ಸಿಲಿಕಾನ್ ಸಿಟಿಯಲ್ಲಿ ಚಿಟ್ಟೆಗಳ ಪ್ರಭೇದ 108ಕ್ಕೆ ಕುಸಿತ
Team Udayavani, Jan 24, 2017, 11:52 AM IST
ಬೆಂಗಳೂರು: ಕಾಂಕ್ರೀಟ್ ಕಾಡಾಗಿ ಪರಿವರ್ತನೆಯಾಗುತ್ತಿರುವ ಉದ್ಯಾನ ನಗರಿಯಲ್ಲಿ ಹಕ್ಕಿಗಳು ಮಾತ್ರವಲ್ಲ, ಚಿಟ್ಟೆಗಳ ಸಂತತಿ ಕೂಡ ಕಾಣೆಯಾಗುತ್ತಿರುವುದು ಬೆಳಕಿಗೆ ಬಂದಿದೆ.
ಸ್ವಾಯತ್ತ ಸಂಸ್ಥೆ “ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ (ಎಂಪ್ರಿ) ನಗರದಲ್ಲಿ ಒಂದು ವರ್ಷ ನಡೆಸಿದ ಅಧ್ಯಯನದಲ್ಲಿ ಈ ಅಂಶ ತಿಳಿದು ಬಂದಿದ್ದು, ಕಳೆದ 17 ವರ್ಷಗಳಲ್ಲಿ ಅಂದಾಜು 45 ಚಿಟ್ಟೆ ಪ್ರಭೇದಗಳು ಕಣ್ಮರೆಯಾಗಿರುವುದು ಕಂಡುಬಂದಿದೆ. ಈ ಹಿಂದೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ನಡೆಸಿದ ಅಧ್ಯಯನದಲ್ಲಿ ಪಕ್ಷಿಗಳ ಸಂತತಿ ಕಡಿಮೆಯಾಗುತ್ತಿರುವುದು ಕಂಡುಬಂದಿತ್ತು.
ಪರಿಸರ, ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆ ಅಡಿ “ಹವಾಮಾನ ಬದಲಾವಣೆಯ ಜೈವಿಕ ಸೂಚಕಗಳಾಗಿ ಚಿಟ್ಟೆಗಳು; ಬೆಂಗಳೂರಿನ ಒಂದು ಅಧ್ಯಯನ’ ಶೀರ್ಷಿಕೆಯಲ್ಲಿ ಎಂಪ್ರಿ ಸಂಸ್ಥೆಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಚಿಟ್ಟೆ ಪ್ರಭೇದಗಳ ಸಂಖ್ಯೆ 108ಕ್ಕೆ ಕುಸಿದಿರುವುದು ಗೊತ್ತಾಗಿದೆ. 1933 ಹಾಗೂ 1999ರಲ್ಲಿ ನಡೆಸಿದ ಅಧ್ಯಯನದಲ್ಲಿ ಕ್ರಮವಾಗಿ 140 ಮತ್ತು 153 ಚಿಟ್ಟೆ ಪ್ರಭೇದಗಳು ಪತ್ತೆಯಾಗಿದ್ದವು ಎಂದು ವರದಿ ಉಲ್ಲೇಖೀಸಿದೆ.
108 ಪ್ರಭೇದಗಳಲ್ಲಿ 31 ಅತಿ ಅಪರೂಪದ, 21 ಅಪರೂಪದ, 37 ಸಾಮಾನ್ಯ ಹಾಗೂ 19 ಅತಿ ಸಾಮಾನ್ಯವಾಗಿ ಕಂಡುಬರುವ ಚಿಟ್ಟೆಗಳಾಗಿವೆ. ಅದರಲ್ಲೂ ಹತ್ತು ಚಿಟ್ಟೆ ಪ್ರಭೇದಗಳು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಸಂರಕ್ಷಿತ ವರ್ಗಕ್ಕೆ ಬರುತ್ತವೆ. 108 ಪ್ರಭೇದಗಳು 6 ಕುಟುಂಬಗಳಿಗೆ ಸೇರಿವೆ ಎಂದು ತಿಳಿದುಬಂದಿದೆ.
ತಜ್ಞರ ಪ್ರಕಾರ, ಅತ್ಯಂತ ಸೂಕ್ಷ್ಮ ಹಾಗೂ ಅಲ್ಪಾಯುಷಿ (15ರಿಂದ 30 ದಿನಗಳು) ಚಿಟ್ಟೆಗಳು ಹವಾಮಾನ ಬದಲಾವಣೆಯ ಸೂಚಕಗಳು. ಸಮೀಕ್ಷೆಯಲ್ಲಿ ಅವುಗಳ ಸಂಖ್ಯೆ ಇಳಿಮುಖವಾಗಿರುವುದು ಹಲವು ಸಂಕೇತಗಳನ್ನು ನೀಡುತ್ತದೆ. ಅಧ್ಯಯನ ವರದಿ ಬಗ್ಗೆ ಪ್ರತಿಕ್ರಿಯಿಸಿದ ಎಂಪ್ರಿ, ಹವಾಮಾನ ಬದಲಾವಣೆ ಕೇಂದ್ರದ ಮುಖ್ಯಸ್ಥೆ ಒ.ಕೆ.ರೆಮಾದೇವಿ, “ನಗರದಲ್ಲಿ ಚಿಟ್ಟೆಗಳ ಸಂತತಿ ಕ್ಷೀಣಿಸುತ್ತಿರುವುದಕ್ಕೆ ಪ್ರಮುಖ ಕಾರಣ ಬೆಂಗಳೂರಿನ ಹವಾಮಾನ ಬದಲಾವಣೆ. ಹವಾನಿಯಂತ್ರಿತ ಹಿರಿಮೆಯ ನಗರಿಯು ಈಗ ವರ್ಷಪೂರ್ತಿ ಬಿಸಿಲಿನ ಧಗೆಯನ್ನು ಹೊರಸೂಸುತ್ತಿದೆ. ಇದರ ಪರಿಣಾಮ ಇಲ್ಲಿನ ಸಸ್ಯಗಳು ಮತ್ತು ಕೀಟಗಳ ಮೇಲೂ ಆಗುತ್ತಿದ್ದು, ಚಿಟ್ಟೆಗಳೂ ಇದಕ್ಕೆ ಹೊರತಾಗಿಲ್ಲ’ ಎಂದರು.
ಅಧ್ಯಯನಕ್ಕಾಗಿ ನಗರದ ಲಾಲ್‌ಬಾಗ್, ಕಬ್ಬನ್ ಪಾರ್ಕ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಜಿಕೆವಿಕೆ ಕ್ಯಾಂಪಸ್, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ದೊರೆಸಾನಿಪಾಳ್ಯ ಫಾರೆಸ್ಟ್ ಕ್ಯಾಂಪಸ್ ಸೇರಿದಂತೆ ಆರು ಹಸಿರಿನಿಂದ ಕೂಡಿರುವ ಪ್ರದೇಶವನ್ನು ಆಯ್ಕೆ ಮಾಡಲಾಗಿತ್ತು. ಬೆಳಗ್ಗೆ 8ರಿಂದ ಮಧ್ಯಾಹ್ನ 2ರ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ 79 ಹಾಗೂ ದೊರೆಸಾನಿಪಾಳ್ಯ ಕ್ಯಾಂಪಸ್‌ನಲ್ಲಿ 78 ಪ್ರಬೇಧಗಳು ಕಂಡುಬಂದಿವೆ. ಮಳೆಗಾಲದಲ್ಲೇ ಅತಿ ಹೆಚ್ಚು ಚಿಟ್ಟೆಗಳನ್ನು ಕಾಣಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಶಿಫಾರಸ್ಸುಗಳು
* ಅತಿ ಹೆಚ್ಚು ಚಿಟ್ಟೆ ಪ್ರಬೇಧಗಳು ಕಂಡುಬಂದ ದೊರೆಸಾನಿಪಾಳ್ಯ ಅರಣ್ಯ ಪ್ರದೇಶವನ್ನು ಚಿಟ್ಟೆಗಳ ಮೀಸಲು ಉದ್ಯಾನವನ್ನಾಗಿ ಘೋಷಿಸಬೇಕು.
* ಚಿಟ್ಟೆಗಳ ವಿಶ್ಲೇಷಣಾ ಕೇಂದ್ರ ಸ್ಥಾಪಿಸಬೇಕು.
* ಪರಿಸರ ಸೂಕ್ಷ್ಮ ಪ್ರದೇಶಗಳಾದ ಆಗುಂಬೆ, ಧಾರವಾಡ, ಕಲಬುರಗಿ, ಮಂಗಳೂರಿನಲ್ಲೂ ಇದೇ ರೀತಿ ಚಿಟ್ಟೆಗಳ ಅಧ್ಯಯನ ನಡೆಸಬೇಕು.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.