ಬಡವರಿಗೆ ಉಚಿತ ಅಡುಗೆ ಅನಿಲ ಕೇಂದ್ರ-ರಾಜ್ಯ ತಿಕ್ಕಾಟ
Team Udayavani, Jun 11, 2017, 3:45 AM IST
ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಕಲ್ಪಿಸುವ ವಿಚಾರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರವು “ಉಜ್ವಲಾ’ದಡಿ ಬಡ ಕುಟುಂಬಗಳನ್ನು ಗುರುತಿಸಿ ಉಚಿತವಾಗಿ ಸಿಲಿಂಡರ್ ಮಾತ್ರ ವಿತರಿಸಲು ಯೋಜನೆ ರೂಪಿಸಿದೆ. ಇದೀಗ ರಾಜ್ಯ ಸರ್ಕಾರ ಕೇಂದ್ರದ ಯೋಜನೆಗೆ ಪರ್ಯಾಯವಾಗಿ ಅಡುಗೆ ಅನಿಲ ಸಿಲಿಂಡರ್, ಸ್ಟೌವ್, ಟ್ಯೂಬ್, ರೆಗ್ಯುಲೇಟರ್ ಉಚಿತವಾಗಿ ನೀಡಲು ಸಿದ್ಧತೆ ನಡೆಸಿದೆ. ಜತೆಗೆ ಮೊದಲ ಸಿಲಿಂಡರ್‌ಗೆ ರೀಫಿಲ್ ಶುಲ್ಕ ಭರಿಸಲು ಚಿಂತನೆ ನಡೆಸಿದೆ.
ಮೊದಲಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ “ಉಜ್ವಲಾ’ ರಾಜ್ಯ ಸರ್ಕಾರದ ಸಹಭಾಗಿತ್ವದಡಿ ಜಾರಿಗೊಳಿಸುವ ಯೋಜನೆಯಾಗಿತ್ತು. ಆದರೆ, ಕೆಲವು ಗೊಂದಲದಿಂದಾಗಿ ರಾಜ್ಯ ಸರ್ಕಾರ ಇದೀಗ ಮುಖ್ಯಮಂತ್ರಿ ಅನಿಲ ಭಾಗ್ಯ ಹೆಸರಿನಲ್ಲಿ ಪ್ರತ್ಯೇಕವಾಗಿ ಜಾರಿಗೊಳಿಸಲು ನಿರ್ಧರಿಸಿದೆ.
ಈ ಮಧ್ಯೆ, ಕೇಂದ್ರ ಸರ್ಕಾರವು ರಾಜ್ಯದಲ್ಲಿ “ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಗೆ ಜೂ.17ರಂದು ಚಾಲನೆ ನೀಡಲು ಸಜ್ಜಾಗಿದೆ. ಅದಕ್ಕೂ ಮೊದಲೇ ರಾಜ್ಯ ಸರ್ಕಾರ “ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ಜಾರಿಗೊಳಿಸಲು ಮುಂದಾಗಿದೆ.
ಕೇಂದ್ರ ಸರ್ಕಾರವು 2011 ರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ಆಧಾರದಲ್ಲಿ ಫಲಾನುಭವಿಗಳ ಆಯ್ಕೆ ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರವು ಸೀಮೆಎಣ್ಣೆ ಬಳಕೆ ಮಾಡುತ್ತಿರುವ ಬಿಪಿಎಲ್ ಕುಟುಂಬಗಳನ್ನು ಯೋಜನೆಯಡಿ ಆಯ್ಕೆ ಮಾಡಲು ತೀರ್ಮಾನಿಸಿದೆ.
ಕೇಂದ್ರದ ಯೋಜನೆಯಡಿ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ (1600 ರೂ.) ಮಾತ್ರ ಸಿಗಲಿದೆ. ಉಳಿದಂತೆ ಸ್ಟೌವ್ ಹಾಗೂ ರೀಫಿಲ್ ಶುಲ್ಕವನ್ನು ಫಲಾನುಭವಿ ಭರಿಸಬೇಕು. ಒಂದೊಮ್ಮೆ ಫಲಾನುಭವಿ ಶುಲ್ಕ ಭರಿಸಲಾಗದಿದ್ದರೆ ತೈಲ ಮಾರಾಟ ಕಂಪನಿಗಳು ಬಡ್ಡಿರಹಿತ ಸಾಲ ನೀಡಿ ಇಎಂಐ (ಮಾಸಿಕ ಕಂತು) ಸೌಲಭ್ಯ ಕಲ್ಪಿಸಲಿವೆ. ಫಲಾನುಭವಿಗೆ ಬರುವ ಸಬ್ಸಿಡಿ ಮೊತ್ತದಲ್ಲಿ ಈ ಶುಲ್ಕ ಕಡಿತಗೊಳಿಸಲಿದೆ.
ತಾರತಮ್ಯದ ಆರೋಪ
ಯೋಜನೆ ಜಾರಿಗೆ ರಾಜ್ಯ ಸರ್ಕಾರ ಆರಂಭದಲ್ಲಿ ಆಸಕ್ತಿ ತೋರಿತ್ತು. ಕೇಂದ್ರ ಸರ್ಕಾರ ಸಿಲಿಂಡರ್ ಉಚಿತವಾಗಿ ನೀಡಿದರೆ ಸ್ಟೌವ್, ರೆಗ್ಯುಲೇಟರ್, ಪೈಪ್‌ಅನ್ನು ರಾಜ್ಯದ ವತಿಯಿಂದ ವಿತರಿಸಲು ಮುಂದಾಗಿತ್ತು. ಆದರೆ ಇದಕ್ಕೆ ಕೇಂದ್ರದಿಂದ ನಿರೀಕ್ಷಿತ ಸ್ಪಂದನೆ ದೊರೆಯಲಿಲ್ಲ. ಅಲ್ಲದೇ ಯೋಜನೆಯ ಹೆಸರನ್ನು ಬದಲಾಯಿಸದೆ ಕೇಂದ್ರ ಸರ್ಕಾರ ಗೊತ್ತುಪಡಿಸಿದ ಹೆಸರಿನಲ್ಲೇ ಜಾರಿಗೊಳಿಸಬೇಕು ಎಂದು ಸೂಚಿಸಿದ್ದು, ರಾಜ್ಯ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿತ್ತು.
ಇನ್ನೊಂದೆಡೆ ಯೋಜನೆ ಜಾರಿಗೊಳಿಸುವಂತೆ ಹಲವು ಬಾರಿ ಪತ್ರ ಬರೆದರೂ ಕೇಂದ್ರದಿಂದ ಸ್ಪಂದನೆ ಸಿಗಲಿಲ್ಲ ಎಂಬುದು ರಾಜ್ಯ ಸರ್ಕಾರಕ್ಕೆ ಇನ್ನಷ್ಟು ಇರುಸು ಮುರುಸು ಉಂಟು ಮಾಡಿತ್ತು. ರಾಷ್ಟ್ರದಲ್ಲಿ ಶೇ.61ರಷ್ಟು ಕುಟುಂಬಗಳು ಅಡುಗೆ ಅನಿಲ ಸಿಲಿಂಡರ್ ಹೊಂದಿದ್ದಾರೆ ಎಂಬ ಮಾಹಿತಿ ಇದ್ದು, ಈ ರಾಷ್ಟ್ರೀಯ ಸರಾಸರಿ ಪ್ರಮಾಣಕ್ಕಿಂತ ಕಡಿಮೆಯಿರುವ ರಾಜ್ಯಗಳಲ್ಲಿ ಯೋಜನೆ ಜಾರಿಗೆ ಆದ್ಯತೆ ನೀಡಲಾಗಿದೆ ಎಂಬುದು ಕೇಂದ್ರ ಸರ್ಕಾರದ ವಾದ. ಆದರೆ ಕರ್ನಾಟಕಕ್ಕಿಂತ ಉತ್ತಮ ಸ್ಥಿತಿಯಲ್ಲಿರುವ ರಾಜ್ಯಗಳಲ್ಲೂ ಯೋಜನೆ ಜಾರಿಗೊಳಿಸಿ ಕೇಂದ್ರ ತಾರತಮ್ಯ ತೋರುತ್ತಿದೆ ಎಂಬುದು ರಾಜ್ಯ ಸರ್ಕಾರದ ಆರೋಪ.
ಕೇಂದ್ರ ಸರ್ಕಾರವು ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಆಧಾರದ ಮೇಲೆ ಸೌಲಭ್ಯ ಕಲ್ಪಿಸಲಿದೆ. ಈವರೆಗೆ 2.98 ಲಕ್ಷ ಕುಟುಂಬಗಳು ಅರ್ಜಿ ಸಲ್ಲಿಸಿದ್ದು, ಇದರಲ್ಲಿ 2.44 ಲಕ್ಷ ಕುಟುಂಬಗಳನ್ನು ಸೌಲಭ್ಯಕ್ಕೆ ಪರಿಗಣಿಸಲಾಗಿದೆ. ರಾಜ್ಯ ಸರ್ಕಾರ ಅನಿಲ ಭಾಗ್ಯದಡಿ ನೀಡುವ ಸೌಲಭ್ಯವೂ ಪರೋಕ್ಷವಾಗಿ ಕೇಂದ್ರದ ಅನುದಾನವೇ ಆಗಿದೆ. ಸೀಮೆಎಣ್ಣೆಗೆ ನೀಡುತ್ತಿದ್ದ ಹಣ ರೂಪದ ಪ್ರೋತ್ಸಾಹ ಧನವನ್ನೇ ಅನಿಲ ಭಾಗ್ಯ ಯೋಜನೆಗೆ ವಿನಿಯೋಗಿಸುವುದಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖೀಸಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಸೀಮೆಎಣ್ಣೆ ಪಡೆಯುವ 35 ಲಕ್ಷ ಬಿಪಿಎಲ್ ಕುಟುಂಬಗಳಿದ್ದು, ಇವರಿಗೆ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸುವುದು ಪ್ರಸಕ್ತ ವರ್ಷದಲ್ಲಿ ಐದು ಲಕ್ಷ ಮಂದಿ ಆಯ್ಕೆ ಮಾಡುವುದು ರಾಜ್ಯ ಸರ್ಕಾರದ ಗುರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗೆ “ಆಧಾರ್’ ಕಡ್ಡಾಯವಾಗಿರುವುದರಿಂದ ಪುನರಾವರ್ತನೆ ಇಲ್ಲವೇ ದುರ್ಬಳಕೆಗೆ ಅವಕಾಶವಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಯಾವ ಸೌಲಭ್ಯ ಕಲ್ಪಿಸಬೇಕೆಂಬ ಬಗ್ಗೆ ಸಚಿವ ಸಂಪುಟದಲ್ಲಿ ಪ್ರಸ್ತಾವ ತರಲಾಗುತ್ತಿದೆ. ಸಚಿವ ಸಂಪುಟದ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಹರ್ಷ ಗುಪ್ತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ
ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಅವರ ಮಾರ್ಗದರ್ಶನದಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ. ಅದರಂತೆ ಕರ್ನಾಟಕದಲ್ಲಿ ಜೂನ್ 17ರಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಯೋಜನೆಯಡಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಬಡ ಕುಟುಂಬಗಳಿಗೆ ಸೌಲಭ್ಯ ಸಿಗಲಿದೆ.
– ಕೆ.ಎಂ.ಮಹೇಶ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ನಿರ್ದೇಶಕ
– ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು
Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ
ಇದು 0 ಪರ್ಸೆಂಟ್ ಅಭಿವೃದ್ಧಿ,100 ಪರ್ಸೆಂಟ್ ಭ್ರಷ್ಟಾಚಾರದ ಸರಕಾರ: ಸುನಿಲ್
ಠೇವಣಿದಾರರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ
Belagavi, ಮಂಡ್ಯ, ಶಿವಮೊಗ್ಗ ಸೇರಿ 6 ಕಡೆ ಕ್ಯಾನ್ಸರ್ ಆಸ್ಪತ್ರೆ: ಶರಣಪ್ರಕಾಶ್ ಪಾಟೀಲ್
MUST WATCH
ಹೊಸ ಸೇರ್ಪಡೆ
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
Kundapura: ಸರಕಾರಿ ಕಾಲೇಜಿನ ಎನ್‌ವಿಆರ್ ಕೆಮರಾ ಕಳವು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.