ಷ ರೂ. ಬದಲಾಗಿ ಕ್ರಮವಾಗಿ 25 ಲಕ್ಷ ರೂ. ಮತ್ತು 40 ಲಕ್ಷ ರೂ.ಗೆ ಹೆಚ್ಚಳ
– ಹಾಸನ ತಾಲೂಕು ದುದ್ದಾ ಬೋಬಳಿ ಚಿಕ್ಕಡಲೂರು ಗ್ರಾಮದಲ್ಲಿ ರೇಷ್ಮೆ ಇಲಾಖೆಗೆ ಸೇರಿದ 54 ಎಕರೆ 32 ಗುಂಟೆ ಜಮೀನನ್ನು ತಳಿ ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಹಸ್ತಾಂತರ
– ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಓಪಿಡಿ ಬ್ಲಾಕ್‌ನ ಕಟ್ಟಡದ ಮೇಲೆ 30 ಕೋಟಿ ರೂ. ವೆಚ್ಚದಲ್ಲಿ ಐದು ಹೆಚ್ಚುವರಿ ಮಹಡಿಗಳ ನಿರ್ಮಾಣ.
– ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 8.06 ಕೋಟಿ ರೂ. ವೆಚ್ಚದಲ್ಲಿ ನೇತ್ರ ವಿಭಾಗದ ಉಪಕರಣ ಮತ್ತು ಸಲಕರಣೆ ಖರೀದಿ.
– ಕನ್ನಡ ಚಲನಚಿತ್ರ ಅಮೃತ ಮಹೋತ್ಸವ ಭವನದ ನಿರ್ಮಾಣ ವೆಚ್ಚವನ್ನು 9.67 ಕೋಟಿ ರೂ.ನಿಂದ 22.84 ಕೋಟಿ ರೂ.ಗೆ ಪರಿಷ್ಕರಿಸಿ ಬಾಕಿ ಮೊತ್ತ ಬಿಡುಗಡೆ ಮಾಡುವುದು.
– ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯು 2017-18ನೇ ಸಾಲಿನಲ್ಲಿ ಹಣಕಾಸು ಸಂಸ್ಥೆಗಳಿಂದ 350 ಕೋಟಿ ರೂ. ಸಾಲ ಪಡೆಯಲು ಸರ್ಕಾರದ ಖಾತರಿ.
– ಕಣ್ವ ಜಲಾಶಯ ಯೋಜನೆಯಡಿ ಬರುವ ನಾಲೆಗಳ ಆಧುನೀಕರಣ ಕಾಮಗಾರಿಯ 38.5 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ವರದಿಗೆ ಅನುಮೋದನೆ.
– ಶ್ರವಣಬೆಳಗೊಳದ ಗೋಮಟೇಶ್ವರನ ಮಹಾಮಸ್ತಾಭಿಷೇಕ ಹಿನ್ನೆಲೆಯಲ್ಲಿ ಆ ಭಾಗದ ರಸ್ತೆಗಳನ್ನು 36 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ.
– ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಕೇಂದ್ರದ ಆವರಣದಲ್ಲಿ ನಾಗಾರ್ಜುನ ಕಂಪೆನಿ ಮೂಲಕ 88 ಕೋಟಿ ರೂ. ವೆಚ್ಚದಲ್ಲಿ ಡಾ.ಬಾಬು ಜಗಜೀವನರಾಮ್ ತರಬೇತಿ ಕೇಂದ್ರ ಆರಂಭ.
– ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಶಾಖೆಯ ವಿಮಾದಾರರಿಗೆ 2012-14ರ ದ್ವೆ„ವಾರ್ಷಿಕ ಅವಧಿಗೆ ಪ್ರತಿ ಸಾವಿರ ರೂ. ವಿಮಾ ಮೊತ್ತಕ್ಕೆ 90 ರೂ.ನಂತೆ ಬೋನಸ್.
– ಡಿಸೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿರುವ 4ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು 2018ರ ಮೇ 31ರವರೆಗೆ ವಿಸ್ತರಿಸುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.