ಬುದ್ಧಿಜೀವಿಗಳಿಂದ ದೇಶಕ್ಕೆ ಗಂಡಾಂತರ!
Team Udayavani, Dec 17, 2018, 12:16 PM IST
ಬೆಂಗಳೂರು: ರಫೇಲ್ ಒಪ್ಪಂದದ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದ್ದು, ಇದೀಗ ತೀರ್ಪಿನಲ್ಲಿ ತಪ್ಪು ಹುಡುಕಲು ಮುಂದಾಗಿದ್ದಾರೆ. ಎಲ್ಲದರಲ್ಲಿಯೂ ತಪ್ಪು ಹುಡುಕುವ ಸೋ ಕಾಲ್ಡ್ ಬುದ್ಧಿಜೀವಿಗಳಿಂದ ದೇಶಕ್ಕೆ ಗಂಡಾಂತರವಿದ್ದು, ಅವರಿಂದ ರಾಷ್ಟ್ರವನ್ನು ರಕ್ಷಿಸಬೇಕಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು.
ಥಿಂಕರ್ ಫೋರಂ ಭಾನುವಾರ ನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಫೇಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು “ಕಳ್ಳ’ ಎಂದು ನಿರೂಪಿಸಲು ಹೋಗಿದ್ದ ಕಾಂಗ್ರೆಸ್ ಪಕ್ಷವು ಸುಪ್ರೀಂ ಕೋರ್ಟ್ ತೀರ್ಪಿನಿಂದ ಬೆಚ್ಚಿ ಬಿದ್ದಿದೆ. ತಾನು ಕಳ್ಳ, ಪರರ ನಂಬ ಎಂಬ ಸ್ಥಿತಿ ಕಾಂಗ್ರೆಸ್‌ನಲ್ಲಿದೆ ಎಂದು ವ್ಯಂಗ್ಯವಾಡಿದರು.
ಕಳ್ಳನಾಗಿರುವ ವ್ಯಕ್ತಿ ಬೇರೆಯವರನ್ನು ಕಳ್ಳ, ಕಳ್ಳ ಎಂದು ಕರೆದು ತಾನು ಪ್ರಾಮಾಣಿಕನೆಂದು ಬಿಂಬಿಸಿಕೊಳ್ಳುವ ಕಥೆ ಪಂಚತಂತ್ರದಲ್ಲಿದೆ. ಅದೇ ರೀತಿ ರಫೇಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕಳ್ಳನೆಂದು ಬಿಂಬಿಸಲು ಹೋಗಿದ್ದ ಕಾಂಗ್ರೆಸ್‌ಗೆ ಸುಪ್ರೀಂಕೋರ್ಟ್ ಆದೇಶ ನುಂಗಲಾರದ ತುತ್ತಾಗಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ತೀರ್ಪಿನಲ್ಲಿಯೂ ತಪ್ಪುಗಳನ್ನು ಹುಡುಕಲು ಕೆಲ ಬುದ್ದಿಜೀವಿಗಳು ಮುಂದಾಗಿದ್ದು, ಬೆಲೆ ವಿಷಯದ ಬಗ್ಗೆ ಪರಿಶೀಲಿಸಿಲ್ಲ ಎಂಬ ತಕರಾರು ಎತ್ತಿದ್ದಾರೆ. ಅವರಿಗೆ ಎಲ್ಲದರಲ್ಲಿಯೂ ತಪ್ಪು ಹುಡುಕುವ ಬುದ್ಧಿಯಿದ್ದು, ಅಂತಹ ಸೋ ಕಾಲ್ಡ್ ಬುದ್ಧಿಜೀವಿಗಳಿಂದ ದೇಶವನ್ನು ಕಾಪಾಡಬೇಕಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಅಟಲ್‌ಜೀ ಅವರು ದೇಶ ಕಂಡ ಅಪರೂಪದ ಮೌಲ್ಯಯುತ ರಾಜಕಾರಣಿಯಾಗಿದ್ದರು. ಅವರ ಜೀವನ ಹಾಗೂ ರಾಜಕೀಯ ಎರಡೂ ತೆರೆದ ಪುಸ್ತಕವಾಗಿತ್ತು ಎಂದು ಸ್ಮರಿಸಿದರು.
ಕವಿಯಾದ ವಾಜಪೇಯಿ ಅವರು ರಾಜಕೀಯ ಸಮಸ್ಯೆಗಳಿಗೆ ತಮ್ಮ ಕಾವ್ಯಗಳ ಮೂಲಕ ಉತ್ತರ ಕಂಡುಕೊಳ್ಳುತ್ತಿದ್ದರು. ಅವರಲ್ಲಿದ್ದ ರಾಜಕೀಯ ಬದ್ಧತೆಯನ್ನು ಯಾರಲ್ಲಿಯೂ ಕಾಣಲಾಗದು. ರಾಜಕೀಯದಲ್ಲಿಂದು ನಾಯಕರು ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡುವುದಿಲ್ಲ. ಆದರೆ, ವಾಜಪೇಯಿ ಅವರು ಎಂದೂ ಹಾಗೆ ಮಾಡಿದರವಲ್ಲ. ಅವರು ರಾಜಕೀಯ ಅಸ್ಪೃಶ್ಯತೆಯನ್ನು ಪಾಲಿಸಿರಲಿಲ್ಲ ಎಂದು ರಾಮ್ ಮಾಧವ್ ಹೇಳಿದರು.
ರಾಮಮಂದಿರಕ್ಕಿಂತ ಆದ್ಯತೆಯ ವಿಷಯ ಯಾವುದು?: ನ್ಯಾಯಾಂಗದಲ್ಲಿ ಆಗುತ್ತಿರುವ ಬದಲಾವಣೆಗಳು, ಆಡಳಿತಶಾಹಿ, ರಾಜಕೀಯ ಪಕ್ಷಗಳ ಸಂಕುಚಿತ ಮನೋಭಾವ ಹಾಗೂ ಬುದ್ಧಿಜೀವಿಗಳು ಈ ನಾಲ್ಕು ಅಂಶಗಳಿಂದ ಸಂವಿಧಾನಕ್ಕೆ ಅಪಾಯವಿದೆ ಎಂದ ರಾಮ್ ಮಾಧವ್, ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಸುಪ್ರೀಂ ಕೋರ್ಟ್ ಅದು ಆದ್ಯತೆಯ ವಿಷಯವಲ್ಲ ಎಂದು ಹೇಳಿದೆ. ಹಾಗಿದ್ದರೆ ಆದ್ಯತೆಯ ವಿಷಯ ಇನ್ಯಾವುದು? ಏಕೆ ಐದು ವರ್ಷಗಳಿಂದ ಕಾಯಬೇಕು. ಹೀಗೆ ವಿಳಂಬ ಮಾಡಿದರೆ ಜನರಿಗೆ ನ್ಯಾಯಾಂಗದ ಬಗೆಗೆ ಇರುವ ವಿಶ್ವಾಸಕ್ಕೆ ಧಕ್ಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಇದೇ ವೇಳೆ ಶಬರಿಮಲೆ ವಿಚಾರ ಪ್ರಸ್ತಾಪಿಸಿದ ಅವರು, ಕೇರಳದ ಕಮ್ಯುನಿಸ್ಟ್ ಸರ್ಕಾರ ಸುಪ್ರೀಂಕೋರ್ಟ್ ಆದೇಶ ನೀಡಿದೆ ಎಂದು ದೇಗುಲಕ್ಕೆ ಮಹಿಳೆಯರ ಭೇಟಿಗೆ ಅವಕಾಶ ನೀಡಲು ಮುಂದಾಗಿದೆ. ಆದರೆ, ಅದೇ ಭಾಗದ ಮಹಿಳೆಯರು ಬೀದಿಗೆ ಬಂದ ಸುಪ್ರೀಂ ಆದೇಶ ವಿರುದ್ಧ ಹೋರಾಡುತ್ತಿದ್ದಾರೆ. ದೇವರ ಬಗ್ಗೆ ನಂಬಿಕೆ ಇಲ್ಲದವರು ಏನು ಬೇಕಾದರೂ ಮಾತನಾಡುತ್ತಾರೆ ಎಂದು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.